Photo Credit: FIDE

ಸಮರ್ಕಂಡ: ಉಝ್ಬೆಕಿಸ್ತಾನದ ಸಮರ್ಕಂಡದಲ್ಲಿ ನಡೆದ 46ನೇ ಚೆಸ್ ಒಲಿಂಪಿಯಾಡ್‌ನಲ್ಲಿ ರವಿವಾರ ಚಿನ್ನದ ಪದಕ ಗೆಲ್ಲುವ ಮೂಲಕ ಆತಿಥೇಯ ದೇಶವು ಚೆಸ್ ಜಗತ್ತಿನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.

ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ಭಾರತ, ಅಂತಿಮ ಸುತ್ತಿನಲ್ಲಿ ಹಂಗೇರಿ ವಿರುದ್ಧ 2-2 ಅಂತರದ ಡ್ರಾ ಸಾಧಿಸಿತು. ಅದರೊಂದಿಗೆ, ಪ್ರಶಸ್ತಿ ಕೈತಪ್ಪಿತು. ಓಪನ್ ವಿಭಾಗದಲ್ಲಿ ಉಕ್ರೇನ್ ವಿರುದ್ಧದ ಉಝ್ಬೆಕಿಸ್ತಾನದ ಅಂತಿಮ ಪಂದ್ಯ ಇನ್ನೂ ನಡೆಯುತ್ತಿರುವಾಗಲೇ, ಭಾರತದ ಪಂದ್ಯ ಡ್ರಾಗೊಂಡಿದ್ದರಿಂದ ಉಝ್ಬೆಕಿಸ್ತಾನಕ್ಕೆ ಚಿನ್ನದ ಪದಕ ಖಚಿತವಾಯಿತು.

ಭಾರತದ ಅಭಿಯಾನವು 11 ಸುತ್ತುಗಳಲ್ಲಿ 18 ಮ್ಯಾಚ್ ಪಾಯಿಂಟ್‌ಗಳು ಮತ್ತು 28.5 ಗೇಮ್ ಪಾಯಿಂಟ್‌ಗಳೊಂದಿಗೆ ಕೊನೆಗೊಂಡಿತು. ಜರ್ಮನಿಯೂ ಇದೇ ಅಂಕಗಳನ್ನು ಗಳಿಸಿ ಭಾರತದೊಂದಿಗೆ ಸಮಬಲ ಸಾಧಿಸಿತು. ಆದರೆ ಹಿಂದಿನ ಸುತ್ತೊಂದರಲ್ಲಿ ಜರ್ಮನಿ ವಿರುದ್ಧ ಭಾರತ ಸಾಧಿಸಿದ್ದ ಗೆಲುವು, ಭಾರತಕ್ಕೆ ಬೆಳ್ಳಿ ಪದಕವನ್ನು ತಂದಿತು.

ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ನಾಲ್ಕನೇ ಬೋರ್ಡ್‌ನಲ್ಲಿ ಗ್ಲೆಬ್ ಡುಡಿನ್ ವಿರುದ್ಧ ಅನಿರೀಕ್ಷಿತ ಸೋಲನುಭವಿಸಿದರು. ಆದರೆ ಎರಡನೇ ಬೋರ್ಡ್‌ನಲ್ಲಿ ಪೀಟರ್ ಲೆಕೊ ಅವರನ್ನು ಸೋಲಿಸಿದ ಅರ್ಜುನ್ ಎರಿಗೈಸಿ ಭಾರತಕ್ಕೆ ಪ್ರಮುಖ ಮ್ಯಾಚ್ ಪಾಯಿಂಟ್ ತಂದುಕೊಟ್ಟರು.

ಇನ್ನುಳಿದಂತೆ ಒಂದನೇ ಬೋರ್ಡ್‌ನಲ್ಲಿ ರಿಚರ್ಡ್ ರಾಪೋರ್ಟ್ ವಿರುದ್ಧ ಆರ್. ಪ್ರಜ್ಞಾನಂದ ಹಾಗೂ ಮೂರನೇ ಬೋರ್ಡ್‌ನಲ್ಲಿ ಬೆಂಜಮಿನ್ ಗ್ಲೆಡುರಾ ವಿರುದ್ಧ ನಿಹಾಲ್ ಸರೀನ್ ಡ್ರಾ ಸಾಧಿಸಿದರು.

ಮಹಿಳಾ ವಿಭಾಗದಲ್ಲಿ, ರವಿವಾರ ನಡೆದ ಅಂತಿಮ ಸುತ್ತಿನಲ್ಲಿ ಜಾರ್ಜಿಯ ವಿರುದ್ಧ 2-2 ಅಂತರದ ಡ್ರಾ ಸಾಧಿಸಿದ ಬಳಿಕ ಹಾಲಿ ಚಾಂಪಿಯನ್ ಭಾರತ ಕಂಚಿನ ಪದಕ ಗೆದ್ದಿದೆ.

ಈ ಪಂದ್ಯಾವಳಿಯಲ್ಲಿ ಉತ್ತಮ ನಿರ್ವಹಣೆ ನೀಡುತ್ತಾ ಬಂದಿರುವ ಬಿ. ಸವಿತ್ರಾ ಶ್ರೀ ಮೇರಿ ಅರಾಬಿಜ್ ವಿರುದ್ಧದ ಪಂದ್ಯವನ್ನು ಡ್ರಾಗೊಳಿಸಿದರು.

ಬೋರ್ಡ್ ಒಂದರಲ್ಲಿ, ಅದಾಗಲೇ ಕೊನೆರು ಹಂಪಿ ನಾನಾ ಜನೀಜ್ ವಿರುದ್ಧ ಮಹತ್ವದ ಜಯ ದಾಖಲಿಸಿದ್ದರು. ಇದರ ನೆರವಿನಿಂದ ಭಾರತ ಕಂಚಿನ ಪದಕ ಪಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor