ದಿಲ್ಲಿ ಮಾಲಿನ್ಯದ ನಡುವೆ ʼದೀಪಾವಳಿ ಮಿಲನʼ: ಮೋದಿ–ಅಮಿತ್ ಶಾ ಜೊತೆ ಪತ್ರಕರ್ತರ ಸೆಲ್ಫಿ
‘ಮಡಿಲ ಮಾಧ್ಯಮ’ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ; ‘ಸರ್ಕಾರವನ್ನು ಪ್ರಶ್ನಿಸಲು ಧೈರ್ಯವಿಲ್ಲವೇ?’ ಎಂದ ಜನರು
Photo Credit : X
ಹೊಸದಿಲ್ಲಿ: ಕೇಂದ್ರದ ಬಿಜೆಪಿ ಸರ್ಕಾರದೊಂದಿಗಿನ ಮಾಧ್ಯಮಗಳ ನಿಕಟತೆ ಹಾಗೂ ಪತ್ರಿಕೋದ್ಯಮದ ಸ್ವತಂತ್ರತೆಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮತ್ತೆ ಚರ್ಚೆ ಆರಂಭವಾಗಿದೆ. ಬಿಜೆಪಿಯ ದೀಪಾವಳಿ ಮಿಲನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾಧ್ಯಮ ಪ್ರತಿನಿಧಿಗಳು ಕುಳಿತು ಸೆಲ್ಫಿ ತೆಗೆದುಕೊಳ್ಳುತ್ತಿರುವ ಚಿತ್ರಗಳನ್ನು ಮುಂದಿಟ್ಟುಕೊಂಡು, ಪತ್ರಕರ್ತರು ಸರ್ಕಾರವನ್ನು ಪ್ರಶ್ನಿಸುವ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆಯೇ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಜನರು ಎತ್ತಿದ್ದಾರೆ.
Mr Vicki (@ParamaTapasvii) ಎಂಬ ಎಕ್ಸ್ ಬಳಕೆದಾರರು ಈ ಕುರಿತು ಪೋಸ್ಟ್ ಹಂಚಿಕೊಂಡು, ಮಾಧ್ಯಮದ ಒಂದು ವರ್ಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಕರ್ತರು ಸರ್ಕಾರದ ಮುಂದೆ ಕೈಕಟ್ಟಿ, ಬಾಯಿಮುಚ್ಚಿ ಕುಳಿತಿರುವ ಸ್ಥಿತಿಗೆ ತಲುಪಿದ್ದಾರೆ ಎಂದು ಟೀಕಿಸಿದ್ದಾರೆ.
'ಸುಮ್ಮನೆ ಮಾರಿಕೊಂಡ ಮಾಧ್ಯಮ ಎಂದು ಯಾರು ಹೇಳುವುದಿಲ್ಲ ಅಲ್ಲವೇ?' ಎಂಬ ವ್ಯಂಗ್ಯದೊಂದಿಗೆ ಆರಂಭವಾಗುವ ಪೋಸ್ಟ್ ನಲ್ಲಿ, ಸರ್ಕಾರವನ್ನು ಪ್ರಶ್ನಿಸಲು ಪತ್ರಕರ್ತರ ಕೈಯಲ್ಲಿ ಮೈಕ್ ಇಲ್ಲ, ಎದೆಯಲ್ಲಿ ಧೈರ್ಯವೂ ಇಲ್ಲ ಎಂಬರ್ಥದಲ್ಲಿ ಟೀಕಿಸಲಾಗಿದೆ. ಇಂತಹ ಮಾಧ್ಯಮಗಳಿಂದ ನಿಷ್ಪಕ್ಷಪಾತ ಮತ್ತು ಸತ್ಯಾಧಾರಿತ ವರದಿಯನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಲಾಗಿದೆ.
ಮಾಧ್ಯಮ ಸಂಸ್ಥೆಗಳ TRP ಜನರ ಬೆಂಬಲದಿಂದ ಬರುತ್ತಿಲ್ಲ, ಬದಲಿಗೆ ಬಿಜೆಪಿಯಿಂದಲೇ ಬರುತ್ತಿದೆ ಎಂಬ ಆರೋಪವನ್ನೂ ಪೋಸ್ಟ್ ನಲ್ಲಿ ಮಾಡಲಾಗಿದೆ. ಸರ್ಕಾರದ ಪರವಾಗಿ ನಿಲ್ಲುವ ಮಾಧ್ಯಮಗಳನ್ನು 'ಮಡಿಲ ಮಾಧ್ಯಮ’ ಎಂದು ಕರೆಯುವುದಕ್ಕೆ ಕಾರಣವಿದೆ ಎಂದು ವ್ಯಂಗ್ಯವಾಡಲಾಗಿದೆ.
