ಪ್ರಭುಗಳೆಂಬ ಬಿರುದು ಸಾಲದು, ನ್ಯಾಯೋಚಿತ ಪಾಲು ಎಲ್ಲರಿಗೆ ಸಲ್ಲಲಿ
2003ರಲ್ಲಿ ರಂಗಕ್ಕಿಳಿದ ‘ವಾರ್ತಾಭಾರತಿ’ ಆಂದೋಲನವು ಇಂದು 24ನೇ ವರ್ಷವನ್ನು ಪ್ರವೇಶಿಸುತ್ತಿದೆ. ಕಠಿಣವಾದರೂ ರೋಚಕವಾದ ಈ ಪ್ರಯಾಣದುದ್ದಕ್ಕೂ ನಮ್ಮ ಜೊತೆ ನಿಂತು ನಮಗೆ ಎಲ್ಲ ಬಗೆಯ ಬೆಂಬಲ, ಸಹಕಾರ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದ ನಮ್ಮೆಲ್ಲ ಹಿತೈಷಿಗಳಿಗೆ ನಮ್ಮ ಹಾರ್ದಿಕ ಧನ್ಯವಾದಗಳು. ತಮ್ಮ ಗುರಿ ಮತ್ತು ಧ್ಯೇಯದ ಪ್ರಜ್ಞೆಯನ್ನು ಸದಾ ಹಸಿರಾಗಿಟ್ಟುಕೊಂಡು, ತಮ್ಮ ಬದ್ಧತೆಗಳನ್ನು ಭದ್ರವಾಗಿ ಉಳಿಸಿಕೊಂಡು, ಎಲ್ಲ ಸವಾಲು, ಅಡಚಣೆ ಮತ್ತು ಒತ್ತಡಗಳನ್ನು ಉತ್ಸಾಹದೊಂದಿಗೆ ಎದುರಿಸುತ್ತಾ, ಈ ದಿಟ್ಟ ಯಾತ್ರೆಯಲ್ಲಿ ಸ್ಥಿರವಾಗಿ ಮುನ್ನಡೆದ ನಮ್ಮ ಸಾಹಸಿ ತಂಡದ ಎಲ್ಲ ಸದಸ್ಯರಿಗೆ ಅಭಿನಂದನೆಗಳು. ರಾಜ್ಯದ, ಮಾತ್ರವಲ್ಲ, ದೇಶದ ಹಾಗೂ ಜಗತ್ತಿನ ಹೆಚ್ಚಿನೆಲ್ಲಾ ಭಾಗಗಳಿಂದ ವಾರ್ತಾಭಾರತಿ ಬಳಗದ ಜೊತೆ ಸತತ ಸಂಪರ್ಕದಲ್ಲಿದ್ದು ನಮಗೆ ಬಲ ಒದಗಿಸುತ್ತಿರುವ ನಮ್ಮೆಲ್ಲಾ ಓದುಗರು, ವೀಕ್ಷಕರು ಮತ್ತು ಶ್ರೋತೃಗಳ ವಿಶಾಲ ವಲಯಕ್ಕೂ ಶುಭಾಶಯಗಳು.
ಭಾರತೀಯ ಸಮಾಜವು ಇಂದು ದೊಡ್ಡ ಮಟ್ಟದ ಧ್ರುವೀಕರಣದ ಅಂಚಿನಲ್ಲಿದೆ. ಸಂವಿಧಾನ ವಿರೋಧಿ ಶಕ್ತಿಗಳ ಜನಪ್ರಿಯತೆ ತೀವ್ರವಾಗಿ ಕುಸಿದಿದೆ. ಅದೇವೇಳೆ ಅಧಿಕಾರ, ಪ್ರಭಾವ ಮತ್ತು ಅಕ್ರಮ ಸಂಪನ್ಮೂಲಗಳ ದೃಷ್ಟಿಯಿಂದ ಅವು ತಮ್ಮ ಇತಿಹಾಸದಲ್ಲೇ ಅತ್ಯಂತ ಬಲಿಷ್ಠ ಸ್ಥಿತಿಯಲ್ಲಿವೆ. ಮತೀಯ ಭಾವುಕತೆಯನ್ನು ಬಳಸಿ ಸಮಾಜವನ್ನು ವಿಭಜಿಸುವ ಮೂಲಕ ಅಧಿಕಾರ ಗ್ರಹಣ ಮಾಡಿದ್ದ ಪ್ರಸ್ತುತ ಶಕ್ತಿಗಳು ಇದೀಗ ಅದೇ ಅಧಿಕಾರವನ್ನು ಬಳಸಿ ದೇಶದ ಸಂವಿಧಾನವನ್ನೇ ಸಂಹರಿಸಲು ಹೊರಟಿವೆ. ಇದು ನಿಜವಾಗಿ, ದೇಶ ಮತ್ತದರ ಸಂವಿಧಾನವನ್ನು ಪ್ರೀತಿಸುವ ಎಲ್ಲ ಭಾರತೀಯರ ವಿರುದ್ಧ ಸಮರ ಘೋಷಣೆಯಾಗಿದ್ದು, ‘ಸಂವಿಧಾನ ಪರ ಹಾಗೂ ಸಂವಿಧಾನ ವಿರೋಧಿ’ ಅಥವಾ ‘ಸಮಾಜ ಪರ ಹಾಗೂ ಸಮಾಜ ವಿರೋಧಿ’ ಎಂಬ ನೈಜ ಧ್ರುವೀಕರಣದ ಸಾಧ್ಯತೆಗಳು ಗೋಚರಿಸತೊಡಗಿವೆ. ದೇಶದ ನವ, ಯುವ ಪೀಳಿಗೆಯಂತೂ ಈ ಪ್ರಕ್ರಿಯೆಯನ್ನು ಹಾಗೂ ಅದರಲ್ಲಿ ತನ್ನ ಪಾತ್ರವನ್ನು ಸಕಾಲದಲ್ಲಿ ಗುರುತಿಸಿ ಸಾಮೂಹಿಕವಾಗಿ ಕಣಕ್ಕಿಳಿಯತೊಡಗಿದೆ.
ಎಲ್ಲ ಪೀಳಿಗೆಗಳಿಗೆ ತನ್ನ ಹಿಂದಿನ ಹಾಗೂ ಮುಂದಿನ ಪೀಳಿಗೆಗಳಿಗೆ ಸಂಬಂಧಿಸಿದಂತೆ ಕೆಲವು ಮೂಲಭೂತ ಕರ್ತವ್ಯಗಳಿರುತ್ತವೆ. ಅದು ತನ್ನ ಹಿಂದಿನವರಿಂದ ಪಡೆದ ಒಳ್ಳೆಯದೆಲ್ಲವನ್ನೂ ಉಳಿಸಿ ಬೆಳೆಸಬೇಕು ಮತ್ತು ಹಿಂದಿನವರಿಂದ ತಾನು ಪಡೆದುದಕ್ಕಿಂತ ಉತ್ತಮವಾದುದನ್ನು ತನ್ನ ಮುಂದಿನವರಿಗಾಗಿ ಬಿಟ್ಟು ಹೋಗಬೇಕು ಎಂಬುದು ಆ ಪೈಕಿ ಅತ್ಯಂತ ಪ್ರಮುಖ ಕರ್ತವ್ಯ. ಹಿಂದಿನವರನ್ನೆಲ್ಲಾ ವೈಭವೀಕರಿಸುತ್ತಾ ಅಥವಾ ದೂಷಿಸುತ್ತಾ ಮುಂದಿನವರಿಗೆ ಟೊಳ್ಳು ಕನಸುಗಳನ್ನು ಮಾತ್ರ ಕೊಟ್ಟುಹೋಗುವವರನ್ನು ವಿಫಲರೆಂದೇ ಪರಿಗಣಿಸಲಾಗುತ್ತದೆ. ಸದ್ಯ ಭಾರತದ ಝೀ ಮತ್ತು ಅಲ್ಫಾ ಪೀಳಿಗೆಯವರು ತಮ್ಮ ನಿಕಟಪೂರ್ವ ಎಕ್ಸ್ ಮತ್ತು ವೈ ಪೀಳಿಗೆಯವರನ್ನು ವಿಫಲ ಪೀಳಿಗೆಯಾಗಿ ಕಾಣುತ್ತಿರುವುದು ಇದೇ ಕಾರಣಕ್ಕಾಗಿ. ಎಕ್ಸ್ ಮತ್ತು ವೈ ಪೀಳಿಗೆಗಳ ವೈಫಲ್ಯಗಳೆಲ್ಲಾ ಇಂದಿನ ಎಳೆಯರ ಮುಂದಿದೆ. ಅವರಿಂದ ತಮಗೆ ಒಳ್ಳೆಯದೇನಾದರೂ ಬಳುವಳಿಯಾಗಿ ಸಿಗಬಹುದೆಂಬ ನಿರೀಕ್ಷೆಯನ್ನೇ ವೈ ಮತ್ತು ಅಲ್ಫಾ ತಲೆಮಾರಿನವರು ಕಳೆದುಕೊಂಡಿದ್ದಾರೆ. ತಮ್ಮ ದಾರಿಯನ್ನು ತಾವೇ ಕಂಡುಕೊಳ್ಳುವುದಾಗಿ ಅವರು ಘೋಷಿಸಿದ್ದಾರೆ. ಸ್ವತಃ ತಮ್ಮ ವರ್ತಮಾನವನ್ನು ಸ್ವಸ್ಥವಾಗಿ ಇಡಲಾಗದವರು ನಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಹೇಗೆ ತಾನೇ ಸಾಧ್ಯ? ಎಂಬ ಅವರ ತರ್ಕ ಎಲ್ಲ ರೀತಿಯಲ್ಲೂ ಸಮರ್ಥನೀಯ. ಹಾಗೆಯೇ, ನಮಗೆ ಒಳ್ಳೆಯದೇನನ್ನಾದರೂ ಕೊಡಲು ವಿಫಲರಾದ ನಮ್ಮ ವೈಫಲ್ಯದಿಂದ ನಾವು ಪಾಠ ಕಲಿಯುತ್ತೇವೆ. ನಮಗೆ ಸಿಕ್ಕಿದ ವರ್ತಮಾನಕ್ಕಿಂತ ಭಿನ್ನವಾದ, ಒಂದು ಉಜ್ವಲ ವರ್ತಮಾನವನ್ನು ಮತ್ತು ಭವ್ಯ ಭವಿಷ್ಯವನ್ನು ನಾವು ನಮ್ಮ ಮುಂದಿನವರಿಗೆ ಕೊಟ್ಟು ಹೋಗುತ್ತೇವೆ ಎಂದು ಝೀ ಪೀಳಿಗೆ ಮಾಡಿರುವ ಸಂಕಲ್ಪ ಕೂಡಾ ಖಂಡಿತ ಸ್ವಾಗತಾರ್ಹ.
ನಮ್ಮ ದೇಶದ ಎಕ್ಸ್ ಮತ್ತು ವೈ ಪೀಳಿಗೆಯವರು ತಮ್ಮ ಮುಂದಿನ ಝೀ ಮತ್ತು ಅಲ್ಫಾ ಪೀಳಿಗೆಯವರಿಗೆ ನೀಡಿರುವ ಸಮಾಜ ಹೇಗಿದೆ? ಇದನ್ನು ಅಳೆಯಲು ಸ್ವಲ್ಪ ಕಣ್ತೆರೆದು ನೋಡಿದರೆ ಆಘಾತ, ನಾಚಿಕೆ ಮತ್ತು ಮುಜುಗರ - ಮೂರೂ ಆಗುತ್ತವೆ:
ದೇಶದಲ್ಲಿ ದಲಿತರು, ಶೂದ್ರರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಒಟ್ಟು ಜನಸಂಖ್ಯೆ ಶೇ. 85 ಅವರೇ ಈ ದೇಶದ ಬಹುಸಂಖ್ಯಾತರು. ಕಳೆದ ಎಂಟು ದಶಕಗಳಲ್ಲಿ ಎಲ್ಲವೂ ಸಂವಿಧಾನದ ಆಶಯ ಪ್ರಕಾರ ನಡೆದಿರುತ್ತಿದ್ದರೆ ಇಂದು ಈ ಬಹುಜನ ಸಮಾಜಕ್ಕೆ ನ್ಯಾಯ, ಸಮಾನತೆ, ಘನತೆ, ಭದ್ರತೆ, ಸಂಪನ್ನತೆ ಎಲ್ಲವೂ ಸಿಕ್ಕಿರುತ್ತಿತ್ತು. ಆದರೆ ಈ ವರ್ಗಗಳಿಗೆ ಅದೆಲ್ಲವನ್ನೂ ನಿರಾಕರಿಸುವ ಹಳೆಯ ಅಮಾನುಷ ವರ್ಣಾಶ್ರಮ ವ್ಯವಸ್ಥೆಯೇ ಈಗಲೂ ದೇಶದಲ್ಲಿ ಅನೌಪಚಾರಿಕವಾಗಿ ಅನುಷ್ಠಾನದಲ್ಲಿದೆ. ಇಲ್ಲಿ ಪ್ರಜಾಪ್ರಭುತ್ವವು ಜೀವಂತವಿದ್ದಿದ್ದರೆ ಅದು ಆ ದುಷ್ಟ ವ್ಯವಸ್ಥೆಯನ್ನು ಎಂದೋ ಸಂಹರಿಸಿರುತ್ತಿತ್ತು. ಆದರೆ ಮನುವಾದವು ಸಂವಿಧಾನದ ಕೈಕಾಲು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.
ಜನಸಂಖ್ಯೆಯ ಸುಮಾರು 26 ಶೇ. ದಷ್ಟಿರುವ ದೇಶದ ದಲಿತರು ಇಂದು ಕೂಡಾ, ಶತಮಾನಗಳ ಹಿಂದೆ ತಮ್ಮ ಮೇಲೆ ಹೇರಲಾಗಿದ್ದ ಕ್ರೂರ ನಿರ್ಬಂಧಗಳಡಿಯಲ್ಲೇ ನರಳುತ್ತಿದ್ದಾರೆ. ಸ್ವಾತಂತ್ರ್ಯ, ಸಂವಿಧಾನ ಮತ್ತು ಅನೇಕಾರು ಕಾನೂನುಗಳ ಹೊರತಾಗಿಯೂ ಪ್ರತಿದಿನವೂ ಅಸ್ಪಶ್ಯತೆ, ದಮನ, ದೌರ್ಜನ್ಯ, ಅಪಮಾನ ಮತ್ತು ಬಹಿಷ್ಕಾರಗಳ ಸರಣಿಯನ್ನು ಅವರು ಎದುರಿಸುತ್ತಿದ್ದಾರೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2025 ಡಿಸೆಂಬರ್ ನ ತನ್ನ ವರದಿಯಲ್ಲಿ, ವರ್ಷ 2023ರಲ್ಲಿ ಎಸ್ಸಿ, ಎಸ್ಟಿಗಳನ್ನು ಅಸ್ಪಶ್ಯರಾಗಿ ನಡೆಸಿಕೊಳ್ಳಲಾದ 24 ಪ್ರಕರಣಗಳು ಮಾತ್ರ ದಾಖಲಾಗಿವೆ ಎಂದು ತಿಳಿಸಿತ್ತು. ಈ ಮೂಲಕ ಅದು, ಭಾರತೀಯ ಸಮಾಜವು ಅಸ್ಪಶ್ಯತೆ ಎಂಬ ಲಜ್ಜಾಸ್ಪದ ಕಳಂಕದಿಂದ ಬಹುತೇಕ ಮುಕ್ತವಾಗಿಬಿಟ್ಟಿದೆ ಎಂಬ ಭ್ರಮೆ ಮೂಡಿಸುವ ಪ್ರಯತ್ನ ಮಾಡಿತ್ತು. ಈರೀತಿ ಕಳಂಕಗಳ ಅಸ್ತಿತ್ವವನ್ನೇ ನಿರಾಕರಿಸುವುದೆಂದರೆ, ಅವುಗಳನ್ನು ನೀರೆರೆದು ಪೋಷಿಸುವುದೆಂದೇ ಅರ್ಥ. ಕೇವಲ ಎಫ್‌ಐಆರ್‌ಗಳ ಸಂಖ್ಯೆಯ ಆಧಾರದಲ್ಲಿ ನಾವು ಸಾಮಾಜಿಕ ಸ್ಥಿತಿಗತಿಗಳನ್ನು ಅಳೆಯತೊಡಗಿದರೆ ಸತ್ಯದ ಹತ್ತಿರ ಕೂಡಾ ತಲುಪುವ ಸಾಧ್ಯತೆ ಇಲ್ಲ. 2014ರಲ್ಲಿ ಪ್ರಕಟವಾದ ವಿಶ್ವಾಸಾರ್ಹ, ಮಾದರಿ ಸಮೀಕ್ಷೆಯೊಂದರ (ಓಅಂಇಖ) ವರದಿಯ ಪ್ರಕಾರ 27 ಶೇ. ಭಾರತೀಯರು, ತಾವು ಯಾವುದಾದರೂ ವಿಧದಲ್ಲಿ ಅಸ್ಪಶ್ಯತೆಯನ್ನು ಆಚರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಎರಡು ವಾರಗಳ ಹಿಂದಷ್ಟೇ, ರಾಜ್ಯಸಭೆಯ ವಿರೋಧ ಪಕ್ಷ ನಾಯಕ ಹಾಗೂ ದೇಶದ ಓರ್ವ ಹಿರಿಯ ನೇತಾರ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಂಘ ಪರಿವಾರದವರು ಜಾತಿಯ ಆಧಾರದಲ್ಲಿ ಮಾಡಿದ ಘೋರ ಅಪಮಾನವು, ದಲಿತರು ಎಷ್ಟೇ ಶಿಕ್ಷಿತರಾಗಿದ್ದರೂ, ಎಷ್ಟೇ ದೊಡ್ಡ ಸಾಧನೆಗಳನ್ನು ಮಾಡಿದರೂ ಅವರಿಗೆ ಎಷ್ಟು ಜನಬೆಂಬಲ ಇದ್ದರೂ ಅವರು ಘನತೆ, ಗೌರವಗಳಿಗೆ ಅರ್ಹರಲ್ಲ ಎಂಬ ನೀಚ ನಂಬಿಕೆಯ ಘೋಷಣೆಯಾಗಿದೆ.
ಕಳೆದ ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸರಕಾರವು ರಾಜ್ಯಸಭೆಗೆ ತಿಳಿಸಿದ ಪ್ರಕಾರ, 2021 ಜನವರಿ 1ರಿಂದ 2026 ಜನವರಿ 30ರ ತನಕ ದೇಶದ ವಿವಿಧ ಹೈಕೋರ್ಟ್ ಗಳಿಗೆ 593 ನ್ಯಾಯಾಧೀಶರನ್ನು ನೇಮಿಸಲಾಗಿತ್ತು. ಅವರಲ್ಲಿ ಪರಿಶಿಷ್ಟ ಜಾತಿಗಳ 26 ಮಂದಿ (4.38 ಶೇ.). ಪರಿಶಿಷ್ಟ ವರ್ಗಗಳ 14 ಮಂದಿ (2.36 ಶೇ.) ಇತರ ಹಿಂದುಳಿದ ವರ್ಗಗಳ 80 ಮಂದಿ (13.49 ಶೇ.) ಮತ್ತು ಅಲ್ಪಸಂಖ್ಯಾತ ಸಮುದಾಯಗಳ 37 ಮಂದಿ (6.24 ಶೇ.) ಇದ್ದರು. ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಒಟ್ಟು ಜನಸಂಖ್ಯೆ 85 ಶೇ. ಆದರೆ ಅವರೆಲ್ಲರಿಗೆ ಸಿಕ್ಕ ಒಟ್ಟು ಪ್ರಾತಿನಿಧ್ಯ ಕೇವಲ 26.5 ಶೇ. ಉಳಿದ ಬಹುತೇಕ 74 ಶೇ. ನ್ಯಾಯಾಧೀಶ ಹುದ್ದೆಗಳು ಮೇಲ್ಜಾತಿಯವರಿಗೆ ಹೋದವು. ಅತ್ತ ಸುಪ್ರೀಂ ಕೋರ್ಟ್‌ನ ಅವಸ್ಥೆ ಇನ್ನೂ ಶೋಚನೀಯ. ಕಳೆದ ವರ್ಷದ ಕೊನೆಯ ವೇಳೆಗೆ ಸುಪ್ರೀಂ ಕೋರ್ಟ್‌ನಲ್ಲಿ 33 ಮಂದಿ ನ್ಯಾಯಾಧೀಶರಿದ್ದರು. ಅವರಲ್ಲಿ 12 ಮಂದಿ ಬ್ರಾಹ್ಮಣ ಜಾತಿಗೆ ಹಾಗೂ 8 ಮಂದಿ ಇತರ ಮೇಲ್ಜಾತಿಗಳಿಗೆ ಹೀಗೆ 60 ಶೇ. ಮಂದಿ ಮೇಲ್ಜಾತಿಗೆ ಸೇರಿದವರಾಗಿದ್ದರು. ನ್ಯಾಯಕ್ಕಾಗಿ ಸಮಾಜವು ಅವಲಂಬಿಸುವ ಅಂತಿಮ ತಾಣವಾದ ನ್ಯಾಯಾಂಗದಲ್ಲೇ ಇಷ್ಟು ದೊಡ್ಡ ಅನ್ಯಾಯ, ಇಷ್ಟು ದೊಡ್ಡ ಅಸಮತೋಲನ ಮೆರೆಯುತ್ತಿದ್ದರೆ ಇತರ ಕ್ಷೇತ್ರಗಳ ಕಥೆ ಏನು? ಇದರ ಅರ್ಥ ಇಷ್ಟೇ: ಎಲ್ಲ ಬಗೆಯ ಸರಕಾರೀ ಮೀಸಲಾತಿಗಳ ಹೊರತಾಗಿಯೂ 85 ಶೇ. ದಷ್ಟಿರುವ ಬಹುಜನರಿಗೆ ಐದರಲ್ಲಿ ಒಂದು ಪಾಲು ಮಾತ್ರ ಕೊಟ್ಟು ಉಳಿದ ನಾಲ್ಕು ಪಾಲುಗಳನ್ನು ಸೀಮಿತ ಸಂಖ್ಯೆಯ ಮೇಲ್ಜಾತಿಯವರಿಗೆ ಕೊಟ್ಟುಬಿಡುವ ವ್ಯವಸ್ಥೆ ಜಾರಿಯಲ್ಲಿದೆ. ಅಂದರೆ, ಶತಮಾನಗಳ ಹಿಂದಿನ ಪುರೋಹಿತಶಾಹಿ ಮೀಸಲಾತಿ ವ್ಯವಸ್ಥೆಯು, ಆಧುನಿಕ ಸರಕಾರಿ ಮೀಸಲಾತಿ ವ್ಯವಸ್ಥೆಯನ್ನು ಮತ್ತು ಅದರ ಹಿಂದಿರುವ ಸಾಮಾಜಿಕ ನ್ಯಾಯದ ಆಶಯವನ್ನು ಸಂಪೂರ್ಣ ಸೋಲಿಸಿದೆ. ಮೀಸಲಾತಿಯ ಫಲಾನುಭವಿಗಳು ಇಷ್ಟೊಂದು ವಂಚಿತ ಸ್ಥಿತಿಯಲ್ಲಿರುವಾಗ ದೇಶದಲ್ಲಿ ‘‘ಆರಕ್ಷನ್ ಹಟಾವೋ’’ ಎಂಬ ಮೀಸಲಾತಿ ವಿರೋಧಿ ಆಂದೋಲನ ನಡೆಯುತ್ತಿದೆ !
ನಮ್ಮಲ್ಲಿ ವ್ಯವಸ್ಥೆಯ ಜನವಿರೋಧಿ ಮುಖ ಮತ್ತು ಅಸಮಾನತೆಯ ಅತ್ಯಂತ ದೈತ್ಯ ರೂಪ ಕಾಣಿಸುತ್ತಿರುವುದು ಆರ್ಥಿಕ ಕ್ಷೇತ್ರದಲ್ಲಿ. 2024ರಲ್ಲಿ ಪ್ರಕಟವಾದ ‘ವರ್ಲ್ಡ್ ಇನಿಕ್ವಾಲಿಟಿ ಲ್ಯಾಬ್’ ವರದಿ ಪ್ರಕಾರ ಭಾರತದಲ್ಲಿರುವ ಬಿಲಿಯನೇರ್ ಗಳು ಅಥವಾ ಶತಕೋಟ್ಯಧಿ ಪತಿಗಳ ಪೈಕಿ 88.4 ಶೇ. ಮಂದಿ ಮೇಲ್ಜಾತಿಗಳಿಗೆ ಸೇರಿದವರು. ಅದೇ ಸಂಸ್ಥೆಯು ಈವರ್ಷ ಪ್ರಕಟಿಸಿರುವ ವರದಿಯನುಸಾರ ದೇಶದಲ್ಲಿ ರಾಷ್ಟ್ರೀಯ ಆದಾಯದ 58 ಶೇ. ಪಾಲು, ಮೇಲ್ವರ್ಗಕ್ಕೆ ಸೇರಿದ 10 ಶೇ. ಮಂದಿಯ ಮುಷ್ಟಿಯಲ್ಲಿದೆ. ಇಲ್ಲಿರುವ ಒಟ್ಟು ಸಂಪತ್ತಿನ 65 ಶೇ. ಪಾಲು ಕೂಡಾ ಅದೇ ಮೇಲ್ವರ್ಗದ ಮುಷ್ಟಿಯಲ್ಲಿದೆ. ಅವರಲ್ಲೂ ರಾಷ್ಟ್ರೀಯ ಸಂಪತ್ತಿನ 40 ಶೇ. ಪಾಲು ತುತ್ತ ತುದಿಯಲ್ಲಿರುವ ಮೇಲ್ವರ್ಗದ 1 ಶೇ. ಅತಿಶ್ರೀಮಂತರ ಕೈಯಲ್ಲಿದೆ. ಅದೇವೇಳೆ, ರಾಷ್ಟ್ರೀಯ ಆದಾಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದವರ ಪಾಲು 15 ಶೇ.ಕ್ಕೆ ಹಾಗೂ ರಾಷ್ಟ್ರೀಯ ಸಂಪತ್ತಿನಲ್ಲಿ ಅವರ ಪಾಲು ಕೇವಲ 5 ಶೇ. ಕ್ಕೆ ಸೀಮಿತವಾಗಿದೆ. ಇಲ್ಲಿ ನ್ಯಾಯ, ಸಮಾನತೆ, ಸಮಾಜವಾದ ಇತ್ಯಾದಿಗಳನ್ನೆಲ್ಲಾ ಸಂಪೂರ್ಣ ದಫನ ಮಾಡಲಾಗಿದೆ ಎಂಬುದಕ್ಕೆ ಬೇರಾವ ಪುರಾವೆ ಬೇಕು?
