×
Ad

FIFA ವಿಶ್ವಕಪ್‌ ನಲ್ಲಿ ಆಡಿದ್ದ ದಕ್ಷಿಣ ಆಫ್ರಿಕಾ ಮಿಡ್‌ಫೀಲ್ಡರ್ ಜೇಡನ್ ಆ್ಯಡಮ್ಸ್ ನಿಧನ

Update: 2026-07-11 21:50 IST

ಜೇಡನ್ ಆ್ಯಡಮ್ಸ್ | Photo Credit : X

ಕೇಪ್ ಟೌನ್, ಜು. 11: ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಫುಟ್‌ಬಾಲ್ ತಂಡ ಹಾಗೂ ಮಮೆಲೋಡಿ ಸನ್‌ಡೌನ್ಸ್ ಕ್ಲಬ್‌ನ ಮಿಡ್‌ಫೀಲ್ಡರ್ ಜೇಡನ್ ಆ್ಯಡಮ್ಸ್ (25) ನಿಧನರಾಗಿದ್ದಾರೆ. ಕೆಲವೇ ವಾರಗಳ ಹಿಂದೆ ನಡೆದ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಅವರು, ಶನಿವಾರ ಸಂಜೆ ಕೇಪ್ ಟೌನ್‌ನ ಕೇಂದ್ರ ಭಾಗದ ಉಪನಗರ ಶಾಟ್ ಶೆಕ್ಲೂಫ್‌ನಲ್ಲಿರುವ ತಮ್ಮ ನಿವಾಸದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ದಕ್ಷಿಣ ಆಫ್ರಿಕಾ ಪೊಲೀಸರು ತಿಳಿಸಿದ್ದಾರೆ.

ಜೇಡನ್ ಆ್ಯಡಮ್ಸ್ ವಿಶ್ವಕಪ್‌ನ ಗುಂಪು ಹಂತದ ಎಲ್ಲ ಮೂರು ಪಂದ್ಯಗಳಲ್ಲೂ ದಕ್ಷಿಣ ಆಫ್ರಿಕಾ ತಂಡದ ಪರ ಕಣಕ್ಕಿಳಿದಿದ್ದರು. ಆದರೆ, ನಾಕೌಟ್ ಹಂತದಲ್ಲಿ ತಂಡವು ಟೂರ್ನಿಯಿಂದ ಹೊರಬಿದ್ದಿತ್ತು. 32ರ ಸುತ್ತಿನ ಪಂದ್ಯದಲ್ಲಿ ಆತಿಥೇಯ ಕೆನಡಾ ಎದುರು ಸೋಲು ಅನುಭವಿಸಿದ್ದ ದಕ್ಷಿಣ ಆಫ್ರಿಕಾ ತನ್ನ ವಿಶ್ವಕಪ್ ಅಭಿಯಾನವನ್ನು ಅಂತ್ಯಗೊಳಿಸಿತ್ತು.

ಜೇಡನ್ ಆ್ಯಡಮ್ಸ್ ನಿಧನಕ್ಕೆ ದಕ್ಷಿಣ ಆಫ್ರಿಕಾ ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಸಚಿವ ಗೇಟನ್ ಮೆಕೆಂಝಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

‘ಜೇಡನ್ ಆ್ಯಡಮ್ಸ್ ನಿಧನದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಹೃದಯ ಭಾರವಾಗಿದೆ’ ಎಂದು ಅವರು ಹೇಳಿದ್ದಾರೆ.

‘ದಕ್ಷಿಣ ಆಫ್ರಿಕಾ ಒಬ್ಬ ಉಜ್ವಲ ಪ್ರತಿಭಾವಂತ ಯುವ ಆಟಗಾರನನ್ನು ಕಳೆದುಕೊಂಡಿದೆ. ನಮ್ಮ ದೇಶವು ಅವರ ಕುಟುಂಬದವರು, ತಂಡದ ಸಹ ಆಟಗಾರರು ಹಾಗೂ ಕೋಟ್ಯಂತರ ಬೆಂಬಲಿಗರ ದುಃಖದಲ್ಲಿ ಭಾಗಿಯಾಗಿದೆ. ಅಕಾಡೆಮಿ ಹಂತದಿಂದ ಅಂತಾರಾಷ್ಟ್ರೀಯ ಮಟ್ಟದ ಭರವಸೆಯ ಆಟಗಾರನಾಗಿ ಜೇಡನ್ ಆ್ಯಡಮ್ಸ್ ಬೆಳೆದಿರುವುದನ್ನು ಅವರೆಲ್ಲರೂ ಕಂಡಿದ್ದಾರೆ’ ಎಂದು ಮೆಕೆಂಝಿ ತಿಳಿಸಿದ್ದಾರೆ.

ಶನಿವಾರ ಸಂಜೆ ಶಾಟ್ ಶೆಕ್ಲೂಫ್‌ನಲ್ಲಿರುವ ತಮ್ಮ ನಿವಾಸದಲ್ಲಿ 25 ವರ್ಷದ ಜೇಡನ್ ಆ್ಯಡಮ್ಸ್ ಅವರ ಮೃತದೇಹ ಪತ್ತೆಯಾಗಿದ್ದು, ಸಾವಿನ ಕಾರಣ ತಿಳಿದುಬಂದಿಲ್ಲ. ಪ್ರಕರಣದ ಎಲ್ಲ ಆಯಾಮಗಳ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ದಕ್ಷಿಣ ಆಫ್ರಿಕಾ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News