ಶಿವಮೊಗ್ಗ ಡಿಸಿ, ಎಸ್ಪಿ ವರ್ಗಾವಣೆ; ನೂತನ ಜಿಲ್ಲಾಧಿಕಾರಿಯಾಗಿ ಪ್ರಭುಲಿಂಗ ಕವಲಿಕಟ್ಟಿ ನೇಮಕ
ಪ್ರಭುಲಿಂಗ ಕವಲಿಕಟ್ಟಿ, ಗುರುದತ್ತ ಹೆಗಡೆ, ಮಿಥುನ್ ಕುಮಾರ್, ಬಿ.ನಿಖಿಲ್
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಗುರುದತ್ತ ಹೆಗಡೆ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಪ್ರಸ್ತುತ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಭುಲಿಂಗ ಕವಲಿಕಟ್ಟಿ ಅವರನ್ನು ನಿಯೋಜಿಸಿದೆ.
ಜಿಲ್ಲಾಧಿಕಾರಿಯಾಗಿರುವ ಗುರುದತ್ತ ಹೆಗಡೆ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಸ್ಟೇಟ್ ಮೆಡಿಕಲ್ ಸಪ್ಲೈ ಕಾರ್ಪೊರೇಷನ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿ ಡಿಪಿಎಆರ್ ಆದೇಶದಲ್ಲಿ ತಿಳಿಸಲಾಗಿದೆ.
ಎಸ್ಪಿ ವರ್ಗಾವಣೆ:
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರ ವರ್ಗಾವಣೆಯಾಗಿದೆ. ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಿ.ನಿಖಿಲ್ ಅವರನ್ನು ಸರ್ಕಾರ ನೇಮಕ ಮಾಡಿದೆ.
ಜಿ.ಕೆ.ಮಿಥುನ್ ಕುಮಾರ್ ಅವರು 2022ರ ಅಕ್ಟೋಬರ್ 5ರಂದು ಶಿವಮೊಗ್ಗ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅವರನ್ನು ಬೆಂಗಳೂರು ನಗರದ ಈಶಾನ್ಯ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಕೋಲಾರ ಜಿಲ್ಲೆಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿದ್ದ ಬಿ.ನಿಖಿಲ್ ಅವರನ್ನು ಶಿವಮೊಗ್ಗಕ್ಕೆ ವರ್ಗಾಯಿಸಲಾಗಿದೆ