ತ್ರಿಶತಕ ಗಳಿಸುವ ಸಾಮರ್ಥ್ಯ ಸೂರ್ಯವಂಶಿಗಿದೆ; ಅವರ ದಾಖಲೆಗಳನ್ನು ಮುರಿಯಲು ಕ್ರಿಸ್ ಗೇಲ್ ಮರಳಬೇಕಷ್ಟೇ: ಬಾಲ್ಯದ ಕೋಚ್ ಮನೀಶ್ ಓಜಾ
ಹೊಸದಿಲ್ಲಿ: ಭಾರತದ 15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಏಕದಿನ ಕ್ರಿಕೆಟ್ನಲ್ಲಿ 300 ರನ್ ಗಳ ತ್ರಿಶತಕ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರ ಬಾಲ್ಯದ ಕೋಚ್ ಮನೀಶ್ ಓಜಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ನಲ್ಲಿ ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ 204 ರನ್ ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ ಬೆನ್ನಲ್ಲೇ ಅವರು ಈ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ, ಭಾರತ ತಂಡದಲ್ಲಿ ಸೂರ್ಯವಂಶಿಗೆ ನಿಯಮಿತವಾಗಿ ಆಡುವ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕೆಲವು ವರ್ಷಗಳ ಹಿಂದೆಯೇ ಸೂರ್ಯವಂಶಿ ದ್ವಿಶತಕ ಗಳಿಸಲಿದ್ದಾರೆ ಎಂದು ಓಜಾ ಭವಿಷ್ಯ ನುಡಿದಿದ್ದರು. ಆದರೆ, ಮಂಗಳವಾರ ದೋಹಾದಲ್ಲಿ ಯುಎಇ ವಿರುದ್ಧ ಅವರು ಆಡಿದ ಇನ್ನಿಂಗ್ಸ್ ಕೋಚ್ ಅವರನ್ನೂ ಅಚ್ಚರಿಗೊಳಿಸಿದೆ. ಬಾಲ್ಯದಿಂದಲೇ ಈ ಆಟಗಾರನ ಪ್ರತಿಭೆಯನ್ನು ಗಮನಿಸುತ್ತಾ ಬಂದಿರುವ ಓಜಾ, ಅವರ ಸಾಮರ್ಥ್ಯಕ್ಕೆ ಮಿತಿಯೇ ಇಲ್ಲ ಎಂಬಂತೆ ಕಾಣುತ್ತಿದೆ ಎಂದಿದ್ದಾರೆ.
"ಒಂದು ದಿನ ಅವರು 300 ರನ್ಗಳ ತ್ರಿಶತಕವನ್ನೂ ಗಳಿಸಬಲ್ಲರು ಎಂಬ ಬಲವಾದ ನಂಬಿಕೆ ನನಗಿದೆ. ಮಂಗಳವಾರದ ಪ್ರದರ್ಶನ ಅದ್ಭುತವಾಗಿತ್ತು. ಆಕ್ರಮಣಕಾರಿ, ಮನರಂಜನಾತ್ಮಕ ಮತ್ತು ಅತ್ಯುತ್ತಮ ಬ್ಯಾಟಿಂಗ್ ಅದಾಗಿತ್ತು" ಎಂದು ಮನೀಶ್ ಓಜಾ 'indiatoday.in'ಗೆ ತಿಳಿಸಿದ್ದಾರೆ.
ಯುಎಇ ವಿರುದ್ಧದ ಪಂದ್ಯದಲ್ಲಿ ಸೂರ್ಯವಂಶಿ ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸಿ, 50 ಓವರ್ ಗಳ ಕ್ರಿಕೆಟ್ನಲ್ಲಿ ಅತಿ ವೇಗದ ದ್ವಿಶತಕದ ವಿಶ್ವ ದಾಖಲೆಯನ್ನು ಮುರಿದರು. 2024ರಲ್ಲಿ ನ್ಯೂಝಿಲೆಂಡ್ನ ಚಾಡ್ ಬೋವ್ಸ್ 103 ಎಸೆತಗಳಲ್ಲಿ ದ್ವಿಶತಕ ಗಳಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು. ಸೂರ್ಯವಂಶಿ ಅದಕ್ಕಿಂತ 51 ಎಸೆತ ಮೊದಲೇ ಈ ಸಾಧನೆ ಮಾಡಿದರು.
ಕೇವಲ 28 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ 'ಲಿಸ್ಟ್ ಎ' ಕ್ರಿಕೆಟ್ನಲ್ಲಿ ಅತಿ ವೇಗದ ಶತಕದ ದಾಖಲೆಯನ್ನೂ ನಿರ್ಮಿಸಿದರು. ಈ ಇನ್ನಿಂಗ್ಸ್ ನಲ್ಲಿ 28 ಸಿಕ್ಸರ್ಗಳನ್ನು ಸಿಡಿಸಿದರು. 'ಲಿಸ್ಟ್ ಎ' ಕ್ರಿಕೆಟ್ ನ ಒಂದೇ ಇನ್ನಿಂಗ್ಸ್ ನಲ್ಲಿ ಬ್ಯಾಟರ್ ಒಬ್ಬರು ಬಾರಿಸಿದ ಗರಿಷ್ಠ ಸಿಕ್ಸರ್ ಗಳ ಸಂಖ್ಯೆ ಇದಾಗಿದೆ. ಅವರು ಎದುರಿಸಿದ ಒಟ್ಟು 53 ಎಸೆತಗಳ ಪೈಕಿ 35 ಎಸೆತಗಳು ಬೌಂಡರಿ ಗೆರೆ ದಾಟಿದವು.
ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡ ಕೇವಲ 14.3 ಓವರ್ ಗಳಲ್ಲಿ 250 ರನ್ ಗಳ ಗುರಿಯನ್ನು ಬೆನ್ನಟ್ಟಿ ಗೆಲುವು ದಾಖಲಿಸಿತು.
"ಅವರು ಏಕದಿನ ಕ್ರಿಕೆಟ್ ಅನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸುತ್ತಿದ್ದಾರೆ. ಕೇವಲ 14 ಅಥವಾ 15 ಓವರ್ ಗಳಲ್ಲಿ ಪಂದ್ಯ ಗೆಲ್ಲುವಷ್ಟು ವೇಗವಾಗಿ ರನ್ ಗಳಿಸುತ್ತಿದ್ದಾರೆ. ಒಂದು ತಂಡ ಸಂಪೂರ್ಣ 50 ಓವರ್ ಗಳಲ್ಲೂ ಇದೇ ಆಕ್ರಮಣಕಾರಿ ಮನಸ್ಥಿತಿಯಲ್ಲಿ ಆಡಿದರೆ ಏನಾಗಬಹುದು ಎಂದು ಊಹಿಸಿಕೊಳ್ಳಿ" ಎಂದು ಓಜಾ ಹೇಳಿದ್ದಾರೆ.
ಸೂರ್ಯವಂಶಿ ಅವರ ದಾಖಲೆಗಳ ಸರಣಿ ಐಪಿಎಲ್ ನಲ್ಲೂ ಮುಂದುವರಿದಿದೆ. ತಮ್ಮ ಚೊಚ್ಚಲ ಐಪಿಎಲ್ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆ ಮೂಲಕ ಐಪಿಎಲ್ನಲ್ಲಿ ಭಾರತೀಯ ಬ್ಯಾಟರ್ ಒಬ್ಬರು ಗಳಿಸಿದ ಅತಿ ವೇಗದ ಶತಕದ ದಾಖಲೆ ನಿರ್ಮಿಸಿದ್ದರು.
2026ರ ಐಪಿಎಲ್ ಋತುವಿನಲ್ಲಿ ಒಟ್ಟು 776 ರನ್ ಗಳಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಈ ಅವಧಿಯಲ್ಲಿ 65 ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಐಪಿಎಲ್ ನ ಒಂದು ಋತುವಿನಲ್ಲಿ ಕ್ರಿಸ್ ಗೇಲ್ ಹೊಂದಿದ್ದ 59 ಸಿಕ್ಸರ್ ಗಳ ದಾಖಲೆಯನ್ನೂ ಹಿಂದಿಕ್ಕಿದ್ದರು.
ದೇಶೀಯ ಕ್ರಿಕೆಟ್ ನಲ್ಲೂ ಸೂರ್ಯವಂಶಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ವಿಜಯ್ ಹಝಾರೆ ಟ್ರೋಫಿಯಲ್ಲಿ ಬಿಹಾರ ತಂಡದ ಪರ ಕೇವಲ 84 ಎಸೆತಗಳಲ್ಲಿ 190 ರನ್ ಗಳಿಸಿದ್ದರು. ಈ ವರ್ಷದ ಆರಂಭದಲ್ಲಿ ನಡೆದ ಅಂಡರ್-19 ವಿಶ್ವಕಪ್ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ 80 ಎಸೆತಗಳಲ್ಲಿ 175 ರನ್ ಸಿಡಿಸಿ ಗಮನ ಸೆಳೆದಿದ್ದರು.
"ಪ್ರಸ್ತುತ ಅವರು ನಿರ್ಮಿಸಿರುವ ದಾಖಲೆಗಳನ್ನು ಮುರಿಯಬಲ್ಲ ಆಟಗಾರರು ಯಾರೂ ಕಾಣುತ್ತಿಲ್ಲ. ಬಹುಶಃ ಕ್ರಿಸ್ ಗೇಲ್ ಅವರೇ ಮತ್ತೆ ಕ್ರಿಕೆಟ್ ಗೆ ಮರಳಬೇಕಾಗಬಹುದು! ವೈಭವ್ ನಿರ್ಮಿಸಿರುವ ದಾಖಲೆಗಳನ್ನು ವೈಭವ್ ಅವರೇ ಮುರಿಯಬಲ್ಲರು. ಬೇರೆ ಯಾರಿಂದಲೂ ಅದು ಸಾಧ್ಯವಾಗದು" ಎಂದು ಓಜಾ ಹೇಳಿದ್ದಾರೆ.
ಸೂರ್ಯವಂಶಿ ತಮ್ಮ ದಾಖಲೆಗಳು ಮತ್ತು ಅಂಕಿಅಂಶಗಳ ಬಗ್ಗೆ ಗಮನ ಹರಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಓಜಾ, ಅವರಿಗೆ ಇವುಗಳ ಬಗ್ಗೆ ಹೆಚ್ಚು ಆಸಕ್ತಿಯಿಲ್ಲ ಎಂದಿದ್ದಾರೆ.
"ಅವರು ದಾಖಲೆಗಳನ್ನಾಗಲಿ, ಅಂಕಿಅಂಶಗಳನ್ನಾಗಲಿ ನೋಡುವುದಿಲ್ಲ. ಅವರ ಸಂಪೂರ್ಣ ಗಮನ ಚೆಂಡಿನ ಮೇಲಿರುತ್ತದೆ. ಚೆಂಡು ತಮ್ಮ ಹೊಡೆತದ ವ್ಯಾಪ್ತಿಯಲ್ಲಿದ್ದರೆ ಅದನ್ನು ಬಾರಿಸುತ್ತಾರೆ. ಅಷ್ಟೇ" ಎಂದು ಕೋಚ್ ತಿಳಿಸಿದ್ದಾರೆ.
ಮಂಗಳವಾರದ ಪಂದ್ಯ ಮುಗಿದ ಬಳಿಕ ಸೂರ್ಯವಂಶಿ ಕೂಡ ತಮ್ಮ ಬ್ಯಾಟಿಂಗ್ ಯೋಜನೆಯ ಬಗ್ಗೆ ಮಾತನಾಡಿದ್ದರು. ಟೂರ್ನಿಯ ಹಿಂದಿನ ಎರಡು ಪಂದ್ಯಗಳಲ್ಲಿ ಕ್ರೀಸ್ ನಲ್ಲಿ ನೆಲೆ ಕಂಡುಕೊಂಡರೂ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಆರಂಭದಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳಲು ನಿರ್ಧರಿಸಿದ್ದರು.
"ಕಳೆದ ಎರಡು ಪಂದ್ಯಗಳಲ್ಲಿ ಕ್ರೀಸ್ ನಲ್ಲಿ ನೆಲೆ ಕಂಡುಕೊಂಡಿದ್ದರೂ, ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಆರಂಭದಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದ್ದೆ. ಆದರೆ ಒಂದೆರಡು ಎಸೆತಗಳನ್ನು ಎದುರಿಸಿದ ಬಳಿಕ ಪಿಚ್ ನಿಂದ ಬೌಲರ್ ಗಳಿಗೆ ಹೆಚ್ಚಿನ ನೆರವು ಸಿಗುತ್ತಿಲ್ಲ ಎಂಬುದು ಅರಿವಾಯಿತು. ಆದ್ದರಿಂದ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಡಿದೆ" ಎಂದು ಸೂರ್ಯವಂಶಿ ತಿಳಿಸಿದ್ದರು.
ಇತ್ತೀಚಿನ ಎರಡು ಪಂದ್ಯಗಳಲ್ಲಿನ ವೈಫಲ್ಯ ಸೂರ್ಯವಂಶಿ ಅವರಿಗೆ ನಿರಾಸೆ ಮೂಡಿಸಿತ್ತು. ನ. 20ರಂದು ನೇಪಾಳ ವಿರುದ್ಧ 26 ರನ್ ಗಳಿಸಿ ಔಟಾಗಿದ್ದ ಅವರು, ರವಿವಾರ ಪಾಕಿಸ್ತಾನ ಶಾಹೀನ್ಸ್ ವಿರುದ್ಧ ಕೇವಲ 11 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಕಡಿಮೆ ಮೊತ್ತಕ್ಕೆ ಔಟಾದ ಬಳಿಕ ಅವರು ಸಂಪರ್ಕಿಸಿದವರಲ್ಲಿ ಕೋಚ್ ಮನೀಶ್ ಓಜಾ ಕೂಡ ಒಬ್ಬರು.
"ನೇಪಾಳ ವಿರುದ್ಧದ ಪಂದ್ಯದ ಬಳಿಕ ನಾನು ಅವರೊಂದಿಗೆ ಮಾತನಾಡಿದೆ. ತುಲನಾತ್ಮಕವಾಗಿ ಸುಲಭ ಎದುರಾಳಿ ಎನ್ನಬಹುದಾದ ತಂಡದ ವಿರುದ್ಧ ಔಟಾಗಿದ್ದರಿಂದ ಅವರು ಬೇಸರಗೊಂಡಿದ್ದರು. ತಮ್ಮ ಪ್ರದರ್ಶನದ ಬಗ್ಗೆ ತೀವ್ರ ನಿರಾಶೆ ಹೊಂದಿದ್ದರು" ಎಂದು ಓಜಾ ಹೇಳಿದ್ದಾರೆ.
ಕ್ರಿಕೆಟ್ ನಲ್ಲಿ ವೈಫಲ್ಯಗಳು ಸಹಜ ಎಂಬುದನ್ನು ಅವರು ಸೂರ್ಯವಂಶಿಗೆ ಮನವರಿಕೆ ಮಾಡಿಕೊಟ್ಟಿದ್ದರು.
"ಜಗತ್ತಿನ ಯಾವುದೇ ಆಟಗಾರ ಆಡಿದ ಪ್ರತಿಯೊಂದು ಪಂದ್ಯದಲ್ಲೂ ಶತಕ ಗಳಿಸಲು ಅಥವಾ ರನ್ ಗಳಿಸಲು ಸಾಧ್ಯವಿಲ್ಲ. ಸಚಿನ್ ತೆಂಡುಲ್ಕರ್ ಅವರ ಅಂಕಿಅಂಶಗಳನ್ನೇ ಗಮನಿಸಿ. ಅವರು ಆಡಿದ ಒಟ್ಟು ಇನ್ನಿಂಗ್ಸ್ ಗಳ ಸಂಖ್ಯೆಗೆ ಹೋಲಿಸಿದರೆ ಗಳಿಸಿರುವ ಶತಕ ಮತ್ತು ಅರ್ಧಶತಕಗಳ ಸಂಖ್ಯೆ ಕಡಿಮೆ. ಅವರಂತಹ ದಿಗ್ಗಜ ಆಟಗಾರರೂ ಹಲವು ಬಾರಿ ವಿಫಲರಾಗಿದ್ದಾರೆ. ಅತ್ಯುತ್ತಮ ಆಟಗಾರರು ಕೂಡ ವೈಫಲ್ಯ ಎದುರಿಸುವುದು ಸಹಜ" ಎಂದು ಅವರು ಹೇಳಿದ್ದಾರೆ.
ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಸೂರ್ಯವಂಶಿಗೆ ಭಾರತ ತಂಡದಲ್ಲಿ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿಲ್ಲ ಎಂಬುದು ಓಜಾ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
15 ವರ್ಷದ ಸೂರ್ಯವಂಶಿ, ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಅನುಭವಿ ಆರಂಭಿಕ ಆಟಗಾರರೊಂದಿಗೆ ತಂಡದಲ್ಲಿ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಗೌತಮ್ ಗಂಭೀರ್ ಮತ್ತು ಶ್ರೇಯಸ್ ಅಯ್ಯರ್ ನೇತೃತ್ವದ ತಂಡದ ಆಡಳಿತ ಮಂಡಳಿಯು ಅನುಭವಿ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುತ್ತಿದೆ.
2026ರ ಐಪಿಎಲ್ ನಲ್ಲಿ ದಾಖಲೆ ನಿರ್ಮಿಸಿದ ಪ್ರದರ್ಶನ ನೀಡಿದ ಬಳಿಕ ಭಾರತ ತಂಡ 26 ಪಂದ್ಯಗಳನ್ನು ಆಡಿದೆ. ಆದರೆ, ಸೂರ್ಯವಂಶಿ ಈ ಪೈಕಿ ಕೇವಲ 10 ಪಂದ್ಯಗಳಲ್ಲಿ ಮಾತ್ರ ಆಡಿದ್ದಾರೆ. ಹಲವು ಪಂದ್ಯಗಳಲ್ಲಿ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ. ನಿಯಮಿತವಾಗಿ ಅವಕಾಶ ನೀಡುವ ಮೊದಲು ಕಲಿಯಲು ಮತ್ತು ತಮ್ಮ ಆಟವನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಸಮಯ ನೀಡಬೇಕು ಎಂಬುದು ತಂಡದ ಆಡಳಿತ ಮಂಡಳಿಯ ನಿಲುವಾಗಿರಬಹುದು.
ಆದರೆ, ಪಂದ್ಯಗಳನ್ನು ಆಡದೆ ಬೆಂಚ್ ನಲ್ಲಿ ಕುಳಿತುಕೊಳ್ಳುವುದರಿಂದ ಆಟಗಾರನಿಗೆ ಅನುಭವ ಸಿಗುವುದಿಲ್ಲ ಎಂಬುದು ಓಜಾ ಅವರ ಅಭಿಪ್ರಾಯ.
"ವೈಭವ್ ಇಂದು ಮೈದಾನಕ್ಕಿಳಿದು ಆಡಿದ್ದರಿಂದಲೇ ಇಂತಹ ಪ್ರದರ್ಶನ ನೀಡಲು ಸಾಧ್ಯವಾಗಿದೆ. ಬೆಂಚ್ ನಲ್ಲಿ ಕುಳಿತುಕೊಳ್ಳುವುದರಿಂದ ಆಟಗಾರನಿಗೆ ಏನೂ ಸಿಗುವುದಿಲ್ಲ. ಪಂದ್ಯಗಳಲ್ಲಿ ಆಡಿದಾಗ ಮಾತ್ರ ವಿವಿಧ ಸನ್ನಿವೇಶಗಳನ್ನು ಎದುರಿಸಲು, ಸವಾಲುಗಳನ್ನು ನಿಭಾಯಿಸಲು ಮತ್ತು ಅವುಗಳಿಂದ ಕಲಿಯಲು ಸಾಧ್ಯ. ಇಂತಹ ಅನುಭವಗಳಿಂದಲೇ ಆಟಗಾರ ಬೆಳೆಯುತ್ತಾನೆ.
ಬೆಂಚ್ ನಲ್ಲಿ ಕುಳಿತುಕೊಳ್ಳುವುದರಿಂದ ಆಟಗಾರನಿಗೆ ಅನುಭವ ಸಿಗುತ್ತದೆ ಎಂದು ಭಾರತೀಯ ತಂಡದ ಆಡಳಿತ ಮಂಡಳಿ ನಂಬಿದ್ದರೆ, ಅದು ತಪ್ಪು ದೃಷ್ಟಿಕೋನ" ಎಂದು ಅವರು ಹೇಳಿದ್ದಾರೆ.
ಭಾರತ ತಂಡ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ ಎಂಬುದನ್ನು ಒಪ್ಪಿಕೊಂಡಿರುವ ಓಜಾ, ಐದು ಪಂದ್ಯಗಳ ಸರಣಿಯಲ್ಲಿ ಸೂರ್ಯವಂಶಿಗೆ ಕನಿಷ್ಠ ಎರಡು ಅಥವಾ ಮೂರು ಪಂದ್ಯಗಳಲ್ಲಾದರೂ ಆಡುವ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
"ಐದು ಪಂದ್ಯಗಳ ಸರಣಿಯಲ್ಲಿ ವೈಭವ್ ಗೆ ಅವಕಾಶ ನೀಡಬೇಕು. ಅವರು ಕನಿಷ್ಠ ಎರಡು ಅಥವಾ ಮೂರು ಪಂದ್ಯಗಳನ್ನಾದರೂ ಆಡಬೇಕು. ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಮುಂದಿನ ಪಂದ್ಯದಲ್ಲೂ ಅವರಿಗೆ ಮತ್ತೊಂದು ಅವಕಾಶ ನೀಡಬೇಕು. ಅವರನ್ನು ಕೇವಲ ಬದಲಿ ಆಟಗಾರನಾಗಿ ನೋಡಬಾರದು" ಎಂದು ಓಜಾ ಹೇಳಿದ್ದಾರೆ.