ಲಕ್ನೊ ತಂಡಕ್ಕೆ ಪಾದಾರ್ಪಣೆಗೈದ ಅರ್ಜುನ್ ತೆಂಡುಲ್ಕರ್, ಮಾರ್ಷ್ ಅಲಭ್ಯ
ಅರ್ಜುನ್ ತೆಂಡುಲ್ಕರ್ | Photo Credit : PTI
ಲಕ್ನೊ, ಮೇ 23: ಎಕನಾ ಸ್ಟೇಡಿಯಂನಲ್ಲಿ ಶನಿವಾರ ನಡೆದ ಮಾಡು-ಮಡಿ ಪಂದ್ಯದಲ್ಲಿ ನಿರ್ಣಾಯಕ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಲಕ್ನೊ ತಂಡಕ್ಕೆ ಅರ್ಜುನ್ ತೆಂಡುಲ್ಕರ್ ಪಾದಾರ್ಪಣೆಗೈದಿದ್ದಾರೆ.
ಸತತ ಆರು ಪಂದ್ಯಗಳಲ್ಲಿ ಸೋತಿರುವ ಪಂಜಾಬ್ ತಂಡವು ಭಾರೀ ಒತ್ತಡದೊಂದಿಗೆ ಈ ಪಂದ್ಯಕ್ಕೆ ಆಗಮಿಸಿದೆ. ಅಂಕಪಟ್ಟಿಯಲ್ಲಿ ಅಗ್ರ -2 ಸ್ಥಾನ ಪಡೆಯುವ ವಿಶ್ವಾಸ ಮೂಡಿಸಿದ್ದ ಪಂಜಾಬ್ ತಂಡವು ಇದೀಗ ಪ್ಲೇ ಆಫ್ ಸುತ್ತಿಗೇರಲು ಪರದಾಡುವಂತಾಗಿದೆ. ಎಪ್ರಿಲ್ 25ಕ್ಕಿಂತ ಮೊದಲು ಪಂಜಾಬ್ ತಂಡ 7 ಪಂದ್ಯಗಳಲ್ಲಿ 13 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು.
‘‘ನಾವು ಮೊದಲು ಬೌಲಿಂಗ್ ಆಯ್ದುಕೊಂಡಿದ್ದು, ಎರಡು ಬದಲಾವಣೆಗಳನ್ನು ಮಾಡಿದ್ದೇವೆ. ಮಾರ್ಕೊ ಜಾನ್ಸನ್ ಹಾಗೂ ವೈಶಾಕ್ ವಿಜಯಕುಮಾರ್ ಆಡುವ 11ರ ಬಳಗ ಸೇರಿದ್ದಾರೆ. ಇದು ನಮಗೆ ಮಾಡು-ಮಡಿ ಪಂದ್ಯವಾಗಿದೆ. ನಾವು ಈ ಹಿಂದೆ ಇಂತಹ ಪರಿಸ್ಥಿತಿ ಎದುರಿಸಲಿಲ್ಲ. ಹುಡುಗರು ಉತ್ತಮ ಪ್ರದರ್ಶನಕ್ಕಾಗಿ ಕಾಯುತ್ತಿದ್ದಾರೆ’’ ಎಂದು ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
‘‘ನಾವು ಕೂಡ ಮೊದಲು ಬೌಲಿಂಗ್ ಮಾಡಲು ಬಯಸಿದ್ದೆವು. ಇದೊಂದು ಉತ್ತಮ ಬ್ಯಾಟಿಂಗ್ ಪಿಚ್ ಆಗಿದೆ. ನಾವು ಎರಡು ಬದಲಾವಣೆಗಳನ್ನು ಮಾಡಿದ್ದು, ಅರ್ಜುನ್ ತೆಂಡುಲ್ಕರ್ ಹಾಗೂ ಅರ್ಶಿನ್ ಕುಲಕರ್ಣಿ ಅವಕಾಶ ಪಡೆದಿದ್ದಾರೆ. ಇದು ನಮಗೆ ಕಠಿಣ ವರ್ಷವಾಗಿತ್ತು. ನಾವು ತಂಡವಾಗಿ ಹಾಗೂ ವೈಯಕ್ತಿಕವಾಗಿ ಸಾಕಷ್ಟು ಕಲಿತಿದ್ದೇವೆ’’ ಎಂದು ಲಕ್ನೊ ತಂಡದ ನಾಯಕ ರಿಷಭ್ ಪಂತ್ ಹೇಳಿದ್ದಾರೆ.
ಲಕ್ನೊ ತಂಡದ ಶನಿವಾರದ ಪಂದ್ಯಕ್ಕೆ ಮಿಚೆಲ್ ಮಾರ್ಷ್ ಜೊತೆಗೆ ಏಡೆನ್ ಮರ್ಕ್ರಮ್, ಮ್ಯಾಥ್ಯೂ ಬ್ರೀಝ್ಕೆ ಹಾಗೂ ಅನ್ರಿಚ್ ನೋಟ್ಜೆ ಅಲಭ್ಯರಾಗಿದ್ದಾರೆ. ಆಸ್ಟ್ರೇಲಿಯದ ಆರಂಭಿಕ ಆಟಗಾರ ಮಾರ್ಷ್ ಅನುಪಸ್ಥಿತಿಯು ಲಕ್ನೊಗೆ ತೀವ್ರ ಹಿನ್ನಡೆಯಾಗಿದೆ. ಮಾರ್ಷ್ ಅವರು ಈ ವರ್ಷ ಒಟ್ಟು 563 ರನ್ ಗಳಿಸಿದ್ದಾರೆ.