ಪ್ರಣವಿ ಶರತ್ ಅರಸ್ (Photo source: X/@Media_SAI)

ಹೊಸದಿಲ್ಲಿ: ಕರ್ನಾಟಕದ ಗಾಲ್ಫರ್ ಪ್ರಣವಿ ಶರತ್ ಅರಸ್ ಅವರು ಏಷ್ಯನ್ ಗೇಮ್ಸ್‌ನ ಗಾಲ್ಫ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಶನಿವಾರ ನಡೆದ ಅಂತಿಮ ಸುತ್ತಿನಲ್ಲಿ ಸಂಯಮ ಕಾಯ್ದುಕೊಂಡ ಪ್ರಣವಿ, ಸಮೀಪದ ಪ್ರತಿಸ್ಪರ್ಧಿಗಳಿಗಿಂತ ಒಂದು ಸ್ಟ್ರೋಕ್ ಮುನ್ನಡೆಯೊಂದಿಗೆ ಸ್ಪರ್ಧೆ ಮುಗಿಸಿದರು. ಅಂತಿಮ ಸುತ್ತಿನಲ್ಲಿ ‘ಈವನ್ ಪಾರ್ 70’ ಸ್ಕೋರ್ ದಾಖಲಿಸಿದ ಅವರು, ನಾಲ್ಕು ಸುತ್ತುಗಳಲ್ಲಿ ಒಟ್ಟು ‘15-ಅಂಡರ್ ಪಾರ್ 265’ ಸ್ಕೋರ್ ಗಳಿಸಿದರು.

ಪ್ರಣವಿ ಅವರ ಸಾಧನೆಯೊಂದಿಗೆ ಭಾರತವು ಮಹಿಳಾ ತಂಡದ ವಿಭಾಗದಲ್ಲಿಯೂ ಬೆಳ್ಳಿ ಪದಕ ಗೆದ್ದುಕೊಂಡಿತು. ಪ್ರಣವಿ ಶರತ್ ಅರಸ್, ಅದಿತಿ ಅಶೋಕ್ ಮತ್ತು ದೀಕ್ಷಾ ದಗಾರ್ ಒಳಗೊಂಡ ಭಾರತ ತಂಡವು ‘14-ಅಂಡರ್ 546’ ಸ್ಕೋರ್‌ಯನೊಂದಿಗೆ ಎರಡನೇ ಸ್ಥಾನ ಪಡೆಯಿತು. ‘22-ಅಂಡರ್ 538’ ಸ್ಕೋರ್ ಗಳಿಸಿದ ಚೀನಾ ತಂಡ ಚಿನ್ನದ ಪದಕ ಗೆದ್ದಿತು.

ಅಂತಿಮ ಸುತ್ತಿನಲ್ಲಿ ಪ್ರಣವಿ ಅವರಿಗೆ ಆರಂಭದಲ್ಲೇ ಆಘಾತ ಎದುರಾಯಿತು. ಮೂರನೇ ಹೋಲ್‌ ನಲ್ಲಿ ‘ಟ್ರಿಪಲ್ ಬೋಗಿ’ ದಾಖಲಿಸಿದ ಪರಿಣಾಮ, ಹಿಂದಿನ ದಿನದ ಆಟದ ಬಳಿಕ ಅವರಿಗೆ ಇದ್ದ ಮೂರು ಸ್ಟ್ರೋಕ್‌ ಗಳ ಮುನ್ನಡೆ ಕಡಿಮೆಯಾಯಿತು.

ಆದರೂ ಅವರು ತಕ್ಷಣವೇ ಚೇತರಿಸಿಕೊಂಡರು. ಬಳಿಕ ಮೂರು ‘ಬರ್ಡಿ’ಗಳನ್ನು ದಾಖಲಿಸುವ ಮೂಲಕ ಆಟವನ್ನು ಸ್ಥಿರಗೊಳಿಸಿದರು. ಅಗ್ರಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಹಿಡಿತ ಕಳೆದುಕೊಳ್ಳದೆ, ಅಂತಿಮ ಸುತ್ತಿನಲ್ಲಿ 70 ಸ್ಕೋರ್ ದಾಖಲಿಸಿದರು. ನಾಲ್ಕು ದಿನಗಳ ಒಟ್ಟು ಮೊತ್ತ 15-ಅಂಡರ್ 265 ಆಗಿದ್ದು, ಸಮೀಪದ ಸ್ಪರ್ಧಿಗಿಂತ ಒಂದು ಸ್ಟ್ರೋಕ್ ಮುನ್ನಡೆ ಕಾಯ್ದುಕೊಂಡರು.

2002ರಲ್ಲಿ ಶಿವ್ ಕಪೂರ್ ಪುರುಷರ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಬಳಿಕ, ಏಷ್ಯನ್ ಗೇಮ್ಸ್‌ ನ ಗಾಲ್ಫ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನದ ಪದಕ ಇದಾಗಿದೆ.

ಭಾರತದ ಮಹಿಳಾ ತಂಡ ಬೆಳ್ಳಿ ಪದಕ ಗೆಲ್ಲುವಲ್ಲಿ ಪ್ರಣವಿ ಅವರ ಪ್ರದರ್ಶನವೂ ಪ್ರಮುಖ ಪಾತ್ರ ವಹಿಸಿತು. ಅಂತಿಮ ಸುತ್ತಿನಲ್ಲಿ ಅದಿತಿ ಅಶೋಕ್ 67 ಸ್ಕೋರ್ ದಾಖಲಿಸಿದರೆ, ದೀಕ್ಷಾ ದಗಾರ್ 77 ಸ್ಕೋರ್ ಪಡೆದರು.

ತಂಡದ ಅಂತಿಮ ಸ್ಥಾನ ನಿರ್ಧರಿಸುವಾಗ ಅತ್ಯುತ್ತಮ ಎರಡು ಸ್ಕೋರ್‌ಗಳನ್ನು ಪರಿಗಣಿಸಲಾಗುತ್ತದೆ. ಇದರ ಆಧಾರದಲ್ಲಿ ಭಾರತವು 14-ಅಂಡರ್ 546 ಸ್ಕೋರ್‌ ನೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. 22-ಅಂಡರ್ 538 ಸ್ಕೋರ್ ಗಳಿಸಿದ ಚೀನಾ ತಂಡ ಚಿನ್ನ ಗೆದ್ದಿತು.


ಯಾರು ಈ ಪ್ರಣವಿ?

1998ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಪ್ರಣವಿ ಶರತ್ ಅರಸ್ ಐದನೇ ವಯಸ್ಸಿನಲ್ಲೇ ಗಾಲ್ಫ್ ಆಡಲು ಆರಂಭಿಸಿದರು. ಬಳಿಕ ಭಾರತದ ಭರವಸೆಯ ಗಾಲ್ಫ್ ಆಟಗಾರ್ತಿಯರಲ್ಲಿ ಒಬ್ಬರಾಗಿ ಬೆಳೆದರು.

2015ರಲ್ಲಿ ‘ಲೇಡೀಸ್ ಬ್ರಿಟಿಷ್ ಹವ್ಯಾಸಿ ಸ್ಟ್ರೋಕ್ ಪ್ಲೇ ಚಾಂಪಿಯನ್‌ಶಿಪ್’ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2016ರಲ್ಲಿ ವೃತ್ತಿಪರ ಗಾಲ್ಫ್ ಆಟಗಾರ್ತಿಯಾದರು.

ಏಷ್ಯನ್ ಗೇಮ್ಸ್‌ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಪ್ರಣವಿ ಗೆದ್ದ ಐತಿಹಾಸಿಕ ಚಿನ್ನ ಹಾಗೂ ಅದಿತಿ ಅಶೋಕ್ ಮತ್ತು ದೀಕ್ಷಾ ದಗಾರ್ ಅವರೊಂದಿಗೆ ಭಾರತ ತಂಡ ಗೆದ್ದ ಬೆಳ್ಳಿ ಪದಕವು ಭಾರತೀಯ ಮಹಿಳಾ ಗಾಲ್ಫ್‌ಗೆ ಸ್ಮರಣೀಯ ಸಾಧನೆಯಾಗಿ ದಾಖಲಾಗಿದೆ. ವಿಶೇಷವಾಗಿ ಅಂತಿಮ ಸುತ್ತಿನಲ್ಲಿ ಮೂರು ಸ್ಟ್ರೋಕ್‌ಗಳ ಮುನ್ನಡೆ ಕಳೆದುಕೊಂಡ ಬಳಿಕ ಪ್ರಣವಿ ತೋರಿದ ಚೇತರಿಕೆಯು ಚಿನ್ನದ ಗೆಲುವಿನಲ್ಲಿ ನಿರ್ಣಾಯಕವಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor