×
Ad

ಕುಡುಪುವಿನಲ್ಲಿ ಮಾನಸಿಕ ಅಸ್ವಸ್ಥ ಅಶ್ರಫ್‌ ನ ಮೇಲೆ ನಡೆದಿದ್ದದ್ದು ಭೀಕರ ಗುಂಪು ಹತ್ಯೆ!

Update: 2025-07-25 20:23 IST

ಮಂಗಳೂರಿನ ಕುಡುಪುವಿನಲ್ಲಿ ಏಪ್ರಿಲ್ 27, 2025 ರಂದು ಗುಂಪಿನಿಂದ ಹತ್ಯೆಯಾಗಿದ್ದ ಕೇರಳದ ಮಾನಸಿಕ ಅಸ್ವಸ್ಥ ಮೊಹಮ್ಮದ್ ಅಶ್ರಫ್ ಅವರ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಗಳು ಬಹಿರಂಗಗೊಳಿಸಿರುವ ವಿವರಗಳು ಆಘಾತಕಾರಿಯಾಗಿವೆ. ಕ್ರೂರವಾಗಿ ಹಲ್ಲೆಗೈದು ಕೊಲ್ಲಲಾಗಿರುವುದು ಆ ವರದಿಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

Full View

ದೇಹ ಮತ್ತು ತಲೆಗೆ ಆದ ತೀವ್ರ ಗಾಯಗಳ ಪರಿಣಾಮವಾಗಿ, ಮೆದುಳಿನಲ್ಲಿನ ರಕ್ತಸ್ರಾವ ಮತ್ತು ಮೂತ್ರಪಿಂಡಕ್ಕೆ ಆಗಿದ್ದ ಗಾಯದಿಂದಾಗಿ ಅಶ್ರಫ್ ಸಾವನ್ನಪ್ಪಿರುವುದಾಗಿ ವರದಿ ದೃಢಪಡಿಸಿದೆ. ಹಲ್ಲೆಯಲ್ಲಿ ಕಿಡ್ನಿಗೆ ತೀವ್ರ ಹಾನಿಯಾಗಿದ್ದುದೂ ಸಾವಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯನ್ನು ಏಪ್ರಿಲ್ 28 ರಂದು ವೆನ್ಲಾಕ್ ಆಸ್ಪತ್ರೆಯಲ್ಲಿ ದೇರಳಕಟ್ಟೆಯ ಕ್ಷೇಮಾ ಆಸ್ಪತ್ರೆಯ ಡಾ. ಮಹಾಬಲೇಶ್ ಶೆಟ್ಟಿ ಸೇರಿದಂತೆ ವಿಧಿವಿಜ್ಞಾನ ತಜ್ಞರ ಸಮ್ಮುಖದಲ್ಲಿ ನಡೆಸಲಾಗಿತ್ತು.

ಅಶ್ರಫ್ ಅವರ ದೇಹದ ಹಲವು ಭಾಗಗಳಲ್ಲಿ ತೀವ್ರವಾದ ಗಾಯಗಳು ಕಂಡುಬಂದಿವೆ. ಬೆನ್ನಿನ ಮೇಲ್ಭಾಗ ಮತ್ತು ಕೆಳಭಾಗದಲ್ಲಿಯೂ ಮತ್ತೆ ಮತ್ತೆ ಹೊಡೆಯಲಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ತಲೆಯ ಬಲ ಭಾಗದ ಕಪಾಳಭಿತ್ತಿಯಲ್ಲಿ ಊತವಿದ್ದುದು ಕಂಡುಬಂದಿದೆ. ಬಲ ಕಿವಿ, ಹಣೆಯ ಸುತ್ತ, ಬಲಗಣ್ಣಿನ ಕೆಳಗೆ, ಮೂಗು, ಎಡ ಕೆನ್ನೆ ಮತ್ತು ಒಳ ತುಟಿಯ ಮೇಲೆಯೂ ಏಟು ಬಿದ್ದ ಗುರುತುಗಳು ಕಂಡಿವೆ.

