ಮಾನ ಕಳೆದುಕೊಂಡ ಶಾಂತಿ ನೊಬೆಲ್ ಬಹುಮಾನ
ಶಾಂತಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಜಗತ್ತಿನ ‘ಶಾಂತಿ ದೂತ’ರೆಲ್ಲ ಅಶಾಂತಿಯಿಂದ ಕನಲುವಂತೆ ಮಾಡಿದ್ದಾರೆ 2025ರ ಶಾಂತಿ ನೊಬೆಲ್ ಪ್ರಶಸ್ತಿ ವಿಜೇತ ಮರಿಯಾ ಮಚಾದೊ. ಶಾಂತಿ ನೊಬೆಲ್ ಪ್ರಶಸ್ತಿಯ ಕುರಿತಂತೆ ಜಗತ್ತಿಗೆ ಇದ್ದ ಎಲ್ಲ ಅನುಮಾನಗಳನ್ನು ನಿಜ ಮಾಡುವಂತೆ ತಮಗೆ ಸಿಕ್ಕಿದ ಗೌರವವನ್ನು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾದತಳಕ್ಕೆ ಅರ್ಪಿಸಿದ್ದಾರೆ. ಈವರೆಗೆ ಈ ಶಾಂತಿ ಪ್ರಶಸ್ತಿ ಗೋಸುಂಬೆಯಂತೆ ಬಣ್ಣ ಬದಲಿಸುತ್ತಿತ್ತು. ಆದರೆ ಈ ಬಾರಿ ಅದು ತನ್ನ ಅಸಲಿ ಬಣ್ಣವನ್ನು ಜಗತ್ತಿಗೆ ಸ್ಪಷ್ಟಪಡಿಸಿದೆ. ನೊಬೆಲ್ ಪ್ರಶಸ್ತಿಗೆ ಇಂತಹದೊಂದು ದಯನೀಯ ಸ್ಥಿತಿ ಎದುರಾಗುತ್ತದೆ ಎಂದಾಗಿದ್ದರೆ ಆಲ್ಫ್ರೆಡ್ ನೊಬೆಲ್ ಖಂಡಿತವಾಗಿಯೂ ತನ್ನ ಸಂಪತ್ತನ್ನು ನೊಬೆಲ್‌ಗಾಗಿ ಮುಡಿಪಾಗಿಡುತ್ತಿರಲಿಲ್ಲವೇನೋ. ಹಾಗೆ ನೋಡಿದರೆ ಆಲ್ಫ್ರೆಡ್ ತನ್ನ ಜೀವಮಾನದಲ್ಲಿ ಸಂಪತ್ತನ್ನು ಸಂಗ್ರಹಿಸಿದ್ದೇ ಸ್ಫೋಟಕಗಳ ಉತ್ಪಾದನೆಯಿಂದ. ಇಂದು ಜಗತ್ತಿನ ಯುದ್ಧವನ್ನು ಇನ್ನಷ್ಟು ಭಯಾನಕವಾಗಿಸಿದ್ದು ಆಲ್ಫ್ರೆಡ್ ಅವರ ಸಂಶೋಧನೆಗಳು. ಅವರ ‘ಡೈನಾಮೈಟ್’ಗಳು ತಪ್ಪು ಕಾರಣಗಳಿಗಾಗಿಯೇ ಹೆಚ್ಚು ಬಳಕೆಯಾಗುತ್ತಾ ಬಂದಿವೆ. ಸ್ಫೋಟಕ ಮತ್ತು ತೈಲ ಕ್ಷೇತ್ರಗಳಿಂದ ಅವರು ಅಪಾರ ದುಡ್ಡನ್ನು ಬಾಚಿಕೊಂಡರು. ಅವರ ಮರಣದ ಬಳಿಕ ಅದೇ ದುಡ್ಡು ಜಗತ್ತಿನ ಶಾಂತಿ ನೊಬೆಲ್ ಪ್ರಶಸ್ತಿಯನ್ನು ನೀಡಲು ಬಳಕೆಯಾಗುತ್ತಿರುವುದು ಒಂದು ವ್ಯಂಗ್ಯವೇ ಆಗಿದೆ. ಸ್ಫೋಟಕಗಳು ಮತ್ತು ಶಾಂತಿ ಹೇಗೆ ಜೊತೆಯಾಗಿ ಸಾಗಲಾರದೋ ಅದೇ ರೀತಿಯಲ್ಲಿ ಶಾಂತಿ ನೊಬೆಲ್‌ಗೂ ಜಗತ್ತಿನ ಶಾಂತಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಮರಿಯಾ ಮಚಾದೋ ಅವರು ತನ್ನ ನಿರ್ಧಾರದಿಂದ ಸ್ಪಷ್ಟಪಡಿಸಿದ್ದಾರೆ. ನೊಬೆಲ್‌ನ ನಿಜ ಮುಖವನ್ನು ಜಗತ್ತಿನ ಮುಂದೆ ತೆರೆದಿಟ್ಟದ್ದಕ್ಕಾಗಿ ಮರಿಯಾ ಅಭಿನಂದನಾರ್ಹರು.
ನಾಯಿಯನ್ನು ಕೊಂದು ಹಾಕುವ ಉದ್ದೇಶವಿದ್ದರೆ ಮೊದಲು ಅದನ್ನು ‘ಹುಚ್ಚು ನಾಯಿ’ ಎಂದು ಘೋಷಿಸಲಾಗುತ್ತದೆ. ಒಂದು ದೇಶದಲ್ಲಿ ಅಶಾಂತಿಯಿದೆ ಎಂದು ಘೋಷಿಸುವುದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ‘ಶಾಂತಿ ನೊಬೆಲ್’ನ್ನು ದುರುಪಯೋಗ ಪಡಿಸಿಕೊಂಡು ಬರಲಾಗುತ್ತಿದೆ. ಅಮೆರಿಕದಂತಹ ಬಲಿಷ್ಠ ದೇಶಗಳ ಪಿತೂರಿಯಿಂದಾಗಿ ಸಣ್ಣ ದೇಶಗಳಲ್ಲಿ ಮೊದಲು ಅರಾಜಕತೆ ಸೃಷ್ಟಿಯಾಗುತ್ತದೆ ಮತ್ತು ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿರುವ ಸ್ಥಳೀಯರನ್ನು ಗುರುತಿಸಿ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇವೆಲ್ಲವೂ ದುರ್ಬಲ ದೇಶಗಳ ಮೇಲೆ ಬಲಿಷ್ಠ ದೇಶಗಳು ಎರಗುವುದಕ್ಕೆ ಮಾಡಿಕೊಳ್ಳುವ ಸಿದ್ಧತೆಗಳಾಗಿವೆ. ವೆನೆಝುವೆಲಾದಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ. ತೈಲ ಸಂಪತ್ತನ್ನು ತಮ್ಮಲ್ಲೇ ಉಳಿಸಿಕೊಳ್ಳಲು ವೆನೆಝುವೆಲಾ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಈ ಕಾರಣದಿಂದಾಗಿ ಪಶ್ಚಿಮದ ದೇಶಗಳು, ಖಾಸಗಿ ಸಂಸ್ಥೆಗಳಿಗೆ ಅಲ್ಲಿನ ತೈಲ ನಿಕ್ಷೇಪಗಳ ಮೇಲೆ ಅಧಿಕಾರ ಸ್ಥಾಪಿಸಲು ಸಾಧ್ಯವಾಗಿಲ್ಲ. ತೈಲದ ರಕ್ಷಣೆಗಾಗಿ ಹಿಂದಿನ ಅಧ್ಯಕ್ಷ ಹ್ಯೂಗೋ ಚಾವೆಝ್ ಅವರು ಅತ್ಯಂತ ಕಠಿಣ ನೀತಿಗಳನ್ನು ಜಾರಿಗೊಳಿಸಿದ್ದರು. ಇದು ಅಮೆರಿಕವೂ ಸೇರಿದಂತೆ ಪ್ರಬಲ ದೇಶಗಳಿಗೆ ನುಂಗಲಾರದ ತುತ್ತಾಗಿತ್ತು. ಅಮೆರಿಕಕ್ಕೆ ವೆನೆಜುವೆಲಾ ಸೆಡ್ಡು ಹೊಡೆಯುತ್ತಲೇ ಬಂದಿತ್ತು. ಎಲ್ಲಿಯವರೆಗೆ ಎಂದರೆ, 2016ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ಪರ್ಯಾಯವಾಗಿ ‘ಹ್ಯೂಗೋ ಚಾವೆಝ್’ ಸ್ಮರಣಾರ್ಥ ಶಾಂತಿ ಪ್ರಶಸ್ತಿಯೊಂದನ್ನು ನಿಕೋಲಸ್ ಮಡುರೋ ಅವರು ಘೋಷಿಸಿದ್ದರು. ಕೊಲಂಬಿಯಾದ ಅಧ್ಯಕ್ಷ ಜುಯಾನ್ ಮ್ಯಾನುವೆಲ್ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾಗ, ವೆನೆಝುವೆಲಾ ದೇಶವು ‘ಹ್ಯೂಗೋ ಚಾವೆಜ್ ಪ್ರಶಸ್ತಿ’ಯನ್ನು ವ್ಲಾದಿಮಿರ್ ಪುಟಿನ್ ಅವರಿಗೆ ನೀಡಿತ್ತು. ವಿಪರ್ಯಾಸವೆಂದರೆ ಅದೇ ಪುಟಿನ್ ಅವರು ಉಕ್ರೇನ್ ವಿರುದ್ಧ ಕ್ಷಿಪಣಿಗಳನ್ನು ಸುರಿಸುತ್ತಿದ್ದಾರೆ ಮತ್ತು ತನಗೆ ಶಾಂತಿ ಪ್ರಶಸ್ತಿಯನ್ನು ನೀಡಿದ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಅಕ್ರಮವಾಗಿ ಬಂಧಿಸಿದಾಗಲೂ ಅದರ ವಿರುದ್ಧ ಮಾತನಾಡುವ ನೈತಿಕತೆಯನ್ನು ಪ್ರದರ್ಶಿಸುತ್ತಿಲ್ಲ. ದುರ್ಬಲ ರಾಜ್ಯಗಳ ಮೇಲೆ ದಾಳಿ ಮಾಡುವ ಹಕ್ಕುಗಳನ್ನು ಅಮೆರಿಕ ಮತ್ತು ರಶ್ಯ ಪರಸ್ಪರ ಹಂಚಿಕೊಂಡಿವೆ.
ನಿಕೋಲಸ್ ಆಡಳಿತದಲ್ಲಿ ವೆನೆಝುವೆಲಾದಲ್ಲಿ ಆರ್ಥಿಕತೆ ಜರ್ಜರಿತವಾಗಿತ್ತು ನಿಜ. ಆ ದೇಶದ ಮೇಲೆ ಹೇರಲಾಗಿದ್ದ ನಿಷೇಧಗಳೂ ಅದಕ್ಕೆ ಕಾರಣವಾಗಿದ್ದವು. ತೈಲ ನಿಕ್ಷೇಪಗಳನ್ನು ಹೊರ ತೆಗೆಯುವ ಆಧುನಿಕ ಸವಲತ್ತುಗಳ ಕೊರತೆಗಳು ಮತ್ತು ಆರ್ಥಿಕ ಕೊರತೆಗಳು ವೆನೆಝುವೆಲಾವನ್ನು ಇನ್ನಷ್ಟು ದುರ್ಬಲಗೊಳಿಸಿದ್ದವು. ಕಚ್ಚಾ ತೈಲದ ಬೆಲೆ ಇಳಿಕೆ ಗಾಯಗಳ ಮೇಲೆ ಎಳೆದ ಬರೆಯಾಗಿತ್ತು. ಇಂತಹ ಸಂದರ್ಭದಲ್ಲಿ ಸಹಜವಾಗಿಯೇ ದೇಶದಲ್ಲಿ ಆರ್ಥಿಕತೆಗಾಗಿ ಅಕ್ರಮ ದಾರಿಗಳು ತೆರೆದುಕೊಳ್ಳುತ್ತವೆ. ಡ್ರಗ್ಸ್ ಮಾಫಿಯಾಗಳು ಈ ಸಂದರ್ಭವನ್ನು ಬಳಸಿಕೊಂಡವು. ಸರಕಾರ ಅದರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಹ್ಯೂಗೋ ಚಾವೆಝ್‌ಗಿದ್ದ ಧೈರ್ಯ, ದೂರದೃಷ್ಟಿ ನಿಕೋಲಸ್ ಅವರಿಗಿರಲಿಲ್ಲ. ನಿಕೋಲಸ್ ಮಡುರೋ ಅವರ ಆಡಳಿತದ ವಿರುದ್ಧ ದೇಶದೊಳಗೆ ಜಾಗೃತಿ ಮೂಡಿಸಿ ಜನಾಂದೋಲನವನ್ನು ಹುಟ್ಟು ಹಾಕುವ ಅವಕಾಶ ವಿರೋಧ ಪಕ್ಷದ ನಾಯಕಿ ಮರಿಯಾ ಮಚಾದೋ ಅವರಿಗಿತ್ತು..ಆದರೆ ಅವರು ಹ್ಯೂಗೋ ಜಾವೆಝ್ ಕಾಲದಿಂದಲೂ, ಅಮೆರಿಕದ ಸೂತ್ರದ ಗೊಂಬೆಯಾಗಿ ಬಳಕೆಯಾದರು. ಖಾಸಗೀಕರಣ, ಉದಾರೀಕರಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ವೆನೆಝುವೆಲಾವನ್ನು ಮೇಲೆತ್ತಲು ಸಾಧ್ಯ ಎಂದು ಅವರು ನಂಬಿಕೊಂಡು ಬಂದಿದ್ದರು. ಅಷ್ಟೇ ಅಲ್ಲ, ಬಹಿರಂಗವಾಗಿ ಅಮೆರಿಕದ ಸೇನೆಯ ನೆರವನ್ನು ಅಪೇಕ್ಷಿಸಿದರು. ಇಡೀ ಜಗತ್ತು ನೋಡು ನೋಡುತ್ತಿದ್ದಂತೆಯೇ ಅಮೆರಿಕ ವೆನೆಝುವೆಲಾದ ಮೇಲೆ ಎರಗಿ, ಅಲ್ಲಿನ ಅಧ್ಯಕ್ಷರನ್ನು ಬಂಧಿಸಿದಾಗಲಾದರೂ ತನ್ನ ನಿಲುವಿನಿಂದ ಮರಿಯಾ ಅವರು ಹಿಂದೆ ಸರಿಯಬಹುದಿತ್ತು. ಆದರೆ ಇದೀಗ ಅಮೆರಿಕದ ಕೃತ್ಯವನ್ನು ಬಹಿರಂಗವಾಗಿ ಸಮರ್ಥಿಸುವ ಭಾಗವಾಗಿ ತನಗೆ ಸಿಕ್ಕಿದ ನೊಬೆಲ್ ಪ್ರಶಸ್ತಿಯನ್ನು ಡೊನಾಲ್ಡ್ ಟ್ರಂಪ್‌ಗೆ ಒಪ್ಪಿಸಿ ನೊಬೆಲ್ ಪ್ರಶಸ್ತಿಯನ್ನು ನಗೆಪಾಟಲಿಗೀಡು ಮಾಡಿದ್ದಾರೆ. ಇದರ ಜೊತೆ ಜೊತೆಗೇ ಮರಿಯಾ ಮಚಾದೊ ಅವರು ವೆನೆಝುವೆಲಾದಲ್ಲಿ ಪ್ರಜಾಸತ್ತೆಗಾಗಿ ನಡೆಸಿದ ಹೋರಾಟ ಸಂಪೂರ್ಣ ಅರ್ಥಕಳೆದುಕೊಂಡಿದೆ. ಸ್ವತಃ ವೆನೆಜುವೆಲಾ ಜನರ ಪಾಲಿಗೇ ಅವರು ಅನ್ಯರಾಗಿದ್ದಾರೆ. ಬಹುಶಃ ಅವಕಾಶವಿದ್ದಿದ್ದರೆ ಅವರು ಇಸ್ರೇಲ್ ಪ್ರಧಾನಿಯ ಜೊತೆಗೂ ಈ ಶಾಂತಿ ಪ್ರಶಸ್ತಿಯನ್ನು ಹಂಚಿಕೊಳ್ಳುತ್ತಿದ್ದರೋ ಏನೋ. ಯಾಕೆಂದರೆ, ಇಸ್ರೇಲ್ ಜೊತೆಗೂ ಅವರು ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿದ್ದಾರೆ.
ನೊಬೆಲ್ ಪ್ರಶಸ್ತಿಯನ್ನು ಅಣಕಿಸುವುದಕ್ಕಾಗಿ, ತಮಾಷೆ ಮಾಡುವುದಕ್ಕಾಗಿ ‘ಇಗ್ನೋಬೆಲ್’ ಎನ್ನುವ ಪ್ರಶಸ್ತಿಯನ್ನು ಜಾಗತಿಕವಾಗಿ ನೀಡುತ್ತಾ ಬರಲಾಗಿದೆ. ಆದರೆ ನೊಬೆಲ್‌ಗೆ ಒದಗಿರುವ ದುಸ್ಥಿತಿ ನೋಡಿದರೆ ಅದನ್ನು ವ್ಯಂಗ್ಯ ಮಾಡುವುದಕ್ಕೆ ಇನ್ನೊಂದು ಪ್ರಶಸ್ತಿಯ ಅಗತ್ಯವೇ ಇಲ್ಲ. ಶಾಂತಿ ಪ್ರಶಸ್ತಿಯನ್ನು ಟ್ರಂಪ್‌ಗೆ ನೀಡುವ ಮೂಲಕ ಮರಿಯಾ ಮಚಾದೊ ನೊಬೆಲ್‌ನ್ನು ಅತ್ಯಂತ ಹೀನಾಯವಾಗಿ ತಮಾಷೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ‘ಶಾಂತಿ ನೊಬೆಲ್’ ನೀಡುವ ಸಮಿತಿಗೇ ‘ಇಗ್ನೋಬೆಲ್’ ನೀಡುವ ಸಾಧ್ಯತೆಗಳಿವೆ.