ಯುವಜನರು ಮಾತನಾಡುತ್ತಿದ್ದಾರೆ
ಸಾಂದರ್ಭಿಕ ಚಿತ್ರ Photo Credit : PTI
ಸರಕಾರಿ ಶಾಲೆಗಳ ಬಗ್ಗೆ ಯುವ ಜನರು ಮಾತನಾಡುತ್ತಿರುವುದು ದೇಶದ ಪಾಲಿಗೆ ನಿಜಕ್ಕೂ ಹೊಸತು. ದೇಶಾದ್ಯಂತ ಸಹಸ್ರಾರು ಸರಕಾರಿ ಶಾಲೆಗಳು ಒಂದರ ಹಿಂದೆ ಒಂದರಂತೆ ಮುಚ್ಚುತ್ತಿರುವುದರ ಬಗ್ಗೆ ಶಿಕ್ಷಣ ತಜ್ಞರು ತಮ್ಮ ಕಳವಳನ್ನು ವ್ಯಕ್ತಪಡಿಸುತ್ತಲೇ ಇದ್ದರು. ಆದರೆ ಸರಕಾರ ಜಾಣ ಕಿವುಡನಂತೆ ವರ್ತಿಸುತ್ತಾ ಬಂದಿದೆ. ಇದೀಗ ಮೊದಲ ಬಾರಿಗೆ, ಯುವಜನರು ಸರಕಾರಿ ಶಾಲೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಜೆನ್‌ಝಿಗಳು ಹಮ್ಮಿಕೊಂಡಿರುವ ಸರಕಾರಿ ಶಾಲೆ ಉಳಿಸಿ ಆಂದೋಲನ ಆಳುವವರನ್ನು ಬೆಚ್ಚಿ ಬೀಳಿಸಿದೆ. ಯುವ ತಲೆಮಾರು ದೇಶದ ಭವಿಷ್ಯದ ಬಗ್ಗೆ ಮಾತನಾಡುತ್ತಿರುವುದು, ದೇಶದ ಮೇಲಿನ ಕಾಳಜಿಯಿಂದ ಬೀದಿಗಿಳಿಯುತ್ತಿರುವುದು ಆಳುವವರಿಗೆ ತಲೆನೋವು ತಂದಿದೆ. ಜೆನ್ ಝಿ ಬೆನ್ನಿಗೇ ಇದೀಗ ಜೆನ್ ಆಲ್ಫಾ ಕೂಡ ದೇಶದ ಬಗ್ಗೆ ಮಾತನಾಡತೊಡಗಿದೆ.
ಪ್ರಜಾತಂತ್ರವು ಹೊರಳುದಾರಿಗೆ ತಲುಪಿದಾಗ ಅದನ್ನು ಮತ್ತೆ ಸರಿದಾರಿಗೆ ತರುವ ಜವಾಬ್ದಾರಿ ಯಾರದು? ನೀಟ್ ಪರೀಕ್ಷೆಯ ಅವ್ಯವಹಾರಗಳ ಹಿನ್ನೆಲೆಯಲ್ಲಿ ಆರಂಭವಾದ ಯುವಜನರ ಪ್ರತಿಭಟನೆ, ಅದರ ಪರಿಣಾಮವಾಗಿ ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನರ ರಾಜೀನಾಮೆ ಮತ್ತು ಆ ನಂತರ ಎಚ್ಚರಗೊಂಡ ಆಳುವ ಪಕ್ಷದ ನಾಯಕರು ಯುವಜನರ ಭವಿಷ್ಯದ ಬಗ್ಗೆ ತೋರಿಸುವ ಆಸಕ್ತಿ ಈ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ.
