IPL 2027 | ಹರಾಜು ಪಟ್ಟಿಯಲ್ಲಿ 1220 ಆಟಗಾರರ ಹೆಸರು ನೋಂದಣಿ
Photo Credit : PTI
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2027ರ ಹರಾಜಿಗಾಗಿ ಒಟ್ಟು 1220 ಆಟಗಾರರ ಹೆಸರುಗಳನ್ನು ನೋಂದಾಯಿಸಲಾಗಿದೆ. ಇದರಲ್ಲಿ 939 ಭಾರತೀಯ ಆಟಗಾರರು ಮತ್ತು 17 ದೇಶಗಳ 281 ವಿದೇಶಿ ಆಟಗಾರರು ಸೇರಿದ್ದಾರೆ.
ಸಂಪೂರ್ಣ ಪಟ್ಟಿಯಲ್ಲಿ 184 ಕ್ಯಾಪ್ಡ್ (ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ) ಆಟಗಾರರು, 994 ಅನ್ಕ್ಯಾಪ್ಡ್ (ಅಂತರರಾಷ್ಟ್ರೀಯ ಪಂದ್ಯಗಳನ್ನಾಡದ) ಆಟಗಾರರು ಮತ್ತು ಅಸೋಸಿಯೇಟ್ ದೇಶಗಳ 42 ಆಟಗಾರರಿದ್ದಾರೆ. ಅನ್ಕ್ಯಾಪ್ಡ್ ಆಟಗಾರರಲ್ಲಿ 925 ಮಂದಿ ಭಾರತೀಯರಾಗಿದ್ದು, ಈ ಪೈಕಿ 127 ಆಟಗಾರರು ಈ ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ನೋಂದಣಿ ಪಟ್ಟಿಯಲ್ಲಿರುವ 14 ಕ್ಯಾಪ್ಡ್ ಭಾರತೀಯ ಆಟಗಾರರ ವಿವರ ಹೀಗಿದೆ: ಆಕಾಶ್ ದೀಪ್ (ಮೂಲ ಬೆಲೆ ರೂ. 1 ಕೋಟಿ), ಅವೇಶ್ ಖಾನ್ (ರೂ. 2 ಕೋಟಿ), ದೀಪಕ್ ಚಾಹರ್ (ರೂ. 2 ಕೋಟಿ), ದೀಪಕ್ ಹೂಡಾ (ರೂ. 75 ಲಕ್ಷ), ಜಯದೇವ್ ಉನಾದ್ಕಟ್ (ರೂ. 1 ಕೋಟಿ), ಕರುಣ್ ನಾಯರ್ (ರೂ. 75 ಲಕ್ಷ), ಕುಲದೀಪ್ ಸೇನ್ (ರೂ. 75 ಲಕ್ಷ), ಮಯಾಂಕ್ ಅಗರ್ವಾಲ್ (ರೂ. 75 ಲಕ್ಷ), ರಾಹುಲ್ ತ್ರಿಪಾಠಿ (ರೂ. 75 ಲಕ್ಷ), ಸಾರಾಂಶ್ ಜೈನ್ (ರೂ. 75 ಲಕ್ಷ), ಶಿವಂ ಮಾವಿ (ರೂ. 75 ಲಕ್ಷ), ತುಷಾರ್ ದೇಶಪಾಂಡೆ (ರೂ. 1 ಕೋಟಿ), ಉಮೇಶ್ ಯಾದವ್ (ರೂ. 1 ಕೋಟಿ) ಮತ್ತು ಉಮ್ರಾನ್ ಮಲಿಕ್ (ರೂ. 75 ಲಕ್ಷ).
ವಿದೇಶಿ ಆಟಗಾರರಲ್ಲಿ, ಆಸ್ಟ್ರೇಲಿಯದಿಂದ ಅತಿ ಹೆಚ್ಚು ಅಂದರೆ 53 ಆಟಗಾರರು ಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನಗಳಲ್ಲಿ ದಕ್ಷಿಣ ಆಫ್ರಿಕಾ (40), ವೆಸ್ಟ್ ಇಂಡೀಸ್ (36), ನ್ಯೂಝಿಲ್ಯಾಂಡ್ (25) ಮತ್ತು ಅಫ್ಘಾನಿಸ್ತಾನ (23) ಇವೆ. ಅಸೋಸಿಯೇಟ್ ದೇಶಗಳ ಪೈಕಿ ಅಮೆರಿಕ ಅತಿ ಹೆಚ್ಚು 13 ಆಟಗಾರರನ್ನು ಹೊಂದಿದ್ದು, ಯುಎಇ ಮತ್ತು ನೇಪಾಳ ತಲಾ 10 ಆಟಗಾರರೊಂದಿಗೆ ನಂತರದ ಸ್ಥಾನದಲ್ಲಿವೆ.
ಅಂತಿಮ ಹರಾಜು ಪಟ್ಟಿಗೆ ಯಾವ ಆಟಗಾರರನ್ನು ಸೇರಿಸಿಕೊಳ್ಳಬೇಕು ಎಂಬುದನ್ನು 10 ತಂಡಗಳು ಇನ್ನು ಲೀಗ್ಗೆ ತಿಳಿಸಲಿವೆ. ಅಂತಿಮ ಹರಾಜು ಪಟ್ಟಿಯು ಡಿಸೆಂಬರ್ 4 ರಂದು ಬಿಡುಗಡೆಯಾಗಲಿದೆ. ಹರಾಜು ಪ್ರಕ್ರಿಯೆಯು ಡಿಸೆಂಬರ್ 16ರಂದು ನಡೆಯಲಿದೆ.
ಯಾವ ದೇಶದಿಂದ ಎಷ್ಟು ಆಟಗಾರರು?
ಭಾರತ 939, ಆಸ್ಟ್ರೇಲಿಯ 53, ದಕ್ಷಿಣ ಆಫ್ರಿಕಾ 40, ವೆಸ್ಟ್ ಇಂಡೀಸ್ 36, ನ್ಯೂಝಿಲ್ಯಾಂಡ್ 25, ಅಫ್ಘಾನಿಸ್ತಾನ 23, ಶ್ರೀಲಂಕಾ 21, ಇಂಗ್ಲೆಂಡ್ 16, ಅಮೆರಿಕ 13, ಬಾಂಗ್ಲಾದೇಶ 12, ಯುಎಇ 10, ನೇಪಾಳ 10, ಐರ್ಲ್ಯಾಂಡ್ 7, ಜಿಂಬಾಬ್ವೆ 6, ನೆದರ್ಲ್ಯಾಂಡ್ಸ್ 3, ಜಪಾನ್ 2, ಸ್ಕಾಟ್ಲ್ಯಾಂಡ್ 2 ಮತ್ತು ಕೆನಡಾ 2.
ಐಪಿಎಲ್ ಹರಾಜಿಗೆ ಮರಳಿದ ಬೆನ್ ಸ್ಟೋಕ್ಸ್
2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜಿನಿಂದ ಹೊರಗುಳಿದ ಎರಡು ವರ್ಷಗಳ ನಂತರ, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಬೆನ್ ಸ್ಟೋಕ್ಸ್ 2027ರ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ’ಕ್ರಿಕ್ಇನ್ಫೋ’ ವರದಿ ಮಾಡಿದೆ.
ರೂ. 2 ಕೋಟಿ ಗರಿಷ್ಠ ಮೂಲ ಬೆಲೆ ಪಟ್ಟಿಯಲ್ಲಿ ಹೆಸರುಗಳನ್ನು ನೋಂದಾಯಿಸಿಕೊಂಡಿರುವ 30 ಆಟಗಾರರಲ್ಲಿ ಸ್ಟೋಕ್ಸ್ ಒಬ್ಬರಾಗಿದ್ದಾರೆ. 2025ರ ಮೆಗಾ ಹರಾಜಿಗೂ ಮುನ್ನ ಜಾರಿಗೆ ತಂದ ನಿಯಮಗಳ ಪ್ರಕಾರ, ಈ ಹಿಂದೆ ಐಪಿಎಲ್ನಲ್ಲಿ ಆಡಿರುವ, ಆದರೆ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಳ್ಳಲು ನಿರಾಕರಿಸುವ ಆಟಗಾರರು ಮುಂದಿನ ಮಿನಿ ಹರಾಜಿನಲ್ಲಿ ಭಾಗವಹಿಸುವಂತಿರಲಿಲ್ಲ. ಹಾಗಾಗಿ, ಸ್ಟೋಕ್ಸ್ 2027ರ ಹರಾಜಿಗಷ್ಟೇ ನೋಂದಾಯಿಸಿಕೊಳ್ಳುವ ಅರ್ಹತೆಯನ್ನು ಈಗ ಪಡೆದಿದ್ದಾರೆ.
