ಶಿವಮೊಗ್ಗ | ಜಾತಿಗಣತಿ ಹೆಸರಲ್ಲಿ ಹಲ್ಲೆ, ದರೋಡೆ ಯತ್ನ: ಆರೋಪ
ಶಿವಮೊಗ್ಗ : ಜಾತಿಗಣತಿ ಹೆಸರಿನಲ್ಲಿ ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ಮಾಡಿ, ದರೋಡೆಗೆ ಯತ್ನಿಸಿದ ಆರೋಪದಲ್ಲಿ ದಂಪತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗದ ಕ್ಲಾರ್ಕ್ ಪೇಟೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಶುಕ್ರವಾರ ಮಧ್ಯಾಹ್ನ 1:30ರ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳೀಯರ ಮಾಹಿತಿಯ ಪ್ರಕಾರ, ಕ್ಲಾರ್ಕ್ ಪೇಟೆ ಅಜಾದ್ ನಗರ ಎರಡನೇ ತಿರುವಿನಲ್ಲಿರುವ ಮಹಿಳೆಯೊಬ್ಬರ ಮನೆಗೆ ಬಂದ ದಂಪತಿ ಜಾತಿಗಣತಿ ಮಾಡಲು ಬಂದಿದ್ದೇವೆ, ಆಧಾರ್ ಕಾರ್ಡ್ ಕೊಡಿ ಎಂದು ಕೇಳಿದ್ದಾರೆ. ಆಧಾರ್ ಕಾರ್ಡ್ ತರಲು ಮನೆಯಲ್ಲಿದ್ದ ಮಹಿಳೆ ತಿರುಗುತ್ತಲೇ ಮನೆಯೊಳಗೆ ನುಗ್ಗಿ ಹಲ್ಲೆ ಮಾಡಿ ದರೋಡೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಮನೆಯಲ್ಲಿದ್ದ ಮಹಿಳೆ ಕಿರುಚಾಡಿದ್ದಾರೆ. ತಕ್ಷಣ ಸ್ಥಳೀಯರು ಮನೆ ಬಳಿಗೆ ಬಂದು ಆರೋಪಿ ದಂಪತಿಯನ್ನು ಹಿಡಿದಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ, ದಂಪತಿ ತಂದಿದ್ದ ಬ್ಯಾಗ್‌ನಲ್ಲಿ ಚಾಕು, ಕತ್ತಿ, ಗರಗಸ, ಕಟರ್, ಕಟ್ಟಿಂಗ್ ಪ್ಲೇಯರ್ ಇರುವುದು ತಿಳಿದುಬಂದಿದೆ. ಅವರನ್ನು ವಿಚಾರಿಸಿದಾಗ, ಆರೋಪಿಗಳು ತಸ್ಲಿಮಾ ಹಾಗೂ ಅಸ್ಲಾಂ ಎಂದು ಹೇಳಿಕೊಂಡಿದ್ದಾರೆ. ದಂಪತಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು ದೊಡ್ಡಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.