×
Ad

ಶಿವಮೊಗ್ಗ | ವಕ್ಫ್ ತಿದ್ದುಪಡಿ ಕಾಯ್ದೆ ಖಂಡಿಸಿ ಪ್ರತಿಭಟನಾ ಸಭೆ

Update: 2025-05-03 23:39 IST

ಶಿವಮೊಗ್ಗ : ಕಳೆದ 10 ವರ್ಷಗಳಿಂದ ಈ ದೇಶದಲ್ಲಿ ಒಂದು ಧರ್ಮವನ್ನು ಗುರಿಯಾಗಿರಿಸಿ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಮುಸ್ಲಿಮ್ ಧಾರ್ಮಿಕ ಮುಖಂಡ ಶಾಹುಲ್ ಹಮೀದ್ ಮುಕ್ತಿಯಾರ್ ಆರೋಪಿಸಿದ್ದಾರೆ.

ವಕ್ಫ್ ತಿದ್ದುಪಡಿ ಕಾಯ್ದೆ ಖಂಡಿಸಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ನಗರದ ಸರ್ ಎಂ.ವಿಶ್ವೇಶ್ವರಯ್ಯ ರಸ್ತೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ನಾವೆಲ್ಲಾ ಭಾರತೀಯರೇ. ಈ ಮಣ್ಣಲ್ಲೇ ಹುಟ್ಟಿದವರು. ನಮಗೂ ಈ ದೇಶದಲ್ಲಿ ಸಂವಿಧಾನದ ಪ್ರಕಾರ ಎಲ್ಲ ಹಕ್ಕು ಇದೆ. ವಕ್ಫ್ ಆಸ್ತಿಯನ್ನು ಯಾರೇ ಒತ್ತುವರಿ ಮಾಡಿದ್ದರೂ ಅದನ್ನು ಹಿಂದಿರುಗಿಸಲೇಬೇಕು. ಮುಸ್ಲಿಮರ ಆಸ್ತಿಗೆ ಬೇರೆ ಯಾರೂ ಕೈ ಹಾಕಲು ಸಾಧ್ಯವಿಲ್ಲ ಎಂದರು.

ಚಿಂತಕ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಈ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಜನರ ಭಾವನೆಗಳನ್ನು ನಾಶ ಮಾಡಲಾಗುತ್ತಿದೆ. ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಇದು ಸಂವಿಧಾನದ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತದ ಮುಸ್ಲಿಮರ ಧ್ವನಿಯಾಗಿ ವಕ್ಫ್ ತಿದ್ದುಪಡಿ ಕಾಯ್ದೆ ಇಲ್ಲ. ಇದರಿಂದ ವಕ್ಫ್ ಆಸ್ತಿಗಳ ಸ್ವಾಯತ್ತತೆ ಕಸಿದುಕೊಳ್ಳುತ್ತದೆ. ಸಂವಿಧಾನದ ಗ್ಯಾರಂಟಿಗಳನ್ನು ಉಲ್ಲಂಘಿಸುತ್ತದೆ. ಮತ್ತು ಭಾರತದ ಜಾತ್ಯತೀತ ರಚನೆಗೆ ಧಕ್ಕೆ ತರುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೇಂದ್ರ ಹಾಗೂ ರಾಜ್ಯ ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರರನ್ನು ಕಡ್ಡಾಯವಾಗಿ ಸೇರಿಸುವುದು ಸಂವಿಧಾನದ 26ನೇ ವಿಧಿಯ ಅನ್ವಯ ಉಲ್ಲಂಘನೆಯಾಗುತ್ತದೆ. ಇದು ಮುಸ್ಲಿಮರಿಗೆ ತಮ್ಮ ಧಾರ್ಮಿಕ ಸಂಸ್ಥೆಗಳನ್ನು ನಿರ್ಮಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ದಾಖಲೆ ಇಲ್ಲದ ಮಸೀದಿಗಳು, ಖಬರಸ್ಥಾನಗಳು ಮತ್ತು ದರ್ಗಾಗಳಿಗೆ ಅಪಾಯವನ್ನೊಡ್ಡುತ್ತದೆ. ಮತ್ತು ಸರಕಾರದ ಕೈವಶವಾಗಬಹುದು. ವಕ್ಫ್ ಆಸ್ತಿಯ ಮಾಲಕತ್ವವನ್ನು ಜಿಲ್ಲಾಧಿಕಾರಿಯೇ ನಿರ್ಧರಿಸುವ ಅಧಿಕಾರ ನೀಡುವುದು ನ್ಯಾಯಾಲಯದ ಮೇಲ್ವಿಚಾರಣೆ ಇಲ್ಲದೆ ಸ್ವೇಚ್ಛಾಚಾರ ತೀರ್ಮಾನಕ್ಕೆ ದಾರಿ ಮಾಡುತ್ತದೆ. ಅಲ್ಲದೆ, ಇದು ವಕ್ಫ್ ಮಂಡಳಿಗಳ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು, ಮುಹಮ್ಮದ್ ಇರ್ಫಾನ್ ಖಾನ್, ಇಜಾಝ್ ಪಾಷ, ಮುಫ್ತಿ ಸೈಯದ್ ಮುಜೀಬುಲ್ಲಾ, ಮುಫ್ತಿ ಮುಹಮ್ಮದ್ ಶಫೀವುಲ್ಲಾ ಖಾಸಿಮಿ, ಶೇಖ್ ಅಲಿ, ಮೌಲಾನ ಹಾಮಿದ್ ಉಮರಿ, ಮೌಲಾನ ಅಬ್ದುಲ್ ಜಬ್ಬಾರ್ ಸಾದಿಕ್, ಅಫ್ತರ್ ಕೋಡಿಬೇಂದ್ರೆ, ಮೌಲಾನ ಝಬೀವುಲ್ಲಾ ಸಾಬ್, ಮುಫ್ತಿ ಇಫ್ತಾಬ್ ಸಾಹೇಬ್, ಜಾಮಿಲ್ ಉಮರಿ ಹಾಗೂ ಇತರರಿದ್ದರು.

ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಖಂಡಿಸಿ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ಶನಿವಾರ ಜಿಲ್ಲಾ ವಕ್ಫ್(ಮುಸ್ಲಿಮ್ ಹಾಸ್ಟೆಲ್)ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ವಕ್ಫ್ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News