2024ರ ಲೋಕಸಭೆಯ ಚುನಾವಣೆಯಲ್ಲಿ ನಿರೀಕ್ಷೆಯು ಹುಸಿಯಾಗಿ ಭಾರತೀಯ ಜನತಾ ಪಕ್ಷ (ಭಾಜಪ)ಕ್ಕೆ ಪೂರ್ಣ ಬಹುಮತ ಸಿಗದೆ ಪ್ರಾದೇಶಿಕ ಪಕ್ಷಗಳ ಬೆಂಬಲದಿಂದ ಮೂರನೆಯ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿಯವರು ತಮ್ಮ ಅಧಿಕಾರವನ್ನು ಭದ್ರಗೊಳಿಸಲು ವಿಭಿನ್ನ ದಾರಿಗಳನ್ನು ಬಳಸಿಕೊಂಡರು. ಸಂಸತ್ತು, ನ್ಯಾಯಾಂಗ ಮತ್ತು ಚುನಾವಣಾ ಆಯೋಗಗಳನ್ನು ದುರ್ಬಲಗೊಳಿಸಿ, ಪ್ರಾದೇಶಿಕ ಪಕ್ಷಗಳನ್ನು ವಿಭಜಿಸಿ ತಮ್ಮ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಬಳಿ ಸೆಳೆದುಕೊಂಡರು. ಮೋದಿಯವರ ವ್ಯಕ್ತಿ ಕೇಂದ್ರೀಕೃತ ಆಡಳಿತವು ಭದ್ರವಾಗುತ್ತಿದ್ದಂತೆ ಪ್ರಜಾಸತ್ತೆಯ ಕಂಬಗಳು ದುರ್ಬಲಗೊಂಡವು. ತಮ್ಮತಮ್ಮದೇ ಅಜೆಂಡಾ ಮತ್ತು ಆಂತರಿಕ ಸಮಸ್ಯೆಗಳಿಂದಾಗಿ ವಿರೋಧ ಪಕ್ಷಗಳು ಸಂಸತ್ತಿನಲ್ಲಿಯೂ ಅದರ ಹೊರಗೂ ಸರಕಾರವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಲಿಲ್ಲ.
ಈ ಸನ್ನಿವೇಶದಲ್ಲಿ ಅನಿರೀಕ್ಷಿತವಾಗಿ ದೇಶದ ಯುವಜನರು ಜುಲೈ ತಿಂಗಳಲ್ಲಿ ಬೀದಿಗಿಳಿದು ತಮ್ಮ ಪ್ರತಿಭಟನೆಗಳ ಮೂಲಕ ಎಚ್ಚರಿಕೆಯ ಸಂದೇಶವನ್ನು ಎನ್‌ಡಿಎ ಸರಕಾರಕ್ಕೆ ನೀಡಿದ್ದಾರೆ. ಈ ಯುವಜನತೆಗೆ ಯಾವುದೇ ಸಂಘಶಕ್ತಿ, ಸಂಪನ್ಮೂಲಗಳು, ಅನುಭವಿ ನಾಯಕರು ಇರಲಿಲ್ಲ. ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ಅವರು ನಿರುದ್ಯೋಗಿ ಯುವಕರನ್ನು ಕಾಕ್ರೋಚ್ (ಜಿರಳೆ) ಎಂದು ಟೀಕಿಸಿದ್ದರ ವಿರುದ್ಧ ಅದೇ ಹೆಸರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಎಂದು ಕರೆದುಕೊಂಡು ಪ್ರತಿಭಟನೆಗೆ ಮುಂದಾದ ಚಳವಳಿಯ ನಾಯಕರು ರಾಜಕೀಯಕ್ಕೆ ಹೊಸಬರು.
ಇಂಗ್ಲಿಷ್ ಭಾಷೆಯಲ್ಲಿ ಜೆನ್ ಝಿ ಎಂದು ಕರೆಯಲ್ಪಡುವ ಸುಮಾರು 14ರಿಂದ 29 ವರ್ಷ ವಯಸ್ಸಿನ ಅಂದರೆ 1997 ಮತ್ತು 2012ರ ಅವಧಿಯಲ್ಲಿ ಜನಿಸಿದ ಈ ಯುವಕರು ಮತ್ತು ಯುವತಿಯರಿಗೆ ಯಾವುದೇ ಪಕ್ಷಗಳ ಕಟ್ಟುಪಾಡುಗಳಿಲ್ಲ. ಭಾಷೆ, ಜಾತಿ, ಧರ್ಮ, ಬಡವ-ಬಲ್ಲಿದ ಸ್ತ್ರೀ-ಪುರುಷರೆಂಬ ಮನುಷ್ಯ ನಿರ್ಮಿತ ಚೌಕಟ್ಟುಗಳಿಂದ ಹೊರಬಂದು ಒಂದು ನಿರ್ದಿಷ್ಟ ಉದ್ದೇಶದ ಸಾಧನೆಯನ್ನು ಗುರಿಯಾಗಿಟ್ಟು ಒಟ್ಟು ಸೇರಿದವರು. ಸಮಷ್ಟಿಯ ಹಿತ ಅವರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿತು.
