×
Ad

ಕುವೆಂಪು ವಿವಿಯಲ್ಲಿ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ವಿಚಾರ ಸಂಕಿರಣ; ವಿದ್ಯಾರ್ಥಿಗಳು, ಪ್ರಗತಿಪರರು, ಚಿಂತಕರ ವ್ಯಾಪಕ ವಿರೋಧ

Update: 2025-11-17 21:06 IST

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾನಿಲಯ, ಸ್ವರ್ಣ ರಶ್ಮಿ ಟ್ರಸ್ಟ್ ಮತ್ತು ಶ್ರೀ ಭಗವದ್ಗೀತೆ ಅಭಿಯಾನ ಜಿಲ್ಲಾ ಸಮಿತಿ ವತಿಯಿಂದ ನ.18ರಂದು ಕುವೆಂಪು ವಿವಿಯ ಬಸವ ಸಭಾಭವನದಲ್ಲಿ ಆಯೋಜಿಸಲಾಗಿರುವ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಪ್ರಗತಿಪರರು, ಚಿಂತಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

ವಿವಿಯಲ್ಲಿ ಆಯೋಜನೆಗೊಂಡಿರುವ ಈ ಕಾರ್ಯಕ್ರಮಕ್ಕೆ ಸಾಹಿತಿಗಳು, ಸಿಂಡಿಕೇಟ್ ಸದಸ್ಯರು, ಲೇಖಕರು ಮತ್ತು ವಿವಿಯ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ ಅವರು ತಮ್ಮ ಅಧ್ಯಕ್ಷತೆಯಲ್ಲಿ ವಿವಿಯಲ್ಲಿ ವಿಚಾರ ಸಂಕಿರಣ ಅಯೋಜಿಸಿರುವುದನ್ನು ಸಮರ್ಥಿಸಿಕೊಂಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ವಿಚಾರ ಸಂಕಿರಣದ ಔಚಿತ್ಯವೇನು?

ಈ ವಿಚಾರ ಸಂಕಿರಣದ ಔಚಿತ್ಯವನ್ನು ಪ್ರಶ್ನಿಸಿ, ಕುಲಪತಿಗೆ ಪತ್ರ ಬರೆದಿರುವ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕೆ.ಪಿ.ಶ್ರೀಪಾಲ್, ವಿಚಾರ ಸಂಕಿರಣದಲ್ಲಿ ಬಹುತೇಕರು ಬಲಪಂಥೀಯ ಸಿದ್ಧಾಂತವನ್ನು ಪ್ರತಿಪಾದಿಸುವ ಹಾಗೂ ಸಂಘಪರಿವಾರದ ಬೇರೆ ಬೇರೆ ಕಾರ್ಯಕ್ರಮಗಳ ಹೆಸರಿನಲ್ಲಿ ವಿವಿಗಳಿಗೆ ಬರುತ್ತಿದ್ದು, ಇದೀಗ ಭಗವದ್ಗೀತೆಯ ಹೆಸರಲ್ಲಿ ಕುವೆಂಪು ವಿವಿಗೆ ಬರುತ್ತಿದ್ದಾರೆ. ಇವರೆಲ್ಲರೂ ಗಾಂಧಿ, ಬುದ್ಧ, ಬಸವಣ್ಣ, ಅಂಬೇಡ್ಕರ್ ನಿಲುವುಗಳನ್ನು ವಿರೋಧಿಸುವ ಸಂಸ್ಥೆಯಲ್ಲಿ ಸಕ್ರಿಯವಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇಡೀ ದೇಶದ ವಿವಿಗಳನ್ನು ಒಂದೇ ಸಿದ್ಧಾಂತದ ಅಡಿಯಲ್ಲಿ ತಂದು, ವಿದ್ಯಾರ್ಥಿಗಳಿಗೆ ಸಂವಿಧಾನಕ್ಕಿಂತ ಹೆಚ್ಚಾಗಿ ಮನುಸ್ಮೃತಿಯನ್ನು ತಲೆಗೆ ತುಂಬಬೇಕು ಎಂಬ ಸಂಘಪರಿವಾರದ ತೀರ್ಮಾನದಂತೆ ಬೇರೆ ಬೇರೆ ಕಾರ್ಯಕ್ರಮಗಳ ಹೆಸರಿನಲ್ಲಿ ಬರುತ್ತಿದ್ದವರು ಈಗ ಭಗವದ್ಗೀತೆ ಹೆಸರಿನಲ್ಲಿ ವಿವಿಗಳಿಗೆ ಬರುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ.

