ಸರಕಾರ ನೈತಿಕ ಹೊಣೆ ಹೊತ್ತುಕೊಳ್ಳಲಿ
Photo: screengrab/x.com/Narendramodi/NewsArenaIndia
ಮಧ್ಯ ರಾತ್ರಿ ಏಕಾಏಕಿ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಕಾಣಿಸಿಕೊಂಡು ಪ್ರಧಾನಿ ಮೋದಿಯವರು ದೇಶಕ್ಕೆ ನೀಡಿದ ಭರವಸೆ, ಅದರ ಬೆನ್ನಿಗೇ ಸೋನಂ ವಾಂಗ್ಚುಕ್ ಅವರು ಉಪವಾಸವನ್ನು ಕೊನೆಗೊಳಿಸಿರುವುದು ಆಕಸ್ಮಿಕವಲ್ಲ. ನೀಟ್ ಪರೀಕ್ಷೆ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಮತ್ತು ಯುವಜನರ ಪ್ರತಿಭಟನೆಯು ಜ್ವಾಲೆಯಂತೆ ದೇಶಾದ್ಯಂತ ವಿಸ್ತರಿಸುವುದು ಕಂಡು ಪ್ರಧಾನಿ ಮೋದಿ ಏಕಾಏಕಿ ಎಚ್ಚೆತ್ತುಕೊಂಡಿದ್ದಾರೆ. ‘ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ತ್ವರಿತಗತಿ ನ್ಯಾಯಾಲಯವನ್ನು ರಚಿಸಲಿದ್ದೇವೆ’’ ಎನ್ನುವ ಭರವಸೆಯ ಮೂಲಕ ದೇಶದ ಯುವಜನತೆಯನ್ನು ಏಮಾರಿಸುವ ಪ್ರಯತ್ನವನ್ನು ಅವರು ಮೊದಲು ಮಾಡಿದರು. ಆದರೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಪ್ರತಿಭಟನಾ ನಿರತರು ಘೋಷಿಸುತ್ತಿದ್ದಂತೆಯೇ ಪ್ರಧಾನಿ ಮೋದಿಯವರು ಮಧ್ಯರಾತ್ರಿ ತನ್ನ ಮುಖವನ್ನು ವೀಡಿಯೊ ಕಾನ್ಫರೆನ್ಸ್‌ನಲ್ಲಿ ಮತ್ತೆ ತೋರಿಸಿಕೊಂಡಿದ್ದಾರೆ ಮತ್ತು ಗುರುವಾರ ನೀಡಿದ ಹೇಳಿಕೆಯನ್ನೇ ತಿರುವು ಮುರುವು ಮಾಡಿ ಮತ್ತೊಮ್ಮೆ ಜನರ ಮುಂದಿಟ್ಟಿದ್ದಾರೆ. ಹೀಗೆ ಪ್ರಧಾನಿ ನೀಡಿದ ಹೇಳಿಕೆಗೆ ತೃಪ್ತರಾದವರಂತೆ, ಇತ್ತ ಸೋನಂ ವಾಂಗ್ಚುಕ್ ಅವರು ತಮ್ಮ ಉಪವಾಸವನ್ನು ತೊರೆದಿದ್ದಾರೆ. ಸೋನಂ ವಾಂಗ್ಚುಕ್ ಉಪವಾಸ ತೊರೆಯುವುದರೊಂದಿಗೆ ವಿದ್ಯಾರ್ಥಿಗಳ ಹೋರಾಟದ ಉತ್ಸಾಹವೂ ಕುಗ್ಗುತ್ತದೆ ಎಂದು ಕೇಂದ್ರ ಸರಕಾರ ಭಾವಿಸಿತ್ತು. ಆದರೆ, ಪ್ರಧಾನಿಯ ವೀಡಿಯೊ ಕಾನ್ಫರೆನ್ಸ್‌ನ
ಪ್ರಹಸನಕ್ಕೆ ಮಣಿಯದೆ ವಿದ್ಯಾರ್ಥಿಗಳ ಹೋರಾಟ ರಾಜ್ಯದಿಂದ ರಾಜ್ಯಗಳಿಗೆ ವಿಸ್ತರಿಸುತ್ತಾ ಇನ್ನಷ್ಟು ತೀವ್ರವಾಗುತ್ತಿದೆ. ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯಗಳೂ ಇದೀಗ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಿದ್ದು, ಇದರ ವಿರುದ್ಧನಾಡಿನ ಬೇರೆ ಬೇರೆ ಕ್ಷೇತ್ರಗಳ ಗಣ್ಯರಿಂದ ಆಕ್ರೋಶ ಕೇಳಿ ಬರುತ್ತಿದೆ. ಸರಕಾರ ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಕೈ ಮೀರುತ್ತಿರುವುದು ಸರಕಾರದ ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸೋನಂ ವಾಂಗ್ಚುಕ್ ಅವರ ಮೇಲೆ ಒತ್ತಡಗಳನ್ನು ಹೇರಿ ಅವರನ್ನು ಉಪವಾಸ ತೊರೆಯುವಂತೆ ಮಾಡುವುದರಲ್ಲಿ ಸರಕಾರ ಯಶಸ್ವಿಯಾಗಿದೆ.
ಮುಖ್ಯವಾಗಿ ಈವರೆಗೆ ಸೋನಂ ವಾಂಗ್ಚುಕ್ ಅವರನ್ನು ದೇಶದ್ರೋಹಿಯೆಂದು, ವಿದೇಶಿ ಹಿತಾಸಕ್ತಿಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆಂದು, ಅವರು ವಿಜ್ಞಾನಿ ಅಲ್ಲವೇ ಅಲ್ಲ ಎಂದು ಟೀಕಿಸುತ್ತಿದ್ದ ಸರಕಾರವೇ ಮುಂದೆ ನಿಂತು ಉಪವಾಸವನ್ನು ತೊರೆಯುವಂತೆ ಮಾಡಿದೆ. ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರ ಸಮ್ಮುಖದಲ್ಲಿ ಅವರು ಉಪವಾಸ ತೊರೆದಿದ್ದಾರೆ. ಅಷ್ಟೇ ಅಲ್ಲ, ಅದಕ್ಕಾಗಿ ಪ್ರಧಾನಿ ಮೋದಿಯವರು ಸೋನಂ ಅವರನ್ನು ಅಭಿನಂದಿಸಿದ್ದಾರೆ. ಅವರಿಗೆ ಶುಭಹಾರೈಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳ ಕುರಿತು ಕೇಂದ್ರ ಸರಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಸೋನಂ ಬರೆದುಕೊಂಡಿದ್ದಾರೆ. ಆದರೆ ಕೇಂದ್ರ ಸರಕಾರ ವಿದ್ಯಾರ್ಥಿಗಳ ಯಾವ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ ಎನ್ನುವುದನ್ನು ಅವರು ಸ್ಪಷ್ಟ ಪಡಿಸಿಲ್ಲ. ಕೇಂದ್ರ ಸಚಿವರ ರಾಜೀನಾಮೆ, ನೀಟ್ ಅಕ್ರಮಗಳ ತನಿಖೆ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿತ್ತು. ಆದರೆ ಅವರೆಡನ್ನೂ ಈಡೇರಿಸುವ ಬಗ್ಗೆ ಈವರೆಗೆ ಪ್ರಧಾನಿ ಮೋದಿ ಯಾವ ಭರವಸೆಯನ್ನೂ ನೀಡಿಲ್ಲ. ಇದೇ ಸಂದರ್ಭದಲ್ಲಿ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಮೊಕದ್ದಮೆಗಳನ್ನು ವಾಪಸ್ ಪಡೆದರೆ ಉಪವಾಸ ಹಿಂದೆಗೆಯುತ್ತೇನೆ ಎಂದು ಅವರು ಹೇಳಿಕೆ ನೀಡಿದ್ದರು. ಈ ಬಗ್ಗೆ ಕೇಂದ್ರ ಸರಕಾರ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆಯೂ ಸ್ಪಷ್ಟತೆಯಿಲ್ಲ. ಆರೋಗ್ಯದ ದೃಷ್ಟಿಯಿಂದ ಸೋನಂ ಉಪವಾಸ ತೊರೆದಿರುವುದು ಸ್ವಾಗತಾರ್ಹ. ಇದೇ ಸಂದರ್ಭದಲ್ಲಿ ಪ್ರತಿಭಟನೆಯ ಜೊತೆಗೆ ಮುಂದೆಯೂ ಇರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಸೋನಂ ವಾಂಗ್ಚುಕ್ ಉಪವಾಸ ತೊರೆದಿರುವುದನ್ನು ವಿದ್ಯಾರ್ಥಿ ಯುವ ನಾಯಕರೂ ಸ್ವಾಗತಿಸಿದ್ದಾರೆ. ಈ ಪ್ರತಿಭಟನೆ ಸೋನಂ ವಾಂಗ್ಚುಕ್ ನೇತೃತ್ವದಲ್ಲಿ ನಡೆಯುತ್ತಿಲ್ಲ, ಈ ದೇಶದ ಸಾವಿರಾರು ಜನರು ಬೆಂಬಲ ನೀಡಿದಂತೆಯೇ ಅವರೂ ತಮ್ಮ ಬೆಂಬಲವನ್ನು ಹೋರಾಟಕ್ಕೆ ನೀಡಿದ್ದಾರೆ. ಅವರು ಉಪವಾಸ ತ್ಯಜಿಸುವುದರೊಂದಿಗೆ ಹೋರಾಟ ನಿಲ್ಲುವುದಿಲ್ಲ ಎನ್ನುವುದನ್ನು ಸಿಜೆಪಿ ಮುಖಂಡರು ಪರೋಕ್ಷವಾಗಿ ಸ್ಪಷ್ಟ ಪಡಿಸಿದ್ದಾರೆ. ಹೋರಾಟಕ್ಕೆ ನೀಡಿದ ಸಹಕಾರಕ್ಕಾಗಿ ಸೋನಂ ವಾಂಗ್ಚುಕ್‌ಗೆ ಕೃತಜ್ಞತೆ ಹೇಳಿರುವ ಸಿಜೆಪಿ ಮುಖಂಡ, ಬೇಡಿಕೆ ಈಡೇರುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ಈ ಹಿಂದೆ ಅಣ್ಣ್ಣಾ ಹಝಾರೆಯನ್ನು ಆರೆಸ್ಸೆಸ್ ಮತ್ತು ಬಿಜೆಪಿ ಬಳಸಿಕೊಂಡಂತೆ ಈ ಬಾರಿ ವಾಂಗ್ಚುಕ್‌ರನ್ನು ಬಳಸಿಕೊಳ್ಳಲು ಮೋದಿ ಮಾಡಿದ ಪ್ರಯತ್ನ ಈ ಮೂಲಕ ವಿಫಲವಾಗಿದೆ. ಶುಕ್ರವಾರ ನೀಟ್ ಅಕ್ರಮದ ವಿರುದ್ಧ ಬೇರೆ ಬೇರೆ ರಾಜ್ಯಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿವೆ. ಈ ಎಲ್ಲ ಪ್ರತಿಭಟನೆಗಳು ಸರಕಾರದ ವಿರುದ್ಧ ಯುವಜನತೆಯ ಆಕ್ರೋಶ ಎಷ್ಟಿದೆ ಎನ್ನುವುದನ್ನು ಜಗತ್ತಿಗೆ ಜಾಹೀರುಗೊಳಿಸಿವೆೆ.
ಇದೇ ಸಂದರ್ಭದಲ್ಲಿ ಜು. 20ರಂದು ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಇನ್ನಷ್ಟು ದೌರ್ಜನ್ಯಗಳು ಬೆಳಕಿಗೆ ಬರುತ್ತಿವೆ. ಕೆಲವು ಪೊಲೀಸರು ಮೊಳೆಗಳಿರುವ ಲಾಠಿಗಳನ್ನು ವಿದ್ಯಾರ್ಥಿಗಳ ವಿರುದ್ಧ್ದ ಬಳಸಿರುವುದು ಸುದ್ದಿಯಾಗಿದೆ. ಕೆಲವು ಪೊಲೀಸರು ವಿದ್ಯಾರ್ಥಿನಿಯರ ಜೊತೆಗೆ ಅನುಚಿತವಾಗಿ ವರ್ತಿಸಿರುವ ವೀಡಿಯೊಗಳು ವೈರಲ್ ಆಗುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಪೆಲ್ಲೆಟ್ ಗನ್‌ಗಳನ್ನು ಬಳಸಿದ್ದಾರೆ. ಒಬ್ಬ ವಿದ್ಯಾರ್ಥಿ ಇದರಿಂದ ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದರೆ, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಪೆಲ್ಲೆೆಟ್ ಗನ್ ದಾಳಿಗೆ ಬಲಿಯಾದ ವಿದ್ಯಾರ್ಥಿಯ ವೀಡಿಯೊ ಕೂಡ ವೈರಲ್ ಆಗುತ್ತಿವೆ. ತನ್ನ ಅಕ್ರಮಗಳನ್ನು, ಭ್ರಷ್ಟತೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ವಿರುದ್ಧ ಕೇಂದ್ರ ಸರಕಾರ ನಡೆಸಿದ ದಾಳಿ, ಈ ದೇಶದಲ್ಲಿ ಪ್ರಜಾಸತ್ತೆ ಅಸ್ತಿತ್ವದಲ್ಲಿಲ್ಲ ಎನ್ನುವುದನ್ನು ಜಗತ್ತಿಗೆ ಸ್ಪಷ್ಟಪಡಿಸಿದೆ. ದೇಶದಲ್ಲಿ ಪರೋಕ್ಷವಾಗಿ ಪ್ರಧಾನಿ ಮೋದಿಯವರು ತುರ್ತು ಪರಿಸ್ಥಿತಿಯನ್ನು ಘೋಷಿಸಿರುವುದು ಸ್ಪಷ್ಟವಾಗಿದೆ.
ಪ್ರತಿಭಟನೆಯ ಪರಿಣಾಮವಾಗಿ ನೀಟ್‌ನಲ್ಲಿ ಕೆಲವು ಸುಧಾರಣೆಗಳನ್ನು ಮಾಡಲು ಸರಕಾರ ಮನ ಮಾಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನಿಗೆ ತಿದ್ದ್ದು ಪಡಿ ತರಲು ಸರಕಾರ ಮುಂದಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ 10 ವರ್ಷ ಜೈಲು, ಹತ್ತು ಕೋಟಿ ರೂ. ದಂಡಕ್ಕೆ ಅವಕಾಶವಿರುವ ಮಸೂದೆಯನ್ನು ಮಂಡಿಸಲು ಮುಂದಾಗಿದೆ. ಆದರೆ ಇವೆಲ್ಲವೂ ಪ್ರತಿಭಟನೆಯ ಬಿಸಿಗೆ ತಣ್ಣೀರು ಸುರಿಸುವ ಪ್ರಯತ್ನದ ಭಾಗವಾಗಿದೆ. ಸುಪ್ರೀಂಕೋರ್ಟ್ ಕೂಡ ‘ಜಿರಳೆ’ಗಳಿಗೆ ಮಣಿದಿದೆ. ಭವಿಷ್ಯದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟುವ ಹಾಗೂ ಸುಧಾರಣೆಗೆ ಕೇಂದ್ರ ಸರಕಾರ ಕೈಗೊಳ್ಳುವ ಕ್ರಮಗಳ ಬಗ್ಗೆ ನಿಗಾವಿಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ಹಾಗೆಯೇ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯಗಳನ್ನು ವಿಚಾರಣೆ ನಡೆಸುವುದಕ್ಕೂ ಒಪ್ಪಿಕೊಂಡಿದೆ. ದೇಶದ ಇಂದಿನ ಸ್ಥಿತಿಗೆ ಸರಕಾರ ಎಷ್ಟು ಕಾರಣವೋ, ಆ ಸರಕಾರದ ಬೆನ್ನಿಗೆ ನಿಂತು ಅಕ್ರಮಗಳನ್ನು ಪರೋಕ್ಷವಾಗಿ ಸಮರ್ಥಿಸುತ್ತಿರುವ ಸುಪ್ರೀಂಕೋರ್ಟ್ ಕೂಡ ಅಷ್ಟೇ ಕಾರಣ. ಸುಪ್ರೀಂಕೋರ್ಟ್ ಕೂಡ ತನ್ನನ್ನು ತಾನು ವಿಮರ್ಶೆಗೆ ಒಡ್ಡಿಕೊಳ್ಳುವ ಸಂದರ್ಭ ಇದಾಗಿದೆ. ಪ್ರತಿಭಟನಾಕಾರರು ಮತ್ತು ಸರಕಾರದ ನಡುವೆ ನಾಲ್ಕನೇ ಸುತ್ತಿನ ಮಾತುಕತೆ ನಡೆದಿದೆಯಾದರೂ, ಅದು ಯಶಸ್ವಿಯಾಗಿಲ್ಲ. ಸರಕಾರ ತನ್ನ ಹಟ, ಪ್ರತಿಷ್ಠೆಯನ್ನು ಬಿಟ್ಟುಯುವಕರ ಬೇಡಿಕೆಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕು. ನೀಟ್ ಅಕ್ರಮಗಳ ನೈತಿಕ ಹೊಣೆಯನ್ನು ಹೊತ್ತುಕೊಳ್ಳದೆಯೇ ಸರಕಾರ ತರುವ ಯಾವ ಸುಧಾರಣೆಗಳು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಉದ್ಧರಿಸಲಾರದು ಎನ್ನುವುದನ್ನು ಸರಕಾರ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು.