Photos: PTI

ಹೊಸ ದಿಲ್ಲಿ: ವೆಲ್ಲಿಂಗ್ಟನ್ ನ ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಿನ್ನೆ ಮುಕ್ತಾಯಗೊಂಡ ಆತಿಥೇಯ ನ್ಯೂಝಿಲೆಂಡ್ ಮತ್ತು ಭಾರತ ನಡುವಿನ ಪ್ರಥಮ ಟೆಸ್ಟ್ ಪಂದ್ಯವನ್ನು 15 ಓವರ್ ಗಳಿಗೆ ಮುಂಚಿತವಾಗಿಯೇ ಡ್ರಾ ಮಾಡಿಕೊಳ್ಳುವ ನಿರ್ಧಾರ ಕೈಗೊಂಡ ಭಾರತ ತಂಡದ ಕ್ರಮದ ವಿರುದ್ಧ ಭಾರತ ತಂಡದ ಮಾಜಿ ಸ್ಪಿನ್ನರ್ ಆರ್.ಅಶ್ವಿನ್ ಅಸಮಾಧಾನ ಹೊರಹಾಕಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಆರ್.ಅಶ್ವಿನ್, “ಈ ನಿರ್ಧಾರದ ವಿರುದ್ಧ ನಾವು ಆಕ್ರೋಶ ವ್ಯಕ್ತಪಡಿಸಲೇಬೇಕಿದೆ” ಎಂದು ಹೇಳಿದ್ದಾರೆ.

ನಿನ್ನೆ ಮುಕ್ತಾಯಗೊಂಡ ಪ್ರಥಮ ಟೆಸ್ಟ್ ನ ಕೊನೆಯ ದಿನದಾಟ ಮುಕ್ತಾಯಗೊಳ್ಳಲು ಇನ್ನೂ 15 ಓವರ್ ಗಳು ಬಾಕಿ ಇರುವಾಗಲೇ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಪರಸ್ಪರ ಡ್ರಾಗೆ ಸಮ್ಮತಿಸಿದ್ದವು. ಈ ನಿರ್ಧಾರವೀಗ ವಿವಾದಕ್ಕೆ ಗುರಿಯಾಗಿದೆ.

“ಭಾರತ ತಂಡ ಪಂದ್ಯದ ಮೇಲೆ ಮೇಲುಗೈ ಸಾಧಿಸಿತ್ತು. ಹೀಗಿದ್ದೂ, ಪಂದ್ಯ ಮುಕ್ತಾಯಗೊಳ್ಳಲು ಇನ್ನೂ 15 ಓವರ್ ಗಳು ಬಾಕಿ ಇರುವಾಗಲೇ ಡ್ರಾಗೆ ಸಮ್ಮತಿಸಲಾಯಿತು ಹಾಗೂ ಉಭಯ ತಂಡದ ನಾಯಕರು ಪರಸ್ಪರ ಕೈಕುಲುಕಿದರು. ಈ ನಿರ್ಧಾರದಿಂದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಮುನ್ನಡೆಯುವ ಭಾರತದ ಹಾದಿ ಒಂದಿಷ್ಟು ದುರ್ಗಮವಾಗಿದೆ” ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಹಾಗೂ ಹಾಲಿ ನಾಯಕ ಶುಭಮನ್ ಗಿಲ್ ನಾಯಕತ್ವದ ತಂಡದ ನಡುವಿನ ಧೋರಣೆಯನ್ನೂ ಅವರು ಹೋಲಿಕೆ ಮಾಡಿದ್ದಾರೆ.

“ನಾವು ವಿರಾಟ್ ಕೊಹ್ಲಿ ನಾಯಕತ್ವದಿಂದ ಕಲಿಯುವುದು ಸಾಕಷ್ಟಿದೆ. ಪಂದ್ಯವೊಂದು ಡ್ರಾ ಆಗಲೂ ಸಾಧ್ಯವಿದೆ. ಬೇರೊಬ್ಬ ಬೌಲರ್ ಅಥವಾ ನಾಯಕ ಈ ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದರು ಎಂದು ನಾನೆಂದಿಗೂ ಹೇಳುವುದಿಲ್ಲ. ಆದರೆ, ಅವಸರ ಸಹಕಾರಿಯಾಗಿರುತ್ತದೆ ಎಂದು ಹೇಳಲಷ್ಟೇ ನಾನು ಬಯಸುತ್ತೇನೆ” ಎಂದೂ ಅವರು ಹೇಳಿದ್ದಾರೆ.

ವೆಲ್ಲಿಂಗ್ಟನ್ ಟೆಸ್ಟ್ ಅನ್ನು 15 ಓವರ್ ಗಳ ಮುಂಚೆಯೇ ಡ್ರಾ ಮಾಡಿಕೊಂಡ ನಿರ್ಧಾರದ ಕುರಿತು ಸ್ಪಷ್ಟನೆ ನೀಡಿದ್ದ ನಾಯಕ ಶುಭಮನ್ ಗಿಲ್, “ನಮ್ಮ ತಂಡದ ಬೌಲರ್ ಗಳು ದೀರ್ಘಕಾಲ ಬೌಲಿಂಗ್ ಮಾಡಿ ದಣಿದಿದ್ದರು. ಅವರನ್ನು ಎರಡನೆ ಟೆಸ್ಟ್ ವೇಳೆಗೆ ಉಲ್ಲಸಿತವಾಗಿಡಲು ಮುಂಚಿತವಾಗಿಯೇ ಡ್ರಾ ಮಾಡಿಕೊಳ್ಳಲು ನಿರ್ಧರಿಸಲಾಯಿತು” ಎಂದು ತಿಳಿಸಿದ್ದಾರೆ.

ಆದರೆ, ಶುಭಮನ್ ಗಿಲ್ ರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಆರ್.ಅಶ್ವಿನ್, “ಭಾರತ ತಂಡ ವಿಕೆಟ್ ಬೇಟೆಯನ್ನು ಮುಂದುವರಿಸಬೇಕಿತ್ತು” ಎಂದು ಅಭಿಪ್ರಾಯ ಪಟ್ಟಿದ್ದಾರೆ.

“ಟೆಸ್ಟ್ ಬೌಲರ್ ಗಳು ಇಂತಹ ಅಗತ್ಯಕ್ಕೆ ಸಿದ್ಧವಾಗಿರಬೇಕಾಗುತ್ತದೆ. ಈ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ದೀರ್ಘಕಾಲ ಬೌಲಿಂಗ್ ಮಾಡಿದರು” ಎಂದು ಅವರು ಬೊಟ್ಟು ಮಾಡಿದ್ದಾರೆ.

“ಬುಮ್ರಾ ಇನ್ನೂ ಹೆಚ್ಚು ಬೌಲ್ ಮಾಡಲು ಸಾಧ್ಯವಿಲ್ಲ ಎಂದು ನಿಮಗನ್ನಿಸಿದರೆ, ಸ್ಪಿನ್ನರ್ ಗಳಿಂದ ಬೌಲ್ ಮಾಡಿಸಬೇಕಿತ್ತು. ಪ್ರೇಕ್ಷಕರನ್ನು ಹುರಿದುಂಬಿಸಬೇಕಿತ್ತು. ನೀವು ಟೆಸ್ಟ್ ಮೇಲೆ ಪಾರಮ್ಯ ಸಾಧಿಸಿದರೂ, ನೀವು ಅವರನ್ನು ಪರಾಭವಗೊಳಿಸಲು ಸಾಧ್ಯವಾಗಲಿಲ್ಲ. ಟೆಸ್ಟ್ ಪಂದ್ಯದ ಮೇಲೆ ಪಾರಮ್ಯ ಸಾಧಿಸಿದ ಮಾತ್ರಕ್ಕೆ ಯಾರೂ ನಮಗೆ ಅಂಕ ನೀಡುವುದಿಲ್ಲ. ಪಂದ್ಯ ಗೆದ್ದರೆ ಮಾತ್ರ ಅಂಕ ದೊರೆಯುತ್ತದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

“ನೀವು ಒಳ್ಳೆಯ ಟೆಸ್ಟ್ ಮ್ಯಾಚ್ ಆಡಿದಿರಿ, ಆದರೆ, 20 ವಿಕೆಟ್ ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಜನರು ಹೇಳುತ್ತಾರೆ. ಒಳ್ಳೆಯ ಕ್ರಿಕೆಟ್ ಗಾಗಿ ನಾವು ಅಂಕ ಪಡೆಯುವುದಿಲ್ಲ. ವಿಶೇಷವಾಗಿ ನ್ಯೂಝಿಲೆಂಡ್ ತಂಡ ವಿಶ್ವ ಕ್ರಿಕೆಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ನಿಮಗಿಂತ ಮೇಲಿರುವಾಗ. ನಾವು ಅವರಿಗೆ ಅಷ್ಟೆಲ್ಲ ಸವಾಲು ಒಡ್ಡಿದರೂ, ಪಂದ್ಯದಿಂದ ಸ್ವಯಂ ನಾವೇ ಹಿಂದೆ ಸರಿದಿರುವ ಬಗ್ಗೆ ನಾವು ಕೋಪಗೊಳ್ಳಲೇಬೇಕಿದೆ. ಇದು ನನ್ನ ಅನಿಸಿಕೆಯಾಗಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸದಾನಂದ ಗಂಗನಬೀಡು , ವಾರ್ತಾಭಾರತಿ

contributor