ಅಕ್ರಮಗಳನ್ನು ಸಕ್ರಮಗೊಳಿಸಲು ತ್ವರಿತ ನ್ಯಾಯಾಲಯ?

Update: 2026-07-24 07:24 IST

Photo: screengrab/ x.com/PTI/Narendramodi

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊನೆಗೂ ನೀಟ್ ಅಕ್ರಮಗಳ ವಿರುದ್ಧ ಪ್ರಧಾನಿ ಮೋದಿಯವರು ಮೌನ ಮುರಿದಿದ್ದಾರೆ. ನೀಟ್ ಅಕ್ರಮಗಳನ್ನು ವಿರೋಧಿಸಿ ಕಳೆದ 25 ದಿನಗಳಿಂದ ಈ ದೇಶದ ಸಹಸ್ರಾರು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಕಂಡೂ ಕಾಣದಂತಿದ್ದ ಪ್ರಧಾನಿ ಮೋದಿ ಇದೀಗ ಏಕಾಏಕಿ ಎಚ್ಚೆತ್ತುಕೊಂಡು ‘‘ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು’’ ಎಂದಿದ್ದಾರೆ. ‘‘ಅದಕ್ಕಾಗಿ ತ್ವರಿತ ಗತಿಯ ನ್ಯಾಯಾಲಯಗಳನ್ನು ಸ್ಥಾಪಿಸಲು ಸರಕಾರ ನಿರ್ಧರಿಸಿದೆ’’ ಎಂದೂ ಭರವಸೆ ನೀಡಿದ್ದಾರೆ. ಬಳಿಕ ಎಂದಿನಂತೆ ಯುವಜನರ ಭವಿಷ್ಯದ ಬಗ್ಗೆ ಬಾಯಿ ತುಂಬಾ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರ ಬಾಯಿಯಿಂದ ಇಷ್ಟನ್ನು ಉದುರಿಸುವುದಕ್ಕಾಗಿ ಈ ದೇಶದ ಸಹಸ್ರಾರು ಯುವಜನರು ಕಳೆದ 20 ದಿನಗಳಿಂದ ಮಾಡಿದ ಶ್ರಮ, ತ್ಯಾಗ, ಬಲಿದಾನ ಬಹುದೊಡ್ಡದು. 400ಕ್ಕೂ ಅಧಿಕ ಮಂದಿಯ ಮೇಲೆ ಪೊಲೀಸರು ಈಗಾಗಲೇ ಎಫ್‌ಐಆರ್ ದಾಖಲಿಸಿದ್ದಾರೆ. ಸಾವಿರಾರು ಯುವಕರ ಮೇಲೆ ಪೊಲೀಸರು ಲಾಠಿ ಬೀಸಿ ದೌರ್ಜನ್ಯ ಎಸಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪೆಲೆಟ್ ಗನ್‌ನ್ನು ಬಳಸಿದ್ದಾರೆ ಎನ್ನುವ ಆರೋಪಗಳಿವೆ. ಜಲಫಿರಂಗಿ, ಅಶ್ರುವಾಯು ಸಿಡಿಸಿದ್ದಾರೆ. ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನರ ತಲೆಗೆ ದೇಶದ್ರೋಹದ ಮುಳ್ಳಿನ ಕಿರೀಟವನ್ನು ಇಟ್ಟಿದ್ದಾರೆ. ಇಷ್ಟೆಲ್ಲ ಆಗಿಯೂ ವಿದ್ಯಾರ್ಥಿಗಳು ಮಣಿಯುವುದಿಲ್ಲ ಎನ್ನುವುದು ಮನವರಿಕೆಯಾಗುತ್ತಿದ್ದಂತೆಯೇ ಅನಿವಾರ್ಯ ಸ್ಥಿತಿಯಲ್ಲಿ ಪ್ರಧಾನಿ ತಮ್ಮ ಮೌನವನ್ನು ಮುರಿದಿದ್ದಾರೆ.

ಈಗಾಗಲೇ ತನ್ನ ತನಿಖಾ ತಂಡ ಹಿಡಿದಿರುವ ಮರಿ ಇಲಿಗಳನ್ನು ಈ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಅವರಿಗೆ ಶಿಕ್ಷೆ ನೀಡಿ ಈ ದೇಶದ ಶಿಕ್ಷಣ ವ್ಯವಸ್ಥೆಗೆ ಆಗುವ ಅನ್ಯಾಯವನ್ನು ಸರಿಪಡಿಸುತ್ತೇನೆ ಎನ್ನುವ ಭರವಸೆ ನೀಡುತ್ತಿದ್ದಾರೆ ಪ್ರಧಾನಿ. ಆದರೆ ಅಕ್ರಮದ ಹಿಂದಿರುವ ಭಾರೀ ಹೆಗ್ಗಣಗಳನ್ನು ಮಾತ್ರ ತನ್ನ ಮಡಿಲಲ್ಲಿಟ್ಟು ರಕ್ಷಿಸುತ್ತಿದ್ದಾರೆ. ಇಂದು ಈ ದೇಶದ ವಿದ್ಯಾರ್ಥಿಗಳು, ಅಕ್ರಮದಲ್ಲಿ ಭಾಗಿಯಾಗಿರುವ ಭ್ರಷ್ಟ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಬಂಧಿಸಬೇಕು ಎಂದು ಸರಕಾರವನ್ನು ಆಗ್ರಹಿಸುತ್ತಿದ್ದಾರೆ. ನೀಟ್ ಪರೀಕ್ಷಾ ವ್ಯವಸ್ಥೆಯ ಬಗ್ಗೆಯೆ ದೇಶದಲ್ಲಿ ಅನುಮಾನಗಳು ಎದ್ದಿವೆ. ನೀಟ್ ಪರೀಕ್ಷೆಯಲ್ಲಿ ವ್ಯಾಪಕ ಸುಧಾರಣೆಗಳು ನಡೆಯಬೇಕು ಎಂದು ಹಲವು ಶಿಕ್ಷಣ ತಜ್ಞರು ಈಗಾಗಲೇ ಒತ್ತಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದ ರಾಜ್ಯಗಳು ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸುತ್ತಿವೆ. ನೀಟ್ ಅಕ್ರಮ ದೇಶಾದ್ಯಂತ 20ಕ್ಕೂ ಅಧಿಕ ವಿದ್ಯಾರ್ಥಿಗಳ ಜೀವವನ್ನು ಬಲಿತೆಗೆದುಕೊಂಡಿದೆ. ನೂರಾರು ವಿದ್ಯಾರ್ಥಿಗಳು ಆತಂಕ, ಖಿನ್ನತೆಯನ್ನು ಎದುರಿಸುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಹೊಣೆಯನ್ನು ಕೇಂದ್ರ ಸರಕಾರ ವಹಿಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ, ಅಕ್ರಮವನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎನ್ನುವುದು ಪ್ರತಿಭಟನಾಕಾರರ ಆಗ್ರಹವಾಗಿದೆ. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯ ಹೊಣೆಯನ್ನು ಹೊತ್ತುಕೊಳ್ಳಲು ಕೇಂದ್ರ ಸರಕಾರ ಸಿದ್ಧವಿಲ್ಲ. ದೇಶಾದ್ಯಂತ ಪ್ರತಿಭಟನೆ ತೀವ್ರ ರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ‘ತ್ವರಿತ ನ್ಯಾಯಾಲಯ’ದ ಬೆಣ್ಣೆಯನ್ನು ಈ ದೇಶದ ಯುವಜನತೆಯ ಮೂಗಿಗೆ ಒರೆಸಲು ಮುಂದಾಗಿದೆೆ. ಆದರೆ ಈ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಮುನ್ನ, ಆಮೂಲಾಗ್ರ ತನಿಖೆ ನಡೆದು ಅಕ್ರಮದ ಹಿಂದಿರುವ ಪ್ರಮುಖ ಆರೋಪಿಗಳನ್ನು ಸರಕಾರ ಬಂಧಿಸಬೇಕಾಗಿದೆ. ಇಲ್ಲವಾದರೆ, ಈ ತ್ವರಿತ ನ್ಯಾಯಾಲಯದ ವಿಚಾರಣೆಯೆನ್ನುವುದು ನ್ಯಾಯದ ಅಣಕವಾಗಿ ಬಿಡುತ್ತದೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದರಿಂದ, ನೀಟ್ ಅಕ್ರಮಗಳ ತನಿಖೆಯ ಹಾದಿ ಸುಗಮವಾಗುತ್ತದೆ. ಆದರೆ ಪ್ರಧಾನಿ ಮೋದಿ ಆ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಸಂಸತ್ ಚಲೋ ಸಂದರ್ಭದಲ್ಲಿ ಪೊಲೀಸರು ಎಸಗಿದ ದೌರ್ಜನ್ಯಗಳ ವಿರುದ್ಧವೂ ಪ್ರಧಾನಿ ಮೋದಿ ಮಾತನಾಡಿಲ್ಲ. ‘‘ಯುವಜನರ ಭವಿಷ್ಯಕ್ಕಿಂತ ಮುಖ್ಯವಾದದ್ದು ಯಾವುದೂ ಇಲ್ಲ’’ ಎಂದ ಮೋದಿಯವರಿಗೆ ತಮ್ಮ ಸರಕಾರ ಈಗಾಗಲೇ 400ಕ್ಕೂ ಅಧಿಕ ಯುವಜನರ ಮೇಲೆ ಪ್ರಕರಣ ದಾಖಲು ಮಾಡಿರುವುದು ಗೊತ್ತಿಲ್ಲವೆ? ನ್ಯಾಯ ಕೇಳಿದ ಯುವಕರನ್ನು ಅಪರಾಧಿಗಳನ್ನಾಗಿಸಿ ಅವರನ್ನು ಬಂಧಿಸುವುದು, ಅವರ ಮೇಲೆ ದೌರ್ಜನ್ಯ ನಡೆಸುವುದು ಯುವಜನರ ಭವಿಷ್ಯವನ್ನು ರೂಪಿಸುವ ರೀತಿಯೆ? ಸರಕಾರ ಪ್ರತಿಭಟನಾಕಾರರ ಮೇಲೆ ಯಾವುದೇ ಮೊಕದ್ದಮೆ ದಾಖಲಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಪ್ರಕರಣ ದಾಖಲಿಸಿದ್ದರೆ ಅವುಗಳನ್ನು ರದ್ದು ಪಡಿಸಬೇಕು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್‌ಗನ್‌ಗಳನ್ನು ಬಳಸಲಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಪೊಲೀಸರು ನಡೆಸಿದ ಪೆಲೆಟ್ ಗನ್ ದಾಳಿಯಲ್ಲಿ 19 ವರ್ಷದ ಯುವಕನೊಬ್ಬನ ಕಣ್ಣಿಗೆ ಹಾನಿಯಾಗಿದೆ ಎಂದು ಆರೋಪಿಸಲಾಗುತ್ತಿದೆ. ಆತ ದೃಷ್ಟಿ ಕಳೆದುಕೊಳ್ಳುವ ಅಪಾಯದಲ್ಲಿದ್ದಾನೆ. ಸಫ್ದರ್ ಜಂಗ್ ಆಸ್ಪತ್ರೆಯೂ ಈ ದಾಳಿಯನ್ನು ಸ್ಪಷ್ಟ ಪಡಿಸಿದೆ. ಒಂದು ವೇಳೆ ಅದು ನಿಜವೇ ಆಗಿದ್ದರೆ ಇದನ್ನು ಮಾನವೀಯತೆಯ ಮೇಲೆ ಸರಕಾರ ನಡೆಸಿದ ಬರ್ಬರ ದಾಳಿ ಎಂದೇ ಕರೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜು. 20ರಂದು ವಿದ್ಯಾರ್ಥಿಗಳ ಮೇಲೆ ನಡೆದ ದಾಳಿ, ದೌರ್ಜನ್ಯಗಳ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ಪ್ರತ್ಯೇಕ ತನಿಖೆ ನಡೆಯಬೇಕು. ಈ ದಾಳಿಯಲ್ಲಿ ಪೊಲೀಸರಲ್ಲದೆ ಇನ್ನಿತರ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದಾರೆ ಎನ್ನುವ ಆರೋಪಗಳಿವೆ. ವಿದ್ಯಾರ್ಥಿಗಳ ವಿರುದ್ಧ ಅನಗತ್ಯ ದಾಳಿ ನಡೆಸಿದ ಪೊಲೀಸರು ಮತ್ತು ಗೂಂಡಾಗಳ ವಿರುದ್ಧ ಸರಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು.

ಇದೇ ಸಂದರ್ಭದಲ್ಲಿ ನೀಟ್‌ನ್ನು ರದ್ದುಗೊಳಿಸುವುದಕ್ಕಾಗಿ ದಕ್ಷಿಣದ ರಾಜ್ಯಗಳು ಒತ್ತಾಯಿಸುತ್ತಿವೆ. ‘ನೀಟ್ ಪರೀಕ್ಷೆಯಲ್ಲಿ ದಕ್ಷಿಣ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ, ತಮ್ಮದೇ ರಾಜ್ಯಗಳಲ್ಲಿ ವೈದ್ಯಕೀಯ ಕಾಲೇಜುಗಳಿದ್ದರೂ ಅದರ ಅವಕಾಶವನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ . ನೀಟ್‌ನ ಲಾಭ ಪಡೆದು ಉತ್ತರ ಭಾರತೀಯ ವಿದ್ಯಾರ್ಥಿಗಳು ದಕ್ಷಿಣ ಭಾರತದ ವಿದ್ಯಾರ್ಥಿಗಳ ಅವಕಾಶವನ್ನು ಕಿತ್ತುಕೊಳ್ಳುತ್ತಿದ್ದಾರೆ. ಆದುದರಿಂದ, ನೀಟ್‌ನ್ನು ರದ್ದುಗೊಳಿಸಿ, ಸಿಇಟಿಯನ್ನು ಮರುಸ್ಥಾಪಿಸಿ’ ಎಂದು ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳು ಒತ್ತಾಯಿಸುತ್ತಿವೆ. ಯಾವುದೇ ಅಕ್ರಮಗಳಿಲ್ಲದೆ ನೀಟ್ ಪರೀಕ್ಷೆಯನ್ನು ನಡೆಸುವುದಕ್ಕೆ ಪದೇ ಪದೇ ವಿಫಲವಾಗುತ್ತಿರುವ ಕೇಂದ್ರ ಸರಕಾರ, ನೀಟ್‌ನ್ನು ರದ್ದುಗೊಳಿಸಿ ಆಯಾ ರಾಜ್ಯಗಳಿಗೆ ಅದರ ಅಧಿಕಾರವನ್ನು ಒಪ್ಪಿಸಿ ತನ್ನ ಹೊಣೆಗಾರಿಕೆಯಿಂದ ಮುಕ್ತವಾಗುವುದಕ್ಕೂ ಇದು ಸುಸಮಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News