ಸಾಂದರ್ಭಿಕ ಚಿತ್ರ | Photo credit : PTI

ನಂದಿನಿ ಹಾಲು ಮತ್ತು ಮೊಸರು ತುಟ್ಟಿಯಾಗಿದೆ. ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಯಾಗಿದ್ದರೆ, ಮೊಸರು ದರವನ್ನು ಲೀಟರ್‌ಗೆ 14 ರೂ. ಮತ್ತು ಅರ್ಧ ಲೀಟರ್‌ಗೆ 6 ರೂ. ಹೆಚ್ಚಿಸಲಾಗಿದೆ. ನವೆಂಬರ್‌1ರಿಂದಲೇ ಈ ಹೊಸ ದರ ಜಾರಿಗೆ ಬಂದಿದೆ. ಒಮ್ಮೆಲೆ ಗ್ರಾಹಕರ ಮೇಲೆ ಬಿದ್ದ ಹೊರೆ ಕಣ್ಣಿಗೆ ಹೊಡೆದು ಕಾಣಿಸುವಷ್ಟಿದೆ. ಆದರೆ, ಹೆಚ್ಚಳದ ದೊಡ್ಡ ಪಾಲು ರೈತರಿಗೆ ಹೋಗುತ್ತದೆ ಎಂಬುದು ರಾಜ್ಯ ಸರಕಾರದ ಸಮರ್ಥನೆ. ಯಾರದೋ ಪ್ರತಿಷ್ಠೆ, ಅವಿವೇಕ ಮತ್ತು ದುರಹಂಕಾರದಿಂದ ತಲೆದೋರಿರುವ ಯುದ್ಧ ಮತ್ತು ತಮ್ಮ ವೈಫಲ್ಯ ಮರೆಮಾಚಲು ಆಡಳಿತಾರೂಢರು ನಡೆಸುವ ಕಸರತ್ತಿನ ಪರಿಣಾಮಗಳಿಗೆ ಜನರು ಬೆಲೆ ತೆರಬೇಕಾಗಿದ್ದರೆ, ನಮ್ಮದೇ ರೈತರಿಗಾಗಿ ಈ ಹೊರೆ ಹೊರುವುದು ಹೊಣೆ ಎಂದು ಒಪ್ಪಬಹುದು. ಆದರೂ, ಮೊಸರಿನ ದರದಲ್ಲಿ ಇಷ್ಟೊಂದು ಹೆಚ್ಚಳ ಎಷ್ಟು ಸಮರ್ಥನೀಯ ಎಂಬ ಪ್ರಶ್ನೆಯಿದೆ.

ದರ ಹೆಚ್ಚಳವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಕಡಿಮೆ ಮಳೆಯಿಂದಾಗಿ ಬರಗಾಲದಂತಹ ವಾತಾವರಣವಿರುವುದು, ಹಸಿಮೇವು ಮತ್ತು ನೀರಿನ ಅಭಾವ, ಜಾನುವಾರುಗಳ ನಿರ್ವಹಣೆ, ಔಷಧ ಹಾಗೂ ಮೇವಿನ ಖರ್ಚಿನಲ್ಲಿ ಗಣನೀಯ ಏರಿಕೆ, ಹಾಲಿನ ಉತ್ಪಾದನೆ ಕುಸಿತ -ಇವೆಲ್ಲವನ್ನೂ ಅವರು ಕಾರಣವಾಗಿ ಉಲ್ಲೇಖಿಸಿದ್ದಾರೆ. ರೈತರು ಹಾಲನ್ನು ಖಾಸಗಿ ಡೇರಿಗಳಿಗೆ ಮಾರಾಟ ಮಾಡುವುದನ್ನು ತಪ್ಪಿಸಲು ಮತ್ತು ಹೈನುಗಾರರನ್ನು ಉಳಿಸಿಕೊಳ್ಳಲು ದರ ಹೆಚ್ಚಳ ಅನಿವಾರ್ಯವಾಗಿತ್ತು. ಲೀಟರ್‌ಗೆ ಕನಿಷ್ಠ 10 ರಿಂದ 12 ರೂ. ಹೆಚ್ಚಿಸುವಂತೆ ರೈತರು ಮನವಿ ಮಾಡಿದ್ದರೂ, ಜನರ ಮೇಲೆ ಹೊರೆಯಾಗುವುದನ್ನು ಗಮನದಲ್ಲಿಟ್ಟುಕೊಂಡು 8 ರೂ. ಮಾತ್ರ ಏರಿಕೆ ಮಾಡಲಾಗಿದೆ. ದರ ಹೆಚ್ಚಳದ ನಂತರವೂ ಇತರ ನೆರೆರಾಜ್ಯಗಳಿಗೆ ಹೋಲಿಸಿದರೆ ನಂದಿನಿ ಹಾಲಿನ ದರ ಕಡಿಮೆಯೇ ಇದೆ ಎಂದಿದ್ದಾರೆ. ಏರಿಕೆ ಮಾಡಿದ ಹಣದಲ್ಲಿ ಲೀಟರ್‌ಗೆ 7 ರೂ. ನೇರವಾಗಿ ರೈತರಿಗೆ ತಲುಪಲಿದ್ದು, ಉಳಿದ 1 ರೂ. ಮಾತ್ರ ಒಕ್ಕೂಟಗಳ ನಿರ್ವಹಣೆಗೆ ಬಳಕೆಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಲೆಕ್ಕದಲ್ಲಿ, ರೈತರಿಗೆ ಸಿಗುವ ದರ ಲೀಟರ್‌ಗೆ 35ರಿಂದ 42 ರೂ.ಗೆ ಏರಿಕೆಯಾಗಲಿದೆ. ಸರಕಾರ ನೀಡುವ 5 ರೂ. ಪ್ರೋತ್ಸಾಹಧನ ಸೇರಿ ರೈತರಿಗೆ ಪ್ರತೀ ಲೀಟರ್ ಹಾಲಿಗೆ 47 ರೂ. ಸಿಗಲಿದೆ. ಈ ದರ ಹೆಚ್ಚಳದಿಂದ ಗ್ರಾಮೀಣ ಹೈನುಗಾರರ ಕುಟುಂಬಗಳಿಗೆ ವಾರ್ಷಿಕ ಅಂದಾಜು 1,850 ಕೋಟಿ ರೂ.ಗಳಿಂದ 2,100 ಕೋಟಿ ರೂ.ವರೆಗೆ ಆದಾಯ ಸಿಗುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕರ್ನಾಟಕದ ಹಾಲು ಮಾರುಕಟ್ಟೆಯಲ್ಲಿ ನಂದಿನಿ ಹಾಲು ಸಿಂಹಪಾಲನ್ನು ಹೊಂದಿದೆ ಎಂಬುದು ನಿಜವಾದರೂ, ಇತರ ಖಾಸಗಿ ಬ್ರಾಂಡ್‌ಗಳು ನಂದಿನಿ ಹಾಲಿನ ದರಕ್ಕಿಂತ ಹೆಚ್ಚಿನ ಬೆಲೆ ಮೂಲಕ ಲಾಭ ಮಾಡಿಕೊಳ್ಳುತ್ತಿರುವುದು ಕೂಡ ವಾಸ್ತವ. ಬೆಂಗಳೂರು ಹಾಗೂ ಉತ್ತರ ಕರ್ನಾಟಕದಲ್ಲಿ ಹೆಚ್ಚು ಮಾರಾಟವಾಗುವ ಅಮುಲ್, ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಪರಿಚಿತ ಹ್ಯಾಟ್ಸನ್ ಮತ್ತು ಆರೋಕ್ಯ ಅಲ್ಲದೆ ಹೆರಿಟೇಜ್, ದೊಡ್ಲಾ, ತಿರುಮಲ, ಜರ್ಸಿ ಇತ್ಯಾದಿ ಖಾಸಗಿ ಬ್ರಾಂಡ್‌ಗಳ ಹಾಲಿನ ದರ ಯಾವಾಗಲೂ ನಂದಿನಿ ಹಾಲಿಗಿಂತ ಕನಿಷ್ಠ 2ರಿಂದ 6 ರೂ., ಕೆಲವೊಮ್ಮೆ 10-12 ರೂ. ಹೆಚ್ಚೇ ಇರುತ್ತದೆ. ಫ್ಯಾಟ್ ಅಂಶ ಹೆಚ್ಚಿ ರುವ ಹಾಲಿನ ದರದಲ್ಲಂತೂ ಈ ಅಂತರ ಹೆಚ್ಚು. ಹೊರ ರಾಜ್ಯಗಳ ಖಾಸಗಿಯವರು ದೋಚಬಹುದಾದರೆ, ನಮ್ಮದೇ ರೈತರಿಗೆ ಲಾಭವೊದಗಿಸುವ ದರ ಏರಿಕೆಯನ್ನು ದೋಖಾ ಎಂದು ಬಿಜೆಪಿ ಗದ್ದಲವೆಬ್ಬಿಸುವುದರಲ್ಲಿ ಅರ್ಥವಿಲ್ಲ ಎಂದೂ ಅನ್ನಿಸುತ್ತದೆ.

ರಾಜ್ಯದಲ್ಲಿ ಅಕ್ಕಿ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಕಳೆದ ನಾಲ್ಕು ತಿಂಗಳುಗಳಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ. ಬೆಲೆ ಏರಿಕೆಯಾಗಿದ್ದರೂ ಅದರ ಸಂಪೂರ್ಣ ಲಾಭ ರೈತರಿಗೆ ಸಿಕ್ಕಿಲ್ಲ. ಹಾಲಿನ ದರ ಹೆಚ್ಚಳದ ಫಲ ನೇರವಾಗಿ ರೈತರಿಗೆ ಹೋಗಲಿದೆ ಎಂದಾದರೆ, ಅದು ಈ ದುಷ್ಕಾಲದಲ್ಲಿ ಅವರಿಗೆ ದೊಡ್ಡ ಭರವಸೆಯೆಂಬುದನ್ನು ಅಲ್ಲಗಳೆಯಲಾಗದು. ಅಕ್ಕಿ ಮಾತ್ರವಲ್ಲ, ದೇಶದಲ್ಲಿ ಚಿಲ್ಲರೆ ಹಣದುಬ್ಬರದಿಂದಾಗಿ ಆಹಾರ ಪದಾರ್ಥಗಳ ಬೆಲೆಗಳು ಏರುತ್ತಲೇ ಇವೆ. ಈರುಳ್ಳಿ, ಅಡುಗೆ ಎಣ್ಣೆ, ಸಕ್ಕರೆ, ಬೆಲ್ಲ, ಬೇಳೆಕಾಳುಗಳು, ತರಕಾರಿ ಸೇರಿದಂತೆ ಬಹುತೇಕ ದಿನಬಳಕೆ ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ಈ ಸ್ಥಿತಿ ಈಗಾಗಲೇ ಜನಸಾಮಾನ್ಯರ ಅಡುಗೆಮನೆಯೊಳಗೆ ಬಿಸಿ ಹೆಚ್ಚಿಸಿರುವಾಗ, ಜನರ ಬಗ್ಗೆ ತುಂಬ ಕಾಳಜಿ ಹೊಂದಿರುವುದಾಗಿ ಬಿಂಬಿಸಿಕೊಳ್ಳುವ ಬಿಜೆಪಿ ತುಟಿಪಿಟಕ್ಕೆನ್ನುತ್ತಿಲ್ಲ. ದೀಪಾವಳಿ ಹಬ್ಬಕ್ಕೂ ಮುನ್ನ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳವಾಗಿದ್ದು, ಇದು ಏರಿಕೆಯ ಸತತ ಮೂರನೇ ತಿಂಗಳು. ನಮ್ಮ ರೈತರು ಉತ್ಪಾದಿಸುವ ಹಾಲಿನ ದರ ಮೂರೂವರೆ ವರ್ಷಗಳಲ್ಲಿ ನಾಲ್ಕೈದು ಸಲ ಏರಿದೆ ಎಂದು ಗರಂ ಆಗುವ ಬಿಜೆಪಿಯ ರಾಜ್ಯ ನಾಯಕರು, ಇದರ ಬಗ್ಗೆ ಮಾತ್ರ ಏನೂ ಗೊತ್ತಿಲ್ಲದವರಂತೆ ಇರುತ್ತಾರೆ. ಅಲ್ಲದೆ, ರೈತರಿಗೆ ಅನುಕೂಲವಾಗುವುದರಿಂದ ಹಾಲಿನ ದರ ಏರಿಕೆ ಸ್ವಾಗತಾರ್ಹ ಎನ್ನುವವರೇ, ಇದರ ಹೊರೆಯನ್ನು ಗ್ರಾಹಕರ ಮೇಲೆ ಹೇರದೆ, ಸರಕಾರವೇ ಹೊರಬೇಕಿತ್ತು ಎಂದೂ ಹೇಳುತ್ತಾರೆ. ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎನ್ನುವವರ ದ್ವಂದ್ವ ಇದು. ಕಬ್ಬು ಬೆಳೆಗಾರರು ಪ್ರತಿಭಟಿಸಿದಾಗ ಈ ಸರಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ ಎನ್ನುವುದು, ರೈತರ ಪರ ನಿಲುವು ತೆಗೆದುಕೊಂಡಾಗ ಜನರ ಬಗ್ಗೆ ಕಾಳಜಿಯಿಲ್ಲ ಎನ್ನುವುದು ಬರೀ ಗೊಣಗಾಟದಂತಿದೆ.

ಅದೇನೇ ಇದ್ದರೂ, ಸಾಮಾನ್ಯ ಗ್ರಾಹಕರ ದೃಷ್ಟಿಯಿಂದ ಸರಕಾರ ಇನ್ನೂ ಸ್ವಲ್ಪ ದಾಕ್ಷಿಣ್ಯ ತೋರಿಸಬಹುದಿತ್ತು. ಹಾಲಿಗೆ ಹೋಲಿಸಿದರೆ ಮೊಸರಿನಲ್ಲಿ ಕೊಬ್ಬಿನಾಂಶ ಹಾಗೂ ಸಾಲಿಡ್ಸ್ ಪ್ರಮಾಣ ಕಾಯ್ದುಕೊಳ್ಳಬೇಕಾಗುತ್ತದೆ. ಹಾಗಾಗಿ, ಖಾಸಗಿಯವರ ಪೈಪೋಟಿ ಎದುರಿಸಲು ಮತ್ತು ಒಕ್ಕೂಟಗಳ ನಷ್ಟ ಸರಿದೂಗಿಸಲು ಮೊಸರಿನ ದರ ಹೆಚ್ಚಿಸಿದ್ದರೂ, ಅಲ್ಲೂ ಕೊಂಚ ತಗಿಸಬಹುದಿತ್ತು. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಇದು ಖಂಡಿತವಾಗಿಯೂ ಹೆಚ್ಚುವರಿ ಆರ್ಥಿಕ ಹೊರೆ. ಆದರೆ, ಹೈನುಗಾರರ ಹಿತದೃಷ್ಟಿಯಿಂದ ನೋಡಿದರೆ, ಅವರಿಗಾಗಿ ನಮ್ಮ ಪಾಲೂ ಇರಲಿ ಎಂದುಕೊಂಡರೆ ಅದು ಶುದ್ಧ್ದ ಸಹಕಾರ. ಆಗ ಹಾಲಿಗೆ ಹುಳಿ ಹಿಂಡುವ, ಮೊಸರಲ್ಲಿ ಕಲ್ಲು ಹುಡುಕುವ ರಾಜಕೀಯ ಇರುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor