ಚೀನಾ ಮಾಸ್ಟರ್ಸ್ 2026 | ಸೆಮಿಫೈನಲ್ ಪ್ರವೇಶಿಸಿದ ಸಾತ್ವಿಕ್-ಚಿರಾಗ್ ಜೋಡಿ
Photo Credit : PTI
ಶೆಂಝನ್ (ಚೀನಾ): ಚೀನಾದ ಗುವಾಂಗ್‌ಡಾಂಗ್‌ನ ಶೆಂಝನ್‌ನಲ್ಲಿ ನಡೆಯುತ್ತಿರುವ ಚೀನಾ ಮಾಸ್ಟರ್ಸ್‌ನ ಪುರುಷರ ಡಬಲ್ಸ್‌ನಲ್ಲಿ, ಭಾರತದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸತತ ನಾಲ್ಕನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತೀಯ ಜೋಡಿಯು ಡೆನ್ಮಾರ್ಕ್‌ನ ಕಿಮ್ ಆ್ಯಸ್ಟ್ರಪ್ ಮತ್ತು ಆ್ಯಂಡರ್ಸ್ ಸ್ಕಾರಪ್ ರಾಸ್‌ಮುಸೆನ್ ಜೋಡಿಯನ್ನು 21-13, 16-21, 21-18 ಗೇಮ್‌ಗಳಿಂದ ಸೋಲಿಸಿತು.
ನಾಲ್ಕನೇ ಶ್ರೇಯಾಂಕದ ಭಾರತೀಯ ಜೋಡಿಯು ಸೆಮಿಫೈನಲ್‌ನಲ್ಲಿ ಮಲೇಶ್ಯದ ನೂರ್ ಅಜ್ರಿನ್-ಟಾನ್ ವೀ ಕಿಯಾಂಗ್ ಜೋಡಿ ಅಥವಾ ಇಂಡೋನೇಶ್ಯದ ಆರನೇ ಶ್ರೇಯಾಂಕದ ಸಬರ್ ಕಾರ್ಯಮನ್ ಗುತಮಾ-ಮೊಹ್ ಇಸ್ಫಹಾನಿ ಜೋಡಿಯನ್ನು ಎದುರಿಸಲಿದೆ.
ಮೇ ತಿಂಗಳಲ್ಲಿ ಸಿಂಗಾಪುರ್ ಓಪನ್ ಗೆದ್ದ ನಂತರ ಸಾತ್ವಿಕ್ ಮತ್ತು ಚಿರಾಗ್ ಪಂದ್ಯಾವಳಿಯೊಂದರ ಸೆಮಿಫೈನಲ್ ತಲುಪಿರುವುದು ಇದೇ ಮೊದಲು. ಕಳೆದ ತಿಂಗಳು ಹೊಸದಿಲ್ಲಿಯಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸೋತು ಹೊರಬಿದ್ದ ಬಳಿಕ ಈ ಜೋಡಿಯು ಯಾವುದೇ ಪಂದ್ಯವನ್ನು ಆಡಿಲ್ಲ.
ಪಂದ್ಯ ಆರಂಭವಾದ ಕೇವಲ ಐದೇ ನಿಮಿಷಗಳಲ್ಲಿ ಮುನ್ನಡೆ ಸಾಧಿಸಿದ ಭಾರತೀಯ ಜೋಡಿ, ಮಧ್ಯಂತರದ ವೇಳೆಗೆ 11-4 ಅಂಕಗಳೊಂದಿಗೆ ಏಳು ಅಂಕಗಳ ಮುನ್ನಡೆ ಕಾಯ್ದುಕೊಂಡರು. ಗೇಮ್‌ನ ದ್ವಿತಿಯಾರ್ಧದಲ್ಲಿ ಡೆನ್ಮಾರ್ಕ್ ಆಟಗಾರರು ಕೊಂಚ ಪ್ರತಿರೋಧ ತೋರಿ ದರಾದರೂ, ಭಾರತದ ಜೋಡಿ ಕೇವಲ 16 ನಿಮಿಷಗಳಲ್ಲಿ ಮೊದಲ ಗೇಮ್ ಅನ್ನು ತನ್ನದಾಗಿಸಿಕೊಂಡಿತು.
ಎರಡನೇ ಗೇಮ್‌ನಲ್ಲಿ ಭಾರತೀಯರಿಗೆ ದೊಡ್ಡ ಮುನ್ನಡೆ ಸಾಧಿಸಲು ಡೆನ್ಮಾರ್ಕ್ ಆಟಗಾರರು ಬಿಡಲಿಲ್ಲ. ಸ್ಕೋರ್ 15-15 ಆಗಿದ್ದಾಗ, ಆ್ಯಸ್ಟ್ರಪ್ ಮತ್ತು ರಾಸ್‌ಮುಸೆನ್ ಸತತ ಮೂರು ಅಂಕಗಳನ್ನು ಗಳಿಸಿ ಗಮನಾರ್ಹ ಮುನ್ನಡೆ ಪಡೆದರು. ಶೀಘ್ರದಲ್ಲೇ ನಾಲ್ಕು ಗೇಮ್ ಪಾಯಿಂಟ್‌ಗಳನ್ನು ಪಡೆದ ಡೆನ್ಮಾರ್ಕ್ ಆಟಗಾರರು, ಮೊದಲ ಅವಕಾಶದಲ್ಲೇ ಪಾಯಿಂಟ್ ಗಳಿಸಿ ಗೇಮನ್ನು ಗೆದ್ದರು.
ಮೂರನೇ ಗೇಮ್‌ನಲ್ಲಿ, ಒಂದು ಹಂತದಲ್ಲಿ 10-14 ಅಂಕಗಳಿಂದ ಹಿನ್ನಡೆಯಲ್ಲಿದ್ದ ಭಾರತೀಯರು ಎರಡು ಬಾರಿ ಸಮಬಲ ಸಾಧಿಸಲು ತೀವ್ರ ಹೋರಾಟ ನಡೆಸಿದರು. ಆದರೆ ಯುರೋಪಿಯನ್ ಆಟಗಾರರು ಅಂತರವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.
ಆದರೆ, ಈ ಪಂದ್ಯದ ಅತಿ ಉದ್ದದ 36-ಶಾಟ್‌ಗಳ ರ್ಯಾಲಿಯನ್ನು ಗೆಲ್ಲುವ ಮೂಲಕ ಸಾತ್ವಿಕ್ ಮತ್ತು ಚಿರಾಗ್ ಅಂತಿಮವಾಗಿ 17-17 ರಲ್ಲಿ ಸಮಬಲ ಸಾಧಿಸಿದರು.
ತಕ್ಷಣವೇ ಭಾರತೀಯ ಜೋಡಿ ಮೂರು ಮ್ಯಾಚ್ ಪಾಯಿಂಟ್‌ಗಳನ್ನು ಗಳಿಸಿತು. ಅದರಲ್ಲಿ ಎರಡನೇ ಅವಕಾಶವನ್ನು ಗೆಲುವಾಗಿ ಪರಿವರ್ತಿಸಿ, ಈ 70 ನಿಮಿಷಗಳ ರೋಚಕ ಕಾದಾಟಕ್ಕೆ ತೆರೆ ಎಳೆಯಿತು.