ಭುವನೇಶ್ವರ ಕುಮಾರ್ ಗೆ ಐಪಿಎಲ್ ನಲ್ಲಿ ಐತಿಹಾಸಿಕ ಮೈಲಿಗಲ್ಲು
ಭುವನೇಶ್ವರ ಕುಮಾರ್ | Photo Credit : PTI
ಹೊಸದಿಲ್ಲಿ, ಮೇ 7: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನುಭವಿ ವೇಗದ ಬೌಲರ್ ಭುವನೇಶ್ವರ ಕುಮಾರ್, ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದರು. ಐಪಿಎಲ್ ಇತಿಹಾಸದಲ್ಲಿ 200 ಪಂದ್ಯಗಳನ್ನು ಆಡಿದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.
2011ರಲ್ಲಿ ಐಪಿಎಲ್ ಪಯಣ ಆರಂಭಿಸಿದ್ದ ಭುವನೇಶ್ವರ, ಕಳೆದ ಹಲವು ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಾ ಲೀಗ್‌ನ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸ್ವಿಂಗ್ ಬೌಲಿಂಗ್‌ನ ಮೂಲಕ ಹೆಸರು ಮಾಡಿರುವ ಅವರು, ಹೊಸ ಚೆಂಡಿನಲ್ಲಿಯೂ ಹಾಗೂ ಡೆತ್ ಓವರ್‌ಗಳಲ್ಲಿಯೂ ಪರಿಣಾಮಕಾರಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
ಈ ಪಂದ್ಯದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನೂ ಭುವನೇಶ್ವರ ತಲುಪಿದರು. ಯಜುವೇಂದ್ರ ಚಹಾಲ್ ಬಳಿಕ 200 ಐಪಿಎಲ್ ವಿಕೆಟ್‌ಗಳನ್ನು ಪಡೆದ ಎರಡನೇ ಬೌಲರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಪ್ರಸಕ್ತ 2026ರ ಐಪಿಎಲ್ ಟೂರ್ನಿಯಲ್ಲೂ ಭುವನೇಶ್ವರ ಉತ್ತಮ ಲಯದಲ್ಲಿದ್ದು, 9 ಪಂದ್ಯಗಳಲ್ಲಿ 17 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ತಮ್ಮ ಸಾಧನೆ ಕುರಿತು ಪ್ರತಿಕ್ರಿಯಿಸಿದ ಭುವನೇಶ್ವರ, ‘‘200 ಐಪಿಎಲ್ ಪಂದ್ಯಗಳನ್ನಾಡಿರುವುದು ನನ್ನ ವೃತ್ತಿಜೀವನದ ಹೆಮ್ಮೆಯ ಕ್ಷಣವಾಗಿದೆ. ಇಷ್ಟು ದೀರ್ಘ ಕಾಲ ನಿರಂತರವಾಗಿ ಆಡಲು ಸಾಧ್ಯವಾಗಿರುವುದು ಸಂತಸದ ವಿಷಯ’’ ಎಂದರು.
ಐಪಿಎಲ್ ಪಯಣವನ್ನು ನೆನಪಿಸಿಕೊಂಡ ಅವರು, ‘‘ಮೊದಲ ಐಪಿಎಲ್ ವಿಕೆಟ್ ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ. ಹಲವು ವರ್ಷಗಳಿಂದ ಈ ಲೀಗ್‌ನಲ್ಲಿ ಆಡುತ್ತಿರುವುದು ವಿಶೇಷ ಅನುಭವ ನೀಡಿದೆ’’ ಎಂದು ಹೇಳಿದರು.
ಆಧುನಿಕ ಟಿ-20 ಕ್ರಿಕೆಟ್‌ನ ಸವಾಲುಗಳ ಬಗ್ಗೆ ಮಾತನಾಡಿದ ಅವರು, ‘‘ಪವರ್‌ಪ್ಲೇ ಅವಧಿಯಲ್ಲಿ ಬ್ಯಾಟರ್‌ಗಳ ಆಕ್ರಮಣಕಾರಿ ಆಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೇಗದ ಬೌಲರ್‌ಗಳಿಗೆ ಸ್ಥಿರತೆ ಕಾಪಾಡಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ’’ ಎಂದು ಅಭಿಪ್ರಾಯಪಟ್ಟರು.
ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಎಂ.ಎಸ್. ಧೋನಿ (278), ರೋಹಿತ್ ಶರ್ಮಾ (277) ಮತ್ತು ವಿರಾಟ್ ಕೊಹ್ಲಿ (276) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ. ಭುವನೇಶ್ವರ ಕುಮಾರ್ 200 ಪಂದ್ಯಗಳೊಂದಿಗೆ ಈ ವಿಶೇಷ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.