Asian Games 2026 | ಕ್ವಾರ್ಟರ್ ಫೈನಲ್ ನಲ್ಲಿ ಸಿಂಧು ಪಡೆಗೆ ಸೋಲು; ಬ್ಯಾಡ್ಮಿಂಟನ್ ನಲ್ಲಿ ಭಾರತದ ಪದಕದ ಕನಸು ಭಗ್ನ
ಪಿ.ವಿ. ಸಿಂಧು (Photo: PTI)
ನಗೋಯಾ (ಜಪಾನ್): ಜಪಾನ್ ನ ನಗೋಯಾದ ಐಚಿಯಲ್ಲಿ ನಡೆಯುತ್ತಿರುವ 2026ನೇ ಏಶ್ಯನ್ ಗೇಮ್ಸ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಜಯಿಸಿರುವ ಪಿ.ವಿ. ಸಿಂಧು ಸೇರಿದಂತೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಎಲ್ಲ ಬ್ಯಾಡ್ಮಿಂಟನ್ ಪಟುಗಳು ಪರಾಭವಗೊಂಡಿದ್ದಾರೆ. ಹೀಗಾಗಿ, ಬ್ಯಾಡ್ಮಿಂಟನ್‌ನಲ್ಲಿ ಮತ್ತೊಂದು ಪದಕ ಜಯಿಸುವ ಭಾರತದ ಆಸೆ ಅಂತ್ಯಗೊಂಡಿದೆ.
ಕೆಲವೇ ದಿನಗಳ ಹಿಂದೆ ಪುರುಷರ ತಂಡವು ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಜಯಿಸಿತ್ತು. ಹೀಗಾಗಿ, ಭಾರತದ ಬ್ಯಾಡ್ಮಿಂಟನ್ ಕ್ರೀಡಾಪಟುಗಳು ಕೇವಲ ಏಕೈಕ ಕಂಚಿನ ಪದಕದೊಂದಿಗೆ ತವರಿಗೆ ಮರಳಲಿದ್ದಾರೆ.
ಮಿಕ್ಸೆಡ್ ಡಬಲ್ಸ್ ನ ಮೊದಲ ಪಂದ್ಯದಲ್ಲಿ ಭಾರತದ ಧ್ರುವ್ ಕಪಿಲ ಮತ್ತು ತನಿಶಾ ಕ್ರಾಸ್ಟೊ ಜೋಡಿ ವಿಶ್ವದ ನಂ. 1 ಜೋಡಿಯಾದ ಚೀನಾದ ಡಾಂಗ್ ಪಿಂಗ್ ಹಾಗೂ ಫೆಂಗ್ ಯಾನ್ ಝೀಗೆ ಪ್ರಬಲ ಪೈಪೋಟಿ ನೀಡಿತು. ಹೀಗಿದ್ದೂ, 76 ನಿಮಿಷಗಳ ಕಾಲ ನಡೆದ ತೀವ್ರ ಹಣಾಹಣಿಯ ಪಂದ್ಯದಲ್ಲಿ 21-14, 18-21, 21-18ರ ಅಂತರದಲ್ಲಿ ಚೀನಾದ ಡಾಂಗ್ ಪಿಂಗ್ ಹಾಗೂ ಫೆಂಗ್ ಯಾನ್ ಝೀ ಜೋಡಿ ಭಾರತೀಯ ಜೋಡಿಯನ್ನು ಪರಾಭವಗೊಳಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿತು.
ಗಾಯತ್ರಿ ಗೋಪಿಚಂದ್ ಹಾಗೂ ಟ್ರೇಸ್ಸಾ ಜಾಲಿ ಜೋಡಿ ಕೂಡ ಇದೇ ಬಗೆಯ ನಿರಾಸೆ ಅನುಭವಿಸಿತು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಈ ಜೋಡಿಯನ್ನು ಮಲೇಶಿಯಾದ ತಿನಾಹ್ ಮಿರಾಲಿತರನ್ ಹಾಗೂ ಪರ್ಲಿ ಟ್ಯಾನ್ ಜೋಡಿ 21-18, 21-9 ಅಂತರದ ನೇರ ಸೆಟ್‌ಗಳಿಂದ ಪರಾಭವಗೊಳಿಸಿತು.
ಸಿಂಗಲ್ಸ್ ವಿಭಾಗದಲ್ಲಿ ಉನ್ನತಿ ಹೂಡಾ ಕೂಡ ವಿಶ್ವದ ಹಾಲಿ ನಂ. 3 ಶ್ರೇಯಾಂಕಿತೆ ಅಕೇನ್ ಯಾಮಗುಚಿ ವಿರುದ್ಧ ಪ್ರಬಲ ಪೈಪೋಟಿ ನೀಡಿದರು. ಹೀಗಿದ್ದೂ, 21-16, 14-21, 21-17ರ ಅಂತರದಲ್ಲಿ ಅಕೇನ್ ಯಾಮಗುಚಿ ಗೆಲುವಿನ ನಗೆ ಬೀರಿದರು.
ಪಿ.ವಿ. ಸಿಂಧು ಕೂಡ ತಮ್ಮ ಪರಿಚಿತ ಪ್ರತಿಸ್ಪರ್ಧಿ ಚೆನ್ ಯುಫೈಗೆ ಪ್ರಬಲ ಪೈಪೋಟಿ ನೀಡಿದರು. ಹೀಗಿದ್ದೂ, ಚೆನ್ ಯುಫೈ ಅವರು 11-21, 21-18, 21-10ರ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.
ಈ ಫಲಿತಾಂಶ ಭಾರತದ ಪಾಲಿಗೆ ಭಾರಿ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. 2014ರಲ್ಲಿ ದಕ್ಷಿಣ ಕೊರಿಯಾದ ಇಂಚಿಯಾನ್‌ನಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲೂ ಕೂಡ ಭಾರತದ ಬ್ಯಾಡ್ಮಿಂಟನ್ ಪಟುಗಳು ವೈಯಕ್ತಿಕ ವಿಭಾಗದಲ್ಲಿ ಯಾವುದೇ ಪದಕ ಗಳಿಸದೆ ತವರಿಗೆ ಮರಳಿದ್ದರು.