►ಸೆಲ್ಫಿ ಚಿತ್ರಗಳೇ ಚರ್ಚೆಯ ಕೇಂದ್ರಬಿಂದು
ಈ ಪೋಸ್ಟ್ ನೊಂದಿಗೆ ಹಂಚಿಕೊಳ್ಳಲಾದ ನಾಲ್ಕು ಚಿತ್ರಗಳಲ್ಲಿ ಬಿಜೆಪಿ ದೀಪಾವಳಿ ಮಿಲನ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರೊಂದಿಗೆ ಕುಳಿತಿರುವ ಮತ್ತು ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯಗಳಿವೆ. ಇದರೊಂದಿಗೆ ಪತ್ರಕರ್ತೆ ಸ್ಮಿತಾ ಮಿಶ್ರಾ ಅವರ ಟ್ವೀಟ್ ನ ಸ್ಕ್ರೀನ್ಶಾಟ್ ಕೂಡ ಸೇರಿಸಲಾಗಿದೆ.
ಸರ್ಕಾರದೊಂದಿಗೆ ಮಾಧ್ಯಮ ಪ್ರತಿನಿಧಿಗಳು ಇಂತಹ ಆತ್ಮೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೂ, ಅದೇ ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳನ್ನು ಸ್ವತಂತ್ರವಾಗಿ ಪ್ರಶ್ನಿಸುವ ಪತ್ರಿಕೋದ್ಯಮದ ಜವಾಬ್ದಾರಿಗೂ ನಡುವೆ ಇರುವ ಅಂತರದ ಕುರಿತು ಈ ಪೋಸ್ಟ್ ಚರ್ಚೆ ಹುಟ್ಟುಹಾಕಿದೆ.
►'ಎಂಜಲು ಗಿರಾಕಿಗಳು' ಎಂದು ವ್ಯಂಗ್ಯವಾಡಿದ ಜನರು
Muruli (@MuraliRamesh001) ಎಂಬ ಬಳಕೆದಾರರು, 'ಬಿಸ್ಕೆಟ್ ಗೆ ಬಾಯಿ ಬಿಟ್ಟುಕೊಂಡು ಕುಳಿತಿರುವುದನ್ನು ನೋಡಿದರೆ ಎಂಜಲು ಗಿರಾಕಿಗಳು ಎಂಬುದು ಗೊತ್ತಾಗುತ್ತದೆ ಅಲ್ಲವೇ?' ಎಂಬರ್ಥದಲ್ಲಿ ವ್ಯಂಗ್ಯವಾಡಿದ್ದಾರೆ.
ಇನ್ನು @udaya482264 ಎಂಬ ಖಾತೆದಾರರು 'All paid slaves' (ಎಲ್ಲರೂ ಪಾವತಿಯಾದ ಗುಲಾಮರು) ಎಂದು ಪ್ರತಿಕ್ರಿಯಿಸಿದ್ದಾರೆ.
"‘ದಲಾಲಿ ಮಿಲನ್’ ಕಾರ್ಯಕ್ರಮದಲ್ಲಿ ಮೋದಿ ಜೀ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಸಾಲುಗಟ್ಟಿ ನಿಂತಿದ್ದ ಆಳುವವರ ಪರವಾಗಿ ಮಾತನಾಡುವ ಪತ್ರಕರ್ತರಿಗೆ ಅದೃಷ್ಟವೋ ಅದೃಷ್ಟ! ಕೆಲವರಂತೂ ದೇವರೇ ಬಂದು ಯೋಗಕ್ಷೇಮ ವಿಚಾರಿಸುವ ಭಾಗ್ಯ ಪಡೆದರೆ, ಇನ್ನು ಕೆಲವರು ಅದಕ್ಕಿಂತಲೂ ಪುಣ್ಯವಂತರು. ಸಾಕ್ಷಾತ್ ಪೂಜ್ಯ ತಾತನೇ ತಮ್ಮ ಜೈವಿಕವಲ್ಲದ ಕೈಗಳಿಂದ ಸ್ಪರ್ಶಿಸುವ ಸೌಭಾಗ್ಯ ಅವರದಾಯಿತು!" ಎಂದು ಬಳಕೆದಾರರೊಬ್ಬರು ಟೀಕಿಸಿದ್ದಾರೆ.
ಸಣ್ಣಪುಟ್ಟ ನಾಯಕರು ತಮ್ಮ ನೆಚ್ಚಿನ ನಾಯಕರೊಂದಿಗೆ ತೆಗೆಸಿಕೊಂಡ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು, ಅದನ್ನೇ ದೊಡ್ಡ ಸಾಧನೆಯೆಂಬಂತೆ ಬಿಂಬಿಸಿಕೊಳ್ಳುವ ರೀತಿಯಲ್ಲೇ ಈ ಪತ್ರಕರ್ತರೂ ಮೋದಿ ಜೀ ಜೊತೆಗಿನ ಸೆಲ್ಫಿಗಳನ್ನು ಯಾವುದೋ ಮಹತ್ಸಾಧನೆ ಎಂಬಂತೆ ಪ್ರದರ್ಶಿಸಿಕೊಳ್ಳುತ್ತಿದ್ದಾರೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
►ನಿಮ್ಮದೇ ಜನರ ನಡುವೆಯೂ ಟೆಲಿಪ್ರಾಂಪ್ಟರ್ ಬೇಕಿತ್ತೇ?: ರಾಹುಲ್ ವ್ಯಂಗ್ಯ
ಇದೇ ಸಂದರ್ಭದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ದೀಪಾವಳಿ ಮಿಲನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರನ್ನು ಟೀಕಿಸಿ ಹಂಚಿಕೊಂಡಿರುವ ಪೋಸ್ಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಗಮನ ಸೆಳೆದಿದೆ.
'ಮೋದಿಜಿ, ನಿಮ್ಮದೇ ಮಡಿಲ ಮೀಡಿಯಾದ ದೀಪಾವಳಿ ಮಿಲನ ಕಾರ್ಯಕ್ರಮದಲ್ಲೂ ಟೆಲಿಪ್ರಾಂಪ್ಟರ್ ಬೇಕಾಯಿತೇ? ಜನ ನಿಮ್ಮವರು, ವೇದಿಕೆ ನಿಮ್ಮದು, ವಾತಾವರಣವೂ ನಿಮ್ಮದೇ. ಆದರೂ ಸ್ಕ್ರಿಪ್ಟ್ ಬೇಕಿತ್ತೇ? ಒತ್ತಡದಲ್ಲಿ ಗಾಬರಿಯಾಗಿರಬೇಕು. ಇರಲಿ, ನನ್ನೊಂದಿಗೆ ಚರ್ಚೆ ಮಾಡುವಾಗಲೂ ಟೆಲಿಪ್ರಾಂಪ್ಟರ್ ತೆಗೆದುಕೊಂಡು ಬನ್ನಿ' ಎಂಬರ್ಥದಲ್ಲಿ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
►ಮಾಲಿನ್ಯದ ನಡುವೆ ದೀಪಾವಳಿ ಮಿಲನ
ಇದೇ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಿಲ್ಲಿಯ ವಾಯುಮಾಲಿನ್ಯದ ಸಮಸ್ಯೆಯನ್ನೂ ಕೆಲವರು ಪ್ರಸ್ತಾಪಿಸಿದ್ದಾರೆ. ದಿಲ್ಲಿಯಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಹದಗೆಟ್ಟಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ದೀಪಾವಳಿ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ಪ್ರಶ್ನಿಸಿ ಕೆಲವರು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
ಇದೇ ಧಾಟಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿಯೂ ಹಲವರು ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ. ದೀಪಾವಳಿ ಮಿಲನ ಕಾರ್ಯಕ್ರಮದಲ್ಲಿ ಪ್ರಧಾನಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದಕ್ಕಿಂತ ಜನರ ಸಮಸ್ಯೆಗಳ ಕುರಿತು ಪ್ರಶ್ನೆ ಕೇಳುವುದು ಪತ್ರಕರ್ತರ ಆದ್ಯತೆಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಿಲ್ಲಿಯ ವಾಯುಮಾಲಿನ್ಯ ಮಾತ್ರವಲ್ಲದೆ, ಪತ್ರಕರ್ತರ ಬಂಧನ ಮತ್ತು ಪತ್ರಿಕಾ ಸ್ವಾತಂತ್ರ್ಯದಂತಹ ವಿಚಾರಗಳನ್ನು ಪ್ರಧಾನಿಯ ಮುಂದೆ ಪ್ರಸ್ತಾಪಿಸದಿರುವುದನ್ನೂ ಹಲವರು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ, ಬಿಜೆಪಿ ದೀಪಾವಳಿ ಮಿಲನ ಕಾರ್ಯಕ್ರಮದ ಚಿತ್ರಗಳು ಕೇವಲ ರಾಜಕೀಯ ಸಮಾರಂಭದ ಚರ್ಚೆಗೆ ಸೀಮಿತವಾಗದೆ, ಮಾಧ್ಯಮಗಳ ಸ್ವತಂತ್ರತೆ, ಅಧಿಕಾರದೊಂದಿಗಿನ ಅವುಗಳ ಸಂಬಂಧ ಮತ್ತು ಪತ್ರಕರ್ತರ ವೃತ್ತಿಪರ ಜವಾಬ್ದಾರಿಯ ಕುರಿತು ಚರ್ಚೆಗೆ ಕಾರಣವಾಗಿವೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪತ್ರಕರ್ತರು ಅದೇ ಸರ್ಕಾರದ ನೀತಿಗಳು, ಆಡಳಿತ ವೈಫಲ್ಯಗಳು ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿರ್ಭೀತಿಯಿಂದ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆಯೇ ಎಂಬುದೇ ಈ ಚರ್ಚೆಯ ಪ್ರಮುಖ ಪ್ರಶ್ನೆಯಾಗಿದೆ.