×
Ad

ಕೆಪಿಎಸ್ ಶಾಲೆಗಳಲ್ಲಿ ಕಡ್ಡಾಯವಾಗಿ ಸಂಗೀತ, ದೈಹಿಕ ಶಿಕ್ಷಕರ ನೇಮಕ ಮಾಡಲಾಗುವುದು : ಮಧುಬಂಗಾರಪ್ಪ

Update: 2025-12-21 14:19 IST

ಶಿವಮೊಗ್ಗ : ದ್ವೇಷ ಭಾಷಣ ತಡೆ ಮಸೂದೆ ರಾಜ್ಯದ, ದೇಶದ ಭವಿಷ್ಯದ ಪೀಳಿಗೆಯ ದೃಷ್ಟಿಯಿಂದ ಬಹಳ ಒಳ್ಳೆಯ ನಿರ್ಧಾರವಾಗಿದೆ. ದ್ವೇಷ ಭಾಷಣ ತಡೆ ಮಸೂದೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಶಾಲಾ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದನ್ನು ಹಿಡಿದು ಸದನದಲ್ಲಿ ಕೆಲವರು ಪ್ರಶ್ನೆ ಮಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಬರುವುದೆಲ್ಲಾ ನಿಜವೇ ಎಂಬುದನ್ನು ಅರಿಯಬೇಕಿದೆ. ಕರಾವಳಿ ಭಾಗದ ಕೆಲ ಬಿಜೆಪಿ ಮುಖಂಡರು ಸೇರಿದಂತೆ ಹಲವಾರು ಮುಖಂಡರು ದ್ವೇಷ ಭಾಷಣ ಮಾಡಿಕೊಂಡೆ ಬದುಕುತ್ತಿದ್ದಾರೆ ಎಂದು ಆರೋಪಿಸಿದ ಅವರು, ರಾಜ್ಯದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ದ್ವೇಷ ಭಾಷಣ ತಡೆ ಕಾಯ್ದೆ ಜಾರಿಗೆ ತರಲಾಗುತ್ತಿದೆ ಎಂದರು.

ನರೇಗಾ ಯೋಜನೆಯಲ್ಲಿ ಮಹಾತ್ಮ ಗಾಂಧಿ ಹೆಸರೇ ಕೈಬಿಟ್ಟಿದ್ದಾರೆ. ಇದರಂತಹ ನೀಚ ಕೆಲಸ ಮತ್ತೊಂದಿಲ್ಲ. ಮಹಾತ್ಮ ಗಾಂಧೀಜಿಯವರು ದುಡಿಯುವ ಕೈಗೆ ಕೆಲಸ ಕೊಡಿ ಎಂದಿದ್ದರು. ಆದರೆ ಬಿಜೆಪಿಯವರು ಅವರ ಹೆಸರನ್ನೆ ನರೇಗಾ ಯೋಜನೆಯಲ್ಲಿ ಕೈಬಿಟ್ಟಿದ್ದಾರೆ ಎಂದು ಕಿಡಿಕಾರಿದರು.

ಅಡಿಕೆ ಸಂಶೋಧನೆಗೆ 45 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂಬ ಸಂಸದ ರಾಘವೇಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಧಿವೇಶನ ಸಂದರ್ಭದಲ್ಲಿ ಮನವಿ ಪತ್ರ ಕೊಡುವುದೇ ಇವರಿಗೆ ಕೆಲಸ. ಅಧಿವೇಶನಕ್ಕೂ ಮೊದಲು ಒಂದಷ್ಟು ಪತ್ರಗಳನ್ನು ತಯಾರು ಮಾಡಿಕೊಂಡು ಕೇಂದ್ರದ ಮಂತ್ರಿಗಳಿಗೆ ಮನವಿ ಕೊಟ್ಟು ಫೋಟೋ ಹೊಡೆಸಿಕೊಂಡು ಪತ್ರಿಕೆಗಳಲ್ಲಿ ಹಾಕಿಸಿಕೊಳ್ಳೋದು ಸಂಸದ ರಾಘವೇಂದ್ರ ಅವರ ಕೆಲಸವಾಗಿದೆ. ಅರ್ಜಿ ಕೊಟ್ಟ ತಕ್ಷಣ ಅಲ್ಲಿ ಕೆಲಸ ಆಗಲ್ಲ. ಈ ವಿಚಾರವಾಗಿ ಸಂಸದ ರಾಘವೇಂದ್ರ ಸುಳ್ಳು ಹೇಳಿದ್ದಾರೆ ಎಂದರು.

ಬಿಜೆಪಿಯವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸದನದಲ್ಲಿ ಅವಮಾನ ಮಾಡಿದ್ದಾರೆ. ಸರಿಯಾಗಿ ಹೇಳಿದ್ದರೂ ಕೂಡ ಅವರಿಗೆ ಅವಮಾನಿಸಲಾಯ್ತು. ನನ್ನ ಪಕ್ಕ ಕೂತು ಅವರು ಪಾಪ ಕಣ್ಣೀರು ಹಾಕಿದರು. ಅಧಿಕಾರಿಗಳು ನನಗೆ ಗೊಂದಲ ಮಾಡಿದರು ಅಂತಾ ಹೇಳಿದ್ದರು. ಗೃಹಲಕ್ಷ್ಮಿ ಯೋಜನೆಗೆ ವಿರೋಧ ಮಾಡಿದ ಬಿಜೆಪಿಯವರೇ ಇವತ್ತು ಹಣ ಬಂದಿಲ್ಲವೆಂದು ಆರೋಪಿಸುತ್ತಿದ್ದಾರೆ. ನಮ್ಮ ಸರಕಾರದ ಯೋಜನೆಗಳಿಗೆ ಅವರೇ ಮೊದಲು ಹೋಗಿ ಅರ್ಜಿ ಹಾಕುತ್ತಾರೆ ಎಂದು ಕುಟುಕಿದರು.

ಸಂಗೀತ, ದೈಹಿಕ ಶಿಕ್ಷಕರ ನೇಮಕ :

ಶಿಕ್ಷಣ ಇಲಾಖೆಯಲ್ಲಿ ಹಣದ ಕೊರತೆ ಇಲ್ಲ. ಕೆಪಿಎಸ್ ಶಾಲೆ ಎಲ್.ಕೆ.ಜಿ. ಯಿಂದ ದ್ವಿತೀಯ ಪಿಯುಸಿವರೆಗೂ 14 ವರ್ಷಗಳ ಕಾಲ ಮಕ್ಕಳು ಒಂದೇ ಕಡೆ ವ್ಯಾಸಂಗ ಮಾಡಬಹುದಾಗಿದೆ. ಮುಂದಿನ ವರ್ಷದಿಂದ ಎಲ್.ಕೆ.ಜಿ. ಯಿಂದ ದ್ವಿತೀಯ ಪಿಯುಸಿ ವರೆಗೂ ಪಠ್ಯ ಹಾಗೂ ನೋಟ್ ಪುಸ್ತಕ, ಬಿಸಿಯೂಟ ನೀಡಲಾಗುವುದು. ಕೆಪಿಎಸ್ ಶಾಲೆಗಳಲ್ಲಿ ಕಡ್ಡಾಯವಾಗಿ ಸಂಗೀತ ಹಾಗೂ ದೈಹಿಕ ಶಿಕ್ಷಕರ ನೇಮಕ ಮಾಡಲಾಗುವುದು. ಈ ಬಗ್ಗೆ ಸಿಎಂ ಸಿದ್ಧರಾಮಯ್ಯನವರ ಗಮನ ಸೆಳೆಯಲಾಗುವುದು ಎಂದರು.

ಶಿವಮೊಗ್ಗ ಕಮಿಷನೆರೇಟ್ ಮಾಡಬೇಕೆಂಬ ಪ್ರಸ್ತಾಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗಾಂಜಾ, ಅಫೀಮು, ಅನೈತಿಕ ಚಟುವಟಿಕೆ ಬಗ್ಗೆ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಕಮಿಷನರೇಟ್ ಮಾಡುವ ಹೊರತಾಗಿಯೂ ಇದಕ್ಕೆಲ್ಲಾ ಕಡಿವಾಣ ಹಾಕಲು ನಾನು ಸೂಚಿಸಿದ್ದೇನೆ ಎಂದು ಹೇಳಿದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News