×
Ad

ಕುವೆಂಪು ವಿವಿಯ 34ನೇ ವರ್ಷದ ಘಟಿಕೋತ್ಸವ | ಕಾಗೋಡು ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ

Update: 2025-01-22 23:17 IST

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯ ಆವರಣದ ಬಸವ ಭವನದಲ್ಲಿ ಬುಧವಾರ ನಡೆದ 34ನೇ ವರ್ಷದ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮೊದಲು ಮಾಜಿ ಸಚಿವ, ಹಿರಿಯ ರಾಜಕಾರಣಿ, ಸಮಾಜವಾದಿ ಹೋರಾಟಗಾರ ಕಾಗೋಡು ತಿಮ್ಮಪ್ಪ, ಅಂತರ್‌ರಾಷ್ಟ್ರೀಯ ಯೋಗ ಪಟು ಮತ್ತು ಯೋಗ ಶಿಕ್ಷಕ ಡಿ.ನಾಗರಾಜ್ ಹಾಗೂ ಭೌತಶಾಸ್ತ್ರ ವಿಜ್ಞಾನಿ ಪ್ರೊ. ಸಿ.ಎಸ್ ಉನ್ನಿಕೃಷ್ಣನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ನಂತರ ಎಂ.ಎ. ಸ್ನಾತಕೋತ್ತರ ಹಾಗೂ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ಒಟ್ಟು 146 ಸ್ವರ್ಣ ಪದಕಗಳಿದ್ದು, ಇವುಗಳಲ್ಲಿ 13 ಪುರುಷರು ಹಾಗೂ 71 ಮಹಿಳೆಯರು ಸೇರಿ ಒಟ್ಟು 84 ವಿದ್ಯಾರ್ಥಿಗಳು ಹಂಚಿಕೊಂಡರು. 17 ನಗದು ಬಹುಮಾನಗಳ ಪೈಕಿ 1 ಪುರುಷ ಹಾಗೂ 13 ಮಹಿಳೆಯರು ಸೇರಿ 14 ವಿದ್ಯಾರ್ಥಿಗಳು ಹಂಚಿಕೊಂಡರು.

ಕಲಾ ನಿಕಾಯದ ಎಂ.ಎ. ವಿದ್ಯಾರ್ಥಿ ವಸಂತ್ ಕುಮಾರ್ ಒಟ್ಟು 10 ಸ್ವರ್ಣ ಪದಕ ಹಾಗೂ ಒಂದು ನಗದು ಬಹುಮಾನ ಪಡೆಯುವ ಮೂಲಕ ಘಟಿಕೋತ್ಸವದಲ್ಲೇ ಅತೀ ಹೆಚ್ಚು ಪದಕ ಪಡೆದ ಹೆಗ್ಗಳಿಕೆಗೆ ಪಾತ್ರರಾದರು. ವೇದಿಕೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಹೈದ್ರಾಬಾದ್ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ರಾಮ್ ರಾಮಸ್ವಾಮಿ, ಕುಲಪತಿ ಶರತ್ ಅನಂತಮೂರ್ತಿ ಹಾಗೂ ಸಿಂಡಿಕೇಟ್ ಸದಸ್ಯರು,ಕುವೆಂಪು ವಿವಿ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News