×
Ad

ಬೀದಿ ಬದಿಯ ವ್ಯಾಪಾರಿಗಳ ಬದುಕುವ ಹಕ್ಕು ಹರಣವಾಗದಿರಲಿ

Update: 2026-07-03 07:36 IST

ಸಾಂದರ್ಭಿಕ ಚಿತ್ರ Photo: chatgpt

ಭಾರತದಲ್ಲಿ ಪಾದಚಾರಿ ಮಾರ್ಗ ಅಥವಾ ಫುಟ್‌ಪಾತ್‌ಗಳು ಆಗಾಗ ಸುದ್ದಿ ಮಾಡುತ್ತಿರುತ್ತವೆ. ರಸ್ತೆಗಳಲ್ಲಿ ಚಲಿಸಬೇಕಾದ ವಾಹನಗಳು ಫುಟ್‌ಪಾತ್‌ನಲ್ಲಿ ಚಲಿಸಿ ಅಮಾಯಕರ ಪ್ರಾಣವನ್ನು ಬಲಿತೆಗೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಮಲಗುವುದಕ್ಕೆ ವ್ಯವಸ್ಥೆಯಿಲ್ಲದೆ ಫುಟ್‌ಪಾತನ್ನೇ ಆಶ್ರಯ ಪಡೆಯುವ ವಲಸೆ ಕಾರ್ಮಿಕರ ಮೇಲೆ ವಾಹನಗಳು ಹರಿದು ಸಾವು ನೋವುಗಳು ಸಂಭವಿಸಿದಾಗ ‘‘ಫುಟ್‌ಪಾತ್‌ಗಳಿರುವುದು ಜನರು ನಿದ್ದೆ ಮಾಡುವುದಕ್ಕಲ್ಲ’’ ಎನ್ನುವ ಆದೇಶ ನಾಗರಿಕರೆನಿಸಿಕೊಂಡವರಿಂದಲೇ ಹೊರ ಬೀಳುತ್ತದೆ. ಈ ಫುಟ್‌ಪಾತ್‌ಗಳಲ್ಲಿ ನಿದ್ದೆ ಮಾಡಬೇಕಾದ ಅನಿವಾರ್ಯ ಸ್ಥಿತಿ ಅವರಿಗೆ ನಿರ್ಮಾಣವಾಗಿರುವುದರ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಫುಟ್‌ಪಾತ್ ನಿದ್ದೆ ಮಾಡುವುದಕ್ಕೆ ಇರುವ ಸ್ಥಳವಲ್ಲ ಎನ್ನುವುದು ಎಷ್ಟು ಸತ್ಯವೋ, ವಾಹನಗಳು ಓಡಾಡುವುದಕ್ಕೆ ಇರುವ ಜಾಗವೂ ಅಲ್ಲ ಎನ್ನುವುದನ್ನು ಇವರು ಮರೆಯುತ್ತಾರೆ. ಇತ್ತೀಚೆಗೆ ಸುಪ್ರೀಂಕೋರ್ಟ್ ಪಾದಚಾರಿ ಮಾರ್ಗದ ಬಗ್ಗೆ ಸ್ಪಷ್ಟ ತೀರ್ಪನ್ನು ನೀಡಿದೆ. ಪಾದಚಾರಿಗಳ ಹಕ್ಕಿಗೆ ಮಾನ್ಯತೆಯನ್ನು ನೀಡಿದೆ. ರಸ್ತೆ ಅಪಘಾತದಲ್ಲಿ ಶಾಲಾಬಾಲಕನೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡುತ್ತಾ, ವಿಶ್ವದಲ್ಲೇ ಅತ್ಯಧಿಕ ರಸ್ತೆ ಅಪಘಾತ ಸಾವುಗಳು ಭಾರತದಲ್ಲಿ ಸಂಭವಿಸುತ್ತಿದೆ. ರಸ್ತೆಗಳನ್ನು ನಿರ್ಮಿಸುವ ವಿಧಾನದಲ್ಲಿ ಪಾದಚಾರಿಗಳನ್ನು ನಿರ್ಲಕ್ಷಿಸಿರುವುದೇ ಇದಕ್ಕೆ ಕಾರಣ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಇದರ ಹಿಂದಿರುವ ಸಾಮಾಜಿಕ ಅಸಮಾನತೆಗಳನ್ನು ಗುರುತಿಸುವ ಪ್ರಯತ್ನವನ್ನೂ ಸುಪ್ರೀಂಕೋರ್ಟ್ ಮಾಡಿದೆ. ‘‘ರಸ್ತೆ ಸುರಕ್ಷತೆಯ ವಿಷಯವು ಒಂದು ರೀತಿಯ ‘ಗಣ್ಯರ ಕಬಳಿಕೆ’ಯಾಗಿದೆ. ಇದರಲ್ಲಿ ಶ್ರೀಮಂತರು ಸಾರ್ವಜನಿಕ ಮೂಲಸೌಕರ್ಯಗಳನ್ನು ಬಳಸುವುದಕ್ಕೆ ಇತರರ ಅಗತ್ಯಗಳಿಗಿಂತ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪಾದಚಾರಿಗಳು, ಸೈಕಲ್ ಸವಾರರನ್ನು ನಿರ್ಲಕ್ಷಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪಾದಚಾರಿಗಳ ಹಕ್ಕನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ಕೇವಲ ರಸ್ತೆಗಳನ್ನು ನಿರ್ಮಿಸುವ ವಿಧಾನದ ಒಂದು ಭಾಗವಾಗಿ ನಿರೀಕ್ಷಿಸದೆ, ಸಂವಿಧಾನದ ಅಡಿಯಲ್ಲಿ ‘ಭಾರತಾದ್ಯಂತ ಮುಕ್ತವಾಗಿ ಸಂಚರಿಸುವ ಹಕ್ಕು’ ಮತ್ತು ಜೀವಿಸುವ ಹಕ್ಕು’ಗಳ ಮೂಲಕ ಖಾತರಿ ಪಡಿಸಲಾದ ಮೂಲಭೂತ ಹಕ್ಕೆಂದು ಪರಿಗಣಿಸಬೇಕು’’ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಭಾರತದಲ್ಲಿ ಪಾದಚಾರಿಗಳ ಹಕ್ಕುಗಳು ಸರಕಾರಕ್ಕೆ ನೆನಪಾಗುವುದು ಬೀದಿಬದಿಯ ವ್ಯಾಪಾರಿಗಳನ್ನು ತೆರವು ಮಾಡುವಾಗ ಮಾತ್ರ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಸಾರ್ವಜನಿಕರಿಗೆ ಸುರಕ್ಷಿತ, ಸುಗಮ ಹಾಗೂ ಅಡೆತಡೆಯಿಲ್ಲದ ಪಾದಚಾರಿ ಸಂಚಾರವನ್ನು ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರಕಾರ ಹಮ್ಮಿಕೊಂಡಿರುವ ‘ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ’ ಈಗ ಚರ್ಚೆಯಲ್ಲಿದೆ. ಈ ಅಭಿಯಾನದ ಭಾಗವಾಗಿ ಬೀದಿ ಬದಿ ವ್ಯಾಪಾರಿಗಳನ್ನು ನಿಷ್ಕರುಣೆಯಿಂದ ಎಬ್ಬಿಸಲಾಗುತ್ತಿದೆ. ಅವರ ಮಾರಾಟ ಸರಕುಗಳು ಏಕಾಏಕಿ ಕಾರ್ಯಾಚರಣೆಗಳಿಗೆ ಬಲಿಯಾಗಿವೆ. ‘ಪಾದಚಾರಿ ಮಾರ್ಗಗಳು ಸಾರ್ವಜನಿಕರ ಆಸ್ತಿಯಾಗಿದ್ದು ಅವುಗಳನ್ನು ಅತಿಕ್ರಮಣ ಮಾಡಿಕೊಂಡರೆ ನಾಗರಿಕರ ಓಡಾಟಕ್ಕೆ ಸಾಕಷ್ಟು ಸಮಸ್ಯೆ ಆಗಲಿದೆ. ನಾಗರಿಕರು ಯಾವುದೇ ಅಡೆತಡೆಯಿಲ್ಲದೆ ಸುರಕ್ಷಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳನ್ನು ಮುಕ್ತಗೊಳಿಸಲಾಗುತ್ತದೆ’ ಎಂದು ಪ್ರಕಟಣೆ ತಿಳಿಸುತ್ತದೆ. ಬೀದಿ ಬದಿಯ ವ್ಯಾಪಾರಿಗಳ ಬದುಕುವ ಹಕ್ಕನ್ನು ಜನರು ಪ್ರತಿಪಾದಿಸುತ್ತಿದ್ದಂತೆಯೇ, ಸರಕಾರ ಪಾದಚಾರಿಗಳ ಹಕ್ಕನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ. ನಗರದ ಸೌಂದರ್ಯ ಮತ್ತು ಪಾದಚಾರಿಗಳ ಹಕ್ಕುಗಳನ್ನು ರಕ್ಷಿಸುವುದಕ್ಕೆ ಈ ತೆರವು ಅನಿವಾರ್ಯ ಎಂದು ಸರಕಾರ ಹೇಳುತ್ತಿದೆ.

ಪಾದಚಾರಿ ಮಾರ್ಗಗಳಿರುವುದು ವ್ಯಾಪಾರ ಮಾಡುವುದಕ್ಕಲ್ಲ ಎನ್ನುವುದೂ ನಿಜ. ಆದರೆ, ಪಾದಚಾರಿಗಳ ಹಕ್ಕನ್ನು ಎತ್ತಿ ಹಿಡಿಯುವ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳ ಬದುಕುವ ಹಕ್ಕನ್ನು ಸರಕಾರ ಕಿತ್ತುಕೊಂಡಂತಾಗಬಾರದು ಎನ್ನುವುದು ಮನುಷ್ಯತ್ವದ ಮೇಲೆ ನಂಬಿಕೆಯಿರುವ ಎಲ್ಲರ ಆಗ್ರಹವಾಗಿದೆ. ಬೀದಿ ಬದಿ ವ್ಯಾಪಾರಿಗಳು ಒಂದು ನಗರದ ಅಥವಾ ನಾಡಿನ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿರುತ್ತಾರೆ. ಒಂದು ನಗರ ಆರ್ಥಿಕವಾಗಿ ಚಟುವಟಿಕೆಯಲ್ಲಿರಲು ಇವರ ಪಾತ್ರ ಬಹುದೊಡ್ಡದಿದೆ. ಬೃಹತ್ ಮಾಲ್‌ಗಳಷ್ಟೇ ನಗರವಲ್ಲ. ನಗರಕ್ಕೆ ಪ್ರವೇಶಿಸುವ ಸಹಸ್ರಾರು ಬಡವರ್ಗದ ಜನರು ಈ ಮಾಲ್‌ಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಅವರು ಈ ಬೀದಿ ಬದಿಯ ವ್ಯಾಪಾರಿಗಳ ಜೊತೆಗೆ ವ್ಯವಹಾರ ಸಂಬಂಧವನ್ನು ಹೊಂದಿದವರಾಗಿದ್ದಾರೆ. ಬೀದಿ ಬದಿ ವ್ಯಾಪಾರವೆನ್ನುವುದು ‘ಬಡವರಿಂದ-ಬಡವರಿಗೆ’ ಎನ್ನುವ ಹೊಂದಾಣಿಕೆಯಲ್ಲಿ ನಡೆಯುತ್ತದೆ. ಬಡವರ ಪಾಲಿಗೆ ನಗರಗಳು ತೆರೆಯುವುದೇ ಬೀದಿ ಬದಿಯ ವ್ಯಾಪಾರಿಗಳ ಮೂಲಕ. ಬೀದಿ ಬದಿಯ ವ್ಯಾಪಾರಿಗಳನ್ನು ತೆರವುಗೊಳಿಸುವುದು ಎಂದರೆ, ಅವರನ್ನು ನೆಚ್ಚಿಕೊಂಡ ಸಾವಿರಾರು ಕುಟುಂಬಗಳನ್ನು ಏಕಾಏಕಿ ಬೀದಿ ಪಾಲು ಮಾಡುವುದು ಎಂದರ್ಥ. ಯಾಕೆಂದರೆ ಒಂದು ಬೀದಿ ಬದಿ ಅಂಗಡಿಯನ್ನು ಆಶ್ರಯಿಸಿಕೊಂಡು ಒಂದು ಕುಟುಂಬವಿರುತ್ತದೆ. ಇದೀಗ ಮಳೆಗಾಲದ ಸಮಯ. ಶಾಲೆ, ಕಾಲೇಜುಗಳು ಆರಂಭವಾಗಿವೆ. ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಹತ್ತು ಹಲವು ಜವಾಬ್ದಾರಿಗಳಿರುತ್ತವೆ. ಬೀದಿ ಬದಿಯ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸುವುದೆಂದರೆ ಒಂದು ಹೊತ್ತಿನ ಊಟದಲ್ಲಿ ನೆಮ್ಮದಿಯನ್ನು ಕಾಣುತ್ತಿದ್ದ ಕುಟುಂಬದ ಕೈಯಿಂದ ಆ ಊಟವನ್ನು ಕಸಿದುಕೊಂಡು ಅವರನ್ನು ಬೀದಿಗೆ ತಳ್ಳಿದಂತೆ. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಗೆ ಮುನ್ನ ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಸರಕಾರ ಮಾಡಿಕೊಡುವುದು ಅತ್ಯಗತ್ಯವಾಗಿದೆ.

ಪಾದಚಾರಿ ಮಾರ್ಗ ಒತ್ತುವರಿ ತೆರವಿನ ಹೆಸರಿನಲ್ಲಿ ಬೀದಿ ಬದಿಯ ಅಂಗಡಿಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಪ್ರಾಧಿಕಾರಕ್ಕೆ ಪಾದಚಾರಿ ಮಾರ್ಗಗಳನ್ನು ನುಂಗಿ ಹಾಕಿರುವ ಐಶಾರಾಮಿ ಕಾರುಗಳು, ವಾಹನಗಳು ಯಾಕೆ ಕಾಣಿಸುತ್ತಿಲ್ಲ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇಂದು ನಗರಗಳಲ್ಲಿ ಅಕ್ರಮವಾಗಿ ಕಟ್ಟಿರುವ ಕಟ್ಟಡಗಳು ಪಾದಚಾರಿ ಮಾರ್ಗಗಳನ್ನು ಭಾಗಶಃ ನುಂಗಿ ಹಾಕಿವೆ. ಇಂತಹ ಅಕ್ರಮ ಕಟ್ಟಡಗಳ ಬಗ್ಗೆ ಸರಕಾರ ಯಾಕೆ ಮೃದು ನೀತಿ ಅನುಸರಿಸುತ್ತಿದೆ? ಎನ್ನುವ ಪ್ರಶ್ನೆಗೂ ಸರಕಾರ ಉತ್ತರಿಸಬೇಕಾಗುತ್ತದೆ. ನಗರಗಳು ಸುಂದರವಾಗುವುದು ಬೀದಿ ಬದಿಯಲ್ಲಿರುವ ವ್ಯಾಪಾರಿಗಳನ್ನು ತೆರವು ಗೊಳಿಸುವುದರಿಂದ ಅಲ್ಲ. ನಗರದ ಬೀದಿ ಬದಿಯಲ್ಲಿ ಅಪರಾಧ ಕೃತ್ಯಗಳನ್ನು ಎಸಗುವುದರ ವಿರುದ್ಧ ಕ್ರಮ ತೆಗೆದುಕೊಳ್ಳುವ ಮೂಲಕ. ಇಂದು ರಾತ್ರಿಯಾದರೆ ಸಾಕು ನಗರಗಳಲ್ಲಿ ಓಡಾಡುವುದು ಕಷ್ಟ ಎನ್ನುವ ವಾತಾವರಣ ಇದೆ. ರಾತ್ರಿ ಏಳು ಗಂಟೆಯ ಆನಂತರ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಹೆಚ್ಚುತ್ತಿರುವ ನಿರುದ್ಯೋಗಗಳೇ ಇದಕ್ಕೆ ಕಾರಣ ಎನ್ನುವುದರ ಅರಿವೂ ಸರಕಾರಕ್ಕಿರಬೇಕು. ಹೇಗೋ ಹೊಟ್ಟೆ ಬಟ್ಟೆ ಕಟ್ಟಿ ಬದುಕು ನಡೆಸುತ್ತಿರುವ ಬೀದಿ ಬದಿಯ ವ್ಯಾಪಾರಿಗಳ ಕೈಯಿಂದ ಅವರ ಬದುಕುವ ಹಕ್ಕನ್ನು ಕಸಿದುಕೊಂಡರೆ ಅವರು ಅನಿವಾರ್ಯವಾಗಿ ಅಪರಾಧ ಕೃತ್ಯಗಳಿಗೆ ಇಳಿಯುವ ಸ್ಥಿತಿ ನಿರ್ಮಾಣವಾದೀತು. ನಗರಗಳ ಬೀದಿ ಬದಿಗಳಲ್ಲಿ ರಾತ್ರಿ ನಮ್ಮ ಯುವಕರು ಪಿಕ್‌ಪಾಕೆಟ್ ಮಾಡುವುದು ಸೌಂದರ್ಯವೋ? ನಿಯತ್ತಿನಿಂದ ಎಳನೀರು, ಹಣ್ಣುಹಂಪಲು, ಹೂವುಗಳನ್ನು ಮಾರಿ ಬದುಕು ನಡೆಸುವುದು ಸೌಂದರ್ಯವೋ? ಸರಕಾರ ತೀರ್ಮಾನ ಮಾಡಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News