ಶಿವಮೊಗ್ಗ: ವ್ಯಕ್ತಿಗೆ ಚಾಕು ಇರಿತ, ಗಂಭೀರ ಗಾಯ
Update: 2025-12-28 09:36 IST
ಶಿವಮೊಗ್ಗ : ಮಲವಗೊಪ್ಪದ ಪೆಟ್ರೋಲ್ ಬಂಕ್ ಎದುರು ನಿನ್ನೆ ರಾತ್ರಿ ಇಬ್ಬರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬರಿಗೆ ಚಾಕು ಇರಿಯಲಾಗಿದೆ. ಮಲವಗೊಪ್ಪ ನಿವಾಸಿ ವಿನೋದ್ (35) ಚಾಕು ಇರಿತಕ್ಕೊಳಗಾದವರು. ಆರೋಪಿ ವಿಕ್ರಂ (42) ಎಂಬಾತ ವಿನೋದ್ ಅವರ ಮೇಲೆ ಚಾಕುವಿನಿಂದ ಮನಸೋಇಚ್ಛೆ ದಾಳಿ ನಡೆಸಿದ್ದಾನೆ.
ದಾಳಿಯ ರಭಸಕ್ಕೆ ವಿನೋದ್ ಅವರ ಮುಖ, ಕೈ ಹಾಗೂ ಮೈಮೇಲೆ ತೀವ್ರ ಗಾಯಗಳಾಗಿವೆ. ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ ವಿಕ್ರಂನ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ವೈಯಕ್ತಿಕ ಕಾರಣಕ್ಕೆ ಜಗಳವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.