ರಾಮನ ಮರೆಯಲ್ಲಿ ನಿಂತು ನರೇಗಾದ ಎದೆಗೆ ಬಾಣ
ಸಾಂದರ್ಭಿಕ ಚಿತ್ರ | PC : PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಮನ ಮರೆಯಲ್ಲಿ ನಿಂತು ಕೇಂದ್ರ ಸರಕಾರ ನರೇಗಾ ಯೋಜನೆಯ ಕಡೆಗೆ ಬಾಣ ಬಿಟ್ಟಿದೆ. ನರೇಗಾ ಯೋಜನೆಯ ವಿರುದ್ಧ ಕಳೆದ ಕೆಲವು ವರ್ಷಗಳಿಂದ ಮಸಲತ್ತು ಮಾಡುತ್ತಲೇ ಬಂದಿದ್ದ ಕೇಂದ್ರ ಸರಕಾರ, ಇದೀಗ ಯೋಜನೆಯ ಪರಿಷ್ಕರಣೆಯ ಹೆಸರಿನಲ್ಲೇ ಅದನ್ನು ಹಂತಹಂತವಾಗಿ ಮುಗಿಸುವುದಕ್ಕೆ ಮುಂದಾಗಿದೆ. ವಿರೋಧ ಪಕ್ಷಗಳ ಪ್ರತಿಭಟನೆಗಳ ನಡುವೆಯೇ ಮಂಗಳವಾರ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಅಜೀವಿಕ ಮಿಶನ್ ಗ್ರಾಮೀಣ ಅಥವಾ ‘ವಿಬಿ-ಜಿ ರಾಮ್ ಜಿ’ ಮಸೂದೆಯನ್ನು ಮಂಡಿಸಿದೆ. ವಿಶ್ವದಲ್ಲೇ ಅತಿ ದೊಡ್ಡ ಉದ್ಯೋಗ ಯೋಜನೆಯೆಂದು ಈಗಾಗಲೇ ಗುರುತಿಸಲ್ಪಟ್ಟ, ವಿಶ್ವಸಂಸ್ಥೆಯಿಂದಲೂ ಪ್ರಶಂಸಿಸಲ್ಪಟ್ಟ ಈ ಯೋಜನೆಯನ್ನು ಇಲ್ಲವಾಗಿಸಲು ರಾಮನ ಹೆಸರನ್ನು ಬಳಸಲು ಮುಂದಾಗಿರುವುದು ವಿಷಾದನೀಯ. ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಕಲ್ಪಿಸುವ ಈ ಮಹತ್ತರ ಯೋಜನೆಗೆ ‘ಗ್ರಾಮ ಭಾರತದ’ ಕುರಿತಂತೆ ತನ್ನದೇ ಆದ ಕನಸನ್ನು ಹೊಂದಿದ್ದ ಮಹಾತ್ಮಾ ಗಾಂಧೀಜಿಯ ಹೆಸರನ್ನು ಇಡುವ ಮೂಲಕ ಅಂದಿನ ಯುಪಿಎ ಸರಕಾರ ಪ್ರಬುದ್ಧತೆಯನ್ನು ಪ್ರದರ್ಶಿಸಿತ್ತು. ನಿಜಕ್ಕೂ ಈ ಯೋಜನೆಯನ್ನು ರಾಜಕೀಯವಾಗಿ ದುರುಪಯೋಗ ಪಡಿಸುವ ಉದ್ದೇಶ ಅಂದಿನ ಯುಪಿಎ ಸರಕಾರಕ್ಕಿದ್ದಿದ್ದರೆ ಅದು ನೆಹರೂ ಅಥವಾ ರಾಜೀವ್ ಗಾಂಧಿಯ ಹೆಸರನ್ನು ಇಡಬಹುದಿತ್ತು. ಆದರೆ ಅಂದಿನ ಮನಮೋಹನ್ ಸಿಂಗ್ ಸರಕಾರ ಗಾಂಧೀಜಿಯ ಹೆಸರನ್ನು ನಾಮಕರಣ ಮಾಡಿತು. ಇಂದು ಮೋದಿ ಸರಕಾರಕ್ಕೆ ಮಹಾತ್ಮಾಗಾಂಧೀಜಿಯ ಹೆಸರು ಕೂಡ ಅಪಥ್ಯವಾಗಿದೆ. ಮುಖ್ಯವಾಗಿ ಅದಕ್ಕೆ ಬೇಡವಾಗಿರುವುದು ಗಾಂಧೀಜಿಯ ಹೆಸರಲ್ಲ, ನರೇಗಾ ಯೋಜನೆಯೇ ಬೇಡವಾಗಿದೆ. ಆ ಕಾರಣಕ್ಕಾಗಿ ಜನರ ಬಾಯಿ ಮುಚ್ಚಿಸಲು ಈ ಪರಿಷ್ಕೃತ ಯೋಜನೆಗೆ ರಾಮನ ಹೆಸರನ್ನು ಇಟ್ಟಿದೆ.