ಚಾತುರ್ವರ್ಣ ವ್ಯವಸ್ಥೆಯ ಮೂಲವನ್ನು ಭಗವದ್ಗೀತೆಯಿಂದಲೇ ಸಮರ್ಥಿಸಲಾಗುತ್ತದೆ. ಇದು ನಾವು ಒಪ್ಪಿಕೊಂಡಿರುವ ಈ ದೇಶದ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿರುತ್ತದೆ. ಕೆಲವು ಸಿದ್ಧಾಂತಗಳನ್ನು ವಿವಿಗಳಿಗೆ ಸುಳಿಯದಂತೆ ನೋಡಿಕೊಳ್ಳುವುದು ಪ್ರಜ್ಞಾವಂತರಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅದರಲ್ಲೂ ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಹೆಸರಿನ ವಿವಿಯಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಕಾರ್ಯಕ್ರಮಗಳು ನಡೆಯುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅಲ್ಲದೆ, ನ.18ರಂದು ಹಮ್ಮಿಕೊಂಡಿರುವ ಈ ಕಾರ್ಯಕ್ರಮವನ್ನು ರದ್ದುಪಡಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. ವಿವಿಯ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರಿಗೂ ಶ್ರೀಪಾಲ್ ಪತ್ರ ಬರೆದಿದ್ದಾರೆ.

ಲೇಖಕ ಹರ್ಷಕುಮಾರ್ ಕುಗ್ವೆ ಬಹಿರಂಗ ಪತ್ರ:

ಲೇಖಕ ಹರ್ಷಕುಮಾರ್ ಕುಗ್ವೆ ಅವರು ಕುವೆಂಪು ವಿವಿ ಕುಲಪತಿಗೆ ಬಹಿರಂಗ ಪತ್ರ ಬರೆದಿದ್ದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಭಾರತದಲ್ಲಿ ಮನುಷ್ಯರೆಲ್ಲರಿಗೂ ಅತ್ಯಗತ್ಯವಾದ ಕೆಲವು ಮೂಲಭೂತ ತತ್ವಗಳ ನೆಲೆಯಲ್ಲಿ ಭಗವದ್ಗೀತೆ, ಮನುಸ್ಮೃತಿಯಂತಹ ಪಠ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸಿರುವುದು ತಮಗೂ ತಿಳಿದಿರಬಹುದು. ಕುವೆಂಪು ವಿವಿಯಂತಹ ವಿಶ್ವ ವಿದ್ಯಾನಿಲಯ ಪ್ರಜಾಪ್ರಭುತ್ವ, ಸಂವಿಧಾನದ ಮೂಲ ತತ್ವಗಳ ನೆಲೆಯಲ್ಲಿ ಭಗವದ್ಗೀತೆ, ಮನುಸ್ಮೃತಿ, ವೇದ ಸಾಹಿತ್ಯ, ಪ್ರಾಚೀನ ಜ್ಞಾನ ಪರಂಪರೆ ಇತ್ಯಾದಿಗಳನ್ನು ಚರ್ಚಿಸಬೇಕೇ ಅಥವಾ ಈಗಾಗಲೇ ದೇಶವನ್ನು ಜಾತಿ ಮತ್ತು ಧರ್ಮಗಳ ಆಧಾರದಲ್ಲಿ ಹೇಗೆ ಒಡೆಯಬೇಕೆಂದು ನೀಲನಕ್ಷೆ ಇಟ್ಟುಕೊಂಡು ಹೊರಟಿರುವ ಜನರ ಮೂಲಕ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕೇ?. ಈ ಕುರಿತು ನಿಮ್ಮ ವಿವೇಚನೆ ಏನು ಎಂದು ಪ್ರಶ್ನಿಸಿದ್ದಾರೆ.