ಉಡುಗೆ ತೊಡುಗೆ, ವರ್ತನೆ, ಭಾಷೆಯ ಬಳಕೆ, ಆಹಾರ ಪದ್ಧತಿ ಹೀಗೆ ಪ್ರತಿಯೊಂದರಲ್ಲಿಯೂ ತಮ್ಮದೇ ನಡೆಯನ್ನು ಅನುಸರಿಸುವ ಹೊಸ ಪೀಳಿಗೆಯವರ ಪ್ರತಿಭಟನೆಯ ಮಾದರಿಯೂ ವಿಶಿಷ್ಟವೇ. ಕೈಬರಹದ ಭಿತ್ತಿಪತ್ರಗಳು, ವ್ಯಂಗ್ಯ ಚಿತ್ರಗಳು, ನಗು ಬರಿಸುವ ವೀಡಿಯೊಗಳು(Memes), ವಿಶಿಷ್ಟ ಘೋಷಣೆಗಳು, ಅಣಕುವೇಷಗಳು, ಕೆಲವೊಮ್ಮೆ ವೈಯಕ್ತಿಕ ನೆಲೆಯಲ್ಲಿ ಬಳಸುವ ಸಾರ್ವಜನಿಕವಾಗಿ ಅಸಭ್ಯವೆನಿಸುವ ಪದಗಳ ಪ್ರಯೋಗ (ಪ್ರಧಾನಿಯವರಿಗೆ ಸಾಂಸ್ಕೃತಿಕ ಆಘಾತವನ್ನು ಉಂಟುಮಾಡಿದ ಪದಪ್ರಯೋಗಗಳು!) ಜಂತರ್ ಮಂತರ್ ಪ್ರತಿಭಟನೆಯಲ್ಲಿ ಸರ್ವೇ ಸಾಮಾನ್ಯವಾಗಿದ್ದವು. ಇವುಗಳ ಜೊತೆಗೆ ತಾವು ಅನುಸರಿಸಿದ (ಗಾಂಧೀಜಿಯವರು ಹಾಕಿಕೊಟ್ಟ) ಅಹಿಂಸಾ ಮಾರ್ಗವು ಎಂದಿಗೂ ಪ್ರಸ್ತುತವೆಂಬುದನ್ನು ಈ ಪೀಳಿಗೆಯವರು ತೋರಿಸಿಕೊಟ್ಟರು.
ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದ ಯುವಕರ ಸೊಲ್ಲನ್ನು ಅಡಗಿಸಲು ದಿಲ್ಲಿಯ ಪೊಲೀಸರು ಬಲಪ್ರಯೋಗ ಮಾಡಿ ಪ್ರತಿಭಟನೆಯ ಕಾವು ತೀವ್ರವಾಗುವಂತೆ ಮಾಡಿದರು. ತಮ್ಮ ಮಂತ್ರಿಗಳು ರಾಜೀನಾಮೆ ಕೊಡುವ ಪರಿಪಾಠವಿಲ್ಲ ಎಂದು ಹೇಳುತ್ತಿದ್ದ ಭಾಜಪವು ತನ್ನ ಹಿರಿಯ ಮಂತ್ರಿಯೊಬ್ಬರ ತಲೆದಂಡ ನೀಡಬೇಕಾಗಿ ಬಂತು.
ಈ ಬೆಳವಣಿಗೆಯ ಬೆನ್ನಲ್ಲೇ ದೇಶದ ಹಲವೆಡೆ ವಿಭಿನ್ನ ರೂಪದಲ್ಲಿ ಆಳುವ ಪಕ್ಷದ ನೀತಿಗಳಿಂದ ಜನಸಾಮಾನ್ಯರ ಮೇಲೆ ಆಗುತ್ತಿರುವ ಸಂಕಟಗಳ ವಿರುದ್ಧ ಧ್ವನಿಗಳು ಎದ್ದಿವೆ. ಭಾಜಪ ಸರಕಾರವು ಹರಡಿಸುತ್ತಿದ್ದ ಭಯದ ವಾತಾವರಣ ಕರಗಿದೆ. ಬಿಜೆಪಿಯು 12 ವರ್ಷಗಳಿಂದ ಜಪಿಸುತ್ತಿದ್ದ ಹಿಂದೂ-ಮುಸ್ಲಿಮ್-ಆತಂಕವಾದ-ರಾಷ್ಟ್ರಭಕ್ತಿ-ಸನಾತನ ಸಂಸ್ಕೃತಿ ಮುಂತಾದ ವಿಷಯಗಳು ಹಳಸಿವೆ. ಯುವಜನರನ್ನು ತಮ್ಮ ಬಳಿ ಸೆಳೆಯಲು ಪ್ರಧಾನಿ ಮೋದಿ ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. ಅದರ ಜೊತೆಗೆ ಸರಕಾರದ ನೀತಿಗಳನ್ನು ಪ್ರಶ್ನಿಸುವವರನ್ನು ‘ದಿಮಾಗಿ ನಕ್ಸಲ್’ (ವೈಚಾರಿಕ ನಕ್ಸಲರು) ಎಂದೂ ಅವಹೇಳನ ಮಾಡಿದ್ದಾರೆ.
ಮೇಲ್ನೋಟಕ್ಕೆ ನೀಟ್ ಪರೀಕ್ಷೆಗಳ ಅವ್ಯವಹಾರಗಳು ಪ್ರತಿಭಟನೆಗೆ ಕಾರಣವಾದರೂ ಭಾಜಪ ಸರಕಾರದ ಸುದೀರ್ಘ ಅಧಿಕಾರಾವಧಿಯಲ್ಲಿ ಸಂಭವಿಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ತಲ್ಲಣಗಳು ಯುವಜನರನ್ನು ಹತಾಶರನ್ನಾಗಿ ಮಾಡಿದಂತೆ ತೋರುತ್ತಿದೆ. ನಿರಂತರ ಉದ್ಯೋಗ ನಷ್ಟ, ಹೊಸ ಉದ್ಯೋಗಗಳ ಕೊರತೆ, ಬೆಲೆ ಏರಿಕೆ, ಹೆಚ್ಚುತ್ತಿರುವ ಬಡತನ ಹಾಗೂ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯಗಳು ಯುವಜನತೆಯ ಗಮನಕ್ಕೆ ಬಾರದಿರುತ್ತದೆಯೇ?
ಈ ದೃಷ್ಟಿಯಿಂದ ಜೆನ್ ಝಿಗಳು ದೇಶದ ರಾಜಕೀಯದಲ್ಲಿ ಹೊಸ ಸಂಚಲನೆಗೆ ಬುನಾದಿ ಹಾಡಿದ್ದಾರೆ. ಶಿಕ್ಷಣ ಮಂತ್ರಿಯ ರಾಜೀನಾಮೆ ಸಣ್ಣ ಹೆಜ್ಜೆ; ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಸುಧಾರಣೆಗಳು ಬಹಳಷ್ಟು ಇವೆ ಎಂದು ಸಿಜೆಪಿಯ ನಾಯಕರು ಹೇಳಿದ್ದಾರೆ. ಸರಕಾರವು ಕೊಟ್ಟ ಮಾತುಗಳನ್ನು ಉಳಿಸಿಲ್ಲ ಎಂದು ಸೆಪ್ಟಂಬರ್ 5ರಿಂದ ಮತ್ತೆ ಆಂದೋಲನಕ್ಕೆ ತೊಡಗುವ ಸೂಚನೆಯನ್ನು ಕೊಟ್ಟಿದ್ದಾರೆ.
ಯುವಜನರ ಪ್ರತಿಭಟನೆಯಲ್ಲಿ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಗೂ ಪಾಠಗಳಿವೆ. ಅವುಗಳು ತಳಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಸ್ಪಂದಿಸಬೇಕು. ಅವರ ಆಶೋತ್ತರಗಳನ್ನು ಎಲ್ಲಾ ವೇದಿಕೆಗಳಲ್ಲಿಯೂ ಮುನ್ನೆಲೆಗೆ ತರಬೇಕು. ವೈಯಕ್ತಿಕ ಅಜೆಂಡಾಗಳನ್ನು ಬದಿಗಿರಿಸಿ ಜನಸಾಮಾನ್ಯರ ಸಂಕಟಗಳ ಬಗ್ಗೆ ನಿರಂತರ ಧ್ವನಿಯನ್ನು ಏರಿಸುವ ತುರ್ತು ದೇಶದ ಮುಂದಿದೆ.
ಮೋದಿಯವರ 12 ವರ್ಷಗಳ ಅಧಿಕಾರಾವಧಿಯಲ್ಲಿ ಎರಡನೆಯ ಬಾರಿ ಅವರ ಗರ್ವಭಂಗವಾಗಿದೆ. ಹಿಂದೆ 2020-21ರಲ್ಲಿ ಆದ ರೈತರ ಪ್ರತಿಭಟನೆ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಿತ್ತು. ಈಗ ಯುವಜನತೆಯ ಶಾಂತಿಯುತ ಪ್ರತಿಭಟನೆಗಳು ದೇಶದ ಪ್ರಜಾಸತ್ತೆಯು ಇನ್ನೂ ಜೀವಂತವಿದೆ ಎಂಬುದನ್ನು ಎತ್ತಿ ತೋರಿಸಿದೆ. ಈ ಬೆಳವಣಿಗೆಯು ದೇಶದ ಭವಿಷ್ಯದ ದೃಷ್ಟಿಯಿಂದ ಸ್ವಾಗತಾರ್ಹ.