Photo Credit : x


ನಗೋಯ, ಅ. 2: ನಗೋಯದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ, ಶುಕ್ರವಾರ ಬಿಲ್ಲುಗಾರಿಕೆ ಸ್ಪರ್ಧೆಯ ಪುರುಷರ ರಿಕರ್ವ್ ತಂಡ ವಿಭಾಗದಲ್ಲಿ ಭಾರತ ಬೆಳ್ಳಿ ಪದಕ ಗೆದ್ದಿದೆ.

ಫೈನಲ್ನಲ್ಲಿ ಧೀರಜ್ ಬೊಮ್ಮದೇವರ, ಯಶದೀಪ್ ಭೋಗೆ ಮತ್ತು ನೀರಜ್ ಚೌಹಾಣ್ ಅವರನ್ನೊಳಗೊಂಡ ಭಾರತ ತಂಡವು ಕಿಮ್ ಜೆ ಡಿಯೋಕ್, ಕಿಮ್ ವೂಜಿನ್ ಮತ್ತು ಲೀ ವೂಸಿಯೋಕ್ ಅವರನ್ನೊಳಗೊಂಡ ದಕ್ಷಿಣ ಕೊರಿಯ ತಂಡದ ವಿರುದ್ಧ 1-5 ಸೆಟ್ನಿಂದ ಸೋಲನುಭವಿಸಿತು.

ಏಶ್ಯನ್ ಗೇಮ್ಸ್ ಇತಿಹಾಸದಲ್ಲಿ, ಈ ವಿಭಾಗದಲ್ಲಿ ಭಾರತಕ್ಕೆ ಇದು ನಾಲ್ಕನೇ ಪದಕವಾಗಿದೆ. ಇದಕ್ಕೂ ಮುನ್ನ ಭಾರತವು 2006 ಮತ್ತು 2010ರಲ್ಲಿ ಕಂಚಿನ ಪದಕ ಹಾಗೂ 2023ರ ಹಾಂಗ್ಝೂ ಕೂಟದಲ್ಲಿ ಬೆಳ್ಳಿ ಪದಕ ಗೆದ್ದಿತ್ತು. 2023ರ ಆವೃತ್ತಿಯಲ್ಲಿ ಕೊರಿಯನ್ನರ ವಿರುದ್ಧ ಸೋತಿದ್ದ ಭಾರತೀಯ ಬಿಲ್ಲುಗಾರರಲ್ಲಿ ಧೀರಜ್ ಕೂಡ ಒಬ್ಬರಾಗಿದ್ದರು.

ಚಿನ್ನದ ಪದಕದ ಹಣಾಹಣಿಯು ಸಮಬಲದೊಂದಿಗೆ ಆರಂಭವಾಯಿತು. ಮೊದಲ ಸೆಟ್ನಲ್ಲಿ ಉಭಯ ತಂಡಗಳೂ ತಲಾ ಒಂದು ಅಂಕವನ್ನು ಹಂಚಿಕೊಂಡವು. ಆದರೆ ನಂತರದ ಎರಡು ಸೆಟ್ಗಳಲ್ಲಿ ಕೊರಿಯ ತಂಡವು 120ಕ್ಕೆ 113 ಅಂಕಗಳನ್ನು ಗಳಿಸಿ ಮುನ್ನಡೆ ಸಾಧಿಸಿದರೆ, ಭಾರತಕ್ಕೆ 104 ಅಂಕಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಇರಾನ್ ವಿರುದ್ಧ 6-0 ಭರ್ಜರಿ ಅಂತರದಿಂದ ಜಯ ಸಾಧಿಸಿತ್ತು.

ಇನ್ನೊಂದು ಪಂದ್ಯದಲ್ಲಿ, ಚೈನೀಸ್ ತೈಪೆ ತಂಡವು ಇರಾನ್ ತಂಡವನ್ನು 6-2 ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor