ಬ್ಯಾಂಕ್ ದಿವಾಳಿಯಾದರೆ ಠೇವಣಿದಾರರ ಹಣ ಏನಾಗುತ್ತದೆ?
ಉಳಿತಾಯದ ಹಲವು ಆಧುನಿಕ ವಿಧಾನಗಳು ಇದ್ದರೂ, ಭಾರತೀಯರಲ್ಲಿ ಈಗಲೂ ದೊಡ್ಡ ಸಂಖ್ಯೆಯ ಜನರು ತಮ್ಮ ಹಣವನ್ನು ಬ್ಯಾಂಕುಗಳಲ್ಲಿ ಇಡುವುದು ಸುರಕ್ಷಿತ ಎಂದು ಪರಿಗಣಿಸುತ್ತಾರೆ. ಆದರೆ ಆ ಬ್ಯಾಂಕ್ ದಿವಾಳಿಯಾದರೆ ಅಥವಾ ಯಾವುದೇ ವಿಪತ್ತಿನಲ್ಲಿ ಭಾರೀ ನಷ್ಟ ಅನುಭವಿಸಿದರೆ ಆಗ ಠೇವಣಿದಾರರ ಹಣದ ಗತಿಯೇನು?
ಈ ಅನುಮಾನಗಳಿಗೆ ಇಲ್ಲಿದೆ ಉತ್ತರ.
ಒಂದು ಬ್ಯಾಂಕ್ ಹೇಗೆ ದಿವಾಳಿಯಾಗುತ್ತದೆ ಎಂಬುದನ್ನು ತಿಳಿಯಬೇಕು. ಒಂದು ಬ್ಯಾಂಕಿನ ಹೊಣೆಗಾರಿಕೆ ಅಥವಾ ಅದು ಪಾವತಿ ಮಾಡಬೇಕಾದ ಮೊತ್ತ ಅದರ ಆಸ್ತಿಗಳಿಗಿಂತ ಹೆಚ್ಚಾದಾಗ, ಅದರ ವೆಚ್ಚಗಳು ಅದರ ಆದಾಯ ಮೀರಲು ಶುರುವಾಗುತ್ತವೆ. ಈ ಪರಿಸ್ಥಿತಿ ನಿಭಾಯಿಸಲು ಬ್ಯಾಂಕ್ ವಿಫಲವಾದರೆ, ಅದನ್ನು ದಿವಾಳಿ ಎಂದು ಹೇಳಲಾಗುತ್ತದೆ.
►ನಿಮ್ಮ ಬ್ಯಾಂಕ್ ದಿವಾಳಿಯಾದರೆ, ನಿಮ್ಮ ಹಣವನ್ನು ಮರಳಿ ಪಡೆಯುವುದು ಹೇಗೆ?
ಇದರ ಜವಾಬ್ದಾರಿಯನ್ನು ಡಿಐಸಿಜಿಸಿ, ಅಂದರೆ ಡೆಪಾಸಿಟ್ ಇನ್ಶೂರೆನ್ಸ್ & ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಗೆ ವಹಿಸಲಾಗಿದೆ. ಡೆಪಾಸಿಟ್ ಇನ್ಶೂರೆನ್ಸ್ & ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಎನ್ನುವುದು ಆರ್ಬಿಐನ ಅಂಗಸಂಸ್ಥೆ. ಇದು ಠೇವಣಿದಾರರಿಗೆ ಅವರ ಹಣಕ್ಕೆ ವಿಮಾ ರಕ್ಷಣೆ ನೀಡುತ್ತದೆ.
ಈ ವಿಮಾ ರಕ್ಷಣೆಯಡಿಯಲ್ಲಿ, ಠೇವಣಿದಾರ ತನ್ನ ಮೂಲ ಮೊತ್ತ ಮತ್ತು ಬಡ್ಡಿಯ ಮೇಲೆ ಗರಿಷ್ಠ 5 ಲಕ್ಷ ರೂ.ಗಳ ವಾಪಸ್ ನ ಗ್ಯಾರಂಟಿ ಪಡೆಯುತ್ತಾನೆ. ಅಂದರೆ, ಬ್ಯಾಂಕ್ ಮುಚ್ಚಿದರೆ ಅಥವಾ ದಿವಾಳಿಯಾದರೆ, ನೀವು ಆ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಯಾವುದೇ ಮೊತ್ತಕ್ಕೆ 5 ಲಕ್ಷ ರೂ ಗಳ ವರೆಗೆ ಗ್ಯಾರಂಟಿ ಇರುತ್ತದೆ.
ನೀವು ನಿಮ್ಮ ಹೆಸರಿನಲ್ಲಿ ಒಂದೇ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ವಿಭಿನ್ನ ಖಾತೆಗಳನ್ನು ತೆರೆದಿದ್ದೀರಿ ಮತ್ತು ಹಣ ಠೇವಣಿ ಮಾಡಿದ್ದೀರಿ ಎಂದಾದರೆ, ಈ ಎಲ್ಲಾ ಖಾತೆಗಳಲ್ಲಿ ಠೇವಣಿ ಇಟ್ಟಿರುವ ಮೊತ್ತವನ್ನು ಸೇರಿಸಲಾಗುತ್ತದೆ. ಅದು 5 ಲಕ್ಷಕ್ಕಿಂತ ಕಡಿಮೆಯಿದ್ದರೆ ನಿಮಗೆ ಆ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ.
ಆದರೆ ಅದು 5 ಲಕ್ಷ ಮೀರಿದರೆ ಆ ಸಂದರ್ಭದಲ್ಲಿ ಗರಿಷ್ಠ ರಿಟರ್ನ್ ಮಿತಿ 5 ಲಕ್ಷ ಮಾತ್ರ ಸಿಗುತ್ತದೆ. ನೀವು ಎರಡು ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದಿದ್ದರೆ ಮತ್ತು ಎರಡೂ ಬ್ಯಾಂಕುಗಳು ದಿವಾಳಿಯಾಗಿದ್ದರೆ, ಆ ಸಂದರ್ಭದಲ್ಲಿ ನೀವು ಎರಡೂ ಬ್ಯಾಂಕ್ ಗಳಿಂದ ತಲಾ 5 ಲಕ್ಷದವರೆಗಿನ ಮೊತ್ತ ಮರಳಿ ಪಡೆಯಲು ಸಾಧ್ಯವಿದೆ.
ನೀವು ಯಾವುದೇ ರೀತಿಯ ಖಾತೆ ಹೊಂದಿದ್ದರೂ ಈ ಗ್ಯಾರಂಟಿ ಸಿಗುತ್ತದೆ. ಅಂದ್ರೆ ಸೇವಿಂಗ್ಸ್ ಖಾತೆ, ರಿಕರಿಂಗ್ ಖಾತೆ ಅಥವಾ ಕರೆಂಟ್ ಅಕೌಂಟ್ ಯಾವುದೇ ಖಾತೆಯಾಗಿದ್ದರೂ ವಿಮೆ ಸಿಗುತ್ತದೆ. ಠೇವಣಿ ವಿಮೆ ಖಾತೆದಾರರಿಗೆ ಗರಿಷ್ಠ 90 ದಿನಗಳಲ್ಲಿ ಅವರ ವಿಮಾ ರಕ್ಷಣೆ ನೀಡುತ್ತದೆ. ಆದ್ದರಿಂದ ಸಮಸ್ಯೆ ಸಣ್ಣ ಅಥವಾ ದೊಡ್ಡ ಬ್ಯಾಂಕಿನದ್ದಲ್ಲ.
ಅದು ಬ್ಯಾಂಕ್ ಠೇವಣಿ ವಿಮೆಯ ನಿಯಮಗಳ ಅಡಿಯಲ್ಲಿ ಬಂದರೆ, ನೀವು ಖಂಡಿತವಾಗಿಯೂ ನಿಮ್ಮ ಹಣದ ಮೇಲೆ 5 ಲಕ್ಷ ರೂಪಾಯಿಗಳವರೆಗೆ ವಿಮಾ ರಕ್ಷಣೆ ಪಡೆಯಲು ಸಾಧ್ಯವಿದೆ. ಇಂಥ ಸಂದರ್ಭಗಳಲ್ಲಿ, ಸರ್ಕಾರದ ಜವಾಬ್ದಾರಿ ಏನು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.
ಭಾರತ ಸರ್ಕಾರ ಮತ್ತು ಆರ್‌ಬಿಐ ಒಟ್ಟಾಗಿ ಬ್ಯಾಂಕಿಂಗ್ ವ್ಯವಸ್ಥೆ ಸ್ಥಿರವಾಗಿರಲು ಮತ್ತು ಠೇವಣಿದಾರರ ಹಣ ಸುರಕ್ಷಿತವಾಗಿರಲು ಪ್ರಯತ್ನಿಸುತ್ತವೆ.
►ಬ್ಯಾಂಕ್ ದಿವಾಳಿಯಂಥ ಸಂದರ್ಭಗಳಲ್ಲಿ ಗ್ರಾಹಕರು ಏನು ಮಾಡಬೇಕು?
ಒಂದು ಬ್ಯಾಂಕ್ ಅಂತಹ ಪರಿಸ್ಥಿತಿ ಎದುರಿಸುತ್ತಿರುವಾಗ ಮತ್ತು ಅದರ ವಿರುದ್ಧ ಸರ್ಕಾರಿ ಕ್ರಮ ನಡೆಯುತ್ತಿರುವಾಗ
ಅಥವಾ ಈ ರೀತಿಯ ಸಂಪೂರ್ಣ ಪ್ರಕ್ರಿಯೆ ನಡೆಯುತ್ತಿರುವಾಗ, ಗ್ರಾಹಕರು ಭಯಭೀತರಾಗದೆ, ಬುದ್ಧಿವಂತಿಕೆಯಿಂದ ವರ್ತಿಸಬೇಕು.
ಬಹುತೇಕ ಎಲ್ಲಾ ವಾಣಿಜ್ಯ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು ಠೇವಣಿ ವಿಮೆಯೊಂದಿಗೆ ಇರುತ್ತವೆ. ಹಾಗಾಗಿ, ಗ್ರಾಹಕರು ತಮ್ಮ ಹಣವನ್ನು ಒಂದೇ ಬ್ಯಾಂಕಿನಲ್ಲಿ ಇಡುವ ಬದಲು, ಅದನ್ನು ಬೇರೆ ಬೇರೆ ಬ್ಯಾಂಕುಗಳಲ್ಲಿ ಠೇವಣಿ ಇಡುವುದು ಹೆಚ್ಚು ಸುರಕ್ಷಿತ.
ಅದರ ಜೊತೆಗೇ ತಾವು ಠೇವಣಿ ಇಟ್ಟಿರುವ ಬ್ಯಾಂಕಿನ ಸ್ಥಿತಿಗತಿ ಬಗ್ಗೆ ಗಮನ ಇರಬೇಕು. ಆ ಬ್ಯಾಂಕಿನ ಬ್ಯಾಲೆನ್ಸ್ ಶೀಟ್, ಅದರ ಬಗ್ಗೆ ಸರಕಾರದ ಟೀಕೆ ಟಿಪ್ಪಣಿ ಇತ್ಯಾದಿಗಳನ್ನು ನೋಡುತ್ತಿರಬೇಕು