Photo Credit : BCCI

ಜೋಹಾನ್ಸ್ ಬರ್ಗ್: 2027ರ ಏಕದಿನ ಕ್ರಿಕೆಟ್ ವಿಶ್ವಕಪ್ನ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಗುರುವಾರ ಪ್ರಕಟಿಸಿದೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಉಭಯ ತಂಡಗಳು 2027ರ ಅಕ್ಟೋಬರ್ 10ರಂದು ಜೋಹಾನ್ಸ್ಬರ್ಗ್ ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿರುವ ಟೂರ್ನಿಯ ಪಂದ್ಯಗಳು ಮೂರು ದೇಶಗಳ 12 ಸ್ಥಳಗಳಲ್ಲಿ ನಡೆಯಲಿವೆ. ದಕ್ಷಿಣ ಆಫ್ರಿಕಾದಲ್ಲೇ ಎಂಟು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ.

2023ರ ವಿಶ್ವಕಪ್ ಫೈನಲ್ ನಲ್ಲಿ ಮುಖಾಮುಖಿಯಾಗಿದ್ದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಈ ಬಾರಿಯೂ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಸಹ ಆತಿಥೇಯ ಝಿಂಬಾಬ್ವೆ ಮತ್ತು ಅರ್ಹತಾ ತಂಡ ‘ಎ’ ‘ಗ್ರೂಪ್ ಎ’ನಲ್ಲಿವೆ.

‘ಗ್ರೂಪ್ ಬಿ’ನಲ್ಲಿ ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ಸಹ ಆತಿಥೇಯ ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಅರ್ಹತಾ ತಂಡ ‘ಬಿ’ ಸ್ಥಾನ ಪಡೆದಿವೆ.

►ವಾಂಡರರ್ಸ್ ನಲ್ಲಿ ಮುಖಾಮುಖಿ

ಭಾರತ–ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಭಾರಿ ಕುತೂಹಲ ಮೂಡಿದೆ. ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಕ್ರಿಕೆಟ್ ಅಂಗಳದಲ್ಲೂ ಈ ಎರಡು ತಂಡಗಳ ನಡುವಿನ ಪೈಪೋಟಿ ತೀವ್ರವಾಗಿದೆ.

‘ಬುಲ್ರಿಂಗ್’ ಎಂದೇ ಖ್ಯಾತಿ ಪಡೆದಿರುವ ವಾಂಡರರ್ಸ್ ಕ್ರೀಡಾಂಗಣದಲ್ಲಿ ಅ.10ರಂದು ಪಂದ್ಯ ನಡೆಯಲಿದೆ. ಹೆಚ್ಚಿನ ರನ್ ಗಳ ಪಂದ್ಯಗಳಿಗೆ ಹೆಸರಾಗಿರುವ ಈ ಮೈದಾನದಲ್ಲಿ ಭಾರಿ ಉತ್ಸಾಹದ ವಾತಾವರಣ ನಿರೀಕ್ಷಿಸಲಾಗಿದೆ. ಇದೇ ಕ್ರೀಡಾಂಗಣದಲ್ಲಿ ನ.21ರಂದು ವಿಶ್ವಕಪ್ ಫೈನಲ್ ಕೂಡ ನಡೆಯಲಿದೆ.

ಟೂರ್ನಿಯ ಎರಡನೇ ಹಂತವು ಅ.7ರಂದು ಕೇಪ್ ಟೌನ್ ನಲ್ಲಿ ಆರಂಭವಾಗಲಿದೆ.

2027ರ ವಿಶ್ವಕಪ್ ನಲ್ಲಿ ಒಟ್ಟು 57 ಪಂದ್ಯಗಳು ನಡೆಯಲಿವೆ. ಹೊಸ ಮೂರು ಹಂತದ ಸ್ವರೂಪವನ್ನು ಪರಿಚಯಿಸಲಾಗಿದ್ದು, ಇದು ಸ್ಪರ್ಧಾತ್ಮಕತೆ ಹೆಚ್ಚಿಸುವುದರ ಜತೆಗೆ ಉತ್ತಮ ಗುಣಮಟ್ಟದ ಕ್ರಿಕೆಟ್ ಮತ್ತು ಅಭಿಮಾನಿಗಳಿಗೆ ಉತ್ತಮ ಅನುಭವ ನೀಡುವ ಉದ್ದೇಶ ಹೊಂದಿದೆ.

ಮೊದಲ ಹಂತವಾದ ‘ಸೂಪರ್ ಸೀರೀಸ್’ನಲ್ಲಿ 12ರಿಂದ 14ನೇ ಶ್ರೇಯಾಂಕದ ಮೂರು ತಂಡಗಳು ರೌಂಡ್-ರಾಬಿನ್ ಮಾದರಿಯಲ್ಲಿ ಆಡಲಿವೆ. ಅ.2ರಂದು ಈ ಹಂತ ಆರಂಭವಾಗಲಿದ್ದು, ಗೆಲ್ಲುವ ತಂಡ ಎರಡನೇ ಹಂತಕ್ಕೆ ಅರ್ಹತೆ ಪಡೆಯಲಿದೆ.

ಎರಡನೇ ಹಂತದಲ್ಲಿ 12 ತಂಡಗಳು 30 ಪಂದ್ಯಗಳನ್ನು ಆಡಲಿವೆ. ತಂಡಗಳನ್ನು ತಲಾ ಆರು ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ರೌಂಡ್-ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.

ಪ್ರತಿ ಗುಂಪಿನ ಅಗ್ರ ಮೂರು ತಂಡಗಳು ಹಾಗೂ ಎರಡೂ ಗುಂಪುಗಳಲ್ಲಿ ನಾಲ್ಕನೇ ಸ್ಥಾನ ಪಡೆದ ತಂಡಗಳ ಪೈಕಿ ಉತ್ತಮ ಪ್ರದರ್ಶನ ನೀಡಿದ ತಂಡ ‘ಸೂಪರ್ 7’ ಹಂತಕ್ಕೆ ಪ್ರವೇಶಿಸಲಿದೆ.

‘ಸೂಪರ್ 7’ ಹಂತದಲ್ಲಿ 21 ರೌಂಡ್-ರಾಬಿನ್ ಪಂದ್ಯಗಳು ನಡೆಯಲಿವೆ. ಈ ಹಂತದ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿವೆ. ಅಗ್ರಸ್ಥಾನ ಪಡೆದ ತಂಡವು ನಾಲ್ಕನೇ ಸ್ಥಾನ ಪಡೆದ ತಂಡದ ವಿರುದ್ಧ ಹಾಗೂ ಎರಡನೇ ಸ್ಥಾನ ಪಡೆದ ತಂಡವು ಮೂರನೇ ಸ್ಥಾನ ಪಡೆದ ತಂಡದ ವಿರುದ್ಧ ಸೆಮಿಫೈನಲ್ ನಲ್ಲಿ ಸೆಣಸಲಿದೆ.

►12 ಸ್ಥಳಗಳಲ್ಲಿ ಪಂದ್ಯಗಳು

ದಕ್ಷಿಣ ಆಫ್ರಿಕಾದ ಎಂಟು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ವಾಂಡರರ್ಸ್ ಸ್ಟೇಡಿಯಂ (ಜೋಹಾನ್ಸ್ಬರ್ಗ್), ಸೆಂಚುರಿಯನ್ (ತ್ಶ್ವಾನೆ), ನ್ಯೂಲ್ಯಾಂಡ್ಸ್ ಕ್ರಿಕೆಟ್ ಗ್ರೌಂಡ್ (ಕೇಪ್ ಟೌನ್), ಕಿಂಗ್ಸ್ಮೀಡ್ ಕ್ರಿಕೆಟ್ ಗ್ರೌಂಡ್ (ಡರ್ಬನ್), ಸೇಂಟ್ ಜಾರ್ಜ್ ಪಾರ್ಕ್ (ಕ್ವೆಬೆರ್ಹಾ), ಮಂಗೌಂಗ್ ಓವಲ್ (ಬ್ಲೋಮ್ಫಾಂಟೈನ್), ಬೋಲ್ಯಾಂಡ್ ಪಾರ್ಕ್ (ಪಾರ್ಲ್) ಮತ್ತು ಬಫಲೋ ಪಾರ್ಕ್ (ಕುಗೊಂಪೊ ಸಿಟಿ; ಹಿಂದೆ ಈಸ್ಟ್ ಲಂಡನ್) ಈ ಎಂಟು ಸ್ಥಳಗಳಾಗಿವೆ.

ಝಿಂಬಾಬ್ವೆಯಲ್ಲಿ ಹರಾರೆ ಸ್ಪೋರ್ಟ್ಸ್ ಕ್ಲಬ್ (ಹರಾರೆ), ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ (ಬುಲವಾಯೊ) ಮತ್ತು ಹೊಸದಾಗಿ ನಿರ್ಮಿಸಲಾದ ಫೇಲ್ ಮೋಸಿ-ಓ-ತುನ್ಯಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ (ವಿಕ್ಟೋರಿಯಾ ಫಾಲ್ಸ್) ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

ನಮೀಬಿಯಾದ ಪಂದ್ಯಗಳು ವಿಂಡ್ಹೋಕ್ನ ನಮೀಬಿಯಾ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿವೆ.

24 ವರ್ಷಗಳ ಬಳಿಕ 50 ಓವರ್ಗಳ ವಿಶ್ವಕಪ್ ಆಫ್ರಿಕಾ ಖಂಡಕ್ಕೆ ಮರಳುತ್ತಿದೆ. 2003ರಲ್ಲಿ ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಮತ್ತು ಕೀನ್ಯಾ ಜಂಟಿಯಾಗಿ ಎಂಟನೇ ಪುರುಷರ ಕ್ರಿಕೆಟ್ ವಿಶ್ವಕಪ್ನ್ನು ಆಯೋಜಿಸಿದ್ದವು.

►ಭಾರತದ 2027ರ ಏಕದಿನ ವಿಶ್ವಕಪ್ ‘ಗ್ರೂಪ್ ಎ’ ಪಂದ್ಯಗಳ ವೇಳಾಪಟ್ಟಿ:

ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 7ರಂದು ಕೇಪ್ ಟೌನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.

ಬಳಿಕ ಅಕ್ಟೋಬರ್ 10ರಂದು ಜೋಹಾನ್ಸ್ಬರ್ಗ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಅಕ್ಟೋಬರ್ 14ರಂದು ತ್ಶ್ವಾನೆಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ಸೆಣಸಲಿದೆ.

ಅಕ್ಟೋಬರ್ 17ರಂದು ಬ್ಲೋಮ್ಫಾಂಟೈನ್ ನಲ್ಲಿ ಅರ್ಹತಾ ತಂಡ ‘ಎ’ ವಿರುದ್ಧ ಪಂದ್ಯ ನಡೆಯಲಿದೆ.

ಗುಂಪು ಹಂತದ ಭಾರತದ ಕೊನೆಯ ಪಂದ್ಯ ಅಕ್ಟೋಬರ್ 24ರಂದು ವಿಕ್ಟೋರಿಯಾ ಫಾಲ್ಸ್ ನಲ್ಲಿ ಸಹ ಆತಿಥೇಯ ಝಿಂಬಾಬ್ವೆ ವಿರುದ್ಧ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor