BWF World ರ್ಯಾಂಕಿಂಗ್: ನಾಲ್ಕು ವರ್ಷಗಳ ನಂತರ ಟಾಪ್-5ಕ್ಕೆ ಮರಳಿದ ಪಿ.ವಿ. ಸಿಂಧು
ಪಿ.ವಿ. ಸಿಂಧು | Photo Credit : PTI
ಹೊಸದಿಲ್ಲಿ: ಒಲಿಂಪಿಕ್ಸ್ನಲ್ಲಿ ಅವಳಿ ಪದಕ ವಿಜೇತೆ ಪಿ.ವಿ. ಸಿಂಧು ಮಂಗಳವಾರ ಬಿಡುಗಡೆಯಾದ ಬಿಡಬ್ಲ್ಯುಎಫ್ ವರ್ಲ್ಡ್ ರ್ಯಾಂಕಿಂಗ್ನಲ್ಲಿ ನಾಲ್ಕು ವರ್ಷಗಳಲ್ಲಿ ಮೊದಲ ಬಾರಿ ಮಹಿಳೆಯರ ಸಿಂಗಲ್ಸ್ನಲ್ಲಿ ವಿಶ್ವದ ಟಾಪ್-5 ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
ಇತ್ತೀಚೆಗೆ ಹೈಲೊ ಓಪನ್ನಲ್ಲಿ ಪ್ರಶಸ್ತಿ ಜಯಿಸಿ, ಫ್ರೆಂಚ್ ಓಪನ್ನಲ್ಲಿ ರನ್ನರ್ ಅಪ್ ಆಗಿದ್ದ ಸಿಂಧು ಒಂದು ಸ್ಥಾನ ಮೇಲಕ್ಕೇರಿದ್ದಾರೆ. ಈ ಮೊದಲು 2022ರ ನವೆಂಬರ್ನಲ್ಲಿ ಟಾಪ್-5ರಲ್ಲಿ ಕಾಣಿಸಿಕೊಂಡಿದ್ದರು.
2026ರ ಋತುವಿನಲ್ಲಿ ಸಿಂಧು ಹೈಲೋ ಓಪನ್ನಲ್ಲಿ ಪ್ರಶಸ್ತಿ ಗೆದ್ದಿದ್ದಲ್ಲದೆ, ಜಪಾನ್ ಓಪನ್ ಸೂಪರ್ 750 ಪ್ರಸಸ್ತಿಯನ್ನು ಎತ್ತಿ ಹಿಡಿದಿದ್ದರು. ವಿಶ್ವ ಚಾಂಪಿಯನ್ಶಿಪ್ನಲ್ಲಿ ಅಂತಿಮ-16ರ ಸುತ್ತು ತಲುಪಿದ್ದರು. ಏಶ್ಯನ್ ಗೇಮ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪಿದ್ದರು.
31ರ ವಯಸ್ಸಿನ ಸಿಂಧು ಕಳೆದ 45 ದಿನಗಳಲ್ಲಿ ರ್ಯಾಂಕಿಂಗ್ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. 11ನೇ ಸ್ಥಾನದಿಂದ ಐದನೇ ಸ್ಥಾನಕ್ಕೇರಿದ್ದಾರೆ. ಸ್ಥಿರ ಪ್ರದರ್ಶನದ ಫಲವಾಗಿ ವರ್ಷಾಂತ್ಯದ ಪಂದ್ಯಾವಳಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ನಲ್ಲಿ ಸ್ಥಾನ ಪಡೆದಿದ್ದಾರೆ.
ಮಹಿಳೆಯರ ಸಿಂಗಲ್ಸ್ನಲ್ಲಿ ತನ್ವಿ ಶರ್ಮಾ ಎರಡನೇ ಗರಿಷ್ಠ ರ್ಯಾಂಕಿನ ಭಾರತೀಯ ಆಟಗಾರ್ತಿಯಾಗಿದ್ದಾರೆ. ಯುವ ಆಟಗಾರ್ತಿ 21ನೇ ಸ್ಥಾನದಲ್ಲಿದ್ದಾರೆ. ವಿಶ್ವದ ಟಾಪ್-20ರೊಳಗೆ ಪ್ರವೇಶಿಸುವ ಹಾದಿಯಲ್ಲಿದ್ದಾರೆ.
ಪುರುಷರ ಸಿಂಗಲ್ಸ್ನಲ್ಲಿ ಲಕ್ಷ್ಯ ಸೇನ್ ಟಾಪ್-10ಕ್ಕೆ ಮರಳುವ ಸನಿಹದಲ್ಲಿದ್ದಾರೆ. ಕಳೆದ ವಾರವಷ್ಟೇ ಜಪಾನ್ ಮಾಸ್ಟರ್ಸ್ ಸೂಪರ್-500 ಪ್ರಶಸ್ತಿಯನ್ನು ಗೆದ್ದಿರುವ ಸೇನ್ ಅವರು ಹೊಸ ರ್ಯಾಂಕಿಂಗ್ನಲ್ಲಿ 11ನೇ ಸ್ಥಾನ ತಲುಪಿದ್ದಾರೆ. ವರ್ಲ್ಡ್ ಟೂರ್ ಫೈನಲ್ಸ್ನಲ್ಲಿ ಅರ್ಹತೆ ಪಡೆಯಬೇಕಾದರೆ ಸೇನ್ ಹಾಂಕಾಂಗ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ಗೆ ತಲುಪುವ ಅಗತ್ಯವಿದೆ.
ಜಪಾನ್ ಮಾಸ್ಟರ್ಸ್ನಲ್ಲಿ ಕ್ವಾರ್ಟರ್ ಫೈನಲ್ನಲ್ಲಿ ಕಾಣಿಸಿಕೊಂಡಿರುವ ಕಿಡಂಬಿ ಶ್ರೀಕಾಂತ್ ವಿಶ್ವದ ಟಾಪ್-30 ಆಟಗಾರನಾಗಿದ್ದಾರೆ.
ಮಹಿಳೆಯರ ಡಬಲ್ಸ್ನಲ್ಲಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಒಂದು ಸ್ಥಾನ ಭಡ್ತಿ ಪಡೆದು 19ನೇ ಸ್ಥಾನ ತಲುಪಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅನಿವಾರ್ಯವಾಗಿ ವಿಶ್ರಾಂತಿ ಪಡೆದಿದ್ದ ಈ ಜೋಡಿಯು ನಿಧಾನವಾಗಿ ಮೊದಲಿನ ಲಯಕ್ಕೆ ಮರಳುತ್ತಿದೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಜಯಿಸಿದ್ದ ಟ್ರೀಸಾ-ಗಾಯತ್ರಿ ಡೆನ್ಮಾರ್ಕ್ ಓಪನ್ ಹಾಗೂ ಏಶ್ಯನ್ ಗೇಮ್ಸ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.