ಸಾಂದರ್ಭಿಕ ಚಿತ್ರ 

ಸರಕಾರಿ ಯೋಜನೆಗಳು ಅರ್ಹರನ್ನು ತಲುಪುವಂತಾಗಬೇಕು ಎಂಬುದರಲ್ಲಿ ಯಾರಿಗೂ ಸಂಶಯ ಇಲ್ಲ. ಆದರೆ, ಸ್ಥಳೀಯ ಆವಶ್ಯಕತೆಗಳು, ಸ್ವಂತ ಬುದ್ಧಿಮತ್ತೆಗಳನ್ನು ಬದಿಗಿರಿಸಿ, ‘ಕೃತಕ ಬುದ್ಧಿಮತ್ತೆ’ ಅಳವಡಿಸುವ ಹೆಸರಿನಲ್ಲಿ ‘ಒಂದು ದೇಶ, ಒಂದು ಬುದ್ಧಿಮತ್ತೆ’ ಮಾನದಂಡವನ್ನು ಅಳವಡಿಸಿದರೆ, ಅದು ಸರಕಾರಿ ಕಲ್ಯಾಣ ಯೋಜನೆಗಳನ್ನೆಲ್ಲ ಊಟಕ್ಕಿಲ್ಲದ ಉಪ್ಪಿನಕಾಯಿ ಮಾಡಿಬಿಡುತ್ತದೆ. ಎಸ್‌ಐಆರ್ ವಿಚಾರದಲ್ಲಿ ಅದನ್ನೀಗ ಇಡೀ ದೇಶ ಅನುಭವಿಸುತ್ತಿದೆ. ನಿದ್ರಿಸುತ್ತಿರುವ ರಾಜನ ಮೂಗಿನ ಮೇಲೆ ನೊಣ ಕುಳಿತಿದೆ ಎಂದು, ಅದನ್ನು ಕೊಲ್ಲಲು ಕತ್ತಿ ಹಿರಿದು, ಕಡೆಗೆ ರಾಜನನ್ನೇ ಕಡಿದು ಕೊಂದ ಬುದ್ಧಿವಂತ ಕೋತಿಯ ಪಂಚತಂತ್ರದ ಕಥೆ ಮತ್ತೆಮತ್ತೆ ನೆನಪಿಗೆ ಬರುತ್ತಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಗೆ (ಪಿಡಿಎಸ್) ಸಂಬಂಧಿಸಿದಂತೆ ಇಂತಹದೇ ಒಂದು ಬೆಳವಣಿಗೆ ಈಗ ಸದ್ದು ಮಾಡತೊಡಗಿದೆ. ಲೇಟೆಸ್ಟ್ ಬೆಳವಣಿಗೆ ಏನೆಂದರೆ, ಕಳೆದ ಆರು ತಿಂಗಳಿನಿಂದ ಪಡಿತರ ಪಡೆಯದಿರುವ ಸುಮಾರು 1.58 ಕೋಟಿ ಫಲಾನುಭವಿಗಳ ಪಡಿತರದ ಹಕ್ಕನ್ನು ನಿಷ್ಕ್ರಿಯಗೊಳಿಸಲು ಭಾರತ ಸರಕಾರ ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿರಬಹುದಾದ ಡೂಪ್ಲಿಕೇಟ್ ಮತ್ತು ಸಂಶಯಾಸ್ಪದ ಕಾರ್ಡುಗಳನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆಯಂತೆ. ಇಂತಹ ಕಾರ್ಡುದಾರರ ಕಾರ್ಡುಗಳನ್ನು ಆರಂಭದಲ್ಲಿ ನಿಷ್ಕ್ರಿಯಗೊಳಿಸಿ, ಅವರು ಪ್ರಾಮಾಣಿಕ ಫಲಾನುಭವಿಗಳೆಂದು ಸಾಬೀತುಪಡಿಸಲು ಅವರಿಗೆ ಮೂರು ತಿಂಗಳ ಸಮಯಾವಕಾಶ ನೀಡಲಾಗುತ್ತದೆ. ಆ ಅವಧಿಯಲ್ಲಿ ಅವರು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ, ಅವರ ಪಡಿತರ ಕಾರ್ಡುಗಳನ್ನು ಪುನಃ ಸಕ್ರಿಯಗೊಳಿಸಲಾಗುವುದು, ಇಲ್ಲದಿದ್ದರೆ ಅದನ್ನು ಶಾಶ್ವತವಾಗಿ ರದ್ದು ಮಾಡಲಾಗುತ್ತದೆ ಎಂಬುದು ಈ ‘ಸ್ವಚ್ಛತಾ ಅಭಿಯಾನ’ದ ಹೂರಣ.

2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(NFSA) ಅನ್ವಯ, ದೇಶದ ಸುಮಾರು ಶೇ. 70ಕ್ಕೂ ಮಿಕ್ಕಿ ಅರ್ಹ ಬಡಜನರಿಗೆ ಆಹಾರದ ಹಕ್ಕನ್ನು ಸರಕಾರ ನೀಡುತ್ತಾ ಬಂದಿದೆ. ಆದರೆ ಅದೇ ವೇಳೆಗೆ, ಈ ಪಡಿತರ ಆಹಾರವು ಕೇವಲ ಅರ್ಹರಿಗೆ ಮಾತ್ರ ಸಿಗುವಂತಾಗಲು ಸರಕಾರ ಸತತವಾಗಿ ಸ್ವಚ್ಛತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಫಲವಾಗಿ, 2013-14ರಿಂದ ಈಚೆಗೆ ದೇಶದಲ್ಲಿ ಸುಮಾರು 5.97 ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆಯಂತೆ. ಸರಕಾರವೇ ಸಂಸತ್ತಿನಲ್ಲಿ ಹೇಳಿರುವಂತೆ, ದೇಶದಲ್ಲೀಗ ಪಡಿತರ ಚೀಟಿ ಫಲಾನುಭವಿಗಳ ಡೇಟಾಬೇಸ್ ಶೇ. 100 ಡಿಜಿಟೈಸ್ ಮಾಡಲಾಗಿದ್ದು, ಶೇ. 99.7 ಪಡಿತರ ಚೀಟಿಗಳು, ಫಲಾನುಭವಿಗಳ ಆಧಾರ್ ಜೊತೆ ಲಿಂಕ್ ಆಗಿವೆ.

ಒಂದೆಡೆ, ಜನರಿಗೆ ಅವರು ಎಲ್ಲೇ ಇದ್ದರೂ ಪಡಿತರ ಸಿಗುವಂತಾಗಲು, ಒಂದು ದೇಶ ಒಂದು ಪಡಿತರ ಚೀಟಿ (ONORC) ಯೋಜನೆ ರೂಪಿಸಲಾಗಿದೆಯಾದರೆ, ಇನ್ನೊಂದೆಡೆ ಪಡಿತರ ಚೀಟಿ ನಿರ್ವಹಣೆ, ವಿತರಣೆ, ಸರಬರಾಜು ಸರಪಣಿ, ಬಯೊಮೆಟ್ರಿಕ್ಸ್ ಆಧರಿತ ವ್ಯವಸ್ಥೆ, ಫಲಾನುಭವಿಗಳ ದೂರುಗಳ ಪರಿಹಾರಕ್ಕಾಗಿ ಎಐ ಆಧರಿತ ASHA ವ್ಯವಸ್ಥೆ ಇತ್ಯಾದಿಗಳನ್ನೆಲ್ಲ ಒಳಗೊಂಡ ‘Scheme for Modernisation and Reforms through Technology in Public Distribution System (SMART-PDS)’ ಎಂಬ ಚೌಕಟ್ಟು ರೂಪುಗೊಂಡಿದೆ.