ಭಗವದ್ಗೀತೆಯಾಗಲಿ, ಮನಸ್ಮೃತಿಯಾಗಲಿ. ವಿವಿಯಲ್ಲಿ ಚರ್ಚೆಯಾಗಬಾರದು ಎಂದೇನಿಲ್ಲ. ಆದರೆ, ಮುಕ್ತ ಚರ್ಚೆ ಎಂದರೆ ಅಲ್ಲಿ ಒಂದೇ ಐಡಿಯಾಲಜಿಯವರನ್ನು ಕರೆಸಿ ಭಾಷಣ ಕೊಡುವುದಲ್ಲ. ನಿಮಗೆ ಅಷ್ಟು ಆಸಕ್ತಿ ಇದ್ದರೆ ಭಗವದ್ಗೀತೆಯ ಕುರಿತು ಹಲವು ನೆಲೆಗಳಲ್ಲಿ ಚರ್ಚೆ ಇಟ್ಟುಕೊಳ್ಳಬಹುದಿತ್ತು. ಬಹಳ ಮುಖ್ಯವಾಗಿ ಅಂಬೇಡ್ಕರ್ ಅವರು ಚರ್ಚಿಸಿರುವ ನೆಲೆಯನ್ನು, ಗಾಂಧೀಜಿ ಚರ್ಚಿಸಿರುವ ನೆಲೆಯನ್ನೂ ಸೇರಿಸಿಕೊಳ್ಳಬಹುದಿತ್ತು. ಆದರೆ, ವಿವಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಕ್ತ ಚಿಂತನೆಯ ಉದ್ದೇಶವಿರದೆ ಮನುವಾದಿ, ವರ್ಣಾಶ್ರಮ ಚಿಂತನೆಯನ್ನು ವಿವಿ ಆವರಣದಲ್ಲಿ ದಕ್ಕಿಸಿಕೊಳ್ಳುವ ಒಂದೇ ಅಜೆಂಡಾವಿರುವುದು ಸ್ಪಷ್ಟ. ಇದಕ್ಕೆ ನಮ್ಮ ವಿರೋಧವಿದೆ ಎಂಬುದನ್ನು ಈ ಮೂಲಕ ನಿಮಗೆ ತಿಳಿಸಲು ಬಯಸುತ್ತೇನೆ. ಈ ಕಾರ್ಯಕ್ರಮವನ್ನು ರದ್ದುಪಡಿಸಿ ಕಾರ್ಯಕ್ರಮದ ರೂಪುರೇಷೆಯನ್ನು ಪ್ರಜಾಸತ್ತಾತ್ಮಕವಾಗಿ ನಡೆಸಿ, ವಿವಿಯ ಬೇರೆ ಬೇರೆ ವಿಭಾಗಗಳನ್ನೂ ಒಳಗೊಂಡು ಹೊಸ ರೀತಿಯಲ್ಲಿ ನಿಜವಾದ ಮುಕ್ತ ಚರ್ಚೆಯನ್ನು ಮತ್ತೊಂದು ದಿನ ಆಯೋಜಿಸಬೇಕೆಂದು ಹರ್ಷಕುಮಾರ್ ಕುಗ್ವೆ ಆಗ್ರಹಿಸಿದ್ದಾರೆ.

ಡಿಎಸ್‌ಎಸ್‌ನಿಂದ ತಮಟೆ ಚಳವಳಿಯ ಎಚ್ಚರಿಕೆ

ನ.18ರಂದು ಆಯೋಜಿಸಿರುವ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ವಿಚಾರ ಸಂಕಿರಣಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ವಿಶ್ವ ಮಾನವ ಸಂದೇಶವನ್ನು ಬೋಧಿಸಿದ ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ವಿವಿಯಲ್ಲಿ ನಡೆಸಲು ಮುಂದಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವಿ ಕುಲಪತಿಯೇ ವಹಿಸಿಕೊಂಡಿರುವುದನ್ನು ಗಮನಿಸಿದರೆ ಇದು ಕುವೆಂಪುರವರ ಆದರ್ಶಗಳಿಗೆ ಮಾಡುತ್ತಿರುವ ಅಪಚಾರ ಮತ್ತು ಅಂಬೇಡ್ಕರ್ ರವರ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರವಾಗಿದೆ ಎಂದು ಟೀಕಿಸಿದ್ದಾರೆ.

ಸದರಿ ಕಾರ್ಯಕ್ರಮಕ್ಕೆ ಬರುವ ಸಂಪನ್ಮೂಲ ವ್ಯಕ್ತಿಗಳೆಲ್ಲರೂ ಬಲಪಂಥೀಯ ಸಿದ್ಧಾಂತವನ್ನು ಪ್ರತಿಪಾದಿಸುವ ಹಾಗೂ ಗಾಂಧಿ ಬಸವಣ್ಣ ಮತ್ತು ಅಂಬೇಡ್ಕರ್ ವಿಚಾರಗಳನ್ನು ವಿರೋಧಿಸುವ ಸಂಸ್ಥೆಯ ಸಕ್ರೀಯ ಸದಸ್ಯರಾಗಿದ್ದಾರೆ. ನ.18ರಂದು ನಡೆಯಲಿರುವ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ಕಾರ್ಯಕ್ರಮವನ್ನು ತಕ್ಷಣವೇ ರದ್ದುಗೊಳಿಸಬೇಕು. ಒಂದು ವೇಳೆ ರದ್ದುಗೊಳಿಸದಿದ್ದರೆ ಸಮಿತಿಯ ವತಿಯಿಂದ ಪ್ರತಿಭಟನಾ ತಮಟೆ ಚಳವಳಿ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News