Youth Hockey5s Asian Championship | ಪಾಕ್ ಸೋಲಿಸಿ ಚಿನ್ನ ಗೆದ್ದ ಭಾರತೀಯ ಪುರುಷರ ತಂಡ
Photo : x@TheHockeyIndia
ಮಸ್ಕತ್ (ಒಮಾನ್), ಜು. 26: ಎಫ್ಐಎಚ್ ಯುವ ಹಾಕಿ5ಎಸ್ ಏಶ್ಯನ್ ಚಾಂಪಿಯನ್ಶಿಪ್ ನಲ್ಲಿ ಶನಿವಾರ ರಾತ್ರಿ ನಡೆದ ಚಿನ್ನದ ಪದಕದ ಪಂದ್ಯದಲ್ಲಿ ಭಾರತದ ಸಬ್-ಜೂನಿಯರ್ ಪುರುಷರ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 3-1 ಗೋಲುಗಳಿಂದ ಸೋಲಿಸಿತು.
ಐದನೇ ನಿಮಿಷದಲ್ಲಿ ರೋಮಿತ್ ಪಾಲ್, 12ನೇ ನಿಮಿಷದಲ್ಲಿ ನಾಯಕ ಕೇತನ್ ಕುಶ್ವಾಹ ಹಾಗೂ 13ನೇ ನಿಮಿಷದಲ್ಲಿ ಶಾರುಖ್ ಅಲಿ ಬಾರಿಸಿದ ಗೋಲುಗಳ ನೆರವಿನಿಂದ ಭಾರತ ಏಶ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿತು.
ಈ ಗೆಲುವಿನೊಂದಿಗೆ ಭಾರತೀಯ ಪುರುಷರ ತಂಡವು ಎಲಿಟ್ ಪೂಲ್ ಕೋಷ್ಟಕದಲ್ಲಿ ಅಗ್ರಸ್ಥಾನದಲ್ಲಿ ಅಜೇಯವಾಗಿ ತನ್ನ ಅಭಿಯಾನವನ್ನು ಪೂರ್ಣಗೊಳಿಸಿತು.
ಅಂತಿಮ ಪಂದ್ಯದಲ್ಲಿ ಭಾರತವು ಚುರುಕಾದ ಪಾಸಿಂಗ್ ಹಾಗೂ ಶಿಸ್ತುಬದ್ಧ ಆಟದ ಮೂಲಕ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಮೊದಲಾರ್ಧದಲ್ಲಿ ರೋಮಿತ್ ಪಾಲ್ ಪಾಕಿಸ್ತಾನದ ಗೋಲ್‌ಕೀಪರ್‌ರನ್ನು ವಂಚಿಸಿ ಗೋಲು ಬಾರಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು.
ದ್ವಿತೀಯಾರ್ಧದ ಆರಂಭದಲ್ಲೇ ನಾಯಕ ಕೇತನ್ ಕುಶ್ವಾಹ ಮತ್ತು ಶಾರುಖ್ ಅಲಿ ಬಾರಿಸಿದ ಗೋಲುಗಳ ನೆರವಿನಿಂದ ಭಾರತ 3-0 ಅಂತರದ ಮೇಲುಗೈ ಸಾಧಿಸಿತು.
ಪಾಕಿಸ್ತಾನದ ಮುಹಮ್ಮದ್ ಉಸ್ಮಾನ್ 16ನೇ ನಿಮಿಷದಲ್ಲಿ ಗೋಲು ಬಾರಿಸಿ ಅಂತರ ತಗ್ಗಿಸಿದರಾದರೂ, ಪಂದ್ಯದ ಕೊನೆಯ ನಿಮಿಷಗಳಲ್ಲಿ ಭಾರತದ ರಕ್ಷಣಾ ಪಡೆ ಬಲವಾಗಿ ನಿಂತು 3-1 ಅಂತರದ ಗೆಲುವು ಹಾಗೂ ಟ್ರೋಫಿಯನ್ನು ಖಚಿತಪಡಿಸಿಕೊಂಡಿತು.
ಫೈನಲ್ ತಲುಪಿದ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಚೊಚ್ಚಲ ಎಫ್ಐಎಚ್ ಯೂತ್ ಹಾಕಿ5ಎಸ್ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿವೆ.
ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಭಾರತದ ಸಬ್-ಜೂನಿಯರ್ ತಂಡವು ಚೀನಾ ವಿರುದ್ಧ ದಿಟ್ಟ ಹೋರಾಟ ನೀಡಿತಾದರೂ, ಅಂತಿಮವಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.