ಅಂಕುಶ್ ಪಂಘಾಲ್ (Photo: X/@rajnathsingh)

ಹೊಸದಿಲ್ಲಿ: ಜಪಾನ್‌ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಶುಕ್ರವಾರ ಭಾರತಕ್ಕೆ ಚಿನ್ನದ ಹಬ್ಬ. ಕೇವಲ 30 ನಿಮಿಷಗಳ ಅಂತರದಲ್ಲಿ ದೇಶಕ್ಕೆ ಮೂರು ಚಿನ್ನದ ಪದಕಗಳು ಒಲಿದವು. ಈ ಮೂಲಕ ಭಾರತವು ಪದಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದೆ.

ಮಹಿಳೆಯರ ಬಾಕ್ಸಿಂಗ್‌ನ 65 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಪರ್ವೀನ್ ಹೂಡಾ ಚಿನ್ನ ಗೆಲ್ಲುವ ಮೂಲಕ ಈ ಯಶಸ್ಸಿಗೆ ಮುನ್ನುಡಿ ಬರೆದರು. ಬಳಿಕ ಪುರುಷರ ಫ್ರೀಸ್ಟೈಲ್ 65 ಕೆ.ಜಿ ವಿಭಾಗದ ಕುಸ್ತಿ ಫೈನಲ್‌ನಲ್ಲಿ ಸುಜೀತ್ ಕಲ್ಕಲ್ ಚಿನ್ನ ಗೆದ್ದರು. ಇದಾದ ಬೆನ್ನಲ್ಲೇ ಪುರುಷರ ಬಾಕ್ಸಿಂಗ್‌ನ 80 ಕೆ.ಜಿ ವಿಭಾಗದಲ್ಲಿ ಅಂಕುಶ್ ಪಂಘಾಲ್ ಜಯ ಸಾಧಿಸಿ ಭಾರತಕ್ಕೆ ಮೂರನೇ ಚಿನ್ನ ತಂದುಕೊಟ್ಟರು.


ಕುಸ್ತಿಯಲ್ಲಿ ಮೊದಲ ಚಿನ್ನ

ಏಷ್ಯನ್ ಗೇಮ್ಸ್‌ನ ಪುರುಷರ ಫ್ರೀಸ್ಟೈಲ್ 65 ಕೆ.ಜಿ ವಿಭಾಗದ ಫೈನಲ್‌ ನಲ್ಲಿ ಸುಜೀತ್ ಕಲ್ಕಲ್ ಅವರು ತಜಿಕಿಸ್ತಾನದ ಅಬ್ದುಲ್ ಮಝೀದ್ ಕುದೀವ್ ಅವರನ್ನು 3–1 ಅಂಕಗಳಿಂದ ಮಣಿಸಿದರು.

ನಗೋಯಾ ಸಿಟಿ ಇನೇ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಪಂದ್ಯದಲ್ಲಿ ಮಝೀದ್ ಕುದೀವ್ ಒಂದು ಅಂಕ ಗಳಿಸಿದರು. ಆದರೆ ಪಂದ್ಯದುದ್ದಕ್ಕೂ ಸಂಯಮ ಕಾಯ್ದುಕೊಂಡ ಕಲ್ಕಲ್ ಅಂತಿಮವಾಗಿ ಗೆಲುವು ಸಾಧಿಸಿದರು. ಈ ಮೂಲಕ ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಕುಸ್ತಿಯಲ್ಲಿ ಮೊದಲ ಚಿನ್ನದ ಪದಕ ತಂದುಕೊಟ್ಟರು.

ಅಂಕುಶ್‌ ಗೆ ಗೆಲುವು

ಪುರುಷರ 80 ಕೆ.ಜಿ ವಿಭಾಗದ ಫೈನಲ್‌ ನಲ್ಲಿ ಅಂಕುಶ್ ಪಂಘಾಲ್ ದಕ್ಷಿಣ ಕೊರಿಯಾದ ಮಿನ್ಸಿಯಾಂಗ್ ಕಿಮ್ ಅವರನ್ನು ಸೋಲಿಸಿ ಭಾರತೀಯ ಬಾಕ್ಸಿಂಗ್‌ ಗೆ ‘ಗೋಲ್ಡನ್ ಹ್ಯಾಟ್ರಿಕ್’ ತಂದುಕೊಟ್ಟರು.

ಅಂಕುಶ್ ಮೊದಲ ಸುತ್ತನ್ನು 4–1 ಅಂತರದಲ್ಲಿ ಗೆದ್ದರು. ಎರಡನೇ ಸುತ್ತಿನಲ್ಲಿ 5–0 ಅಂತರದ ಸರ್ವಾನುಮತದ ತೀರ್ಪು ಪಡೆದು ಮುನ್ನಡೆ ಬಲಪಡಿಸಿದರು. ಮೂರನೇ ಸುತ್ತಿನಲ್ಲೂ 4–1 ಅಂತರದಲ್ಲಿ ಗೆದ್ದ ಅವರು, ಅಂತಿಮವಾಗಿ 4–0 ತೀರ್ಪಿನೊಂದಿಗೆ ಚಿನ್ನದ ಪದಕ ಖಚಿತಪಡಿಸಿಕೊಂಡರು.

ಚಿನ್ನ ಕೈಗೆಟುಕುವ ಹಂತದಲ್ಲಿದ್ದರೂ ಅಂಕುಶ್ ಸಂಯಮ ಕಾಯ್ದುಕೊಂಡರು. ಎದುರಾಳಿಗಿಂತ ಹೆಚ್ಚು ಅಂಕ ಗಳಿಸುತ್ತಾ ಪಂದ್ಯವನ್ನು ತಮ್ಮ ನಿಯಂತ್ರಣದಲ್ಲಿಯೇ ಇಟ್ಟುಕೊಂಡರು.

ಹುಟ್ಟುಹಬ್ಬದಂದು ಲವ್ಲಿನಾಗೆ ಚಿನ್ನ

ಅಂಕುಶ್ ಅವರ ಗೆಲುವಿಗೂ ಮುನ್ನ ಲವ್ಲಿನಾ ಬೊರ್ಗೊಹೈನ್ ಮತ್ತು ಪರ್ವೀನ್ ಹೂಡಾ ತಮ್ಮ ತಮ್ಮ ಫೈನಲ್‌ಗಳಲ್ಲಿ ಗೆದ್ದು ಚಿನ್ನದ ಪದಕ ಪಡೆದಿದ್ದರು.

ತಮ್ಮ 29ನೇ ಹುಟ್ಟುಹಬ್ಬದ ದಿನ ನಡೆದ ಮಹಿಳೆಯರ 75 ಕೆ.ಜಿ ವಿಭಾಗದ ಫೈನಲ್‌ ನಲ್ಲಿ ಲವ್ಲಿನಾ ಚೀನಾದ ಜಿಯಿ ಬಾವೊ ಅವರನ್ನು 5–0 ಅಂತರದಲ್ಲಿ ಸೋಲಿಸಿದರು. ಹಿಂದಿನ ಏಷ್ಯನ್ ಗೇಮ್ಸ್‌ ನಲ್ಲಿ ಗೆದ್ದಿದ್ದ ಬೆಳ್ಳಿಯನ್ನು ಅವರು ಈ ಬಾರಿ ಚಿನ್ನವಾಗಿ ಪರಿವರ್ತಿಸಿಕೊಂಡರು.

ಲವ್ಲಿನಾ ಅವರ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ ಬಾಕ್ಸಿಂಗ್‌ ನಲ್ಲಿ ಮಹಿಳೆಯರ ವಿಭಾಗದ ಚಿನ್ನಕ್ಕಾಗಿ ಭಾರತಕ್ಕಿದ್ದ 12 ವರ್ಷಗಳ ಕಾಯುವಿಕೆ ಅಂತ್ಯಗೊಂಡಿತು. 2014ರ ಇಂಚಿಯಾನ್ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 51 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಎಂ.ಸಿ. ಮೇರಿ ಕೋಮ್ ಬಳಿಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಲವ್ಲಿನಾ ಪಾತ್ರರಾದರು.

‘ಇದು ಬಹಳ ವಿಶೇಷವಾದ ಹುಟ್ಟುಹಬ್ಬ. ನನಗೆ ತುಂಬಾ ಸಂತೋಷವಾಗುತ್ತಿದೆ. ನನ್ನ ಹುಟ್ಟುಹಬ್ಬದಂದು ನಾನೇ ಚಿನ್ನದ ಪದಕವನ್ನು ಉಡುಗೊರೆಯಾಗಿ ನೀಡಬೇಕೆಂದುಕೊಂಡಿದ್ದೆ. ನನಗಾಗಿ ನಾನೇ ಉಡುಗೊರೆಯನ್ನು ಪಡೆದುಕೊಂಡಿದ್ದು ಇದೇ ಮೊದಲು’ ಎಂದು ಲವ್ಲಿನಾ ಹೇಳಿದರು.

ಪರ್ವೀನ್‌ಗೆ ಚೊಚ್ಚಲ ಏಷ್ಯನ್ ಗೇಮ್ಸ್ ಚಿನ್ನ:

ಮಹಿಳೆಯರ 65 ಕೆ.ಜಿ ವಿಭಾಗದ ಫೈನಲ್‌ ನಲ್ಲಿ ಪರ್ವೀನ್ ಹೂಡಾ ಅವರು ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ, ಚೈನೀಸ್ ತೈಪೆಯ ಚೆನ್ ನಿಯೆನ್–ಚಿನ್ ಅವರನ್ನು 3–2 ಅಂತರದ ‘ಸ್ಪ್ಲಿಟ್ ಡಿಸಿಷನ್’ ಮೂಲಕ ಸೋಲಿಸಿದರು.

ಕಠಿಣ ಪೈಪೋಟಿಯಲ್ಲಿ ಅಲ್ಪ ಅಂತರದ ಗೆಲುವು ದಾಖಲಿಸಿದ ಪರ್ವೀನ್, ತಮ್ಮ ಚೊಚ್ಚಲ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ಗೆದ್ದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor