ಸಾಂದರ್ಭಿಕ ಚಿತ್ರ Photo  : PTI

ಭಾರತದಲ್ಲಿ ಈಗ ಕೇಂದ್ರ ಸರಕಾರದ ವಿರುದ್ಧ ದೇಶದಾದ್ಯಂತ ಆಗುತ್ತಿರುವ ಪ್ರತಿಭಟನೆಗಳನ್ನು ಸತ್ತೆಯನ್ನು ಬದಲಾಯಿಸುವ ಕುತಂತ್ರ ಎಂದು ಆಡಳಿತ ಪಕ್ಷದ ಪ್ರತಿನಿಧಿಗಳು ಆಪಾದಿಸಿದ್ದಾರೆ. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಪ್ರತಿಭಟನೆಗಳು ನಿರಂತರವಾಗಿ, ಅವುಗಳ ಕಾವು ಅಧಿಕಾರದಲ್ಲಿರುವವರಿಗೆ ತಲುಪಿ ಸುಧಾರಣೆಗೆ ದಾರಿ ಆಗಬಹುದು ಎಂದು ಆಶಾವಾದಿಗಳ ನಂಬಿಕೆ. ಆ ನಂಬಿಕೆ ಹುಸಿಯಾಗುವ ಸಾಧ್ಯತೆ ಸ್ಪಷ್ಟವಾದಾಗ ಪರ್ಯಾಯವಾದ ದಾರಿ ಆಡಳಿತವನ್ನು ಬದಲಾಯಿಸುವುದು. ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಅದು ಶಾಂತಿಯುತವಾಗಿ ನಡೆಯುತ್ತದೆ. ಈ ಬದಲಾವಣೆಯು ರಾಷ್ಟ್ರದ ನಾಗರಿಕತೆಯ ಪ್ರಬುದ್ಧತೆಯ ಸಂಕೇತ ಕೂಡ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಗತ್ತಿನ ಬೇರೆಬೇರೆ ಕಡೆಗಳಲ್ಲಿ ಆದ ಬದಲಾವಣೆಗಳು ಉಲ್ಲೇಖನೀಯ ಮತ್ತು ಅವುಗಳಲ್ಲಿ ಅಡಕವಾದ ಸಂದೇಶ ಮನನೀಯ.

ದಕ್ಷಿಣ ಅಮೆರಿಕದ ಅತಿ ದೊಡ್ಡ ರಾಷ್ಟ್ರ ಬ್ರೆಝಿಲ್‌ನಲ್ಲಿ ಅಕ್ಟೋಬರ್ 25ರಂದು ನಡೆದ ಎರಡನೇ ಸುತ್ತಿನ ಮತದಾನದಲ್ಲಿ ತನ್ನ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಬಲಪಂಥೀಯ ಅಭ್ಯರ್ಥಿ ಫ್ಲಾವಿಯೊ ಬೋಲ್ಸೊನಾರೊ ಅವರನ್ನು ಸೋಲಿಸಿ ಕಾರ್ಮಿಕ ಚಳವಳಿಯ ಮೂಲಕ ರಾಜಕೀಯಕ್ಕೆ ಕಾಲಿಟ್ಟ 81ವರ್ಷ ಪ್ರಾಯದ ಲೂಯ್ ಇನಾಸಿಯೊ ಲುಲಾ ದ ಸಿಲ್ವಾ ಅವರು ಅಲ್ಲಿನ ಅಧ್ಯಕ್ಷರಾಗಿ ನಾಲ್ಕನೇ ಅವಧಿಗೆ ಆಯ್ಕೆಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಮಧ್ಯ ಯೂರೋಪಿನ ಸರ್ಬಿಯಾದಲ್ಲಿ 14 ವರ್ಷಕಾಲ ಅಧಿಕಾರದಲ್ಲಿದ್ದ ಬಲಪಂಥೀಯ ಅಲೆಕ್ಸಾಂಡರ್ ವ್ಯೆಚೀಸ್ ಅವರನ್ನು ಆಯ್ಕೆ ಮಾಡದೆ ಚುನಾವಣೆಗೆ ಇಳಿದ ಯುವಜನರ ತಂಡವು ಸೋಲಿಸಿದೆ. ಅಮೆರಿಕದಲ್ಲಿ ನವೆಂಬರ್ 4ರಂದು ಕಾಂಗ್ರೆಸ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಸತ್ತಾರೂಢ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಿಗೆ ಪ್ರಬಲವಾದ ವಿರೋಧದ ಅಲೆ ಎದ್ದಿದೆ.

ಸರ್ಬಿಯ ಒಂದು ಸಣ್ಣ ದೇಶ. ಆದರೆ ಅಲ್ಲಿನ ಆಡಳಿತ ವರ್ಗದ ವೈಖರಿಗೆ ಕಂಗಾಲಾದ ಜನತೆಯು ಪ್ರತಿರೋಧದ ದ್ಯೋತಕವಾಗಿ ಕಣಕ್ಕೆ ಇಳಿದ ಅನಾಮಧೇಯರೇ ಆಗಿದ್ದ ತಜ್ಞರು, ಕ್ರೀಡಾಳುಗಳು, ರೈತರು, ಕಲಾವಿದರು ಮುಂತಾದವರನ್ನು ಚುನಾಯಿಸಿದ್ದಾರೆ. ಚುನಾವಣೆಯ ಬಳಿಕ ಚಳವಳಿಯ ನಾಯಕರು ‘ಇದು ಭಯದ ವಿರುದ್ಧ ಜನಸಾಮಾನ್ಯರು ಗಳಿಸಿದ ಜಯ’ ಎಂದಿದ್ದಾರೆ.

ಎರಡು ವರ್ಷಗಳ ಹಿಂದೆ ನೋವಿ ಸಾದ್ ರೈಲು ನಿಲ್ದಾಣದ ಮೇಲ್ಛಾವಣಿ ಕುಸಿದು ಬಿದ್ದು 16 ಮಂದಿ ನಾಗರಿಕರ ದಾರುಣ ಮೃತ್ಯುವಿನ ಬಳಿಕ ಜನರ ಆಕ್ರೋಶ ಹೊರಬಂತು. ಅವಧಿಗಿಂತ ಮೊದಲೇ ಚುನಾವಣೆ ಘೋಷಣೆ ಮಾಡಿದ ಅಧ್ಯಕ್ಷ ವ್ಯೆಚೀಸ್ ಸೋಲುಂಡರು.

ಎರಡು ವರ್ಷಗಳ ಹಿಂದೆ ಭಾರತದ ನೆರೆಯ ಮೂರು ರಾಷ್ಟ್ರಗಳಲ್ಲಿ ಆದ ರಾಜಕೀಯ ಪಲ್ಲಟಗಳೂ ಇಲ್ಲಿ ಪ್ರಸ್ತುತವಾಗುತ್ತವೆ.

2024ರಲ್ಲಿ ಬಾಂಗ್ಲಾ ದೇಶದ ಶೇಕ್ ಹಸೀನಾ ಅವರ ಸೋಲು ಮತ್ತು ಶ್ರೀಲಂಕಾದಲ್ಲಿ ಗೋತಬಯ ರಾಜಪಕ್ಷೆಯವರ ಆಳ್ವಿಕೆಯ ಅಂತ್ಯ ಹಾಗೂ 2025ರಲ್ಲಿ ನೇಪಾಳದಲ್ಲಿ ಯುವ ಮುಂದಾಳು ಬಾಲೇಂದ್ರ ಶಾ ಅವರ ವಿಜಯ-ಇವುಗಳು ಆಳುವ ವರ್ಗಗಳ ಸರ್ವಾಧಿಕಾರಿ ಹಾಗೂ ದಮನಕಾರಿ ಮನೋಸ್ಥಿತಿಯು ಮತದಾರರಿಗೆ ಸಮ್ಮತವಲ್ಲ ಎಂದು ತೋರಿಸಿದ್ದವು.

ಎರಡು ಚಾರಿತ್ರಿಕ ಘಟನೆಗಳನ್ನೂ ಇಲ್ಲಿ ಸ್ಮರಿಸಬಹುದು. ಎರಡನೆಯ ಮಹಾಯುದ್ಧದಲ್ಲಿ ಮಿತ್ರಪಡೆಗಳ ನಾಯಕನಾಗಿ ಜಯಗಳಿಸಿದ ಇಂಗ್ಲೆಂಡ್‌ನ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರು ಯುದ್ಧಾನಂತರದ ಚುನಾವಣೆಯಲ್ಲಿ ಸೋತರು. ಮತದಾರರ ಸಂದೇಶ ಸ್ಪಷ್ಟವಾಗಿತ್ತು: ‘ನೀವು ಯುದ್ಧದ ನೇತೃತ್ವಕ್ಕೆ ಅರ್ಹರು, ಆದರೆ ಶಾಂತಿಯ ಕಾಲಕ್ಕೆ ನಮಗೆ ಬೇರೆ ನಾಯಕರ ಅಗತ್ಯವಿದೆ’.

ಭಾರತದಲ್ಲಿ 1975-77ರ ತುರ್ತು ಪರಿಸ್ಥಿತಿಯ ನಂತರದ ಚುನಾವಣೆಯಲ್ಲಿ ಅತ್ಯಂತ ಬಲಶಾಲಿ ಪ್ರಧಾನಿ ಎನ್ನಿಸಿ ಕೊಂಡಿದ್ದ ಇಂದಿರಾ ಗಾಂಧಿ ಅವರನ್ನು ಮತದಾರರು ಸೋಲಿಸಿದರು.

ಯಾವ ನಾಯಕರೂ ಸ್ಥಿರವಲ್ಲ ಮತ್ತು ಅವರು ಸರ್ವಕಾಲಕ್ಕೂ ಸೂಕ್ತರಾಗಿರಬೇಕಿಲ್ಲ ಎಂಬುದು ಇವುಗಳ ಪಾಠ.

ಯೂರೋಪ್‌ನ ಪ್ರಮುಖ ಪ್ರಜಾಸತ್ತಾತ್ಮಕ ದೇಶಗಳಾದ ಫ್ರಾನ್ಸ್ ಮತ್ತು ಇಟಲಿಯಲ್ಲಿ ಆಳುವ ಸರಕಾರಗಳ ವಿರುದ್ಧ ಅನೇಕ ದಿನಗಳಿಂದ ಜನರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಅವುಗಳು ಹಿಂಸಾತ್ಮಕವಾಗಿದ್ದು ಅಲ್ಲಿನ ಸರಕಾರಗಳು ಕಾನೂನಾತ್ಮಕ ಪ್ರಕ್ರಿಯೆಗಳನ್ನು ಕೈಗೊಂಡಿವೆ. ಇದಕ್ಕೆ ಭಿನ್ನವಾಗಿ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಆಳುವ ಪಕ್ಷದ ದಬ್ಬಾಳಿಕೆಯ ಹೊರತಾಗಿಯೂ ಗಾಂಧೀಜಿ ಹಾಕಿದ ಅಹಿಂಸಾ ಮಾರ್ಗವನ್ನೇ ಅನುಸರಿಸುತ್ತಿವೆ. ಆದರೆ ಯುರೋಪ್‌ನ ಸನ್ನಿವೇಶದಲ್ಲಿ ಏಳುವ ಮೂಲಭೂತ ಪ್ರಶ್ನೆ ಪ್ರತಿಭಟನೆಗಳು ಯಾಕೆ ಆರಂಭವಾದವು ಎಂಬುದು.

ಬ್ರೆಝಿಲ್, ಸರ್ಬಿಯ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳಲ್ಲಿ ನಡೆದ ಚುನಾವಣೆಗಳಲ್ಲಿ ಒಂದು ಸಾಮಾನ್ಯ ಎಳೆಯನ್ನು ಕಾಣಬಹುದು. ಆಳುವ ವರ್ಗಗಳು ಪ್ರಜೆಗಳ ಕುರಿತಾದ ತಮ್ಮ ಜವಾಬ್ದಾರಿಯನ್ನು ಬದಿಗೊತ್ತಿ ಉತ್ತರದಾಯಿತ್ವದಿಂದ ವಿಮುಖರಾದಾಗ ಒಂದಲ್ಲ ಒಂದು ರೀತಿಯಲ್ಲಿ ಜನರ ಅಸಮಾಧಾನ ಹೊರಗೆ ಪ್ರಕಟವಾಗಿಯೇ ತೀರುತ್ತದೆ. ಆಗ ಆಳುವ ನಾಯಕರು ಎಚ್ಚೆತ್ತು ಆತ್ಮಾವಲೋಕನ ಮಾಡಿ ತಮ್ಮ ಕಾರ್ಯ ವೈಖರಿಯನ್ನು ಬದಲಾಯಿಸಿಕೊಳ್ಳುವುದು ಮುತ್ಸದ್ದಿತನದ ಲಕ್ಷಣವಾಗುತ್ತದೆ. ಈ ದೃಷ್ಟಿಯಿಂದ ವಿಶ್ವದ ವಿವಿಧೆಡೆ ಆಗುತ್ತಿರುವ ವಿದ್ಯಮಾನಗಳು ಭಾರತದ ರಾಜಕೀಯ ನಾಯಕರಿಗೆ ಒಂದು ಎಚ್ಚರಿಕೆಯ ಗಂಟೆ.

ಮಾತ್ರವಲ್ಲ, 1990ರ ಬಳಿಕದ ಉದಾರೀಕರಣ-ಜಾಗತೀಕರಣದ ಹಿನ್ನೆಲೆಯಲ್ಲಿ ಸರ್ವಾಂತರ್ಯಾಮಿಯಾಗಿ ವಿಜೃಂಭಿಸುತ್ತಿರುವ ಬಲಪಂಥೀಯ ಅಶ್ವಮೇಧದ ಕುದುರೆಗೆ ಕಡಿವಾಣವೂ ಆಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor