Wimbledon ಸೆಮಿ ಫೈನಲ್‌ನಲ್ಲಿ ಸೋಲು; ನಿವೃತ್ತಿಯ ವದಂತಿ ತಳ್ಳಿ ಹಾಕಿದ ಜೊಕೊವಿಕ್
ಜನ್ನಿಕ್ ಸಿನ್ನರ್ | Photo Credit : PTI
ಲಂಡನ್, ಜು.11: ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿ ಫೈನಲ್‌ನಲ್ಲಿ ಜನ್ನಿಕ್ ಸಿನ್ನರ್ ವಿರುದ್ಧ ನೇರ ಸೆಟ್‌ಗಳಿಂದ ಸೋಲು ಕಂಡು ದಾಖಲೆಯ 25ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡ ಸರ್ಬಿಯಾದ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್, ನಿವೃತ್ತಿಯ ವದಂತಿಯನ್ನು ತಳ್ಳಿ ಹಾಕಿದ್ದಾರೆ.
ಏಳು ಬಾರಿಯ ವಿಂಬಲ್ಡನ್ ಚಾಂಪಿಯನ್ ಜೊಕೊವಿಕ್, ಇಟಲಿಯ ಸಿನ್ನರ್ ವಿರುದ್ಧ 6-4, 6-4, 6-4 ಸೆಟ್‌ಗಳಿಂದ ಸೋತು ಸೆಂಟರ್ ಕೋರ್ಟ್‌ನಿಂದ ಹೊರನಡೆಯುತ್ತಿದ್ದಾಗ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದರು. 39 ವರ್ಷದ ಜೊಕೊವಿಕ್ ವಿಂಬಲ್ಡನ್‌ಗೆ ಮತ್ತೊಮ್ಮೆ ಮರಳುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಉದ್ಭವಿಸಿತ್ತು.
‘‘ನನಗೆ ಕನಿಷ್ಠ ಇನ್ನೊಂದು ಪಂದ್ಯ ಆಡುವ ಬಯಕೆ ಇದೆ. ಏನಾಗುತ್ತದೆ ಎಂದು ಕಾದು ನೋಡುವೆ,’’ ಎಂದು ಮುಂದಿನ ವರ್ಷ ನಡೆಯುವ 150ನೇ ಆವೃತ್ತಿಯ ವಿಂಬಲ್ಡನ್ ಟೂರ್ನಿಗೆ ಮರಳುತ್ತೀರಾ ಎಂಬ ಪ್ರಶ್ನೆಗೆ ಜೊಕೊವಿಕ್ ಉತ್ತರಿಸಿದರು.
‘‘ಗ್ರ್ಯಾಂಡ್‌ಸ್ಲಾಮ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ 39ನೇ ಬಾರಿ ಫೈನಲ್ ಪ್ರವೇಶಿಸುವಲ್ಲಿ ವಿಫಲನಾಗಿದ್ದರೂ, ವಿಂಬಲ್ಡನ್‌ನಲ್ಲಿ ಅಂತಿಮ-4ರ ಸುತ್ತು ತಲುಪಿದ್ದು ನನ್ನಲ್ಲಿ ಇನ್ನೂ ಸ್ಪರ್ಧಿಸುವ ಶಕ್ತಿ ಇದೆ ಎಂಬುದನ್ನು ತೋರಿಸಿದೆ. ಖಂಡಿತವಾಗಿಯೂ ನನಗೆ ಬೇಸರವಾಗಿದೆ. ನಾನು ವಿಂಬಲ್ಡನ್ ಪ್ರಶಸ್ತಿ ಗೆಲ್ಲಲು ಬಯಸಿದ್ದೆ. ಅದಕ್ಕಾಗಿ ಕಠಿಣ ಪರಿಶ್ರಮ ಪಟ್ಟಿದ್ದೇನೆ. ಟೆನಿಸ್ ಅಂಗಣದಲ್ಲಿನ ಹೋರಾಟದ ಸ್ಪೂರ್ತಿ ಹಾಗೂ ಬದ್ಧತೆಯ ವಿಚಾರದಲ್ಲಿ ಈ ಟೂರ್ನಮೆಂಟ್ ನನಗೆ ಸಕಾರಾತ್ಮಕವಾಗಿತ್ತು,’’ ಎಂದು ಜೊಕೊವಿಕ್ ಹೇಳಿದ್ದಾರೆ.
ಜೊಕೊವಿಕ್ ಇದೀಗ ಯು.ಎಸ್. ಓಪನ್‌ನತ್ತ ಗಮನ ಹರಿಸಲಿದ್ದಾರೆ. 2023ರಲ್ಲಿ ಇದೇ ಟೂರ್ನಿಯಲ್ಲಿ ಅವರು ತಮ್ಮ 24ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದರು.