ದ್ವಿತೀಯ ಟೆಸ್ಟ್ | ಬಾಂಗ್ಲಾದೇಶ 91 ರನ್ಗೆ ಆಲೌಟ್: ಜಾನ್ಸನ್, ರಬಾಡಗೆ ತಲಾ ಮೂರು ವಿಕೆಟ್
Photo Credit : X@BCBtigers
ಸೆಂಚೂರಿಯನ್: ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಬಾಂಗ್ಲಾದೇಶ ತಂಡವನ್ನು ಕೇವಲ 91 ರನ್ಗೆ ಸರ್ವಪತನಗೊಳಿಸಿತು.
ಸೋಮವಾರ ನಡೆದ ಪಂದ್ಯದಲ್ಲಿ ವೇಗಿಗಳಾದ ಮಾರ್ಕೊ ಜಾನ್ಸನ್(3-17) ಹಾಗೂ ಕಾಗಿಸೊ ರಬಾಡ (3-23)ತಲಾ ಮೂರು ವಿಕೆಟ್ಗಳನ್ನು ಉರುಳಿಸಿದರು. ಅನ್ರಿಚ್ ನೋಟ್ಜೆ(2-10)ಎರಡು ವಿಕೆಟ್‌ಗಳನ್ನು ಪಡೆದು 33.3 ಓವರ್‌ಗಳಲ್ಲಿ ಬಾಂಗ್ಲಾದೇಶವನ್ನು ನಿಯಂತ್ರಿಸಿದರು.
ಬಾಂಗ್ಲಾದೇಶ ತಂಡವು ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಕನಿಷ್ಠ ಮೊತ್ತ ಗಳಿಸಿದ ತಂಡ ಎನಿಸಿಕೊಂಡಿದೆ. ದಕ್ಷಿಣ ಆಫ್ರಿಕಾದ ವಿರುದ್ಧ ನಾಲ್ಕನೇ ಬಾರಿ ಎರಡಂಕೆಯ ಸ್ಕೋರ್ ಗಳಿಸಿ ಆಲೌಟಾಗಿದೆ.
ಮಳೆಯಿಂದಾಗಿ ನಿಗದಿತ ಸಮಯಕ್ಕಿಂತ ನಾಲ್ಕು ಗಂಟೆ ತಡವಾಗಿ ಪಂದ್ಯವು ಆರಂಭವಾಯಿತು.
ಹಂಗಾಮಿ ನಾಯಕ ಏಡೆನ್ ಮರ್ಕ್ರಮ್ ಟಾಸ್ ಜಯಿಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಅತ್ಯಂತ ಅನುಭವಿ ಬ್ಯಾಟರ್ ಮುಶ್ಫಿಕುರ್ರಹೀಂ ಅನುಪಸ್ಥಿತಿಯಲ್ಲಿ ಆಡಿದ ಬಾಂಗ್ಲಾದೇಶದ ವಿರುದ್ಧ ದಕ್ಷಿಣ ಆಫ್ರಿಕಾದ ವೇಗಿಗಳು ನಿರೀಕ್ಷೆಯಂತೆಯೇ ಅಬ್ಬರದ ಪ್ರದರ್ಶನ ನೀಡಿದ್ದಾರೆ.
ಬಾಂಗ್ಲಾದೇಶದ ಪರ ಮುಹ್ಫಿಜುಲ್ ಇಸ್ಲಾಂ(23 ರನ್, 40 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ತೌಹೀದ್(19 ರನ್)ಹಾಗೂ ಮೂಮಿನುಲ್ ಹಕ್(18 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಮೊದಲ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ತಂಡವು 11 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದೆ. ಮಾರ್ಕಸ್ ಅಕರ್ಮನ್(27 ರನ್)ಹಾಗೂ ಝುಬೈರ್ ಹಂಝಾ(2) ಕ್ರೀಸ್‌ನಲ್ಲಿದ್ದಾರೆ. ನಾಯಕ ಮರ್ಕ್ರಮ್ 21 ರನ್ ಗಳಿಸಿ ಔಟಾಗಿದ್ದಾರೆ.