ಅಸಮಾನತೆಯ ಕಂದರದೊಳಗೆ ಭಾರತದ ಅಭಿವೃದ್ಧಿಯ ಕನಸು
PC: istockphoto
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ತನ್ನೊಳಗಿನ ಅಸಮಾನತೆಯ ಕಾರಣಕ್ಕಾಗಿ ಭಾರತ ಮತ್ತೆ ಸುದ್ದಿ ಮಾಡುತ್ತಿದೆ. ಬುಧವಾರ ಬಿಡುಗಡೆಗೊಂಡ 2026ರ ವಿಶ್ವ ಅಸಮಾನತೆ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಶೇ. 1ರಷ್ಟು ಜನರು ದೇಶದ ಶೇ. 40ರಷ್ಟು ಸಂಪತ್ತನ್ನು ಕೈವಶ ಮಾಡಿಕೊಂಡಿದ್ದಾರೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚಿನ ಅಸಮಾನತೆಯನ್ನು ಹೊಂದಿರುವ ದೇಶವೆಂದು ವರದಿ ಹೇಳುತ್ತಿದೆ. ಭಾರತವು ಆರ್ಥಿಕವಾಗಿ ಸದೃಢವಾಗುತ್ತಿದೆ, ವಿಶ್ವದಲ್ಲೇ ನಾಲ್ಕನೇ ಶ್ರೀಮಂತ ದೇಶ ಎಂದೆಲ್ಲ ಪ್ರಧಾನಿ ಮೋದಿಯವರು ಹೇಳಿಕೆ ನೀಡುತ್ತಾ ಬರುತ್ತಿದ್ದರೂ ಅಧ್ಯಯನ ವರದಿಗಳು ತೆರೆದಿಡುತ್ತಿರುವ ವಾಸ್ತವ ಮಾತ್ರ ಬೇರೆಯೇ ಆಗಿದೆ. ಅದಾನಿ, ಅಂಬಾನಿಗಳ ಕಡೆಗೆ ಬೆರಳು ತೋರಿಸಿ ಈ ದೇಶದ ಆರ್ಥಿಕತೆಯನ್ನು ವೈಭವೀಕರಿಸುವ ನಮ್ಮ ನಾಯಕರಿಗೆ ಈ ವರದಿಯ ಅಂಶಗಳು ತೀರಾ ಕಹಿಯಾಗಿವೆ. ‘ವರ್ಲ್ಡ್ ಇನ್‌ಇಕ್ವಾಲಿಟಿ ಲ್ಯಾಬ್’ ಪ್ರಕಟಿಸಿರುವ ಅಧ್ಯಯನ ವರದಿಯ ಪ್ರಕಾರ ಶೇ. 10ರಷ್ಟು ಅತಿ ಶ್ರೀಮಂತರು ದೇಶದ ಒಟ್ಟು ಸಂಪತ್ತಿನ ಶೇ. 65ರಷ್ಟನ್ನು ಹೊಂದಿದ್ದಾರೆ. ಇದೇ ಸಂದರ್ಭದಲ್ಲಿ ಜನಸಂಖ್ಯೆಯ ತಳಸ್ತರದ ಶೇ. 50ರಷ್ಟು ಜನರು ಕೇವಲ ಶೇ. 15ರಷ್ಟು ಆದಾಯವನ್ನು ಪಡೆಯುತ್ತಿದ್ದಾರೆ. ದೇಶದಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆಯು ಶೇ. 15.7ರಷ್ಟಿದ್ದು ಇದು ಕಳಪೆ ಮಟ್ಟವಾಗಿದೆ. ಕಳೆದೊಂದು ದಶಕದಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆಯಲ್ಲಿ ಯಾವುದೇ ಹೆಚ್ಚಳ ಕಂಡು ಬಂದಿಲ್ಲ ಎಂದು ವರದಿ ಹೇಳುತ್ತಿದೆ. ಇದು ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ. ವಿಶ್ವದ 0.001ರಷ್ಟು ಶ್ರೀಮಂತರು ವಿಶ್ವ ಜನಸಂಖ್ಯೆಯ ಶೇ. 50ರಷ್ಟು ಜನರ ಒಟ್ಟು ಸಂಪತ್ತಿನ ಮೂರು ಪಟ್ಟನ್ನು ಹೊಂದಿದ್ದಾರೆ ಎಂದು ವರದಿ ಹೇಳುತ್ತಿದೆ. ಅಂದರೆ ಈ ವಿಶ್ವದಲ್ಲಿ ಬಡತನ ಎನ್ನುವುದು ಇಲ್ಲ. ಇದನ್ನು ಶ್ರೀಮಂತರಿಗಾಗಿಯೇ ಸೃಷ್ಟಿಸಲಾಗಿದೆ.
ಇತ್ತೀಚೆಗೆ ಹೊರಬಿದ್ದ ಆಕ್ಸ್‌ಫಾಮ್ ವರದಿಯು ಈ ಅಸಮಾನತೆಯ ಭೀಕರತೆಯ ಇನ್ನಷ್ಟು ಮುಖಗಳನ್ನು ತೆರೆದಿಟ್ಟಿತ್ತು. ಭಾರತದಲ್ಲಿ 300ಕ್ಕೂ ಅಧಿಕ ಬಿಲಿಯಾಧಿಪತಿಗಳು ಇದ್ದಾರೆ. ವರ್ಷದಿಂದ ವರ್ಷಕ್ಕೆ ಇವರ ಸಂಖ್ಯೆ ಹೆಚ್ಚುತ್ತಿದೆ. ಇದೇ ಸಂದರ್ಭದಲ್ಲಿ ಇನ್ನೊಂದೆಡೆ ಭಾರತವು ಹಸಿವಿಗಾಗಿ ವಿಶ್ವದಲ್ಲೇ ನಂ. 1 ಎಂದು ಗುರುತಿಸಲ್ಪಡುತ್ತಿದೆ. ಈ ದೇಶದಲ್ಲಿ ಆರು ಕೋಟಿ ಜನರು ಪ್ರತಿ ವರ್ಷ ಆರೋಗ್ಯ ವೆಚ್ಚದ ಕಾರಣದಿಂದಾಗಿಯೇ ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಭಾರತದ ಅಸಮಾನತೆ ಎಷ್ಟು ಭೀಕರವಾಗಿದೆ ಎಂದರೆ ಇಲ್ಲಿನ ಪ್ರಮುಖ ಉಡುಪು ಕಂಪೆನಿಯ ಉನ್ನತ ವೇತನ ಪಡೆಯುವ ಕಾರ್ಯನಿರ್ವಾಹಕರು ಒಂದು ವರ್ಷದಲ್ಲಿ ಗಳಿಸುವ ಹಣವನ್ನು ಗ್ರಾಮೀಣ ಭಾರತದ ಕನಿಷ್ಠ ವೇತನದ ಕೆಲಸಗಾರ ಗಳಿಸಲು 941 ವರ್ಷಗಳು ಬೇಕಾಗುತ್ತದೆ. ಹಾಗೆಂದು ಇಲ್ಲಿ ಶ್ರೀಮಂತರಷ್ಟೇ ತೆರಿಗೆಯನ್ನು ಕಟ್ಟುತ್ತಾರೆ, ಬಡವರು ಶ್ರೀಮಂತರ ತೆರಿಗೆಯಿಂದ ಬದುಕುತ್ತಿದ್ದಾರೆ ಎಂದರೆ ಅದು ಸುಳ್ಳು. ಆಕ್ಸ್ ಫಾಮ್ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಶೇ. 50ರಷ್ಟು ಬಡವರ್ಗ ಅತಿ ಹೆಚ್ಚು ಪರೋಕ್ಷ ತೆರಿಗೆಯನ್ನು ಕಟ್ಟುತ್ತಿದೆ. 2021-22 ಆರ್ಥಿಕ ವರ್ಷದಲ್ಲಿ ಜಿಎಸ್‌ಟಿಯಿಂದ 14.83 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ದೊಡ್ಡ ಪಾಲನ್ನು ಈ ದೇಶದ ಬಡ ಮತ್ತು ಮಧ್ಯಮ ವರ್ಗ ನೀಡಿದೆ. ದೇಶದ ಶೇ. 10ರಷ್ಟಿರುವ ಅತಿ ಶ್ರೀಮಂತರು ಜಿಎಸ್‌ಟಿ ರೂಪದಲ್ಲಿ ಪಾವತಿಸಿದ ತೆರಿಗೆ ಶೇ. 3ರಷ್ಟು ಮಾತ್ರ. ಭಾರತದಲ್ಲಿ ಕಾರ್ಪೊರೇಟ್ ತೆರಿಗೆಯನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ ಮಾತ್ರವಲ್ಲ, ಅವರಿಗೆ ಭತ್ತೆ, ರಿಯಾಯಿತಿಗಳನ್ನು ಹೆಚ್ಚಿಸಿರುವ ಅಂಶವನ್ನು ಅಧ್ಯಯನ ವರದಿ ಬಹಿರಂಗ ಪಡಿಸಿವೆ.
ಕೊರೋನ, ಲಾಕ್‌ಡೌನ್ ಕಾಲದಲ್ಲಿ ಸಾವಿರಾರು ಉದ್ಯಮಗಳು ಮುಚ್ಚಿದ್ದವು. ದೊಡ್ಡ ಪ್ರಮಾಣದಲ್ಲಿ ವ್ಯಾಪಾರ, ಉದ್ದಿಮೆಗಳು ನಷ್ಟ ಅನುಭವಿಸಿದವು. ಮಧ್ಯಮ ವರ್ಗ ಮತ್ತು ಬಡವರ್ಗ ಇದರ ನೇರ ಪರಿಣಾಮಗಳನ್ನು ಅನುಭವಿಸಿದವು. ಆದರೆ ಇದೇ ಸಂದರ್ಭದಲ್ಲಿ ಅದಾನಿ, ಅಂಬಾನಿಗಳು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ರಾರಾಜಿಸುತ್ತಿದ್ದರು. ಲಾಕ್‌ಡೌನ್, ಕೊರೋನ ಅವರ ಮೇಲೆ ಯಾವ ಪರಿಣಾಮವನ್ನೂ ಬೀರಿರಲಿಲ್ಲ. ಲಸಿಕೆ ವ್ಯಾಪಾರದಿಂದಲೇ ಕೆಲವು ಕಾರ್ಪೊರೇಟ್ ಉದ್ಯಮಿಗಳು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡರು. ಈ ದೇಶದ ತೆರಿಗೆ ಹಣವನ್ನು ಸರಕಾರ ಲಸಿಕೆಯ ಮೇಲೆ ಸುರಿಯಿತು. ಅದರಿಂದ ದೇಶದ ಜನತೆಯ ಆರೋಗ್ಯಕ್ಕೆ ಎಷ್ಟರಮಟ್ಟಿಗೆ ಉಪಕಾರವಾಯಿತು ಎನ್ನುವುದು ಇನ್ನೂ ಸ್ಪಷ್ಟವಿಲ್ಲ. ಆದರೆ ಬೆರಳೆಣಿಕೆಯ ಕೆಲವು ಕಂಪೆನಿಗಳು ಅಪಾರ ಲಾಭ ಮಾಡಿಕೊಂಡವು. ಕೊರೋನ ಕಾಲದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಿತು. ಇದು ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲ, ಶೈಕ್ಷಣಿಕ ಕ್ಷೇತ್ರದಲ್ಲೂ ಉಳ್ಳವರು-ಇಲ್ಲದವರು ಎನ್ನುವ ವ್ಯತ್ಯಾಸ ಕಣ್ಣಿಗೆ ರಾಚುವಂತೆ ಕಾಣುತ್ತಿತ್ತು. ಉಳ್ಳವರಷ್ಟೇ ಶಿಕ್ಷಣ ಪಡೆಯಲು ಅರ್ಹರಾದರು.
ಅಸಮಾನತೆ ಅಳಿಯದೆ ದೇಶದ ಆಮೂಲಾಗ್ರ ಅಭಿವೃದ್ಧಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಂಪತ್ತಿನ ಸಮಾನ ಹಂಚಿಕೆಗೆ ಸರಕಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಹೆಚ್ಚುತ್ತಿರುವ ಜನಸಂಖ್ಯೆಯ ಕಡೆಗೆ ಬೆರಳು ತೋರಿಸಿ, ಎಂದಿನಂತೆ ತನ್ನ ತಪ್ಪುಗಳನ್ನು ಮರೆಮಾಚಬೇಕಾಗುತ್ತದೆ. ಈ ದೇಶದ ಪ್ರಾಕೃತಿಕ ಸಂಪತ್ತಿಗೆ ಹೋಲಿಸಿದರೆ ಇಲ್ಲಿರುವ ಜನಸಂಖ್ಯೆ ಯಾವತ್ತೂ ಒಂದು ಹೊರೆಯಲ್ಲ. ಸಂಪನ್ಮೂಲವನ್ನು ಸಮಾನವಾಗಿ ಹಂಚುವ ಬಗ್ಗೆ ಸರಕಾರ ಕ್ರಮ ತೆಗೆದುಕೊಂಡರೆ ಜನಸಂಖ್ಯೆ ಭಾರತದ ಶಕ್ತಿಯಾಗಿ ಹೊರ ಹೊಮ್ಮ ಬಹುದು. ಈ ನಿಟ್ಟಿನಲ್ಲಿ ಈ ಹಿಂದೊಮ್ಮೆ ಆಕ್ಸ್‌ಫಾಮ್ ವರದಿಯೇ ಇದಕ್ಕೆ ಪರಿಹಾರವನ್ನೂ ಸೂಚಿಸಿತ್ತು. 2017ರಿಂದ 2021ರವರೆಗೆ ಗೌತಮ್ ಅದಾನಿ ಅವರಿಗೆ ದೊರೆತಿರುವ ವಿನಾಯಿತಿ ಮತ್ತು ನೆರವಿನ ಮೊತ್ತ 1.79 ಲಕ್ಷ ಕೋಟಿ ರೂಪಾಯಿಯಾಗುತ್ತದೆ. ಇಷ್ಟು ತೆರಿಗೆ ಹಣದಿಂದ ದೇಶದ ಪ್ರಾಥಮಿಕ ಶಾಲೆಗಳ 50 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ಒಂದು ವರ್ಷದವರೆಗೆ ವೇತನ ನೀಡಬಹುದಿತ್ತು.
ದೇಶದ ಅತಿ ಶ್ರೀಮಂತ ಶೇ. 10 ಜನರ ಸಂಪತ್ತಿನ ಮೇಲೆ ಶೇ. 5ರಷ್ಟು ಒಂದು ಬಾರಿಯ ತೆರಿಗೆಯಿಂದ 1.37 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ದೇಶದ ಆರೋಗ್ಯ ಸಚಿವಾಲಯ ಮತ್ತು ಆಯುಷ್ ಬಜೆಟ್‌ನ್ನು ಈ ಹಣದಿಂದ ತುಂಬಬಹುದಾಗಿದೆ. ಉಳಿಕೆಯಾದ ಹಣದಿಂದ ಇನ್ನೂ ಆರು ತಿಂಗಳು ಆರೋಗ್ಯಕ್ಕಾಗಿ ಹೆಚ್ಚುವರಿ ವೆಚ್ಚ ಮಾಡಬಹುದಾಗಿದೆ. ದೇಶದ 100 ಅತಿ ಶ್ರೀಮಂತರ ಸಂಪತ್ತಿನ ಮೇಲೆ ಶೇ.2.5ರಷ್ಟು ತೆರಿಗೆ ವಿಧಿಸಿದರೆ ದೇಶದ ಸರ್ವಶಿಕ್ಷಣ ಅಭಿಯಾನಕ್ಕೆ ಅಗತ್ಯವಿರುವ ಒಂದು ವರ್ಷದ ವೆಚ್ಚವನ್ನು ಭರಿಸಬಹುದಾಗಿದೆ.
ಭಾರತವೆಂದರೆ ಶೇ.1ರಷ್ಟಿರುವ ಬಿಲಿಯಾಧಿಪತಿಗಳಷ್ಟೇ ಅಲ್ಲ. ಈ ಭಾರತವನ್ನು ಕಟ್ಟಿರುವುದು ಶೇ. 50ಕ್ಕೂ ಅಧಿಕವಿರುವ ಬಡ ಮತ್ತು ಮಧ್ಯಮವರ್ಗವಾಗಿದೆ. ಅವರ ಹೆಗಲಿಗೇ ಇನ್ನಷ್ಟು ತೆರಿಗೆಗಳನ್ನು ಹೇರಿ ಅವರನ್ನು ಇನ್ನಷ್ಟು ದುರ್ಬಲಗೊಳಿಸಿ ಶೇ. 1ರಷ್ಟಿರುವ ಜನರನ್ನು ಇನ್ನಷ್ಟು ಶ್ರೀಮಂತಗೊಳಿಸುವುದನ್ನೇ ದೇಶದ ಅಭಿವೃದ್ಧಿ ಎಂದು ಭಾವಿಸುವುದನ್ನು ನಿಲ್ಲಿಸಬೇಕಾಗಿದೆ. ದೂರದೃಷ್ಟಿಯುಳ್ಳ ಅಭಿವೃದ್ಧಿಯು ಎಲ್ಲರನ್ನು ಒಳಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಶೇ. 1ರಷ್ಟಿರುವ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಮೂಲಕ ಅವರೊಳಗೆ ಶೇಖರವಾಗಿರುವ ಸಂಪತ್ತನ್ನು ಹಂಚುವ ಕೆಲಸ ಮಾಡಬೇಕು. ಅಸಮಾನತೆಯ ಅಂತರವನ್ನು ತುಂಬಿದಾಗ ಮಾತ್ರ ಭಾರತವು ಆಮೂಲಾಗ್ರ ಅಭಿವೃದ್ಧಿ ಹೊಂದಿದ ದೇಶವಾಗಿ ಭವಿಷ್ಯದಲ್ಲಿ ಹೊರಹೊಮ್ಮಲು ಸಾಧ್ಯ.