ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ| ಕರ್ನಾಟಕ ವಿರುದ್ಧ ಉತ್ತರ ಪ್ರದೇಶ ಜಯಭೇರಿ; ದಿವ್ಯಾಂಶ್ ಜೋಶಿ ಅರ್ಧಶತಕ
ದಿವ್ಯಾಂಶ್ ಜೋಶಿ | Photo Credit : BCCI
ಮುಂಬೈ: ಆರಂಭಿಕ ಆಟಗಾರ ದಿವ್ಯಾಂಶ್ ಜೋಶಿ ಅರ್ಧಶತಕ(65 ರನ್, 34 ಎಸೆತ, 7 ಬೌಂಡರಿ, 4 ಸಿಕ್ಸರ್), ಮುಹ್ಸಿನ್ ಖಾನ್(3-28) ನೇತೃತ್ವದ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಉತ್ತರ ಪ್ರದೇಶ ಕ್ರಿಕೆಟ್ ತಂಡವು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 16 ರನ್ಗಳ ಅಂತರದಿಂದ ರೋಚಕವಾಗಿ ಮಣಿಸಿದೆ.
ಸೋಮವಾರ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಕರ್ನಾಟಕ ತಂಡವು ಉತ್ತರ ಪ್ರದೇಶ ತಂಡವನ್ನು ಬ್ಯಾಟಿಂಗ್ಗೆ ಇಳಿಸಿತು. ಉತ್ತರ ಪ್ರದೇಶ ತಂಡವು 20 ಓವರ್ಗಳಲ್ಲಿ ಐದು ವಿಕೆಟ್ಗಳ ನಷ್ಟಕ್ಕೆ 204 ರನ್ ಗಳಿಸಿತು.
ಗೆಲ್ಲಲು 205 ರನ್ ಗುರಿ ಪಡೆದ ಕರ್ನಾಟಕ ತಂಡವು ನಾಯಕ ಆರ್.ಸ್ಮರಣ್ (68 ರನ್, 39 ಎಸೆತ, 2 ಬೌಂಡರಿ, 6 ಸಿಕ್ಸರ್) ಅರ್ಧಶತಕದ ಕೊಡುಗೆಯ ಹೊರತಾಗಿಯೂ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 188 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಎರಡನೇ ಓವರ್ನಲ್ಲಿ ಮನೀಶ್ ಪಾಂಡೆ(0) ಹಾಗೂ ಕರುಣ್ ನಾಯರ್(1ರನ್)ವಿಕೆಟನ್ನು ಕಳೆದುಕೊಂಡ ಕರ್ನಾಟಕ ತಂಡವು ಕಳಪೆ ಆರಂಭ ಪಡೆದಿತ್ತು. ರಿತೇಶ್ ಭಟ್ಕಳ್(0)ಕೂಡ ವೈಫಲ್ಯ ಕಂಡರು, ಆಗ ಕರ್ನಾಟಕ 13 ರನ್ಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು.
ನಾಲ್ಕನೇ ವಿಕೆಟ್ಗೆ 63 ರನ್ ಜೊತೆಯಾಟ ನಡೆಸಿದ ಲವ್ನೀತ್ ಸಿಸೋಡಿಯಾ(42 ರನ್, 25 ಎಸೆತ)ಹಾಗೂ ಸ್ಮರಣ್ ತಂಡವನ್ನು ಆಧರಿಸಲು ಯತ್ನಿಸಿದರು. ಸಿಸೋಡಿಯಾ, ಅಭಿನವ್ ಮನೋಹರ್ ಹಾಗೂ ಸ್ಮರಣ್ ಬೆನ್ನುಬೆನ್ನಿಗೆ ಔಟಾದರು.
ಪ್ರವೀಣ್ ದುಬೆ(21 ರನ್) ಹಾಗೂ ಮನ್ವಂತ ಕುಮಾರ್(42 ರನ್)ಏಳನೇ ವಿಕೆಟ್ಗೆ 41 ರನ್ ಸೇರಿಸಿದರೂ ಕರ್ನಾಟಕ ತಂಡದ ಗೆಲುವಿಗ ಇದು ಸಾಕಾಗಲಿಲ್ಲ.
ಉತ್ತರಪ್ರದೇಶದ ಪರ ಮುಹ್ಸಿನ್ ಖಾನ್ ಯಶಸ್ವಿ ಪ್ರದರ್ಶನ ನೀಡಿದರೆ, ಭುವನೇಶ್ವರ ಕುಮಾರ್(2-36) ಹಾಗೂ ಯಶ್ ದಯಾಳ್(2-41)ತಲಾ ಎರಡು ವಿಕೆಟ್ಗಳನ್ನು ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಉತ್ತರಪ್ರದೇಶ ತಂಡ ದಿವ್ಯಾಂಶ್ ಜೋಶಿ, ಸಮೀರ್ ರಿಝ್ವಿ(ಔಟಾಗದೆ 46 ರನ್, 23 ಎಸೆತ), ಆರ್ಯನ್ ಜುಯಲ್(31 ರನ್, 21 ಎಸೆತ)ಹಾಗೂ ಪ್ರಶಾಂತ್ ವೀರ್(ಔಟಾಗೆ 23, 14 ಎಸೆತ)ನೆರವಿನಿಂದ 204 ರನ್ ಕಲೆ ಹಾಕಿತು.
ಕರ್ನಾಟಕ ತಂಡದ ಪರವಾಗಿ ಮನ್ವಂತ ಕುಮಾರ್(2-31)ಹಾಗೂ ಶಿಖರ್ ಶೆಟ್ಟಿ(2-54)ತಲಾ ಎರಡು ವಿಕೆಟ್ಗಳನ್ನು ಪಡೆದರು.