×
Ad

ಖಿನ್ನತೆಯಿಂದ ಬಳಲುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಸಲೀಲ್ ಅಂಕೋಲ

Update: 2026-05-07 20:43 IST

 ಸಲೀಲ್ ಅಂಕೋಲ | Photo Credit : X

ಹೊಸದಿಲ್ಲಿ, ಮೇ 7: ಭಾರತದ ಮಾಜಿ ಕ್ರಿಕೆಟಿಗ ಸಲೀಲ್ ಅಂಕೋಲ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಮಾಜಿ ವೇಗದ ಬೌಲರ್ ಸಲೀಲ್ ಅವರು ಇದೀಗ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದು, ಪುಣೆ ಸಮೀಪದ ಮನೋ ಆರೋಗ್ಯ ಕಾಳಜಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಲೀಲ್ ಅಂಕೋಲ ಅವರು 1989ರಲ್ಲಿ ಕರಾಚಿಯಲ್ಲಿ ಭಾರತದ ಪರ ಮೊದಲ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಅದೇ ಟೆಸ್ಟ್‌ನಲ್ಲಿ ವಿಶ್ವ ಕ್ರಿಕೆಟ್‌ನ ಎರಡು ಲೆಜೆಂಡ್‌ಗಳಾದ ಸಚಿನ್ ತೆಂಡುಲ್ಕರ್ ಹಾಗೂ ವಕಾರ್ ಯೂನಿಸ್ ಕೂಡ ಪರಿಚಯಿಸಲ್ಪಟ್ಟಿದ್ದರು. ವಸೀಂ ಅಕ್ರಂ ನಾಯಕತ್ವದ ಬಲಿಷ್ಠ ಪಾಕಿಸ್ತಾನ ತಂಡವನ್ನು ಎದುರಿಸಿದ್ದ ಮುಂಬೈನ ನೀಳಕಾಯದ ವೇಗಿ ಸಲೀಲ್, ಭಾರತದ ಪರ ಆಡಿದ್ದ ಏಕೈಕ ಟೆಸ್ಟ್ ಪಂದ್ಯದಲ್ಲಿ ಎರಡು ವಿಕೆಟ್‌ಗಳನ್ನು ಉರುಳಿಸಿದ್ದರು.

ರಾಷ್ಟ್ರೀಯ ಆಯ್ಕೆ ಸಮಿತಿಯ ಗಮನ ಸೆಳೆಯುವ ಮೊದಲು ಅಂಕೋಲ ಅವರು ದೇಶೀಯ ಕ್ರಿಕೆಟ್‌ನಲ್ಲಿ 1988-89ರಲ್ಲಿ ಬಾಂಬೆ ಪರ ಆಡಿದ್ದ ಚೊಚ್ಚಲ ಪಂದ್ಯದಲ್ಲಿ ಮಿಂಚಿದ್ದರು. ಗುಜರಾತ್ ತಂಡದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಲ್ಲದೆ, 43 ರನ್ ಗಳಿಸಿದ್ದರು. ಬರೋಡ ವಿರುದ್ಧ ಆರು ವಿಕೆಟ್ ಗೊಂಚಲು ಪಡೆದಿದ್ದರು. ಈ ಪ್ರದರ್ಶನವು ಅವರನ್ನು ತಕ್ಷಣವೇ ಭಾರತೀಯ ತಂಡ ಸೇರಲು ಕಾರಣವಾಯಿತು.

ಅಂಕೋಲ ಅವರ ಅಂತರ್‌ರಾಷ್ಟ್ರೀಯ ವೃತ್ತಿಜೀವನವು ದೀರ್ಘ ಕಾಲ ಬಾಳಲಿಲ್ಲ. 20 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅಂಕೋಲ, ದೇಶೀಯ ಕ್ರಿಕೆಟ್‌ನ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದರು. 54 ಪ್ರಥಮ ದರ್ಜೆ ಪಂದ್ಯಗಳಲ್ಲಿ 181 ವಿಕೆಟ್‌ಗಳನ್ನು ಕಬಳಿಸಿದ್ದು, 47ಕ್ಕೆ 6 ಶ್ರೇಷ್ಠ ಸಾಧನೆಯಾಗಿದೆ. ಗಾಯದ ಸಮಸ್ಯೆಯು ಅವರ ವೃತ್ತಿಬದುಕಿನ ಬೆಳವಣಿಗೆಗೆ ಮಾರಕವಾಯಿತು.

1990ರ ಮಧ್ಯಭಾಗದಲ್ಲಿ ಭಾರತದ ಏಕದಿನ ತಂಡಕ್ಕೆ ವಾಪಸಾಗಿದ್ದ ಅಂಕೋಲ ಅವರು 1996ರ ಏಕದಿನ ವಿಶ್ವಕಪ್ ತಂಡದಲ್ಲಿದ್ದರು. ಅಂತಿಮವಾಗಿ ಭಾರತ ತಂಡದಲ್ಲಿ ತಮ್ಮ ಸ್ಥಾನ ಕಳೆದುಕೊಂಡರು. ಕೇವಲ 28ನೇ ವಯಸ್ಸಿನಲ್ಲಿ ಅವರ ಕ್ರಿಕೆಟ್ ಜೀವನ ಅಂತ್ಯವಾಯಿತು.

ಕ್ರಿಕೆಟ್‌ನ ನಂತರ ಸಲೀಲ್ ಅಂಕೋಲ ಅವರು ಮನರಂಜನಾ ಉದ್ಯಮಕ್ಕೆ ಯಶಸ್ವಿ ಪ್ರವೇಶಗೈದರು. ‘ಶ್ಶ್.. ಕೋಯಿ ಹೈ’ ಸೇರಿದಂತೆ ಹಲವಾರು ಟಿವಿ ಸೀರಿಯಲ್‌ಗಳು ಹಾಗೂ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಸಂಜಯ್ ದತ್, ರೇಣುಕಾ ಸಹಾನೆ, ಸನ್ನಿ ಲಿಯೋನ್, ಅದ್ನಾನ್ ಸಮಿ ಹಾಗೂ ಆಶಾ ಬೋಂಸ್ಲೆ ಅವರೊಂದಿಗೆ ಕೆಲಸ ಮಾಡಿದ್ದರು.

ನಟನೆ ಹಾಗೂ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರೂ ಅಂಕೋಲ ಅವರು ಕ್ರಿಕೆಟ್‌ನೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. 2021ರಿಂದ 2023ರ ತನಕ ಮುಂಬೈ ತಂಡದ ಮುಖ್ಯ ಆಯ್ಕೆಗಾರನಾಗಿ ಸೇವೆ ಸಲ್ಲಿಸಿದ್ದರು. 2023ರಲ್ಲಿ ರಾಷ್ಟ್ರೀಯ ಆಯ್ಕೆಗಾರನಾಗಿ ನೇಮಕಗೊಂಡಿದ್ದರು. 2024ರ ತನಕ ಇದೇ ಹುದ್ದೆಯಲ್ಲಿ ಮುಂದುವರಿದಿದ್ದರು.

2024ರ ಅಕ್ಟೋಬರ್‌ನಲ್ಲಿ ತಮ್ಮ ತಾಯಿಯನ್ನು ಕಳೆದುಕೊಂಡ ನಂತರ ಅಂಕೋಲ ಅವರು ತೀವ್ರ ಚಿಂತೆಗೆ ಒಳಗಾಗಿದ್ದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಕುಸಿತ ಕಂಡ ನಂತರ ಅವರು ಚಿಕಿತ್ಸೆ ಆರಂಭಿಸಿದರು ಎಂದು ಅಂಕೋಲ ಪತ್ನಿ ರಿಯಾ ಅಂಕೋಲ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News