ಹೊಸ ಮಸೂದೆಯ ಪ್ರಕಾರ ಉದ್ಯೋಗ ಖಾತ್ರಿ ಕೆಲಸದ ದಿನಗಳನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಿದ್ದೇವೆ ಎಂದು ಕೇಂದ್ರ ಸರಕಾರ ಕೊಚ್ಚಿ ಕೊಳ್ಳುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ಈ ಯೋಜನೆಗೆ ಕೆಲವು ನಿಯಮಗಳನ್ನೂ ಹೇರುವುದಕ್ಕೆ ಮುಂದಾಗಿದೆ. ಈ ಹಿಂದೆ ಗ್ರಾಮೀಣ ಪ್ರದೇಶದ ಕುಟುಂಬದ ಸಾರ್ವತ್ರಿಕ ಹಕ್ಕಾಗಿತ್ತು ಈ ಯೋಜನೆ. ಇದೀಗ ಕೇಂದ್ರ ಸರಕಾರದಿಂದ ಅಧಿಸೂಚಿಸಲ್ಪಟ್ಟ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕೆಲಸ ಖಾತರಿ ಪಡಿಸಲಾಗಿದೆ. ಕೃಷಿ ಋತುಗಳನ್ನು ಮುಂದಿಟ್ಟುಕೊಂಡು ಕಾರ್ಮಿಕರಿಗೆ ಕೆಲಸವನ್ನು ನಿರಾಕರಿಸುವ ಅವಕಾಶವಿದೆ. ಈ ಹಿಂದೆ ಸ್ಥಳೀಯ ಸಂಸ್ಥೆಗಳು ಸ್ಥಳೀಯ ಅಗತ್ಯಕ್ಕನುಗುಣವಾಗಿ ಕೆಲಸಗಳನ್ನು ಯೋಜಿಸುತ್ತಿತ್ತು. ಇದೀಗ ಕೇಂದ್ರ ಒದಗಿಸುವ ನಿಧಿಯನ್ನು ಅವಲಂಬಿಸಿ ಕೆಲಸವನ್ನು ಯೋಜಿಸಬೇಕಾಗುತ್ತದೆ. ವರ್ಷದ ಯಾವುದೇ ಸಮಯದಲ್ಲಿ ಕೆಲಸವನ್ನು ಮಾಡುವ ಹಕ್ಕು ಜನರಿಗಿಲ್ಲ. ಕೇಂದ್ರಸರಕಾರದಿಂದ ಅಧಿಸೂಚಿಸಲ್ಪಟ್ಟ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕೆಲಸದ ಖಾತರಿಯಿರುತ್ತದೆ. ಕೆಲಸವನ್ನು ಖಾತರಿಪಡಿಸುವ ವಿಷಯದಲ್ಲಿ ಸ್ಥಳೀಯ ಸಂಸ್ಥೆಗಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ದಿನಗಳಲ್ಲಿ ನರೇಗಾಕ್ಕೆ ಸಂಬಂಧಿಸಿ ಕೇಂದ್ರ ಶೇ. 60ರಷ್ಟು ಅನುದಾನವನ್ನಷ್ಟೇ ನೀಡುತ್ತದೆ. ಉಳಿದ ಶೇ. 40ರಷ್ಟು ಹಣವನ್ನು ರಾಜ್ಯ ಸರಕಾರ ಭರಿಸಬೇಕು. ಇದೇ ಸಂದರ್ಭದಲ್ಲಿ, ಕೇಂದ್ರದ ಅಧಿಸೂಚನೆಗಳನ್ನು ಮೀರಿ ಕೆಲಸಗಳನ್ನು ನೀಡಿದ್ದೇ ಆದರೆ ಕೇಂದ್ರ ಸರಕಾರ ಅನುದಾನ ನೀಡುವ ಹೊಣೆಯಿಂದ ಜಾರಿಕೊಳ್ಳುತ್ತದೆ.
ಮುಖ್ಯವಾಗಿ ಕಳೆದ ಕೆಲವು ವರ್ಷಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ನರೇಗಾ ಯೋಜನೆಗಳಿಗೆ ಬಾಕಿ ಉಳಿಸಿಕೊಂಡಿದೆ. ಹಲವು ರಾಜ್ಯಗಳು ಈಗಾಗಲೇ ಇದರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿವೆ. ಕರ್ನಾಟಕಕ್ಕೂ ಕೋಟ್ಯಂತರ ರೂಪಾಯಿಯನ್ನು ಕೇಂದ್ರ ಸರಕಾರ ಕೊಡುವುದಕ್ಕಿದೆ. ಇವೆಲ್ಲವೂ ಕಾರ್ಮಿಕರು ದುಡಿದ ಹಣವಾಗಿದೆ. ಅವರ ಬೆವರಿಗೆ ಈವರೆಗೆ ನ್ಯಾಯ ನೀಡಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗಿಲ್ಲ. ಬಾಕಿ ಉಳಿಸಿದ ಹಣವನ್ನು ರಾಜ್ಯಗಳು ಕೇಳಿದಾಗಲೆಲ್ಲ, ನರೇಗಾ ಯೋಜನೆಯನ್ನೇ ಅಪ್ರಸ್ತುತವಾಗಿಸಲು ಕೇಂದ್ರ ಸರಕಾರ ಪ್ರಯತ್ನಿಸಿದೆ. ಈಗಾಗಲೇ ಲೋಕಸಭೆಯಲ್ಲಿ ವಿತ್ತ ಸಚಿವರು ಎರಡೆರಡು ಬಾರಿ ನರೇಗಾ ಬಗ್ಗೆ ತಪ್ಪು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ‘‘ನರೇಗಾ ಯೋಜನೆಯ ಬೇಡಿಕೆಗಳು ಇಳಿಮುಖವಾಗುತ್ತಿವೆೆ’’ ಎಂದು ಅವರು ಲೋಕಸಭೆಗೆ ಸ್ಪಷ್ಟಪಡಿಸಿದ್ದರು. ಅಂದರೆ, ನರೇಗಾ ಯೋಜನೆಗೆ ಹಣ ಬಿಡುಗಡೆ ಮಾಡುವುದು ಕೇಂದ್ರ ಸರಕಾರಕ್ಕೆ ಇಷ್ಟವಿಲ್ಲದ ವಿಷಯವಾಗಿತ್ತು. ಈ ಹಿಂದಿನ ಯೋಜನೆಯ ಪ್ರಕಾರ, ಉದ್ಯೋಗಗಳನ್ನು ಕೊಡುವುದು ಕಡ್ಡಾಯವಾಗಿತ್ತು. ಇದೀಗ ಬೇರೆ ಬೇರೆ ನೆಪಗಳನ್ನು ಮುಂದಿಟ್ಟುಕೊಂಡು ಉದ್ಯೋಗಗಳನ್ನು ನೀಡದೇ ಇರುವ ಹಕ್ಕನ್ನು ಕೇಂದ್ರ ಸರಕಾರ ತನ್ನಲ್ಲಿ ಉಳಿಸಿಕೊಳ್ಳಲು ಮುಂದಾಗಿದೆ. ಇದರ ಮೇಲಿನ ನಿಯಂತ್ರಣವನ್ನು ಸ್ಥಳೀಯ ಸಂಸ್ಥೆಗಳ ಕೈಯಿಂದ ಕಿತ್ತುಕೊಂಡಿರುವುದು ಕೂಡ ಇದೇ ಉದ್ದೇಶಕ್ಕೆ.
ರಾಜ್ಯದ ತೆರಿಗೆಯ ಮೇಲೆ ಕೇಂದ್ರ ಸರಕಾರ ಬಹುತೇಕ ನಿಯಂತ್ರಣವನ್ನು ಸಾಧಿಸಿದೆ. ರಾಜ್ಯ ಸರಕಾರಗಳು ಹಮ್ಮಿಕೊಂಡಿರುವ ಜನಪ್ರಿಯ ಕಾರ್ಯಕ್ರಮಗಳಿಗೆ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಿಡುಗಡೆ ಮಾಡಲು ರಾಜ್ಯದ ಬೊಕ್ಕಸದಲ್ಲಿ ಹಣ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದೇ ಹೊತ್ತಿಗೆ, ರಾಜ್ಯಗಳಿಗೆ ಬರಬೇಕಾದ ಹಣವನ್ನು ನೀಡದೆ ಕೇಂದ್ರ ಸರಕಾರ ಸತಾಯಿಸುತ್ತಿದೆ. ಈ ವಿತ್ತವರ್ಷದಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳಿಗಾಗಿ ಕೇಂದ್ರ ಸರಕಾರ 16,000 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಭರವಸೆ ಕೊಟ್ಟಿತ್ತಾದರೂ ಈವರೆಗೆ ಕೇವಲ 7,000 ಕೋಟಿ ರೂಪಾಯಿಗಳನ್ನಷ್ಟೇ ಬಿಡುಗಡೆ ಮಾಡಿದೆ. ಜಲಜೀವನ ಯೋಜನೆಯಡಿಯಲ್ಲಿ ಕೇಂದ್ರದ ಪಾಲು 4,574 ಕೋಟಿ ರೂಪಾಯಿ ರಾಜ್ಯಕ್ಕೆ ಬರಲು ಬಾಕಿಯಿದೆ. 15ನೇ ಹಣಕಾಸು ಆಯೋಗವು ರಾಜ್ಯಕ್ಕೆ ಶಿಫಾರಸು ಮಾಡಿದ್ದ ಆರೋಗ್ಯ ಅನುದಾನವನ್ನು ಕೇಂದ್ರ ಸಚಿವಾಲಯವು ಕಳೆದೆರಡು ವರ್ಷಗಳಿಂದ ಬಿಡುಗಡೆ ಮಾಡಿಲ್ಲ. ಕೇಂದ್ರದಿಂದ ಕರ್ನಾಟಕಕ್ಕೆ ಒಟ್ಟು 22,476 ಕೋಟಿ ರೂಪಾಯಿ ಬರಲು ಬಾಕಿಯಿದೆ. ಇದೀಗ ಜಿ ರಾಮ್ ಜಿ ಯೋಜನೆಗೆ ರಾಜ್ಯವು ಶೇ. 40ರಷ್ಟನ್ನು ಎಲ್ಲಿಂದ ತುಂಬಿಸಬೇಕು? ಎನ್ನುವ ಪ್ರಶ್ನೆ ಎದುರಾಗುತ್ತದೆ. ಇಲ್ಲಿಯವರೆಗೆ ನರೇಗಾ ಯೋಜನೆಯ ಪಾವತಿ ಬಾಕಿಗೆ ಕೇಂದ್ರ ಸಂಪೂರ್ಣ ಹೊಣೆಯಾಗಿತ್ತು. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರವು ರಾಜ್ಯದ ಕಡೆಗೆ ಕೈ ತೋರಿಸಿ ಹೆಗಲು ಜಾರಿಸಿಕೊಳ್ಳಲಿದೆ. ಒಟ್ಟಿನಲ್ಲಿ ಇದೊಂದು ರೀತಿಯಲ್ಲಿ ಬಲಿಷ್ಠವಾಗಿದ್ದ ನರೇಗಾವನ್ನು ವಂಚನೆಯಿಂದ ಕೊಂದು ಹಾಕಲು ಕೇಂದ್ರ ಸರಕಾರ ರಾಮನ ಹೆಸರನ್ನು ಬಳಸಿಕೊಂಡು ರೂಪಿಸಿದ ಸಂಚು. ಮೋದಿ ನೇತೃತ್ವದಲ್ಲಿ ನಡೆಯಲಿರುವ ಈ ಹೊಸ ‘ವಾಲಿ ವಧೆ’ ಪ್ರಸಂಗಕ್ಕೆ ಗ್ರಾಮೀಣ ಪ್ರದೇಶದ ಬಡ ಕಾರ್ಮಿಕರು ಎದೆಕೊಡಬೇಕಾಗಿರುವುದು ವಿಷಾದನೀಯವಾಗಿದೆ.