ಕಾಮನ್ವೆಲ್ತ್ ಗೇಮ್ಸ್ 2026: ವೇಟ್ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ರಾಜಾ ಮುತ್ತುಪಾಂಡಿ
ರಾಜಾ ಮುತ್ತುಪಾಂಡಿ Photo: x.com/airnewsalerts
ಗ್ಲ್ಯಾಸ್ಗೋ: ಸ್ಕಾಟ್ಲೆಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2026 ರಲ್ಲಿ ಪುರುಷರ 65 ಕೆಜಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ರಾಜಾ ಮುತ್ತುಪಾಂಡಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
26 ವರ್ಷದ ರಾಜಾ ಮುತ್ತುಪಾಂಡಿ ಸ್ನ್ಯಾಚ್ ವಿಭಾಗದಲ್ಲಿ 126 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 160 ಕೆಜಿ ಸೇರಿದಂತೆ ಒಟ್ಟು 286 ಕೆಜಿ ತೂಕ ಎತ್ತುವ ಮೂಲಕ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಪದಕ ಗೆದ್ದರು.
ಮಲೇಷ್ಯಾದ ಮುಹಮ್ಮದ್ ಅಜ್ನಿಲ್ ಬಿನ್ ಬಿದಿನ್ ಒಟ್ಟು 299 ಕೆಜಿ ತೂಕ ಎತ್ತುವ ಮೂಲಕ ಕಾಮನ್ವೆಲ್ತ್ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಪಪುವಾ ನ್ಯೂಗಿನಿಯಾದ ಮೋರಿಯಾ ಬಾರು 282 ಕೆಜಿ ತೂಕ ಎತ್ತಿ ಕಂಚು ಗೆದ್ದರು.
2019ರಲ್ಲಿ ಸಂಭವಿಸಿದ ಭುಜದ ತೀವ್ರ ಗಾಯದಿಂದಾಗಿ ಮುತ್ತುಪಾಂಡಿ ಅವರ ಕ್ರೀಡಾಪಯಣಕ್ಕೆ ತಾತ್ಕಾಲಿಕ ತಡೆ ಬಿದ್ದಿತ್ತು. ಜೊತೆಗೆ ಕೋವಿಡ್-19 ಸಾಂಕ್ರಾಮಿಕವು ಅವರ ಪುನಶ್ಚೇತನ ಪ್ರಕ್ರಿಯೆಗೆ ಮತ್ತಷ್ಟು ಅಡಚಣೆ ಉಂಟುಮಾಡಿತ್ತು. ಇದೀಗ ಎಲ್ಲವನ್ನೂ ಮೆಟ್ಟಿನಿಂತ ಮುತ್ತುಪಾಂಡಿ ಪದಕ ಗೆದ್ದಿದ್ದಾರೆ.