Photo Credit : PTI 

ನಗೋಯ: ಏಶ್ಯನ್ ಗೇಮ್ಸ್‌ನಲ್ಲಿ, ಶನಿವಾರ ‘ಎ’ ಗುಂಪಿನ ಪಂದ್ಯವೊಂದರಲ್ಲಿ ಜಪಾನ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿದ ಭಾರತ, ಪುರುಷರ ಹಾಕಿ ವಿಭಾಗದಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಗಿಫು ಪ್ರಿಫೆಕ್ಚರಲ್ ಗ್ರೀನ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದ ಮೊದಲ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ ಅಭಿಷೇಕ್ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಬಳಿಕ ಮೂರನೇ ಕ್ವಾರ್ಟರ್‌ನಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತೊಂದು ಗೋಲು ಬಾರಿಸಿ ತಂಡದ ಮುನ್ನಡೆಯನ್ನು ದ್ವಿಗುಣಗೊಳಿಸಿ, ಭಾರತದ ಗೆಲುವನ್ನು ಖಚಿತಪಡಿಸಿದರು.

ಆತಿಥೇಯ ಜಪಾನ್ ತಂಡಕ್ಕೆ ಗೋಲು ಗಳಿಸಲು ಹಲವು ಉತ್ತಮ ಅವಕಾಶಗಳು ಸಿಕ್ಕಿದ್ದರೂ, ಭಾರತದ ಗೋಲ್‌ಕೀಪರ್‌ಗಳಾದ ಸೂರಜ್ ಕರ್ಕೇರಾ ಮತ್ತು ಮೋಹಿತ್ ಎಚ್.ಎಸ್. ಅತ್ಯುತ್ತಮವಾಗಿ ಚೆಂಡನ್ನು ತಡೆದು ಎದುರಾಳಿಗಳಿಗೆ ಯಾವುದೇ ಗೋಲು ಬಿಟ್ಟುಕೊಡಲಿಲ್ಲ.

ಜಪಾನ್ ತನ್ನ ಪೆನಾಲ್ಟಿ ಕಾರ್ನರ್ ರಕ್ಷಣಾ ತಂತ್ರದಲ್ಲೂ ಗಮನ ಸೆಳೆಯಿತು. ಮೂರನೇ ಕ್ವಾರ್ಟರ್‌ನಲ್ಲಿ ನಾಯಕ ಹರ್ಮನ್‌ಪ್ರೀತ್ ಗೋಲು ಗಳಿಸುವವರೆಗೂ ಭಾರತದ ಡ್ರ್ಯಾಗ್‌ಫ್ಲಿಕರ್‌ಗಳನ್ನು ಅದು ಯಶಸ್ವಿಯಾಗಿ ಕಟ್ಟಿಹಾಕಿತು.

ಪಂದ್ಯದುದ್ದಕ್ಕೂ ನಿರಂತರ ಸುರಿದ ಜಿಟಿಜಿಟಿ ಮಳೆಯಿಂದಾಗಿ ಉಭಯ ತಂಡಗಳ ಆಟಗಾರರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಹರಸಾಹಸ ಪಡಬೇಕಾಯಿತು. ಇದು ಪಂದ್ಯದ ಪೈಪೋಟಿಯನ್ನು ಹೆಚ್ಚಿಸಿತು.

ಭಾರತವು ಈಗ ‘ಎ’ ಗುಂಪಿನಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ ಒಟ್ಟು 12 ಅಂಕಗಳನ್ನು ಗಳಿಸಿದೆ. ಅದು ತನ್ನ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor