IPL ಮಿನಿ ಹರಾಜಿನಿಂದ ದೂರ ಉಳಿದ ಬಾಂಗ್ಲಾದೇಶದ ಮುಸ್ತಫಿಝುರ್ರಹ್ಮಾನ್
ಮುಸ್ತಫಿಝುರ್ರಹ್ಮಾನ್ | Photo Credit : PTI
ಢಾಕಾ, ನ. 26: ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2027ರ ಮಿನಿ ಹರಾಜಿನಿಂದ ಹೊರಗುಳಿದಿದ್ದಾರೆ. ಅವರು ಪಾಕಿಸ್ತಾನ ಸೂಪರ್ ಲೀಗ್ (PSL)ನಲ್ಲಿ ಆಡುವ ಸಾಧ್ಯತೆಯಿದೆ ಎಂಬ ವರದಿಗಳಿವೆ.
ಕಳೆದ ವರ್ಷ ಐಪಿಎಲ್ನಲ್ಲಿ ನಡೆದ ಬೆಳವಣಿಗೆಗಳಿಂದ ಮುಸ್ತಫಿಝುರ್ರಹ್ಮಾನ್ ಅವರಿಗೆ ಉಂಟಾಗಿರುವ ನೋವು ಇನ್ನೂ ಮಾಸಿಲ್ಲ. ಈ ಬಾರಿ ಹರಾಜಿನಲ್ಲಿ ಮಾರಾಟವಾಗದೆ ಉಳಿಯುವ ಭೀತಿಯೂ ಅವರಲ್ಲಿದೆ. ಹರಾಜಿನಲ್ಲಿ ಮಾರಾಟವಾಗದಿದ್ದರೆ ಬಾಂಗ್ಲಾದೇಶದ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಟೀಕೆಗೆ ಗುರಿಯಾಗಬೇಕಾಗಬಹುದು. ಹೀಗಾಗಿಯೇ ಅವರು ಮಿನಿ ಹರಾಜಿಗೆ ಹೆಸರು ನೋಂದಾಯಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಮುಸ್ತಫಿಝುರ್ರಹ್ಮಾನ್ ಪಿಎಸ್ಎಲ್ನಲ್ಲಿ ಲಾಹೋರ್ ಖಲಂದರ್ಸ್ ಪರ ಆಡಿದ್ದರು. ಮುಂದಿನ ಋತುವಿನಲ್ಲೂ ಲೀಗ್ಗೆ ಮರಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಮುಸ್ತಫಿಝುರ್ರಹ್ಮಾನ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) 2026ರ ಐಪಿಎಲ್ ಹರಾಜಿನಲ್ಲಿ 9.2 ಕೋಟಿ ರೂ.ಗೆ ಆಯ್ಕೆ ಮಾಡಿತ್ತು. ಆದರೆ, ಭಾರತ ಹಾಗೂ ಬಾಂಗ್ಲಾದೇಶ ನಡುವಿನ ರಾಜತಾಂತ್ರಿಕ ವಿವಾದದ ಹಿನ್ನೆಲೆಯಲ್ಲಿ ಬಿಸಿಸಿಐ ಸೂಚನೆಯಂತೆ ಅವರನ್ನು ಐಪಿಎಲ್ ತಂಡದಿಂದ ಬಿಡುಗಡೆ ಮಾಡಲಾಗಿತ್ತು.
ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಕೆಕೆಆರ್ ತಂಡದಿಂದ ಮುಸ್ತಫಿಝುರ್ರಹ್ಮಾನ್ ಅವರನ್ನು ಕೈಬಿಟ್ಟ ನಂತರ, ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಬಾಂಗ್ಲಾದೇಶ ತಂಡವು ಟಿ20 ವಿಶ್ವಕಪ್ಗಾಗಿ ಭಾರತಕ್ಕೆ ತನ್ನ ತಂಡವನ್ನು ಕಳುಹಿಸಲು ನಿರಾಕರಿಸಿತ್ತು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ಬದಲಿಗೆ ಸ್ಕಾಟ್ಲೆಂಡ್ ತಂಡಕ್ಕೆ ಸ್ಥಾನ ನೀಡಲಾಗಿತ್ತು.
ಈ ಹಿಂದೆ ಮುಸ್ತಫಿಝುರ್ರಹ್ಮಾನ್ ಅವರು ಸನ್ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪರ ಆಡಿದ್ದರು. ಎಡಗೈ ವೇಗಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 60 ಪಂದ್ಯಗಳಲ್ಲಿ 65 ವಿಕೆಟ್ಗಳನ್ನು ಉರುಳಿಸಿದ್ದರು.
ಕಳೆದ ವರ್ಷದ ಐಪಿಎಲ್ ಹರಾಜಿನಲ್ಲಿ ಕೆಕೆಆರ್ ತಂಡವು 9.2 ಕೋಟಿ ರೂ.ಗೆ ಮುಸ್ತಫಿಝುರ್ರಹ್ಮಾನ್ ಅವರನ್ನು ಖರೀದಿಸಿತ್ತು. ಐಪಿಎಲ್ ತಂಡದಲ್ಲಿ ಸ್ಥಾನ ಪಡೆದಿದ್ದ ಬಾಂಗ್ಲಾದೇಶದ ಏಕೈಕ ಆಟಗಾರ ಅವರಾಗಿದ್ದರು. ಬಾಂಗ್ಲಾದೇಶದ ವೇಗಿಯನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಚೆನ್ನೈ, ಡೆಲ್ಲಿ ಹಾಗೂ ಕೆಕೆಆರ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.
ಮುಸ್ತಫಿಝುರ್ರಹ್ಮಾನ್ ಸದ್ಯ ಐಎಲ್ಟಿ20ಯಲ್ಲಿ ದುಬೈ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದಾರೆ. 31ರ ಹರೆಯದ ಬೌಲರ್ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯದ ಬಿಗ್ ಬ್ಯಾಶ್ ಲೀಗ್ ನಲ್ಲಿ ಆಡಲು ಸಜ್ಜಾಗಿದ್ದು, ಮೆಲ್ಬರ್ನ್ ರೆನೆಗೇಡ್ಸ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಗೋವಾದಲ್ಲಿ ಡಿ. 16ರಂದು ನಡೆಯಲಿರುವ ಐಪಿಎಲ್ ಮಿನಿ ಹರಾಜಿಗೆ ಬಾಂಗ್ಲಾದೇಶದ ಒಟ್ಟು 12 ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.