IPL 2026 | ಪಂಜಾಬ್ ಕಿಂಗ್ಸ್ ತಂಡದಿಂದ ಕಳಪೆ ಫೀಲ್ಡಿಂಗ್: ಸಾಯಿರಾಜ್ ಬಹುತುಲೆ ಬೇಸರ
Photo Credit : PTI
ಹೊಸದಿಲ್ಲಿ, ಮೇ 7: ಕೈಬಿಟ್ಟ ಕ್ಯಾಚ್‌ಗಳು, ಸ್ಟಂಪಿಂಗ್ ಅವಕಾಶ ತಪ್ಪಿಸಿಕೊಂಡಿದ್ದು, ಹೆನ್ರಿಕ್ ಕ್ಲಾಸೆನ್ ಹಾಗೂ ಇಶಾನ್ ಕಿಶನ್‌ಗೆ ಜೀವದಾನ ನೀಡಿರುವುದು ಪಂಜಾಬ್ ಕಿಂಗ್ಸ್ ತಂಡವು ಬುಧವಾರ ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 33 ರನ್‌ಗಳಿಂದ ಸೋಲಲು ಕಾರಣವಾಯಿತು.
ಈ ಎಲ್ಲ ಲೋಪಗಳನ್ನು ಉಲ್ಲೇಖಿಸಿದ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ, ತಂಡವು ‘ಸರಿಯಾದ ಸ್ಥಳ, ಸರಿಯಾದ ವ್ಯಕ್ತಿ’ ಎಂಬ ವಿಧಾನದ ಮೂಲಕ ತನ್ನ ಕ್ಷೇತ್ರರಕ್ಷಣಾ ವ್ಯವಸ್ಥೆಯನ್ನು ಸರಿಪಡಿಸಲಿದೆ ಎಂದು ಹೇಳಿದ್ದಾರೆ.
‘‘ಹೊನಲು ಬೆಳಕಿನಡಿ ಫೀಲ್ಡಿಂಗ್ ಮಾಡುವುದು ಸುಲಭವಲ್ಲ. ಚೆಂಡು ಎತ್ತರಕ್ಕೆ ಹೋದಂತೆ ಅದು ಸಾಧ್ಯವಾದಷ್ಟು ಬೇಗನೆ ಬೀಳುತ್ತದೆ. ನಾವು ನಮ್ಮ ತಪ್ಪಿನ ಬಗ್ಗೆ ಯೋಚಿಸುವುದು ಮುಖ್ಯ. ನಾವು ಒಬ್ಬ ವ್ಯಕ್ತಿಯನ್ನು ದೂಷಿಸಲು ಸಾಧ್ಯವಿಲ್ಲ. ಮುಖ್ಯ ತರಬೇತುದಾರ ರಿಕಿ ಪಾಂಟಿಂಗ್ ಪ್ರಕಾರ ನಾವು ಪರಸ್ಪರ ಬೆಂಬಲಿಸುತ್ತೇವೆ’’ ಎಂದು ಬಹುತುಲೆ ತಿಳಿಸಿದ್ದಾರೆ.