ತನ್ನ ಅಂತರರಾಷ್ಟ್ರೀಯ ಕ್ರೀಡಾ ಜೀವನವನ್ನು ವಿಸ್ತರಿಸುವತ್ತ ಗಮನಹರಿಸುವುದಕ್ಕಾಗಿ ಸ್ಟೋಕ್ಸ್ 2025ರ ಮೆಗಾ ಹರಾಜಿನಿಂದ ಹಿಂದೆ ಸರಿದಿದ್ದರು. 2026ರ ಬೇಸಿಗೆಯ ಆರಂಭದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಅವರು, 2024ರ ‘ದ ಹಂಡ್ರೆಡ್’ ಪಂದ್ಯಾವಳಿಯಲ್ಲಿ ಸ್ನಾಯು ಸೆಳೆತಕ್ಕೆ ಒಳಗಾದ ನಂತರ ಯಾವುದೇ ಟಿ20 ಪಂದ್ಯವನ್ನು ಆಡಿಲ್ಲ.
ಈ ಆಲ್ರೌಂಡರ್ ಈ ಹಿಂದೆ ಐಪಿಎಲ್ನಲ್ಲಿ ಮೂರು ತಂಡಗಳಲ್ಲಿ ಆಡಿದ್ದಾರೆ. 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಪರ ಕೊನೆಯದಾಗಿ ಆಡಿದ್ದರು. 2017ರ ಹರಾಜಿನಲ್ಲಿ ರೈಸಿಂಗ್ ಪುಣೆ ಸೂಪರ್ಜಯಂಟ್ಸ್ ತಂಡವು ಅವರನ್ನು ರೂ. 14.5 ಕೋಟಿಗೆ ಖರೀದಿಸಿದಾಗ, ಆ ಹರಾಜಿನ ಅತ್ಯಂತ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡಿದ್ದರು. 2023ರಲ್ಲಿ ಸಿಎಸ್ಕೆ ಅವರನ್ನು ರೂ. 16.25 ಕೋಟಿಗೆ ಖರೀದಿಸಿತ್ತು, ಆದರೆ ಮೊಣಕಾಲಿನ ಸಮಸ್ಯೆಯಿಂದಾಗಿ ಅವರು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಆಡಿದ್ದರು.
ರೂ. 2 ಕೋಟಿ ಮೂಲ ಬೆಲೆಯ ಪಟ್ಟಿಯಲ್ಲಿ ಇರುವ ಭಾರತೀಯ ಆಟಗಾರರೆಂದರೆ ಅವೇಶ್ ಖಾನ್ ಮತ್ತು ದೀಪಕ್ ಚಾಹರ್ ಮಾತ್ರ.
ರೂ. 2 ಕೋಟಿ ಮೂಲ ಬೆಲೆಯ ಪಟ್ಟಿಯಲ್ಲಿ ಇರುವ ಇತರ ಆಟಗಾರರೆಂದರೆ- ಫಜಲ್ಹಕ್ ಫಾರೂಕಿ, ಮುಜೀಬ್ ಉರ್ ರೆಹಮಾನ್ ಮತ್ತು ರಹಮಾನುಲ್ಲಾ ಗುರ್ಬಾಜ್ (ಎಲ್ಲರೂ ಅಫ್ಘಾನಿಸ್ತಾನದವರು), ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಡ್ಯಾರಿಲ್ ಮಿಚೆಲ್, ಡೇವನ್ ಕಾನ್ವೇ, ರಚಿನ್ ರವೀಂದ್ರ, ಟ್ರೆಂಟ್ ಬೋಲ್ಟ್, ಆ್ಯನ್ರಿಕ್ ನಾರ್ಟ್ಯೆ, ಜೆರಾಲ್ಡ್ ಕೋಟ್ಜಿ, ಮತೀಶ ಪತಿರನ, ವನಿಂಡು ಹಸರಂಗ, ಶಾಯ್ ಹೋಪ್ ಮತ್ತು ಶಿಮ್ರಾನ್ ಹೆಟ್ಮಯರ್.