ವೈಭವ್ ಸೂರ್ಯವಂಶಿ ಟೆಸ್ಟ್ ಪಂದ್ಯದಲ್ಲಿ 500 ರನ್ ಗಳಿಸಲಿದ್ದಾರೆ: ಪೀಟರ್ಸನ್
ಸೂರ್ಯವಂಶಿ | Photo Credit : PTI
ಹೊಸದಿಲ್ಲಿ, ನ. 26: ವೈಭವ್ ಸೂರ್ಯವಂಶಿ ಅವರ ಅಸಾಧಾರಣ ಪ್ರದರ್ಶನವು ಕ್ರಿಕೆಟ್ ಜಗತ್ತಿನ ದಿಗ್ಗಜರ ಗಮನ ಸೆಳೆಯುತ್ತಿದೆ. ACC ಪುರುಷರ ಏಶ್ಯ ಕಪ್ ರೈಸಿಂಗ್ ಸ್ಟಾರ್ಸ್ ಏಕದಿನ ಟೂರ್ನಿಯಲ್ಲಿ ವೇಗದ ದ್ವಿಶತಕ ಸಿಡಿಸಿದ್ದ 15ರ ಹರೆಯದ ಈ ಬ್ಯಾಟಿಂಗ್ ಪ್ರತಿಭೆಯ ಬಗ್ಗೆ ಇಂಗ್ಲೆಂಡ್ ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅಚ್ಚರಿಯ ಭವಿಷ್ಯವಾಣಿಯೊಂದನ್ನು ನುಡಿದಿದ್ದಾರೆ.
ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಪೀಟರ್ಸನ್, ಈ ಆಟಗಾರನ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ವರ್ಷಗಳಲ್ಲಿ ಸೂರ್ಯವಂಶಿ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ಬೃಹತ್ ವೈಯಕ್ತಿಕ ಮೊತ್ತ ದಾಖಲಿಸಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ.
‘‘ನನ್ನದೊಂದು ಭವಿಷ್ಯವಾಣಿ-ವೈಭವ್ ಮುಂದಿನ ಐದು ವರ್ಷಗಳಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ 500 ರನ್ ಗಳಿಸಲಿದ್ದಾರೆ’’ ಎಂದು ಪೀಟರ್ಸನ್ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಭಾರತ ‘ಎ’ ತಂಡದ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಯುಎಇ ವಿರುದ್ಧ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿದ್ದರು. ಲಿಸ್ಟ್ ‘ಎ’ ಕ್ರಿಕೆಟ್ ಇತಿಹಾಸದ ಅತ್ಯಂತ ಅಸಾಧಾರಣ ಇನಿಂಗ್ಸ್ಗಳ ಪೈಕಿ ಇದೂ ಒಂದಾಗಿದೆ. ಅವರು 52 ಎಸೆತಗಳಲ್ಲಿ ದ್ವಿಶತಕ ಪೂರೈಸಿದ್ದರು. ಈ ಇನಿಂಗ್ಸ್ ನಲ್ಲಿ 28 ಸಿಕ್ಸರ್ ಗಳನ್ನು ಸಿಡಿಸಿದ್ದರು. ಕಳೆದೊಂದು ವರ್ಷದಲ್ಲಿ ಹಲವು ದಾಖಲೆಗಳನ್ನು ಬರೆದಿರುವ ವೈಭವ್ ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.