ಬಲಗಣ್ಣಿನ ಕೆಳಗೆ ಒಂದು ಸೀಳು ಕೂಡ ಪತ್ತೆಯಾಗಿದೆ. ಎದೆಯ ಎರಡೂ ಭಾಗಗಳಲ್ಲಿ ಮಾತ್ರವಲ್ಲದೆ, ಎಡ ಭುಜದ ಪ್ರದೇಶದ ಮೇಲೆಯೂ ಬಲವಾದ ಹೊಡೆತದ ಗುರುತುಗಳು ಕಂಡಿವೆ. ಬಲಗೈ, ಭುಜ, ಮುಂಗೈ ಮತ್ತು ಕೈಯ ಮೇಲೆ ದೊಡ್ಡ ಗಾಯಗಳು ಪತ್ತೆಯಾಗಿವೆ. ಮೊಣಕೈಯಲ್ಲಿ ಜಜ್ಜಿದಂತಾಗಿರುವುದೂ ಸೇರಿದಂತೆ ಎಡತೋಳು ಮತ್ತು ಕೈಯಲ್ಲಿಯೂ ಅಂಥದೇ ಗಾಯಗಳು ಕಂಡುಬಂದಿವೆ. ತೊಡೆಗಳು ಮತ್ತು ಮೊಣಕಾಲುಗಳೆರಡರಲ್ಲೂ ಬಲವಾದ ಏಟಿನ ಪರಿಣಾಮದ ಗಾಯಗಳು ಪತ್ತೆಯಾಗಿವೆ.

ತಲೆಬುರುಡೆಯಲ್ಲಿ ಮೇಲ್ನೋಟಕ್ಕೆ ಮುರಿತ ಕಂಡುಬರದಿದ್ದರೂ, ಮೆದುಳಿನಲ್ಲಿ ರಕ್ತಸ್ರಾವವಾಗಿರುವುದು ಖಚಿತವಾಗಿದೆ. ಎರಡೂ ಶ್ವಾಸಕೋಶಗಳು ಏಟಿನ ಪರಿಣಾಮವಾಗಿ ಜಜ್ಜಿದಂತಾಗಿರುವುದು ಮತ್ತು ರಕ್ತಸ್ರಾವದಂಥ ಲಕ್ಷಣಗಳನ್ನು ಪತ್ತೆ ಮಾಡಲಾಗಿದೆ. ಎರಡೂ ಮೂತ್ರಪಿಂಡಗಳಿಗೆ ತೀವ್ರ ಹಾನಿಯಾಗಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಲಿವರ್ ಬಲ ಭಾಗದಲ್ಲಿ ಕೂಡ ಹೊಡೆತದ ಪರಿಣಾಮ ಸ್ಪಷ್ಟವಾಗಿ ಕಂಡಿದೆ. ತೀವ್ರ ಗಾಯದ ಪರಿಣಾಮವಾಗಿ ಮೂತ್ರಪಿಂಡ ವೈಫಲ್ಯ ಸಂಭವಿಸಿದೆ. ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರ ಮತ್ತು ಹಸಿರು, ಕಪ್ಪು ಮಿಶ್ರಿತ ದ್ರವ ಪತ್ತೆಯಾಗಿದೆ. ಹಲ್ಲೆಗೆ ಬಳಸಲಾಗಿದೆ ಎಂದು ಶಂಕಿಸಲಾದ ನಾಲ್ಕು ಮರದ ಕೋಲುಗಳನ್ನು ಕೂಡ ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಲಾಗಿತ್ತು. ಅಶ್ರಫ್ ದೇಹದ ಮೇಲೆ ಕಂಡುಬಂದ ಗಾಯಗಳ ಮಾದರಿ ಆ ಕೋಲುಗಳ ಗುಣಲಕ್ಷಣಗಳಿಗೆ ಹೊಂದಿಕೆಯಾಗುತ್ತದೆ ಎಂದು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ವಿಧಿವಿಜ್ಞಾನ ತಜ್ಞೆ ಡಾ. ರಶ್ಮಿ ಕೆಎಸ್ ಅವರು ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅಶ್ರಫ್ ಅವರ ದೇಹದಲ್ಲಿ ಯಾವುದೇ ವಿಷಕಾರಿ ವಸ್ತುಗಳು, ಔಷಧಗಳು, ಆಲ್ಕೋಹಾಲ್ ಅಥವಾ ಮಾದಕ ದ್ರವ್ಯಗಳು ಕಂಡುಬಂದಿಲ್ಲ ಎಂದು ವಿಷವಿಜ್ಞಾನ ಹಾಗೂ ಅಂಗಾಂಗ ಶಾಸ್ತ್ರ ವರದಿಗಳು ದೃಢಪಡಿಸಿವೆ. ದೇಹದಾದ್ಯಂತ ಬಿದ್ದಿರುವ ಬಲವಾದ ಏಟುಗಳು ಮತ್ತು ತಲೆಗೆ ಆದ ಗಾಯದಿಂದಾಗಿ ಉಂಟಾದ ಆಂತರಿಕ ರಕ್ತಸ್ರಾವ ಮತ್ತು ಮೂತ್ರಪಿಂಡದ ಬಲವಾದ ಗಾಯ ಸಾವಿಗೆ ಕಾರಣವೆಂದು ಅಭಿಪ್ರಾಯಪಡಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿರುವ ಈ ವಿವರಗಳನ್ನು ನೋಡಿದರೆ ಅಶ್ರಫ್ ಮೇಲೆ ಆ ದಿನ ಕುಡುಪುವಿನಲ್ಲಿ ಅದೆಷ್ಟು ಭಯಾನಕವಾಗಿ ಹಲ್ಲೆ ನಡೆದಿತ್ತು ಎಂಬುದನ್ನು ಸುಲಭವಾಗಿ ಊಹಿಸಬಹುದು. ದೇಹದ ಯಾವುದೇ ಭಾಗವನ್ನೂ ಬಿಡದೆ ಹಲ್ಲೆ ಮಾಡಲಾಗಿದೆ ಎಂಬಂತಹ ವಿವರಗಳು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿವೆ.

ಇಷ್ಟು ಭಯಾನಕ ಗುಂಪು ಹತ್ಯೆಯನ್ನು ಅಸಹಜ ಸಾವು ಪ್ರಕರಣವಾಗಿ ಮುಗಿಸುವ ಸಂಚು ಮಂಗಳೂರಿನಲ್ಲಿ ನಡೆದಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳೇ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬಳಿಕವೂ ಗುಂಪು ಹತ್ಯೆ ಎಂದು ದಾಖಲಾಗದೆ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿತ್ತು. ರಾಜ್ಯದ ಗೃಹ ಸಚಿವರೂ ಗುಂಪು ಹತ್ಯೆಗೆ ಬಲಿಯಾದ ಮಾನಸಿಕ ಅಸ್ವಸ್ಥನನ್ನೇ "ಅವನು ಪಾಕಿಸ್ತಾನ ಪರ ಘೋಷಣೆ ಕೂಗಿದ" ಎಂದು ಆರೋಪಿಯ ಸ್ಥಾನದಲ್ಲಿ ನಿಲ್ಲಿಸಿಬಿಟ್ಟಿದ್ದರು.

ಆದರೆ ಅದು ಸುಳ್ಳಾರೋಪ ಎಂದು ಅಂದಿನ ಪೊಲೀಸ್ ಕಮಿಷನರ್ ಅವರೇ ಹೇಳಿದ್ದರು. ಸ್ಥಳೀಯ ಸಾಮಾಜಿಕ ಕಾರ್ಯಕರ್ತರು, ಕೆಲವು ರಾಜಕೀಯ ಮುಖಂಡರು ಹಾಗು ಮಾಧ್ಯಮಗಳು ಸಮಯಕ್ಕೆ ಸರಿಯಾಗಿ ಈ ಬಗ್ಗೆ ಧ್ವನಿ ಎತ್ತಿದ್ದರಿಂದ, ಪ್ರಶ್ನೆಗಳನ್ನು ಕೇಳಿದ್ದರಿಂದ ಮಾತ್ರ ಅದೊಂದು ಭೀಕರ ಗುಂಪು ಹತ್ಯೆ ಎಂದು ಬಯಲಾಯಿತು. ಈಗ ಬಂದಿರುವ ಮರಣೋತ್ತರ ಪರೀಕ್ಷೆಯ ವರದಿ ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!