×
Ad

ಮಧ್ಯಪ್ರದೇಶ | ಬಿಜೆಪಿ ಸಚಿವೆಯಿಂದ 1,000 ಕೋಟಿ ಹಗರಣ?

Update: 2025-07-02 19:26 IST

ಮೋದಿಯವರದೇ ಡಬಲ್ ಎಂಜಿನ್ ಸರ್ಕಾರದ ಮಂತ್ರಿಯೊಬ್ಬರು, 1,000 ಕೊಟಿ ಭ್ರಷ್ಟಾಚಾರದ ಆರೋಪ ಹೊತ್ತಿದ್ದಾರೆ. ಬಿಜೆಪಿ ಸರ್ಕಾರ ತನ್ನದೇ ಮಂತ್ರಿಯ ವಿರುದ್ಧ ತನಿಖೆಗೆ ಮುಂದಾಗಿದೆ. 1,000 ಕೋಟಿ ಲಂಚ ಪಡೆದ ಆರೋಪದ ಮೇಲೆ ಸಚಿವರ ವಿರುದ್ಧ ತನಿಖೆ ನಡೆಸುವಂತೆ ಕೇಳಲಾಗಿದೆ. ಆದರೆ ಅವರನ್ನು ಹುದ್ದೆಯಿಂದ ತೆಗೆದುಹಾಕಲಿಲ್ಲ.

ಮಧ್ಯಪ್ರದೇಶ ಸರ್ಕಾರ ತನ್ನದೇ ಸಚಿವರ ವಿರುದ್ಧ ತನಿಖೆಗೆ ಆದೇಶ ನೀಡಿದೆ. ಬುಡಕಟ್ಟು ಸಮುದಾಯದ ಸಚಿವೆ ವಿರುದ್ಧ 1,000 ಕೋಟಿ ಲಂಚ ಪಡೆದ ಆರೋಪ ಬಂದಿದೆ. ಅದರ ಬಗ್ಗೆ ಪಿಎಂಒ ವರದಿ ಕೇಳಿದೆ. ಮಧ್ಯಪ್ರದೇಶದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆಯ ಸಚಿವೆ ಸಂಪತಿಯಾ ಉಯಿಕೆ ವಿರುದ್ಧ 1,000 ಕೋಟಿ ಲಂಚದ ಆರೋಪ ಮಾಡಲಾಗಿದೆ.

30,000 ಕೋಟಿಯ ಜಲ ಜೀವನ್ ಮಿಷನ್‌ಗೆ ಸಂಬಂಧಿಸಿದ ಸ್ಫೋಟಕ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ ತನ್ನದೇ ಸಚಿವೆ ವಿರುದ್ಧ ತನಿಖೆಗೆ ಆದೇಶಿಸಿದೆ. ಒಂದು ವಾರದಲ್ಲಿ ವರದಿ ಸಲ್ಲಿಸಲು ಆದೇಶಿಸಲಾಗಿದೆ.

ಬೆಂಕಿಕಡ್ಡಿ ಕಳ್ಳತನದ ತನಿಖೆಯೇ ವರ್ಷಗಳ ಕಾಲ ನಡೆಯುತ್ತಿರುವ ದೇಶದಲ್ಲಿ, ಒಂದು ವಾರದೊಳಗೆ 1,000 ಕೋಟಿಗಳ ಭ್ರಷ್ಟಾಚಾರದ ತನಿಖೆ ಮಾಡಿ ವರದಿ ಸಲ್ಲಿಸಲು ಹೇಳಲಾಗಿದೆ ಎಂಬುದಂತೂ ತಮಾಷೆಯಾಗಿದೆ. ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ಮಾಜಿ ಶಾಸಕ ಕಿಶೋರ್ ಸಮ್ರಿತೆ ಅವರು ಪ್ರಧಾನಿಗೆ ಪತ್ರ ಬರೆದು ಸಚಿವೆಯ ಭ್ರಷ್ಟಾಚಾರದ ಬಗ್ಗೆ ದೂರಿದ್ದಾರೆ ಎನ್ನುವುದು ಮತ್ತೊಂದು ದೊಡ್ಡ ವ್ಯಂಗ್ಯ. ಮಧ್ಯಪ್ರದೇಶದಲ್ಲಿ ಜಲ ಜೀವನ್ ಮಿಷನ್‌ ಗಾಗಿ ಕೇಂದ್ರ ಸರ್ಕಾರ ನೀಡಿದ 30,000 ಕೋಟಿಗಳಲ್ಲಿ 1,000 ಕೋಟಿಯನ್ನು ಸಚಿವೆ ಕಮಿಷನ್ ರೂಪದಲ್ಲಿ ನುಂಗಿಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಮಗಾರಿಗಳನ್ನು ಪೂರ್ಣಗೊಳಿಸಿದ ನಕಲಿ ಪ್ರಮಾಣಪತ್ರಗಳನ್ನು ಮಧ್ಯಪ್ರದೇಶದಿಂದ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಇದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಸಮ್ರಿತೆ ಒತ್ತಾಯಿಸಿದ್ದಾರೆ. ಸಂಪತಿಯಾ ಉಯಿಕೆ ಎಂಜಿನಿಯರ್‌ಗಳ ಮೂಲಕ ಸಾವಿರ ಕೋಟಿಗೂ ಹೆಚ್ಚು ಕಮಿಷನ್ ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ದೂರು ಪ್ರಧಾನಿ ಕಚೇರಿಗೆ ತಲುಪಿದಾಗ, ಕೋಲಾಹಲವೆದ್ದಿತು. ಡಬಲ್ ಎಂಜಿನ್ ಸರ್ಕಾರದಲ್ಲಿ ದೇಶದ ಅತಿದೊಡ್ಡ ಲಂಚ ಹಗರಣ ನಡೆದಿದೆ ಎನ್ನುವಾಗ, ಮೋದಿ ಏನು ಮಾಡಬಹುದು? ತನಿಖೆ ಪೂರ್ಣಗೊಳಿಸಿ, ವರದಿಯನ್ನು 7 ದಿನಗಳಲ್ಲಿ ಪಿಎಂಒಗೆ ಕಳಿಸುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಪ್ರಧಾನಿ ಕಚೇರಿಯಿಂದ ಪತ್ರ ಬರೆಯಲಾಗಿದೆ.

ಮಧ್ಯಪ್ರದೇಶದ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ ತನ್ನದೇ ಸಚಿವರ ವಿರುದ್ಧ ತನಿಖೆ ಪ್ರಾರಂಭಿಸಿದೆ. ಯೋಜನಾ ನಿರ್ದೇಶಕರಿಗೆ 7 ದಿನಗಳಲ್ಲಿ ವರದಿ ಸಲ್ಲಿಸುವಂತೆ ಪತ್ರ ಬರೆಯಲಾಗಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಇದು ತನ್ನ ಮೇಲಾಧಿಕಾರಿಯ ಭ್ರಷ್ಟಾಚಾರವನ್ನು ತನಿಖೆ ಮಾಡಿಸುತ್ತಿದ್ದೇನೆ ಎಂದು ಗುಮಾಸ್ತ ಹೇಳಿದ ಹಾಗೆಯೆ ಇದೆ. ಆ ಮೇಲಾಧಿಕಾರಿ ತನ್ನ ಕುರ್ಚಿಯಲ್ಲಿ ನಿರಾಳವಾಗಿ ಕುಳಿತೇ ಇದ್ದಾರೆ.

ಭ್ರಷ್ಟಾಚಾರ ಮತ್ತು ಲಂಚದ ವಿರುದ್ಧ ಹೋರಾಡುವ ಬಿಜೆಪಿಯ ನೀತಿ ಇದು. ಒಬ್ಬ ಎಂಜಿನಿಯರ್ ಸಚಿವರ ಮುಂದೆ ಕುರ್ಚಿಯ ಮೇಲೆ ಅವರು ಸೂಚಿಸದ ಹೊರತು ಕುಳಿತುಕೊಳ್ಳಲು ಧೈರ್ಯ ಮಾಡಲಾರರು. ಹಾಗಿರುವಾಗ, ಬಿಜೆಪಿ ತನಿಖೆ ಮುಗಿಸುತ್ತಿರುವುದಾಗಿ ನಟಿಸುತ್ತಿದೆ. ಅದೂ ಬರೀ 7 ದಿನಗಳಲ್ಲಿ.

ಆರೋಪಗಳ ಪ್ರಕಾರ, ಸಾವಿರಾರು ಕೋಟಿ ಲಂಚದ ಜಾಲ ಮಧ್ಯಪ್ರದೇಶದಾದ್ಯಂತ ಹರಡಿದೆ. ಮತ್ತದರ ತನಿಖೆ ಕೇವಲ 7 ದಿನಗಳಲ್ಲಿ ಮುಗಿಯುತ್ತದೆ ಎನ್ನಲಾಗುತ್ತಿದೆ. ಆಶ್ಚರ್ಯಕರ ವಿಷಯವೆಂದರೆ ತನಿಖೆಗೆ ಆದೇಶಿಸಿದ ಮುಖ್ಯ ಎಂಜಿನಿಯರ್ ಸಂಜಯ್ ಆಂಧವನ್ ಅವರಿಗೇ ಇನ್ನೂ ಈ ಭ್ರಷ್ಟಾಚಾರದ ಆಳ ಅಗಲ ಅರ್ಥವಾಗಿಲ್ಲ. ತನ್ನ ಸಚಿವರ 1,000 ಕೋಟಿ ಲಂಚದ ತನಿಖೆಗೆ ಆದೇಶಿಸಿದ ವ್ಯಕ್ತಿಗೆ ಆರು ದಿನಗಳಾದರೂ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ, ಒಂದು ವಾರದಲ್ಲಿ ವರದಿ ಸಲ್ಲಿಸುವುದಾಗಿ ಹೇಳುತ್ತಿದ್ದಾರೆ.

ಮಂಗಳವಾರ ಸಚಿವ ಸಂಪುಟದಲ್ಲಿ ಉಯಿಕೆ ಈ ವಿಷಯ ಪ್ರಸ್ತಾಪಿಸಿ, ಇಲಾಖೆಯ ಮುಖ್ಯ ಎಂಜಿನಿಯರ್ ಆದೇಶಿಸಿದ ತನಿಖೆ ತನ್ನ ವರ್ಚಸ್ಸಿಗೆ ಕಳಂಕ ತಂದಿದೆ ಎಂದು ಹೇಳಿರುವುದು ವರದಿಯಾಗಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಆಯುಕ್ತರು ಮತ್ತು ದೂರುದಾರ ಕಿಶೋರ್ ಸಮ್ರಿತೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇತರ ಸಚಿವರು ಕೂಡ ಸಂಪತಿಯಾ ಬೆನ್ನಿಗೆ ನಿಂತಿದ್ದು, ಆಧಾರರಹಿತ ದೂರಿನ ತನಿಖೆಗೆ ಆದೇಶಿಸುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ. ಸಚಿವರ ವಿರುದ್ಧ ತನಿಖೆಗೆ ಆದೇಶಿಸುವ ಹಕ್ಕು ಅಧಿಕಾರಿಗೆ ಇದೆಯೇ ಎಂದು ಸಚಿವರು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ ಸಂಜಯ್ ಆಂಧ್ವಾನ್ ಅವರಿಗೆ ವಿವರಣೆ ಕೋರಿ ಶೋಕಾಸ್ ನೋಟಿಸ್ ನೀಡುವ ಸಾಧ್ಯತೆಗಳ ಬಗ್ಗೆಯು ಮೂಲಗಳು ಹೇಳುತ್ತಿವೆ.

ಸಚಿವೆ ತಾನು ಬುಡಕಟ್ಟು ಜನಾಂಗದವರಾಗಿದ್ದು, ಬಡ ಕೂಲಿ ಕಾರ್ಮಿಕರ ಕುಟುಂಬದಿಂದ ಬಂದಿರುವುದಾಗಿ ಹೇಳಿದ್ದಾರೆ. ವಿಚಾರಣೆ ಎದುರಿಸಲು ಸಿದ್ಧ ಎಂದಿದ್ದಾರೆ. ದೂರು ನೀಡಿದ ವ್ಯಕ್ತಿ ತನಗೆ ಕಿರುಕುಳ ನೀಡುತ್ತಿದ್ದು, ಸರ್ಕಾರ ತಟಸ್ಥವಾಗಿದೆ ಎಂದೂ ಅವರು ಹೇಳಿದ್ದಾರೆ.

ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ ಅವರು ಪ್ರಕರಣದ ಬಗ್ಗೆ ಸಂಪುಟಕ್ಕೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು. ತಮ್ಮ ವಿರುದ್ಧದ ದೂರು ಆಧಾರರಹಿತವಾಗಿದೆ ಮತ್ತು ಮುಖ್ಯಮಂತ್ರಿಗಳು ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಡಿಸಿಎಂ ರಾಜೇಂದ್ರ ಶುಕ್ಲಾ ಹೇಳಿರುವುದನ್ನೂ ಉಯಿಕೆ ಪ್ರಸ್ತಾಪಿಸಿದ್ದಾರೆ. ಅಂದಹಾಗೆ, 1,000 ಕೋಟಿ ರೂಪಾಯಿ ಲಂಚ ಪಡೆದ ಆರೋಪ ಹೊತ್ತಿರುವ ಸಚಿವರ ಬಗ್ಗೆ ಗುಣಗಾನ ಚೆನ್ನಾಗಿಯೆ ಇದೆ.

ಮಧ್ಯಪ್ರದೇಶ ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆಯ ವೆಬ್‌ಸೈಟ್‌ನಲ್ಲಿ ಅವರನ್ನು ಹಿಂದಿಯಲ್ಲಿ ಎಂಎ ಪದವೀಧರೆ ಎಂದು ಬರೆಯಲಾಗಿದೆ. ಅಂದರೆ ಅವರು ಸಾಹಿತ್ಯ ಪ್ರೇಮಿ ಮತ್ತು ಅವರು ಎಬಿವಿಪಿ, ಆರೆಸೆಸ್, ಸರಸ್ವತಿ ಶಿಶು ಮಂದಿರ ಮತ್ತು ಬಿಜೆಪಿ ಮಹಿಳಾ ಮೋರ್ಚಾದಂತಹ ಸಂಸ್ಥೆಗಳ ಕಠಿಣ ತರಬೇತಿ ಪಡೆದವರು. ಮೊದಲ ಬಾರಿಗೆ ಶಾಸಕಿಯಾಗಿ, ಮಂತ್ರಿಯೂ ಆಗಿರುವ ಅವರು, ಇದಕ್ಕೂ ಮೊದಲು ಒಮ್ಮೆ ರಾಜ್ಯಸಭಾ ಸದಸ್ಯರಾಗಿದ್ದರು. ಅವರು ಆರೋಗ್ಯ ಇಲಾಖೆಯೊಂದಿಗೆ ಬಹಳ ಹಳೆಯ ಸಂಬಂಧ ಹೊಂದಿದ್ದಾರೆ.

ರಾಜ್ಯಸಭೆ ಸದಸ್ಯರಾಗಿದ್ದಾಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವ್ಯವಹಾರಗಳ ಸ್ಥಾಯಿ ಸಮಿತಿ ಸದಸ್ಯರಾಗಿದ್ದರು. ಅವರ ಮೇಲೆ ಸಾವಿರ ಕೋಟಿ ಲಂಚ ಪಡೆದ ಆರೋಪ ಬಂದಿದೆ ಮತ್ತು ಅವರಿಗೆ ದಿನಕ್ಕೆ 72 ಬಾರಿ ಸೆಲ್ಯೂಟ್ ಮಾಡುವ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!