ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮೊನ್ನೆ ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿಯವರ ಒಂದು ಹೇಳಿಕೆ ದೇಶದ ಗಮನ ಸೆಳೆಯಿತು. ‘‘ಬಿಹಾರ ರಾಜ್ಯವನ್ನು ಸಂಪೂರ್ಣವಾಗಿ ಅಪರಾಧಮುಕ್ತಗೊಳಿಸಲಾಗಿದೆ. ಇಲ್ಲಿ ಈಗ ಯಾವುದೇ ಅಪರಾಧ ಉಳಿದಿಲ್ಲ. ಇಲ್ಲಿ ಹೆಚ್ಚೆಂದರೆ ಕ್ರೈಮ್‌ಗಳು ಇರಬಹುದು. ಅದನ್ನು ನಾನು ನಿರಾಕರಿಸುವುದಿಲ್ಲ. ಆದರೆ ಅಪರಾಧ ಮಾತ್ರ ಖಂಡಿತ ಇಲ್ಲ’’ ಎಂದು ಅವರು ಖಚಿತ ಧ್ವನಿಯಲ್ಲಿ ಹೇಳಿದರು. ಇದರ ಆಧಾರದಲ್ಲಿ ಹಲವರು, ಬಿಹಾರದಲ್ಲೀಗ ಕೊಲೆ, ದರೋಡೆ, ಅತ್ಯಾಚಾರ ಇತ್ಯಾದಿ ಅಪರಾಧಗಳು ಎಳ್ಳಷ್ಟೂ ನಡೆಯುವುದಿಲ್ಲ. ಅಲ್ಲಿ ವ್ಯಾಪಕವಾಗಿ ನಡೆಯುತ್ತಿರುವುದು ಮರ್ಡರ್, ರಾಬರಿ, ರೇಪ್ ಮತ್ತಿತರ ಕ್ರೈಮ್ ಗಳು ಮಾತ್ರ ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ಇದು ಬಿಹಾರದ ಸ್ಥಿತಿಯಾದರೆ, ನಮ್ಮ ಒಟ್ಟು ಭಾರತ ದೇಶದ ಅಂದರೆ ಸ್ವತಃ ನಮ್ಮ ಆರೋಗ್ಯದ ಸ್ಥಿತಿ ಹೇಗಿದೆ ಎಂಬ ಬಗ್ಗೆ ಹಲವು ಭಾರತೀಯರು ಸಂಶಯಿಸುತ್ತಲಿರುತ್ತಾರೆ. ಅಂಥವರ ಕಣ್ಣು ತೆರೆಸುವ ವರದಿಯೊಂದು ನವೆಂಬರ್ 2 ರಂದು ಬಿಡುಗಡೆಯಾಗಿದೆ. ನಮ್ಮನ್ನು ಪ್ರತಿನಿಧಿಸುವ ಎಲ್ಲ ನಾಯಕರು ಕೂಡಾ ದೊಡ್ಡ ದೊಡ್ಡ ಅಪರಾಧಿ ಖಳನಾಯಕರು ಎಂಬ ಉತ್ಪ್ರೇಕ್ಷಿತ ಗ್ರಹಿಕೆಗಳು ತಪ್ಪು, ಅಪರಾಧಿ ಹಿನ್ನೆಲೆ ಅಥವಾ ದಾಖಲೆ ಇಲ್ಲದ ಕೆಲವರು ಕೂಡಾ ನಾಯಕ ಸ್ಥಾನದಲ್ಲಿದ್ದಾರೆ ಎಂಬುದು ಇದರಿಂದ ನಿಚ್ಚಳವಾಗಿ ಬಿಟ್ಟಿದೆ.

‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ADR) ಸಂಸ್ಥೆಯು ಪ್ರಕಟಿಸಿದ ವರದಿಯು ಹಲವು ಸ್ವಾರಸ್ಯಕರ ಮಾಹಿತಿಗಳನ್ನು ಮುಂದಿಟ್ಟಿದೆ. ಈ ವರ್ಷ ಜೂನ್‌ನಿಂದ ನವೆಂಬರ್ ನಡುವಣ ಅವಧಿಯಲ್ಲಿ ಸಂಸ್ಥೆಯು ಭಾರತದ ರಾಜ್ಯಸಭೆಯ ಸದಸ್ಯರ ಕುರಿತು ಸಂಗ್ರಹಿಸಿದ ಮಾಹಿತಿ ಹಾಗೂ ಆ ಕುರಿತು ನಡೆಸಿದ ವಿಶ್ಲೇಷಣೆಯಲ್ಲಿ ಕಂಡು ಬಂದ ಅಂಶಗಳನ್ನು ಗಮನಿಸಿ: ದೇಶದ ರಾಜ್ಯ ಸಭೆಯಲ್ಲಿರುವ ಸುಮಾರು 230ರಷ್ಟು ಸಂಸದರ ಪೈಕಿ ಸುಮಾರು 73ರಷ್ಟು ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಕೇಸುಗಳು ದಾಖಲಾಗಿವೆ ಎಂಬುದನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.

ಈ ಪೈಕಿ 36 ಸಂಸದರು ಅಂದರೆ, ಶೇ. 16 ಮಂದಿ ಕೊಲೆ, ಕೊಲೆಯತ್ನ, ಮಹಿಳೆಯರ ವಿರುದ್ಧ ದೌರ್ಜನ್ಯ ಮುಂತಾದ ಗಂಭೀರ ಸ್ವರೂಪದ ಆರೋಪಗಳನ್ನು ಎದುರಿಸುತ್ತಿದ್ದಾರೆ.

2024ರ ಮಹಾ ಚುನಾವಣೆಯಲ್ಲಿ ಲೋಕಸಭಾ ಸದಸ್ಯರಾಗಿ ಚುನಾಯಿತರಾದವರಲ್ಲಿ 251 ಮಂದಿ ಅಂದರೆ ಶೇ. 46ರಷ್ಟು ಸದಸ್ಯರು ತಮ್ಮ ವಿರುದ್ಧ ಕ್ರಿಮಿನಲ್ ಕೇಸುಗಳಿವೆ ಎಂದು ಅಧಿಕೃತವಾಗಿಯೇ ದಾಖಲಿಸಿ ಕೊಂಡಿದ್ದರು. ಈ ರೀತಿ ನೇರವಾಗಿ ನಮ್ಮಿಂದಲೇ ಆಯ್ಕೆಯಾಗಿ ಸಂಸತ್ತಿನಲ್ಲಿ ನಮ್ಮನ್ನು ಪ್ರತಿನಿಧಿಸುವ ಜನನಾಯಕರಲ್ಲಿ ಕ್ರಿಮಿನಲ್ ಹಿನ್ನೆಲೆಯವರು ಇಷ್ಟು ದೊಡ್ಡ ಪ್ರಮಾಣದಲ್ಲಿದ್ದಾರೆ ಎಂಬುದನ್ನು ಕಂಡು ಅನೇಕ ಮತದಾರರರು ಸ್ವತಃ ತಮ್ಮ ಚಾರಿತ್ರ್ಯದ ಬಗ್ಗೆ ಸಂಶಯ ತಾಳುವಂತಾಗಿದೆ. ಅಪರಾಧಿ ಹಿನ್ನೆಲೆಯ ಪ್ರಸ್ತುತ 251 ಲೋಕಸಭಾ ಸದಸ್ಯರ ಪೈಕಿ 170 ಮಂದಿ ಕೊಲೆ, ಕೊಲೆಯತ್ನ, ಮಹಿಳೆಯರ ವಿರುದ್ಧ ದೌರ್ಜನ್ಯ ಮುಂತಾದ ದೊಡ್ಡ ಆರೋಪಗಳಲ್ಲಿ ಮೊಕದ್ದಮೆ ಎದುರಿಸುತ್ತಿದ್ದಾರೆ. ಆ ಅಂಶವನ್ನು ಅರಿತ ಅನೇಕ ಸಂವೇದನಾಶೀಲ, ಸಭ್ಯ ನಾಯಕರು ಎಷ್ಟೊಂದು ಮುಜುಗರಕ್ಕೆ ಒಳಗಾಗಿದ್ದಾರೆಂದರೆ, ಅವರು ಈ ಕುರಿತು ಚರ್ಚೆಗೇ ತಯಾರಿಲ್ಲ. ನಾವು ಸಿನೆಮಾ ಕುರಿತು ಮಾತನಾಡೋಣ ಎನ್ನುತ್ತಾ ವಿಷಯಪಲ್ಲಟ ಮಾಡಿಬಿಡುತ್ತಾರೆ.

ರಾಜಕಾರಣಿಗಳು ಸ್ವತಃ ತಮ್ಮ ಹಿತಾಸಕ್ತಿಗಳನ್ನು ಬಿಟ್ಟರೆ ಮತ್ತಾರಿಗೂ ನಿಷ್ಠರಾಗಿರುವುದಿಲ್ಲ ಎಂಬುದು ಅವರ ಜೊತೆ ವ್ಯವಹರಿಸಿದ ಎಲ್ಲರ ಅನುಭವ. ಚುನಾವಣೆಯ ದಿನಗಳಲ್ಲಿ ಹೆಚ್ಚಿನ ರಾಜಕಾರಣಿಗಳು ಯಾವುದಾದರೂ ಪಕ್ಷದ ಪ್ರತಿನಿಧಿಗಳಾಗಿ, ಆ ಪಕ್ಷದ ಧ್ವಜ, ಸಂಕೇತ, ಪ್ರಣಾಳಿಕೆ ಇತ್ಯಾದಿಗಳನ್ನು ಹೊತ್ತುಕೊಂಡು ಜನರ ಬಳಿಗೆ ಬರುತ್ತಾರೆ. ತಮ್ಮ ಪಕ್ಷವನ್ನು ಧಾರಾಳ ಹೊಗಳುತ್ತಾರೆ. ಪಕ್ಷದ ನಾಯಕರ ಗುಣಗಾನ ಮಾಡುತ್ತಾರೆ. ಆದರೆ ಎಡಿಆರ್ ಸಮೀಕ್ಷೆಯಿಂದ ತಿಳಿದು ಬಂದಿರುವ ಪ್ರಕಾರ ಈ ಪೈಕಿ ಅನೇಕ ನಾಯಕರು ಮೊದಲು ದ್ರೋಹ ಬಗೆಯುವುದು ತಮ್ಮನ್ನು ಅಭ್ಯರ್ಥಿಯಾಗಿಸಿ ಬೆಂಬಲಿಸಿದ ಸ್ವತಃ ತಮ್ಮದೇ ಪಕ್ಷಕ್ಕೆ. 2022 ಮತ್ತು 2026ರ ನಡುವೆ ನಡೆದ ಚುನಾವಣೆಗಳಲ್ಲಿ ಲೋಕಸಭೆಗೆ ಮತ್ತು ದೇಶದ ವಿವಿಧ ರಾಜ್ಯಗಳ ವಿಧಾನ ಸಭೆಗೆ ಚುನಾಯಿತರಾದ ಸದಸ್ಯರ ಪೈಕಿ 111 ಮಂದಿ ತಮ್ಮ ಮೂಲ ಪಕ್ಷಕ್ಕೆ ದ್ರೋಹವೆಸಗಿ ಬೇರಾವುದಾದರೂ ಪಕ್ಷಕ್ಕೆ ಹಾರಿಹೋದ ಪಕ್ಷದ್ರೋಹಿಗಳು.

ರಾಜ್ಯಸಭಾ ಸದಸ್ಯರುಗಳ ಪೈಕಿ 31 ಮಂದಿ (ಶೇ. 14 ಮಂದಿ) ತಮ್ಮ ಬಳಿ 100 ಕೋಟಿ ರೂಪಾಯಿಗಿಂತ ಹೆಚ್ಚಿನ ಸಂಪತ್ತು ಇದೆ ಎಂದು ಘೋಷಿಸಿದ್ದಾರೆ. ನಮ್ಮಲ್ಲಿ ರಾಜಕಾರಣಿಗಳ ಬಳಿ ಇರುವ ಸಂಪತ್ತಿನ ಕುರಿತು, ಅಷ್ಟೆಲ್ಲಾ ಸಂಪತ್ತು ಅವರ ಬಳಿಗೆ ಹೇಗೆ ಬಂತು ಎಂದು ಪ್ರಶ್ನಿಸುವ ಅಥವಾ ವಿಚಾರಿಸುವ ಸಂಪ್ರದಾಯ ಇಲ್ಲ. ಆದ್ದರಿಂದ ಪುಢಾರಿಗಳ ಶ್ರೀಮಂತಿಕೆಯು ಅಪರಾಧ ಅಥವಾ ಶಂಕಿತ ಅಪರಾಧದ ಸಾಲಿಗೂ ಸೇರುವುದಿಲ್ಲ. ಹೆಚ್ಚಿನ ಜನಪ್ರತಿನಿಧಿಗಳೆಲ್ಲಾ ಕುಬೇರರಾಗಿಬಿಟ್ಟರೆ ಬಹುಸಂಖ್ಯಾತ ಬಡ ನಾಗರಿಕರ ಆಶೋತ್ತರಗಳನ್ನು ಯಾರು ಪ್ರತಿನಿಧಿಸಬೇಕು ಎಂಬುದು ಮಾತ್ರ ಕಾಳಜಿಯ ವಿಷಯವಾಗಿ ಉಳಿಯುತ್ತದೆ.

ನಮ್ಮ ರಾಜ್ಯ ಸಭಾ ಸದಸ್ಯರಲ್ಲಿ 34 ಮಂದಿ ಅಂದರೆ ಕೇವಲ ಶೇ.15 ಮಂದಿ ಮಾತ್ರ ಮಹಿಳಾ ಸದಸ್ಯರು. ಮಹಿಳಾ ಪ್ರಾತಿನಿಧ್ಯ ಹಾಗೂ ಸಬಲೀಕರಣಕ್ಕೆ ನಮ್ಮ ಬದ್ಧತೆ ಕೇವಲ ಔಪಚಾರಿಕ ಭಾಷಣಗಳಿಗೆ ಸೀಮಿತವಾದ್ದರಿಂದ, ಈ ಕ್ಷೀಣ ಪ್ರಾತಿನಿಧ್ಯ ಒಂದು ಸಮಸ್ಯೆ ಎಂದು ನಮಗೆ ಅನಿಸುವುದೇ ಇಲ್ಲ. ಪ್ರಸ್ತುತ ಶೇ. 15 ಪ್ರಾತಿನಿಧ್ಯ ಕೂಡಾ ಅತಿಯಾಯಿತು ಎಂಬ ಧಾಟಿಯಲ್ಲಿ ಮಾತನಾಡುವ ಅನೇಕರು ನಮ್ಮಲ್ಲಿದ್ದಾರೆ.

ಜನರು ತುಂಬಾ ಗೌರವದೊಂದಿಗೆ ‘ಮೇಲ್ಮನೆ’ ಎಂದು ಕರೆಯುವ ರಾಜ್ಯ ಸಭೆಯ ಸದಸ್ಯರ ಪೈಕಿ ಶೇ. 19 ಮಂದಿಯು ಪದವೀಧರ ಮಟ್ಟದ ಶಿಕ್ಷಣವನ್ನೂ ಪಡೆದಿಲ್ಲ ಎಂಬುದು ಹಲವರು ಹುಬ್ಬೇರಿಸುವುದಕ್ಕೆ ಕಾರಣವಾಗಿದೆ. ಅದೇವೇಳೆ, ಒಂದಕ್ಷರ ಕೂಡಾ ಕಲಿತಿಲ್ಲದವರು ಪದವಿ, ಸ್ನಾತಕೋತ್ತರ ಪದವಿ ಇತ್ಯಾದಿ ಸರ್ಟಿಫಿಕೇಟುಗಳನ್ನು ಪ್ರದರ್ಶಿಸುತ್ತಾ ಮಹಾ ನಾಯಕರಾಗಿ ಮೆರೆದಾಡುತ್ತಿರುವ ದೇಶದಲ್ಲಿ ಯಾರು ಪದವೀಧರರು ಎಂಬುದನ್ನು ನಿರ್ಧರಿಸುವುದಕ್ಕೆ ಇರುವ ಮಾನದಂಡಗಳೇನು ಮತ್ತು ಅವೆಲ್ಲ ಎಷ್ಟು ನಂಬಲರ್ಹ ಎಂಬ ಬಗ್ಗೆ ಸಹಜವಾಗಿಯೇ ವಿವಾದಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor