ಪೋಷಣೆ ಕಳೆದುಕೊಳ್ಳುತ್ತಿರುವ ಪ್ರಧಾನಮಂತ್ರಿ ಪೋಷಣ್ ಶಕ್ತಿ
ನರೇಂದ್ರ ಮೋದಿ | Photo Credit : PTI
ಯಾವುದೇ ಯೋಜನೆಗಳ ಹೆಸರುಗಳನ್ನು ಕೇಂದ್ರ ಸರಕಾರ ಬದಲಿಸಲು ಮುಂದಾಗುತ್ತದೆಯೆಂದರೆ, ಆ ಯೋಜನೆಗಳ ಗ್ರಹಚಾರ ಕೆಡಲಿದೆಯೆಂದೇ ಅರ್ಥ. ಪರಿಷ್ಕರಣೆಯ ಹೆಸರಿನಲ್ಲಿ ಯೋಜನೆಯ ಹೆಸರನ್ನು ಬದಲಿಸುವ ಮೂಲಕ ಕೇಂದ್ರ ಸರಕಾರ ಯಾರದೋ ಸಾಧನೆಯನ್ನು ತನ್ನ ಖಾತೆಗೆ ಬರೆದುಕೊಳ್ಳುತ್ತದೆ. ಅದರ ಜೊತೆ ಜೊತೆಗೇ ಅದನ್ನು ಹಂತ ಹಂತವಾಗಿ ಮುಗಿಸುವುದಕ್ಕೆ ಬೇಕಾದ ಕಾರ್ಯಯೋಜನೆಯನ್ನೂ ರೂಪಿಸುತ್ತದೆ. ಯುಪಿಎ ಸರಕಾರ ಜಾರಿಗೆ ತಂದ ಹತ್ತು ಹಲವು ಸಬ್ಸಿಡಿ ಯೋಜನೆಗಳನ್ನು ಸರಕಾರ ಮುಗಿಸಿದ್ದು ಇದೇ ತಂತ್ರ ಅನುಸರಿಸಿ. ಮಾಹಿತಿ ಹಕ್ಕು ಕಾಯ್ದೆಯನ್ನು ಕೇಂದ್ರ ಸರಕಾರ ಹೇಗೆ ದುರ್ಬಲಗೊಳಿಸಿತು ಎನ್ನುವುದನ್ನು ನಾವು ನೋಡಿದ್ದೇವೆ. ನರೇಗಾ ಯೋಜನೆಯನ್ನು ಇಲ್ಲವಾಗಿಸಲು ರಾಮನ ಹೆಸರನ್ನು ಬಳಸಿಕೊಳ್ಳುತ್ತಿರುವುದರ ವಿರುದ್ಧ ದೇಶ ಆಕ್ರೋಶ ವ್ಯಕ್ತಪಡಿಸುತ್ತಿದೆ. 2021ರಲ್ಲಿ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆ ಎಂದು ಪುನರ್‌ನಾಮಕರಣಕ್ಕೊಳಗಾದ ಮಧ್ಯಾಹ್ನದ ಬಿಸಿಯೂಟದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಮಧ್ಯಾಹ್ನದ ಬಿಸಿಯೂಟ ಅಥವಾ ಮಿಡ್‌ಡೇ ಮೀಲ್ ಎಂದು ದೇಶಾದ್ಯಂತ ಜನಪ್ರಿಯಗೊಂಡಿದ್ದ, ಈ ದೇಶದ ಲಕ್ಷಾಂತರ ಬಡ ಮಕ್ಕಳು ಶಾಲೆಯ ಮೆಟ್ಟಿಲು ತುಳಿಯಲು ಕಾರಣವಾಗಿದ್ದ ಯೋಜನೆಯು 2021ರಲ್ಲಿ ಪುನರ್‌ನಾಮಕರಣಗೊಂಡಿತು. 2021ರಿಂದ 2026ರ ವರೆಗಿನ ಗುರಿಯಿಟ್ಟು, 1.3 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಬಜೆಟ್‌ನ್ನು ಈ ಯೋಜನೆಗೆ ಮೀಸಲಿಡಲಾಗಿತ್ತು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಈ ಯೋಜನೆಯನ್ನು ಸದುಪಯೋಗಗೊಳಿಸಿವೆ. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಜಂಟಿಯಾಗಿ ಈ ಯೋಜನೆಯನ್ನು ಜಾರಿಗೊಳಿಸುತ್ತಾ ಬರುತ್ತಿವೆ.
ಆದರೆ ಇತ್ತೀಚಿನ ದಿನಗಳಲ್ಲಿ ಈ ಯೋಜನೆಗೆ ಹಲವು ರಾಜ್ಯಗಳಲ್ಲಿ ಹಿನ್ನಡೆಯಾಗುತ್ತಿದೆ. ಈ ಯೋಜನೆಯಡಿ 2020-21ರಲ್ಲಿ 11.1 ಲಕ್ಷ ಶಾಲೆಗಳ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆಯುತ್ತಿದ್ದರು. ಜನಸಂಖ್ಯೆ ಏರಿಕೆ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆ ಇನ್ನಷ್ಟು ವಿಸ್ತಾರಗೊಳ್ಳಬೇಕಾಗಿತ್ತು. ಆದರೆ 2024-25ರಲ್ಲಿ ಇದು 10.3 ಲಕ್ಷಕ್ಕೆ ಇಳಿಕೆಯಾಗಿದೆ ಎನ್ನುವುದನ್ನು ಸ್ವತಃ ಸರಕಾರವೇ ಒಪ್ಪಿಕೊಂಡಿದೆ. ಅಂದರೆ 84, 400 ಶಾಲೆಗಳು ಈ ಯೋಜನೆಯ ವ್ಯಾಪ್ತಿಯಿಂದ ಹೊರಬಿದ್ದಿವೆ. ಬಡತನ, ಅನಕ್ಷರತೆಗಾಗಿ ದೇಶದಲ್ಲೇ ಕುಖ್ಯಾತವಾಗಿರುವ ಉತ್ತರ ಪ್ರದೇಶದ ಅತ್ಯಧಿಕ ಶಾಲೆಗಳು ಈ ಯೋಜನೆಯ ವ್ಯಾಪ್ತಿಯಿಂದ ಹೊರ ತಳ್ಳಲ್ಪಟ್ಟಿವೆ. ಇಲ್ಲಿ ಐದು ವರ್ಷಗಳಲ್ಲಿ 25, 361 ಶಾಲೆಗಳು ಮಧ್ಯಾಹ್ನದ ಊಟದಿಂದ ವಂಚಿತವಾಗಿವೆ. ಆನಂತರದ ಸ್ಥಾನದಲ್ಲಿ ಮಧ್ಯಪ್ರದೇಶವಿದೆ. ಇಲ್ಲಿ, 9,321 ಶಾಲೆಗಳ ಮಕ್ಕಳು ಯೋಜನೆಯಿಂದ ವಂಚಿತರಾಗಿದ್ದಾರೆ. ಈ ಯೋಜನೆಯ ಹೊಣೆಗಾರಿಕೆಯನ್ನು ಕೇಂದ್ರ ಮತ್ತು ರಾಜ್ಯ ಎರಡೂ ಹೊತ್ತುಕೊಂಡಿವೆ. ಅನುದಾನ ಬಿಡುಗಡೆ ಮಾಡುವ ವಿಷಯದಲ್ಲಿ ಕೇಂದ್ರ ಅನುಸರಿಸುತ್ತಿರುವ ಪಕ್ಷಪಾತ ಈ ಯೋಜನೆಯ ಮೇಲೂ ಪರಿಣಾಮ ಬೀರಿದೆ. ಯೋಜನೆಯಡಿ ವರ್ಷದಲ್ಲಿ ಸರಾಸರಿ 220 ದಿನಗಳ ಕಾಲ ಮಕ್ಕಳಿಗೆ ಆಹಾರವನ್ನು ಒದಗಿಸಬೇಕು. 2024-25ರಲ್ಲಿ ಕೇಂದ್ರ ಸರಕಾರವು ಯೋಜನೆಗಾಗಿ 12, 467.3 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿತ್ತು. ಆದರೆ ಬಳಿಕ ಅದನ್ನು 10,000 ಕೋಟಿ ರೂಪಾಯಿಗಳಿಗೆ ಇಳಿಸಿತ್ತು. ಫೆಬ್ರವರಿ 2025ರ ವೇಳೆಗೆ ಕೇವಲ 5,421.9 ಕೋಟಿ ರೂ.ಗಳನ್ನಷ್ಟೇ ವೆಚ್ಚ ಮಾಡಲಾಗಿದೆ ಎನ್ನುವುದನ್ನು ಕೇಂದ್ರ ಸರಕಾರದ ಅಂಕಿಅಂಶ
ತಿಳಿಸುತ್ತದೆ.
ಬಡತನದ ಕಾರಣಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಕುಟುಂಬಗಳು ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಅಪೌಷ್ಟಿಕತೆಯನ್ನು ನಿವಾರಿಸುವುದಕ್ಕೂ ಈ ಯೋಜನೆ ಸದುಪಯೋಗವಾಯಿತು. ಸ್ಥಳೀಯ ರೈತ ಸಂಘಟನೆಗಳು, ಸ್ವಸಹಾಯ ಸಂಘಗಳ ಪಾಲುದಾರಿಕೆಯನ್ನು ಈ ಯೋಜನೆಗೆ ಬಳಸಿಕೊಳ್ಳಲಾಯಿತು. 1925ರಲ್ಲಿ ಮದ್ರಾಸ್ ಮುನ್ಸಿಪಲ್ ಕಾರ್ಪೊರೇಶನ್ ಈ ಯೋಜನೆಯನ್ನು ನಿರ್ದಿಷ್ಟ ಮಕ್ಕಳಿಗೆ ಪ್ರಯೋಗ ರೂಪದಲ್ಲಿ ಜಾರಿಗೆ ತಂದಿತ್ತು. ಸ್ವತಂತ್ರ ಭಾರತದಲ್ಲಿ ಈ ಯೋಜನೆ ಮೊದಲ ಬಾರಿಗೆ ಜಾರಿಗೆ ತಂದುದು ತಮಿಳು ನಾಡು ಸರಕಾರ. ಆ ಬಳಿಕ ಕೇರಳ ಆಸಕ್ತಿ ವಹಿಸಿತು. 2001ರಲ್ಲಿ ಸುಪ್ರೀಂಕೋರ್ಟ್ ಆದೇಶದ ಬಳಿಕ ಎಲ್ಲ ರಾಜ್ಯಗಳು ಈ ಯೋಜನೆಗೆ ಕೈ ಜೋಡಿಸಿದವು. ಅಲ್ಲಿಂದ ಅದು ಹಂತ ಹಂತವಾಗಿ ದೇಶಾದ್ಯಂತ ವಿಸ್ತಾರಗೊಂಡಿತು. ಈ ಯೋಜನೆ ಲಕ್ಷಾಂತರ ಮಕ್ಕಳು ಶಾಲೆಯ ಕಡೆಗೆ ಹೊರಳುವುದಕ್ಕೆ ಕಾರಣವಾಯಿತು. ಸರಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚುವಲ್ಲಿ ಇದು ಮಹತ್ತರ ಪಾತ್ರವನ್ನು ವಹಿಸಿತ್ತು. ಮಾತ್ರವಲ್ಲ ಅಪೌಷ್ಟಿಕತೆಯಿಂದ ಕಂಗಾಲಾಗಿದ್ದ ಗ್ರಾಮೀಣ ಪ್ರದೇಶದ ಮಕ್ಕಳ ಆರೋಗ್ಯವನ್ನು ಮೇಲೆತ್ತುವಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡಿತು. ಈ ಯೋಜನೆಯನ್ನು ನಿರ್ಲಕ್ಷಿಸಿದ್ದೇ ಆದರೆ ಅದು ಈ ದೇಶದ ಶಿಕ್ಷಣದ ಮೇಲೆ ಮಾತ್ರವಲ್ಲ, ಪೌಷ್ಟಿಕತೆಯ ಮೇಲೂ ದುಷ್ಪರಿಣಾಮವನ್ನು ಬೀರುತ್ತದೆ. ಈ ನಿಟ್ಟಿನಲ್ಲಿ, ಮಧ್ಯಾಹ್ನದ ಬಿಸಿಯೂಟದಿಂದ 84,000 ಶಾಲೆಗಳು ಯಾಕೆ ಹೊರಬಿದ್ದವು? ಮತ್ತು ಇದು ಗ್ರಾಮೀಣ ಪ್ರದೇಶದಲ್ಲಿ ಯಾವ ಪರಿಣಾಮವನ್ನು ಬೀರಬಹುದು ಎನ್ನುವುದರ ಬಗ್ಗೆ ಸರಕಾರ ತುರ್ತಾಗಿ ಆಲೋಚಿಸ ಬೇಕಾಗಿದೆ.
ಸೂಕ್ತ ಸಮಯದಲ್ಲಿ ಅನುದಾನ ಒದಗಿಸದೇ ಇರುವ ಮೂಲಕ ಕೇಂದ್ರ ಸರಕಾರವೇ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳದೇ ಇರಲು ಮುಖ್ಯ ಕಾರಣವಾಗಿದೆ. ಕರ್ನಾಟಕದಂತಹ ದಕ್ಷಿಣದ ರಾಜ್ಯಗಳು ಈ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಮಾತ್ರವಲ್ಲ, ಬಿಸಿಯೂಟದ ಜೊತೆಗೆ ಮೊಟ್ಟೆ, ಹಾಲು, ಹಣ್ಣುಗಳ ಮೂಲಕ ಯೋಜನೆಯನ್ನು ಇನ್ನಷ್ಟು ಜನಪ್ರಿಯಗೊಳಿಸುತ್ತಿವೆ. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಈ ಯೋಜನೆಗಳು ನೆಲಕಚ್ಚಿವೆ.
ಈ ರಾಜ್ಯದಲ್ಲಿ ಬಿಸಿಯೂಟದ ಹೆಸರಲ್ಲಿ ವಿದ್ಯಾರ್ಥಿಗಳಿಗೆ ರೊಟ್ಟಿ ಮತ್ತು ಉಪ್ಪು ನೀಡಿರುವುದು ಒಮ್ಮೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ವಿದ್ಯಾರ್ಥಿಗಳಿಗೆ ಅತ್ಯಂತ ಕಳಪೆ ಊಟ ನೀಡುವುದರಲ್ಲಿ ಉತ್ತರಪ್ರದೇಶ ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಬಂದಿದೆ. ಬಿಸಿಯೂಟ ಅನುದಾನ ದುರ್ಬಳಕೆಯಾಗಿ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ನೀಡುವುದು ಕೂಡ ಈ ಯೋಜನೆ ವಿಫಲವಾಗಲು ಒಂದು ಕಾರಣವಾಗಿದೆ. ಶಾಲೆಗಳಲ್ಲಿ ಜೀವಂತವಿರುವ ಜಾತೀಯತೆಯೂ ಈ ಯೋಜನೆಗೆ ಬಹುದೊಡ್ಡ ತೊಡಕಾಗಿವೆ. ಮೇಲ್‌ಜಾತಿಯ ಜನರಿಗೆ ಈ ಯೋಜನೆ ಯಶಸ್ವಿಯಾಗುವುದು ಬೇಕಾಗಿಲ್ಲ. ಮಧ್ಯಮವರ್ಗದಿಂದ ಬರುವ ವಿದ್ಯಾರ್ಥಿಗಳು ಗುಣಮಟ್ಟದ ಕಾರಣದಿಂದ ಆಹಾರವನ್ನು ಮುಟ್ಟುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಾವಿರಾರು ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಪರಿಣಾಮವಾಗಿ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಮಾತ್ರವಲ್ಲ, ಈ ಬಿಸಿಯೂಟ ಯೋಜನೆಯಿಂದಲೂ ಹೊರತಳ್ಳಲ್ಪಡುತ್ತಿದ್ದಾರೆ. ಕೊರೋನ, ಲಾಕ್‌ಡೌನ್ ಕಾಲದಲ್ಲಿ ಶಾಲೆಯಿಂದ ಹೊರಬಿದ್ದ ಲಕ್ಷಾಂತರ ಮಕ್ಕಳು ಮತ್ತೆ ಶಾಲೆಯ ಮೆಟ್ಟಿಲು ತುಳಿದಿಲ್ಲ.
ದೇಶವು ಹಸಿವಿನ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದೆ. ಅಪೌಷ್ಟಿಕತೆ ಹೆಚ್ಚುತ್ತಿದೆ. ಇಂತಹ ಹೊತ್ತಿನಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕೆ ಕೇಂದ್ರ ಸರಕಾರ ಮುಂದಾಗಬೇಕು. ಈ ಯೋಜನೆಯಿಂದ ಶಾಲೆಗಳು ಯಾಕೆ ಹೊರಬೀಳುತ್ತಿವೆ ಮತ್ತು ಆ ವಂಚಿತ ವಿದ್ಯಾರ್ಥಿಗಳನ್ನು ಮತ್ತೆ ಯೋಜನೆಯ ಭಾಗವಾಗಿಸುವುದು ಹೇಗೆ ಎನ್ನುವ ಬಗ್ಗೆ ಸರಕಾರ ಚರ್ಚಿಸಬೇಕು. ಇತರ ಜನಪ್ರಿಯ ಯೋಜನೆಗಳಿಗೆ ಒದಗಿದ ದಯನೀಯ ಸ್ಥಿತಿ ಈ ಮಧ್ಯಾಹ್ನದ ಊಟಕ್ಕೂ ಒದಗಿದರೆ ಅದು ಈ ದೇಶದ ಶಿಕ್ಷಣ ಮತ್ತು ಗ್ರಾಮೀಣ ಪ್ರದೇಶದ ಪೌಷ್ಟಿಕತೆಯ ಮೇಲೆ ತೀವ್ರ ದುಷ್ಪರಿಣಾಮವನ್ನು ಬೀರಲಿದೆ ಎನ್ನುವ ಎಚ್ಚರಿಕೆ ಸರಕಾರಕ್ಕೆ ಇರಬೇಕು.