2024 ಮೇ ತಿಂಗಳಲ್ಲಿ ಇಂಡಿಯಾ ಟುಡೇ ತಂಡವೊಂದು ನಮ್ಮ ಪ್ರಧಾನಮಂತ್ರಿಯವರ ಸಂದರ್ಶನ ನಡೆಸಿತ್ತು. ಈ ವೇಳೆ ಸಂದರ್ಶಕರು (ಬಹುಶಃ ಅವರ ಪೂರ್ವಾನುಮತಿಯೊಂದಿಗೆ) ಅವರೊಡನೆ, ದೇಶದಲ್ಲಿ ಬಡವರ ಆದಾಯ ಕಡಿಮೆಯಾಗುತ್ತಿದೆ, ಶ್ರೀಮಂತರ ಆದಾಯ ಹೆಚ್ಚುತ್ತಿದೆ ಎಂಬ ದೂರು ಕೇಳಿ ಬರುತ್ತಿದೆಯಲ್ಲಾ? ಎಂದು ಕೇಳಿದ್ದರು. ಅದಕ್ಕುತ್ತರವಾಗಿ ಪ್ರಧಾನಿಯವರು ಹಾಗಾದರೆ ಎಲ್ಲರೂ ಬಡವರಾಗಿ ಬಿಡಬೇಕೇನು? ಎಲ್ಲರೂ ಬಡವರಾಗಿ ಬಿಟ್ಟರೆ ಮತ್ತೆ ಯಾವುದೇ ಅಂತರ ಉಳಿಯುವುದಿಲ್ಲ. ಹಿಂದೆ ನಮ್ಮ ದೇಶದಲ್ಲಿ ಅಂತಹದೇ ಪರಿಸ್ಥಿತಿ ಇತ್ತು ಎಂದಿದ್ದರು. ಪ್ರಸ್ತುತ ವಿಲಕ್ಷಣ ಉತ್ತರವು ನಿಜವಾಗಿ, ಸಂಪತ್ತು ಮತ್ತು ಆದಾಯ ರಂಗದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಇರುವ ಹಾಗೂ ಹೆಚ್ಚುತ್ತಿರುವ ಅಂತರ ಆಕಸ್ಮಿಕವೇನೂ ಅಲ್ಲ, ಅದು ಸರಕಾರದ ಧೋರಣೆಗನುಸಾರವಾಗಿಯೇ ಇದೆ, ಅದನ್ನು ಸರಿಪಡಿಸಲು ಸರಕಾರ ಏನಾದರೂ ಕ್ರಮ ಕೈಗೊಳ್ಳುತ್ತದೆಂದು ನೀವೆಂದೂ ನಿರೀಕ್ಷಿಸಬೇಡಿ ಎಂಬ ಅಧಿಕೃತ ಘೋಷಣೆಯಾಗಿತ್ತು.
ಸಮಾಜದಲ್ಲಿ ಅಪರಾಧಗಳು ಮತ್ತು ಅರಾಜಕತೆ ಮೆರೆಯುವುದನ್ನು ಕಂಡಾಗ ಜೆನ್ - ಝೀ ಯವರು ಅದರ ಪರಿಹಾರವನ್ನು ಸರಕಾರದಿಂದ ನಿರೀಕ್ಷಿಸುತ್ತಾರೆ. ಆದರೆ ಸರಕಾರದೆಡೆಗೆ ನೋಡಿದಾಗಲೆಲ್ಲಾ, ಅಪರಾಧಿಗಳೇ ಸರಕಾರವನ್ನು ನಡೆಸುತ್ತಿರುವ ದೃಶ್ಯ ಕಂಡು ಅವರು ದಂಗಾಗುತ್ತಾರೆ. ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ ದೇಶದಲ್ಲಿರುವ ಹಾಲಿ ಹಾಗೂ ಮಾಜಿ ಶಾಸಕರು ಮತ್ತು ಸಂಸದರ ವಿರುದ್ಧ 4,200 ಕ್ರಿಮಿನಲ್ ಮೊಕದ್ದಮೆಗಳು ವಿಚಾರಣೆಯ ಹಂತದಲ್ಲಿವೆ. ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ಸ್ವತಃ ಒದಗಿಸಿರುವ ಮಾಹಿತಿಯನುಸಾರ, ಸದ್ಯ ಲೋಕಸಭೆಯಲ್ಲಿರುವ ಸದಸ್ಯರ ಪೈಕಿ 46 ಶೇ. ಮಂದಿಯ ವಿರುದ್ಧ ಮತ್ತು ರಾಜ್ಯಸಭೆಯಲ್ಲಿನ 31 ಶೇ. ಸದಸ್ಯರ ವಿರುದ್ಧ ಕ್ರಿಮಿನಲ್ ಕೇಸುಗಳಿವೆ. 28 ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ 14 (50 ಶೇ.) ಮಂದಿಯ ವಿರುದ್ಧ ಕ್ರಿಮಿನಲ್ ಕೇಸುಗಳಿವೆ. ಕಳೆದ ವರ್ಷ ಮೇ ತಿಂಗಳ ಒಂದು ವರದಿಯನುಸಾರ, ಕೇಂದ್ರ ಸಂಪುಟದ 72 ಸಚಿವರ ಪೈಕಿ 29 (ಸುಮಾರು 40 ಶೇ.) ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆ ನಡೆಯುತ್ತಿರುವುದಾಗಿ ಸ್ವತಃ ಘೋಷಿಸಿದ್ದಾರೆ. ಬಿಹಾರ, ದಿಲ್ಲಿ, ಮಹಾರಾಷ್ಟ್ರ, ಪಂಜಾಬ್, ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ, ತಮಿಳುನಾಡು, ಕರ್ನಾಟಕ, ಪುದುಚೇರಿ, ಹಿಮಾಚಲ ಪ್ರದೇಶ ಎಂಬ 11 ರಾಜ್ಯಗಳ ವಿಶೇಷತೆ ಏನೆಂದರೆ ಇಲ್ಲಿನ ರಾಜ್ಯ ಸಚಿವ ಸಂಪುಟಗಳಲ್ಲಿರುವ 60 ಶೇ.ಕ್ಕೂ ಹೆಚ್ಚಿನ ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ.
ದೊಡ್ಡ ಬದಲಾವಣೆಯೊಂದಕ್ಕೆ ಕಾಲ ಪಕ್ವವಾಗಿದೆ ಮತ್ತು ಬದಲಾವಣೆ ಅನಿವಾರ್ಯವಾಗಿದೆ ಎಂಬುದಕ್ಕೆ ಇವೆಲ್ಲಾ ಕೇವಲ ಕೆಲವು ಸೂಚನೆಗಳು ಮಾತ್ರ. ನಮ್ಮ ವರ್ತಮಾನ ಸಮಾಜದ ಒಂದೊಂದು ಕ್ಷೇತ್ರದಲ್ಲೂ ಇಂತಹ ಸಾವಿರ ಸಾವಿರ ಸೂಚನೆಗಳು ತುಂಬಿ ತುಳುಕುತ್ತಿವೆ. ಎಕ್ಸ್ ಮತ್ತು ವೈ ಪೀಳಿಗೆಗಳು ಇದನ್ನೆಲ್ಲಾ ಅನುಭವಿಸಿಯೂ ಸಿಡಿದೇಳುವುದಕ್ಕೆ ಹಿಂಜರಿಯುತ್ತಿರುವುದನ್ನು ಕಾಣುತ್ತಾ ಬೇಸತ್ತಿದ್ದ ಝೀ ತಲೆಮಾರು ತಕ್ಷಣದ ಲಾಭ ನಷ್ಟಗಳ ಎಲ್ಲ ಲೆಕ್ಕಾಚಾರಗಳನ್ನು ಬದಿಗಿಟ್ಟು ಕಣಕ್ಕೆ ಬಂದಿದೆ. ನಿಜವಾಗಿ ಬದಲಾವಣೆಯ ದಿಕ್ಕಿನಲ್ಲಿ ಮುನ್ನಡೆಯುವುದಕ್ಕೆ ಬಹಳಷ್ಟು ಆತ್ಮವಿಶ್ವಾಸ ಮತ್ತು ಆಶಾವಾದ ಬೇಕಾಗುತ್ತದೆ. ಹಾಗೆಯೇ ಅದಕ್ಕೆ ದಕ್ಷ, ವಿಶ್ವಾಸಾರ್ಹ ಮತ್ತು ಪ್ರಾಮಾಣಿಕ ನಾಯಕತ್ವದ ಅಗತ್ಯವಿರುತ್ತದೆ. ಈಕಾರ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾಗಿದ್ದ ಪ್ರತಿಪಕ್ಷಗಳು, ವಿವಿಧ ಕ್ಷೇತ್ರಗಳಲ್ಲಿ ಜನತೆಯ ಆಶೋತ್ತರಗಳಿಗೆ ಬಲಿಷ್ಠ ಆಂದೋಲನದ ರೂಪ ಕೊಡಬೇಕಾಗಿದ್ದ ರಾಜಕೀಯೇತರ ಸಂಘ - ಸಂಸ್ಥೆಗಳು ಮತ್ತು ಪ್ರಧಾನ ಧಾರೆಯ ಮಾಧ್ಯಮಗಳು ದುರದೃಷ್ಟವಶಾತ್ ಇಂದು ಅಂತಹ ಸ್ಥಿತಿಯಲ್ಲಿಲ್ಲ. ಅವರೆಲ್ಲಾ ತಮ್ಮ ಬಗ್ಗೆ ಜನತೆಯಲ್ಲಿದ್ದ ಪರಂಪರಾಗತ ನಂಬಿಕೆ, ಗೌರವಗಳನ್ನೆಲ್ಲಾ ಕಳೆದುಕೊಂಡು ಹಲವು ಅಪಮಾನಾತ್ಮಕ ಬಿರುದುಗಳಿಗೆ ಪಾತ್ರರಾಗಿದ್ದಾರೆ. ಇಂತಹ ಕಾರ್ಗತ್ತಲಲ್ಲಿ ಎಲ್ಲಾದರೂ ಜಿರಳೆ ಜನತಾ ಪಕ್ಷದಂತಹ ಒಂದು ನಕ್ಷತ್ರ ಮಿನುಗಿದೊಡನೆ ಅದು ಎಲ್ಲರ ಗಮನ ಸೆಳೆಯುವುದು ಸಹಜ. ಜಿರಳೆ ದಂಡು ಜಂತರ್ ಮಂತರ್ ನಲ್ಲಿ ಪ್ರತ್ಯಕ್ಷವಾದ ಆರಂಭದಲ್ಲಿ, ಅದು ಎಲ್ಲ ಬಗೆಯ ಸಂದೇಹಗಳಿಗೆ ತುತ್ತಾಗಿದ್ದ ಒಂದು ನಿಗೂಢ ಗುಂಪಾಗಿತ್ತು. ಆದರೆ ಪ್ರತಿಭಾವಂತ, ಉತ್ಸಾಹಿ, ಸೃಜನಶೀಲ ಎಳೆಯರ ಆ ಬಳಗ ಅಲ್ಪಾವಧಿಯಲ್ಲಿ ಪ್ರದರ್ಶಿಸಿದ ಚೈತನ್ಯ, ಪ್ರಬುದ್ಧತೆ, ಹೊಸತನ, ಸ್ಥಿರತೆ ಮತ್ತು ಸಾಹಸವು ನಿರಾಶ ಸಮಾಜದಲ್ಲಿ ಆಶಾವಾದವನ್ನು ಚಿಗುರಿಸಿದೆ. ಜಿರಳೆ ಆಂದೋಲನವು ಸಾಧಿಸಿದ ಯಶಸ್ಸು ಸಮಾಜದ ದೊಡ್ಡ ನಿರಾಶ ವರ್ಗವೊಂದರಲ್ಲಿ ಆತ್ಮ ವಿಶ್ವಾಸವನ್ನು ಬಿತ್ತಿದೆ.
ಯಾವುದೇ ರಾಜಕೀಯ ಪಕ್ಷದ ಹಂಗಿನಿಂದ ಮಾತ್ರವಲ್ಲ ರಾಜಕೀಯ ಅನುಭವಗಳ ಭಾರದಿಂದಲೂ ಮುಕ್ತವಾಗಿರುವ ಜಿರಳೆ ದಂಡಿನ ಸದ್ಯದ ಅಜೆಂಡಾ ಸದ್ಯ ತೀರಾ ಸೀಮಿತವಾಗಿದೆ. ಶಿಥಿಲವಾಗಿರುವ ನೂರಾರು ಕ್ಷೇತ್ರಗಳ ಪೈಕಿ ಶಿಕ್ಷಣ ಎಂಬ ಕೇವಲ ಒಂದು ಕ್ಷೇತ್ರವನ್ನು ಆರಿಸಿಕೊಂಡು, ಆಕ್ಷೇತ್ರದ ಸಾವಿರ ಸಮಸ್ಯೆಗಳ ಪೈಕಿ ಕೇವಲ ಕೆಲವು ಆಯ್ದ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಅದು ರಂಗಕ್ಕೆ ಬಂತು. ಆ ದಂಡಿನಲ್ಲಿ ದೇಶದ ಝೀ- ಪೀಳಿಗೆ ತನ್ನ ಪ್ರತಿನಿಧಿಯನ್ನು ಕಂಡಿದೆ. ಇದೀಗ ಆ ದಂಡು ಹಚ್ಚಿದ ಕಿಚ್ಚು ಜಂತರ್ ಮಂತರ್ ನಿಂದ ಆಚೆ ದೇಶದ ವಿವಿಧೆಡೆ ತನ್ನ ಉಪಸ್ಥಿತಿಯನ್ನು ಮೆರೆಯುತ್ತಿದೆ. ಹಿರಿಯರಿಂದ ಮಾರ್ಗದರ್ಶನಕ್ಕಾಗಿ ಕಾಯುತ್ತಿದ್ದವರು ಹಿರಿಯರಿಗೆ ಮಾರ್ಗದರ್ಶಿಗಳಾಗಿ ಬಿಟ್ಟಿದ್ದಾರೆ. ಪರಸ್ಪರ ಸಂಬಂಧವೇ ಇಲ್ಲದ ವಿವಿಧ ವಲಯಗಳು ಅವರಿಂದ ಸ್ಫೂರ್ತಿ ಪಡೆದು ಪರಿವರ್ತನೆಯ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿವೆ. ಬಹುಕಾಲದಿಂದ ನಿಸ್ತೇಜವಾಗಿದ್ದ ವಿವಿಧ ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲೂ ಹೊಸ ಚೈತನ್ಯ ಮೂಡಿದೆ. ಮೋದಿ ಹೆಚ್ಚೆಚ್ಚು ತೊದಲತೊಡಗಿದ್ದಾರೆ. ಅಮಿತ್ ಶಾ ಮುಖ ಮುಚ್ಚಿಕೊಂಡು ಅಡಗತೊಡಗಿದ್ದಾರೆ. ರಾಹುಲ್, ಅಖಿಲೇಶ್, ಉವೈಸಿ ಮುಂತಾದ ನಾಯಕರ ಮಾತಿನ ಧಾಟಿಯಲ್ಲಿ ಹೊಸ ಮಟ್ಟದ ದಿಟ್ಟತನ ಕಾಣಿಸುತ್ತಿದೆ.
ಹಾಗೆಂದು, ಜಿರಳೆ ದಂಡಿನ ಮೂಲಕವೇ ಎಲ್ಲವೂ ಬದಲಾಗಿ ಬಿಡುತ್ತದೆಂದು ನಿರೀಕ್ಷಿಸುವುದು ಖಂಡಿತ ಜಾಣತನವಲ್ಲ. ಜಿರಳೆ ದಂಡು ಸಮಾಜದ ಹೊಸಪೀಳಿಗೆಯ ಆಕ್ರೋಶ ಮತ್ತು ಆಶೋತ್ತರಗಳ ಒಂದು ಪುಟ್ಟ, ಸೀಮಿತ ಸಂಕೇತ ಮಾತ್ರ. ಶಿಕ್ಷಣ ಕ್ಷೇತ್ರದಿಂದ ಆರಂಭವಾದ ಪರಿವರ್ತನೆಯ ಈ ಪುಟ್ಟ ಆಶಾದಾಯಕ ಅಲೆಯು ಉಳಿದೆಲ್ಲ ಕ್ಷೇತ್ರಗಳಿಗೆ ತನ್ನನ್ನು ವಿಸ್ತರಿಸಿಕೊಂಡು ಎಲ್ಲ ಸಂತ್ರಸ್ತ ವಲಯಗಳು ಪರಿವರ್ತನೆಗೆ ಆಗ್ರಹಿಸಿ ರಂಗಕ್ಕಿಳಿಯುವುದಕ್ಕೆ ಪ್ರೇರಣೆಯಾಗಬೇಕು. ಸಮಗ್ರ ಸಮಾಜಕ್ಕೆ ತುರ್ತಾಗಿ ಬೇಕಿರುವ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ನ್ಯಾಯದಂತಹ ಮೂಲಭೂತ ಅಗತ್ಯಗಳನ್ನು ಈಡೇರಿಸುವ ವಿಶಾಲ ಗುರಿಯನ್ನು ತನ್ನದಾಗಿಸಿಕೊಂಡು ಸಮಗ್ರ ಆಂದೋಲನದ ರೂಪ ತಾಳಬೇಕಾಗಿದೆ. ಹಾಗಾದಾಗ ಮಾತ್ರ, ಅನೌಪಚಾರಿಕವಾಗಿ ಆರಂಭವಾಗಿರುವ ಈ ಚಲನೆಯು ಮುಂದಿನ ದಿನಗಳಲ್ಲಿ ಅಪೇಕ್ಷಿತ ಬದಲಾವಣೆಗಳ ದೀರ್ಘ ಸರಣಿಗೆ ಚಾಲನೆ ನೀಡಬಹುದು. ಪುರೋಹಿತಶಾಹಿ ಮತ್ತು ಕುಬೇರಶಾಹಿಯ ಕೋಟೆ ಕುಸಿಯಬಹುದು.