ಬಾರ್ಸಿಲೋನ ಓಪನ್: ಎರಡನೇ ಸುತ್ತಿನಲ್ಲಿ ಮುಗ್ಗರಿಸಿದ ರಫೆಲ್ ನಡಾಲ್

Update: 2024-04-18 17:25 GMT

PC : NDTV

ಬಾರ್ಸಿಲೋನ: ಸ್ಪೇನ್ ಸೂಪರ್‌ಸ್ಟಾರ್ ರಫೆಲ್ ನಡಾಲ್ ಬಾರ್ಸಿಲೋನ ಓಪನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಮುಗ್ಗರಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ ಟೆನಿಸ್‌ಗೆ ಪುನರಾಗಮನಗೈದ ಪಂದ್ಯದಲ್ಲಿ ನಡಾಲ್ ಮೊದಲ ಸೋಲು ಕಂಡಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ 22 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಒಡೆಯ ನಡಾಲ್ ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ವಿರುದ್ಧ 5-7, 1-6 ನೇರ ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಮಿನೌರ್ ಅವರು ಮಾಜಿ ವಿಶ್ವದ ನಂ.1 ನಡಾಲ್ ವಿರುದ್ಧ ಆಡಿರುವ ಕಳೆದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.

ಮೂರು ತಿಂಗಳ ನಂತರ ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದ 37ರ ಹರೆಯದ ನಡಾಲ್ ಉತ್ತಮ ಹೋರಾಟವನ್ನು ನೀಡಿದ್ದರೂ ವಿಶ್ವದ ನಂ.11ನೇ ಆಟಗಾರ ಮಿನೌರ್ ವಿರುದ್ಧ ಸೋತಿದ್ದಾರೆ.

ಗಾಯದ ಸಮಸ್ಯೆಯ ಕಾರಣಕ್ಕೆ 2023ರ ಋತುವಿನಲ್ಲಿ ಟೆನಿಸ್‌ನಿಂದ ದೂರ ಉಳಿದಿದ್ದ ನಡಾಲ್ ಅವರು ಮೇನಲ್ಲಿ ಆರಂಭವಾಗಲಿರುವ ಫ್ರೆಂಚ್ ಓಪನ್‌ನಲ್ಲಿ ಸ್ಪರ್ಧಿಸುವ ವಿಶ್ವಾಸದಲ್ಲಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ ನಡಾಲ್ ಅವರು 14 ಬಾರಿ ಚಾಂಪಿಯನ್ ಆಗಿದ್ದಾರೆ.

ಜನವರಿಯ ನಂತರ ತನ್ನ ಮೊದಲ ಎಟಿಪಿ ಟೂರ್ ಪಂದ್ಯವನ್ನು ಆಡಿದ್ದ 12 ಬಾರಿ ಬಾರ್ಸಿಲೋನ ಓಪನ್ ಚಾಂಪಿಯನ್ ಆಗಿರುವ ನಡಾಲ್ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಫ್ಲೆವಿಯೊ ಕೊಬೊಲಿ ಅವರನ್ನು ಸುಲಭವಾಗಿ ಸೋಲಿಸಿದ್ದರು.

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News