ಇಷ್ಟೆಲ್ಲ ಕಡಿವಾಣಗಳಿರುತ್ತಲೇ, ಈಗ ಸರಕಾರವು ಆರು ತಿಂಗಳಿನಿಂದ ನಿಷ್ಕ್ರಿಯವಿದೆ ಎಂಬ ಕಾರಣಕ್ಕೆ ಸುಮಾರು ಒಂದೂವರೆ ಕೋಟಿ ‘ಸೈಲೆಂಟ್ ಪಡಿತರ ಕಾರ್ಡುಗಳನ್ನು’ ನಿಷ್ಕ್ರಿಯಗೊಳಿಸುತ್ತಿರುವುದು ಸ್ವಲ್ಪ ಕಟುವಾದ ಕ್ರಮ ಎನ್ನಿಸುತ್ತದೆ.

ಏಕೆಂದರೆ, ಈ ನಿಷ್ಕ್ರಿಯಗೊಂಡ ಕಾರ್ಡುದಾರರು, ತಮ್ಮ ಪಡಿತರ ಕೇಂದ್ರಗಳ ಎದುರು ಸರತಿ ಸಾಲಿನಲ್ಲಿ ನಿಂತು, ತಾವು ಪ್ರಾಮಾಣಿಕ ಫಲಾನುಭವಿಗಳು ಎಂದು ಸಾಬೀತುಪಡಿಸಲು ಇ-ಕೆವೈಸಿ ದಾಖಲೆಗಳನ್ನು ಒಪ್ಪಿಸಬೇಕಾಗುತ್ತದೆ. ಮೂಲತಃ ಪ್ರಜೆಗಳಿಗೆ ಆಹಾರದ ಹಕ್ಕನ್ನು ಸಂವಿಧಾನಬದ್ಧವಾಗಿ ಅನುಷ್ಠಾನ ಮಾಡಬೇಕಾದ ಪಡಿತರ ವ್ಯವಸ್ಥೆಯು ಎಲ್ಲರನ್ನೂ ಒಳಗೊಳ್ಳುವ, ಯಾರೂ ಹಸಿವಿನಿಂದ ಮಲಗದಂತೆ ನೋಡುವ ಒಂದು ಮಾನವೀಯ ವ್ಯವಸ್ಥೆ. ಅದರ ಮೇಲೆ ನಿಗಾ ಇರಿಸಬೇಕಾದ ತನ್ನ ಜವಾಬ್ದಾರಿಯನ್ನು ಈಗ ಸರಕಾರವು ನೇರವಾಗಿ ಫಲಾನುಭವಿಗಳ ಮೇಲೆ ಹೊರಿಸಿದಂತಾಗಿದೆ. ತನ್ನ ಮಾನದಂಡಕ್ಕೆ ಹೊಂದಿಕೊಳ್ಳದ ಫಲಾನುಭವಿಯು ಪಡಿತರ ಪಡೆಯಲು ತನ್ನ ಅರ್ಹತೆಯನ್ನು ತಾನೇ ಸಾಬೀತುಪಡಿಸಿಕೊಳ್ಳುವುದು ಈಗ ಅನಿವಾರ್ಯ ಆದಂತಾಗಿದೆ. ದಿಲ್ಲಿಯಲ್ಲಿ ನಿರ್ಣಯವಾಗುವ ಈ ಮಾನದಂಡಗಳು ಸ್ಥಳೀಯವಾಗಿ ಪ್ರಸ್ತುತವೇ ಎಂಬುದನ್ನು ನಿರ್ಧರಿಸುವ ಹಕ್ಕು ನಿಜಕ್ಕೆಂದರೆ ರಾಜ್ಯ ಸರಕಾರಗಳು ಮತ್ತು ಸ್ಥಳೀಯಾಡಳಿತಗಳದ್ದಾಗಬೇಕಿತ್ತು.

ಸಾಂವಿಧಾನಿಕವಾಗಿ ಏಳನೇ ಷೆಡ್ಯೂಲಿನಲ್ಲಿ ಎಂಟ್ರಿ 33 ಮತ್ತು 34ರ ಅನ್ವಯ ಸಮವರ್ತಿ ಪಟ್ಟಿಯಲ್ಲಿ ಬರುವ ಪಿಡಿಎಸ್ ವಿಕೇಂದ್ರೀಕೃತ ವ್ಯವಸ್ಥೆಯನ್ನು ಕೇಂದ್ರೀಕೃತ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಭಾರತ ಸರಕಾರವು ರಾಜ್ಯ ಸರಕಾರಗಳ ಮತ್ತೊಂದು ಹಕ್ಕನ್ನು ಕಿತ್ತುಕೊಂಡಂತಾಗಿದೆ.

ಪಿಡಿಎಸ್ ಆಹಾರಧಾನ್ಯಗಳು ಒಂದು ಮಟ್ಟಿಗೆ ದುರ್ಬಳಕೆ ಆಗುತ್ತಿರುವುದು ನಿಜ. ಅದನ್ನು ಪಡೆದವರು ಆ ಆಹಾರಧಾನ್ಯಗಳನ್ನು ಮಾರಿ ಹಣ ಪಡೆಯುವುದು ಇತ್ಯಾದಿಗಳೆಲ್ಲ ಅಲ್ಪ ಪ್ರಮಾಣದಲ್ಲಿ ನಡೆಯುತ್ತಿರುವುದೂ ಹೌದು. ಅದಕ್ಕೆ ಕಾರಣ ಸರಕಾರದ ನೀತಿಗಳಲ್ಲಿರುವ ಲೋಪವೇ ಹೊರತು, ಅಲ್ಲಿ ಫಲಾನುಭವಿಯ ಹಕ್ಕಿನ ಉಲ್ಲಂಘನೆ ಆಗಿಲ್ಲ. ಹೀಗೆ ಪಡಿತರ ಪಡೆದ ಆಹಾರದ ಯಾವ ಕಾಳುಗಳೂ ಕೂಡ ಸರಕಾರ ಸ್ವತಃ ತನ್ನ FCI ದಾಸ್ತಾನು ಕೇಂದ್ರಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣಕ್ಕೆ ಪೋಲು ಮಾಡುತ್ತಿರುವ ಪ್ರಮಾಣದಲ್ಲಿ ಹಾಳಾಗುತ್ತಿಲ್ಲ. ಇಂತಹವುಗಳನ್ನೆಲ್ಲ ವಿಕೇಂದ್ರೀಕೃತ ಮತ್ತು ಪ್ರಾಮಾಣಿಕ ವ್ಯವಸ್ಥೆಯೊಂದರ ಮೂಲಕ ನಿಭಾಯಿಸಿದರೆ, ಇವೆಲ್ಲವೂ ವ್ಯವಸ್ಥಿತವಾಗಿಯೇ ನಡೆಯಬಲ್ಲವು. ಭಾರತ ಸರಕಾರ ಇಂತಹವನ್ನೆಲ್ಲ ಕೇಂದ್ರೀಕೃತಗೊಳಿಸಿದಷ್ಟೂ, ಅದರ ಅಡ್ಡಪರಿಣಾಮಗಳು ಹೆಚ್ಚು.

ಹಸಿದವರಿಗೆ ವಿತರಿಸಲೆಂದು ಸಂಗ್ರಹಿಸಿದ ಅಕ್ಕಿಯನ್ನು, ಎಥೆನಾಲ್ ಉತ್ಪಾದನೆಗೆಂದು ಉದ್ಯಮಪತಿಗಳಿಗೆ ಹಂಚುವಾಗ ಇಲ್ಲದ ನಿಯಮ ಕಾಠಿಣ್ಯ, ಬಡಪಾಯಿ ಪಡಿತರ ಫಲಾನುಭವಿಗಳ ಮೇಲೆ ಏಕೆ? ‘ತಾವು ಪ್ರಾಮಾಣಿಕರೆಂದು ಸಾಬೀತು ಮಾಡದ ಹೊರತು ಎಲ್ಲರೂ ಕಳ್ಳರು’ ಎಂಬ ಲಾಜಿಕ್ ದೇಶದ ದೈನಂದಿನ ಬದುಕಿನ ಎಲ್ಲ ಮಗ್ಗುಲುಗಳಿಗೂ ಅಳವಡಿಕೆ ಆಗುತ್ತಿರುವುದು ಆತಂಕಕಾರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor