×
Ad

ವಾಯು ಮಾಲಿನ್ಯ: ಉಸಿರಾಡಲು ಒದ್ದಾಡುತ್ತಿರುವ ಸರಕಾರ

Update: 2025-12-13 06:46 IST

Photo: PTI

ಭಾರತದ ನಗರಗಳು ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯಗಳಿಗಾಗಿ ವಿಶ್ವಮಟ್ಟದಲ್ಲಿ ಸುದ್ದಿಯಾಗುತ್ತಿವೆೆ. ಅಂತರ್‌ರಾಷ್ಟ್ರೀಯ ವರದಿಗಳು ವಾಯುಮಾಲಿನ್ಯದಲ್ಲಿ ಭಾರತದ ಕಳಪೆ ಸಾಧನೆಗಳ ಕಡೆಗೆ ಬೆಟ್ಟು ಮಾಡುತ್ತಿವೆ. ಇತ್ತ, ಅಡಿಗೆ ಬಿದ್ದರೂ ಮೂಗು ಮೇಲೆ ಎಂಬಂತೆ, ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಪ್ರಕಟಿಸುವ ವಾಯು ಗುಣಮಟ್ಟದ ಶ್ರೇಯಾಂಕಗಳಿಗೆ ಅಧಿಕೃತ ಮಾನ್ಯತೆ ಇಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಕೇಂದ್ರ ಸರಕಾರ ತನ್ನ ಮಾನ ಉಳಿಸಿಕೊಳ್ಳುವ ವ್ಯರ್ಥ ಪ್ರಯತ್ನದಲ್ಲಿದೆ.

ಇತ್ತೀಚೆಗೆ ಸ್ವಿಸ್‌ವಾಯು ಗುಣಮಟ್ಟ ಮೇಲ್ವಿಚಾರಣಾ ಸಂಸ್ಥೆಯ ದತ್ತಾಂಶವು ಭಾರತವು 2024ಕ್ಕೆ ವಿಶ್ವಸಂಸ್ಥೆಯ ವಾಯು ಗುಣಮಟ್ಟ ಮಾನದಂಡಗಳನ್ನು ಪೂರೈಸಲು ವಿಫಲವಾಗಿದೆ ಎನ್ನುವುದನ್ನು ಬಹಿರಂಗಪಡಿಸಿತ್ತು. ಕಳೆದ ಮಾರ್ಚ್‌ನಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ ಭಾರತವು ವಾಯು ಮಾಲಿನ್ಯದಲ್ಲಿ ಜಾಗತಿಕವಾಗಿ ಐದನೇ ಸ್ಥಾನದಲ್ಲಿದೆ. ವಿಶ್ವದ 20 ಅತಿ ಹೆಚ್ಚು ಮಾಲಿನ್ಯಗೊಂಡ ನಗರಗಳಲ್ಲಿ 13 ನಗರಗಳು ಭಾರತದಲ್ಲಿವೆ ಎಂದು ವರದಿ ಹೇಳುತ್ತಿದೆ. ಅಸ್ಸಾಮಿನ ಬರ್ನೀಹಾಟ್ ಅಗ್ರಸ್ಥಾನದಲ್ಲಿದ್ದರೆ, ಹೊಸದಿಲ್ಲಿಯನ್ನು ವಿಶ್ವದ ಅತಿ ಹೆಚ್ಚು ಮಾಲಿನ್ಯಗೊಂಡ ರಾಜಧಾನಿ ಎಂದು ಗುರುತಿಸಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ವಾಯುಮಟ್ಟ ಸೂಚ್ಯಂಕ ಅಪಾಯಕಾರಿ ಮಟ್ಟಕ್ಕೆ ಕುಸಿದಿರುವುದು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಲೇ ಇದೆ. ಸಂಸತ್‌ನಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಕೇಂದ್ರ ಸರಕಾರವು, ‘ದೇಶವು ವಾಯು ಮಾಲಿನ್ಯ ಸಮಸ್ಯೆಯನ್ನು ಎದುರಿಸಲು ತನ್ನದೇ ಆದ ಮಾನದಂಡಗಳನ್ನು ಹೊಂದಿದೆ. ಅಂತರ್‌ರಾಷ್ಟ್ರೀಯ ಮಾನದಂಡಗಳಿಗೆ ದೇಶ ಬದ್ಧವಾಗಿರಬೇಕಾಗಿಲ್ಲ ’ ಎನ್ನುತ್ತಾ ದೇಶದ ಕಳಪೆ ವಾಯು ಮಾಲಿನ್ಯವನ್ನು ಸಮರ್ಥಿಸಿಕೊಳ್ಳಲು ಮುಂದಾಗಿದೆ. ಈ ಹಿಂದೆ ಭಾರತವು ಹಸಿವಿನ ಸೂಚ್ಯಂಕದಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿದಾಗಲೂ ಸರಕಾರ ‘ಸೂಚ್ಯಂಕಕ್ಕೆ’ ಅನುಸರಿಸಿದ ಮಾನದಂಡವೇ ಸರಿಯಿಲ್ಲ ಎಂದು ಹೇಳಿ ವರದಿಯನ್ನು ನಿರಾಕರಿಸಿತ್ತು. ವಾಯು ಮಾಲಿನ್ಯಕ್ಕೆ ಸಂಬಂಧಿಸಿಯೂ ಸರಕಾರ ಅದೇ ವಾದವನ್ನು ಮುಂದಿಡುತ್ತಿದೆ.

ಕಳೆದ ಡಿಸೆಂಬರ್‌ನಲ್ಲಿ ದಿಲ್ಲಿಯಲ್ಲಿ ಸಾರ್ವಜನಿಕರು ಹೆಚ್ಚುತ್ತಿರುವ ವಾಯುಮಾಲಿನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ ಎಂದು ಬೀದಿಗಿಳಿದು ಪ್ರತಿಭಟಿಸಿದ್ದರು. ಈ ಸಂದರ್ಭದಲ್ಲಿ ಆಕ್ರೋಶಿತ ಪ್ರತಿಭಟನಾಕಾರರು ಪ್ರತಿಭಟನೆಯನ್ನು ತಡೆಯಲು ಯತ್ನಿಸಿದ ಪೊಲೀಸರ ವಿರುದ್ಧ ದಾಳಿ ನಡೆಸಿದರು. ಸುಮಾರು 20 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಇವರೆಲ್ಲರೂ ವಿಶ್ವಸಂಸ್ಥೆಯ ವರದಿಯನ್ನು ಮುಂದಿಟ್ಟು ಪ್ರತಿಭಟನೆ ನಡೆಸಿರುವುದಲ್ಲ. ಪರಿಸರ ಮಾಲಿನ್ಯದ ನೇರ ಸಂತ್ರಸ್ತರು ಇವರು. ವಿಶ್ವ ಸಂಸ್ಥೆ ಅನುಸರಿಸಿದ ಮಾನದಂಡದಲ್ಲಿ ತಪ್ಪಿದೆ ಎಂದು ಹೆಗಲು ಜಾರಿಸಿಕೊಳ್ಳಲು ನೋಡುತ್ತಿರುವ ಸರಕಾರ, ಪರಿಸರ ಮಾಲಿನ್ಯದ ನೇರ ಸಂತ್ರಸ್ತರಾಗಿರುವ ದಿಲ್ಲಿಯ ಜನರ ಆಕ್ರೋಶಕ್ಕೆ ಏನು ಉತ್ತರಿಸುತ್ತದೆ? ವಿಪರ್ಯಾಸವೆಂದರೆ ದಿಲ್ಲಿಯಲ್ಲಿ ವಾಯುಮಾಲಿನ್ಯದ ವಿರುದ್ಧ ಪ್ರತಿಭಟನೆ ಮಾಡಿದ ಜನರಿಗೆ ನಕ್ಸಲ್ ಸಂಪರ್ಕವಿದೆ ಎಂದು ಸರಕಾರ ಆರೋಪಿಸಲು ಮುಂದಾಯಿತು. ಪ್ರತಿಭಟನೆಯಲ್ಲಿ ಎನ್‌ಕೌಂಟರ್‌ಗೆ ಬಲಿಯಾಗಿರುವ ನಕ್ಸಲೀಯನ ಪರವಾಗಿ ಪೋಸ್ಟರ್ ಪ್ರದರ್ಶಿಸಲಾಗಿತ್ತು ಎಂದು ಆರೋಪಿಸುವ ಮೂಲಕ ಈ ಪ್ರತಿಭಟನೆಗೆ ನಕ್ಸಲ್‌ವಾದದ ಜೊತೆ ಸಂಬಂಧ ಜೋಡಿಸಿತು.

ಭಾರತದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಿಂತ ಎಂಟು ಪಟ್ಟು ಹೆಚ್ಚು ವಾಯು ಮಾಲಿನ್ಯವಿದೆ. ಇದರಿಂದಾಗಿ ಭಾರತೀಯರ ಜೀವಿತಾವಧಿ 3.5 ವರ್ಷ ಕಡಿತವಾಗುತ್ತಿದೆ. ಅಸ್ತಮಾ ಸೇರಿದಂತೆ ಹಲವು ರೋಗಗಳಿಗೆ ಅವರು ಬಲಿಯಾಗುತ್ತಿದ್ದಾರೆ. ಮಾಲಿನ್ಯ ಕೇವಲ ಉಸಿರಾಟದ ಸಮಸ್ಯೆಯಾಗಿ ಉಳಿದಿಲ್ಲ. ದೇಹ ಮತ್ತು ಮೆದುಳುಗಳ ಮೇಲೆ ನೇರ ಪರಿಣಾಮಗಳನ್ನು ಬೀರುತ್ತಿದೆ. ಸ್ಟೇಟ್ ಆಫ್ ಗ್ಲೋಬಲ್ ಏರ್ 2025ರ ವರದಿಯ ಪ್ರಕಾರ, ಭಾರತದಲ್ಲಿ ದಾಖಲಾಗಿರುವ ಸುಮಾರು 20 ಲಕ್ಷ ಸಾವುಗಳು ವಾಯುಮಾಲಿನ್ಯಕ್ಕೆ ಸಂಬಂಧಿಸಿದ್ದಾಗಿದೆ. 2000ದ ಬಳಿಕ ಇದು ಶೇ. 43ರಷ್ಟು ಹೆಚ್ಚಳವಾಗಿದೆ. ಭಾರತದಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ 186 ಸಾವುಗಳು ಸಂಭವಿಸುತ್ತಿವೆ. ಇದು ಹೆಚ್ಚು ಆದಾಯದ ದೇಶಗಳಿಗೆ ಹೋಲಿಸಿದರೆ ಸುಮಾರು 10 ಪಟ್ಟು ಅಧಿಕವಾಗಿದೆ. ಹೆಚ್ಚುತ್ತಿರುವ ವಾಯುಮಾಲಿನ್ಯಗಳ ವಿರುದ್ಧ ಸುಪ್ರೀಂಕೋರ್ಟ್ ಪದೇ ಪದೇ ಆದೇಶಗಳನ್ನು ನೀಡುತ್ತಾ ಬರುತ್ತಿದೆ. ಇದು ಕೇವಲ ದಿಲ್ಲಿಗೆ ಮಾತ್ರ ಸಂಬಂಧಿಸಿ ಸಮಸ್ಯೆಯಲ್ಲ. ಮುಂಬೈಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ವಿರುದ್ಧ ಹೈಕೋರ್ಟ್ ಕಳೆದ ಜನವರಿಯಲ್ಲಿ ಸೂಚನೆಗಳನ್ನು ನೀಡಿತ್ತು. ಬೆಂಗಳೂರಿನಲ್ಲೂ ವಾಯು ಗುಣಮಟ್ಟ ಕಳಪೆಯಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ವಾಯು ಮಾಲಿನ್ಯದ ಕಾರಣದಿಂದಾಗಿ ದಿಲ್ಲಿಯಲ್ಲಿ ನಡೆಯುತ್ತಿರುವ ಅಧಿವೇಶನವನ್ನೇ ಬೇರೆಡೆಗೆ ವರ್ಗಾಯಿಸುವ ಬಗ್ಗೆ ಸಲಹೆಗಳು ಸಂಸದರಿಂದಲೇ ಬರುತ್ತಿವೆೆ.

ಸರಕಾರ ವಾಯುಮಾಲಿನ್ಯವನ್ನು ಮುಚ್ಚಿಡಲು ಪ್ರಯತ್ನ ನಡೆಸುತ್ತಿದ್ದರೂ, ಅದು ಸ್ವತಃ ಉಸಿರಾಡುವುದಕ್ಕೆ ಹೆಣಗಾಡುತ್ತಿರುವುದು, ಸಂಸತ್ತಿನಲ್ಲಿ ಸ್ಪಷ್ಟೀಕರಣ ನೀಡುವ ಹೆಸರಿನಲ್ಲಿ ಕೆಮ್ಮುತ್ತಿರುವುದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ. ದೇಶದ ಪ್ರಮುಖ ನದಿಗಳು ಈಗಾಗಲೇ ಕುಡಿಯುವುದಕ್ಕೆ ಅರ್ಹವಲ್ಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟಾದರೂ ಗಂಗಾನದಿಯೂ ಸೇರಿದಂತೆ ದೇಶದ ಪ್ರಮುಖ ನದಿಗಳ ಮಾಲಿನ್ಯ ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಲು ಸರಕಾರ ವಿಫಲವಾಗಿದೆ. ಸರಕಾರದ ನೇತೃತ್ವದಲ್ಲೇ ನಡೆದ ಬೃಹತ್ ಕುಂಭಮೇಳ ನದಿಗಳನ್ನು ಇನ್ನಷ್ಟು ಕೆಡಿಸಿ ಹಾಕಿತು. ಇದೀಗ ವಾಯುಮಾಲಿನ್ಯದ ವಿಷಯದಲ್ಲೂ ಸರಕಾರ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿದೆ. ಕನಿಷ್ಠ ಹಬ್ಬಗಳ ಹೆಸರಿನಲ್ಲಿ ಬಳಸುವ ಪಟಾಕಿಗಳಿಗೆ ಕಡಿವಾಣ ಹಾಕಿದರೂ ಈ ಮಾಲಿನ್ಯದಿಂದ ನಗರಗಳನ್ನು ಸಣ್ಣ ಪ್ರಮಾಣದಲ್ಲಿ ರಕ್ಷಿಸಿದಂತಾಗುತ್ತದೆ. ಕಳೆದ ವರ್ಷ ನವೆಂಬರ್‌ನಲ್ಲಿ ದೀಪಾವಳಿ ಹಬ್ಬದ ಬಳಿಕ ದಿಲ್ಲಿಯ ವಾಯುಮಾಲಿನ್ಯ ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷತಾ ಮಿತಿಗಿಂತ 14 ಪಟ್ಟು ಹೆಚ್ಚಳವಾಗಿತ್ತು. ನಿಷೇಧದ ನಡುವೆಯೇ ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಿದ್ದರು. ಸರಕಾರ ಜನರ ಬೇಜವಾಬ್ದಾರಿಯ ಮುಂದೆ ಅಸಹಾಯಕವಾಗಿತ್ತು. ಪಟಾಕಿಗಳ ವಿರುದ್ಧ ನೀಡುವ ಆದೇಶಗಳನ್ನು ‘ಹಿಂದೂ ಧರ್ಮದ ವಿರುದ್ಧ ನೀಡುವ ಆದೇಶಗಳು’ ಎಂಬಂತೆ ರಾಜಕಾರಣಿಗಳೇ ಬಿಂಬಿಸಿದರು.

ನಮ್ಮ ನೀರು, ಗಾಳಿ ಇತ್ಯಾದಿಗಳನ್ನು ಮಲಿನಗೊಳಿಸಿದಷ್ಟೂ ಈ ದೇಶ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದು ಇತರ ಆರ್ಥಿಕ ಸಾಮಾಜಿಕ ವಲಯದ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಈ ನಿಟ್ಟಿನಲ್ಲಿ ಸರಕಾರ ಮಾಲಿನ್ಯಕ್ಕೆ ಸಂಬಂಧಿಸಿ ಭಾವನಾತ್ಮಕ ರಾಜಕೀಯಕ್ಕೆ ಬಲಿಯಾಗದೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ನಮ್ಮ ನೀರು, ನೆಲ, ವಾಯು ಇವುಗಳನ್ನು ಮಾಲಿನ್ಯಗೊಳ್ಳದಂತೆ ರಕ್ಷಿಸುವುದೇ ನಿಜವಾದ ದೇಶ ರಕ್ಷಣೆಯಾಗಿದೆ. ಆ ಮೂಲಕ ಭಾರತದ ಭವಿಷ್ಯವನ್ನು ರಕ್ಷಿಸಲು ಸರಕಾರ ಮುಂದಾಗಬೇಕಾಗಿದೆ. ಹಿಂದೂ ಧರ್ಮವೂ ಈ ನೆಲ, ಜಲ, ವಾಯುವಿನಲ್ಲಿ ದೇವರನ್ನು ಕಾಣುತ್ತಾ ಬಂದಿದೆ. ಇವುಗಳು ಕೆಟ್ಟರೆ ಧರ್ಮವೂ ಕೆಟ್ಟಂತೆ ತಾನೆ? ಆದುದರಿಂದ ಪರಿಸರ, ವಾಯು ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಧರ್ಮವನ್ನೂ, ದೇಶವನ್ನು ರಕ್ಷಿಸುವ ಕೆಲಸಕ್ಕೆ ಸರಕಾರ ಮುಂದಾಗಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News